BJP  Image for representative purposes
ಸುದ್ದಿಗಳು

ವಿವಾದಾತ್ಮಕ ಜಾಹೀರಾತು: ಚುನಾವಣಾ ಆಯೋಗದ ಆದೇಶದಂತೆ ವಿಡಿಯೋ ತೆಗೆದುಹಾಕಿದ ಜಾರ್ಖಂಡ್ ಬಿಜೆಪಿ

ವಿವಾದಾತ್ಮಕ ಪ್ರಕಟಣೆಯಲ್ಲಿ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಆಗಿರುವುದೇಕೆ ಎಂಬ ಕುರಿತು ವಿವರಣೆ ನೀಡುವಂತೆಯೂ ಬಿಜೆಪಿಗೆ ಇಸಿಐ ಸೂಚಿಸಿತ್ತು.

Bar & Bench

ಜಾರ್ಖಂಡ್ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಜಾರಿಯಲ್ಲಿರುವ ಮಾದರಿ ನೀತಿ ಸಂಹಿತೆ ಉಲ್ಲಂಘನೆಯಾಗುವ ಕಾರಣಕ್ಕೆ ತನ್ನ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಹಂಚಿಕೊಂಡಿದ್ದ ವಿಡಿಯೋವನ್ನು ಭಾರತೀಯ ಚುನಾವಣಾ ಆಯೋಗದ (ಇಸಿಐ) ಅಣತಿಯಂತೆ ಬಿಜೆಪಿ ಜಾರ್ಖಂಡ್‌ನ ಘಟಕ ತೆಗೆದುಹಾಕಿದೆ.

ವಿಡಿಯೋ ತೆಗೆದು ಹಾಕಲು ಬಿಜೆಪಿಗೆ ಸೂಚಿಸುವಂತೆ ಜಾರ್ಖಂಡ್‌ನ ಮುಖ್ಯ ಚುನಾವಣಾಧಿಕಾರಿ (ಸಿಇಒ) ಅವರಿಗೆ ನವೆಂಬರ್ 17ರಂದು ಭಾರತೀಯ ಚುನಾವಣಾ ಆಯೋಗ ಸೂಚಿಸಿತ್ತು. ಅದರಂತೆ ಇದೀಗ ಪಕ್ಷ ವಿಡಿಯೋವನ್ನು ತೆಗೆದುಹಾಕಿದೆ.

ವಿವಾದಾತ್ಮಕ ಪ್ರಕಟಣೆಯಲ್ಲಿ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಆಗಿರುವುದೇಕೆ ಎಂಬ ಕುರಿತು ವಿವರಣೆ ನೀಡುವಂತೆಯೂ ಬಿಜೆಪಿಗೆ ಇಸಿಐ ಸೂಚಿಸಿತ್ತು.

ಜಾರ್ಖಂಡ್‌ನ ಬಿಜೆಪಿ ಘಟಕ ಹಂಚಿಕೊಂಡ ವಿಡಿಯೋ ಕೋಮುವಾದ ಹರಡಲಿದ್ದು,  ದಿಕ್ಕು ತಪ್ಪಿಸುವಂತಿದೆ. ಜೊತೆಗೆ ದುರುದ್ದೇಶದಿಂದ ಕೂಡಿದೆ ಎಂದು ಕಾಂಗ್ರೆಸ್‌ ಮತ್ತು ಜಾರ್ಖಂಡ್‌ ಮುಕ್ತಿ ಮೋರ್ಚಾ ದೂರು ನೀಡಿದ್ದ ಹಿನ್ನೆಲೆಯಲ್ಲಿ ಇಸಿಐ ಕ್ರಮಕ್ಕೆ ಮುಂದಾಗಿತ್ತು. ಸಾಮಾಜಿಕ ಮಾಧ್ಯಮ ವಸ್ತುವಿಷಯ ಮಾದರಿ ನೀತಿ ಸಂಹಿತೆಯನ್ನು ಮೇಲ್ನೋಟಕ್ಕೆ  ಉಲ್ಲಂಘಿಸುವಂತೆ ವಿಡಿಯೋ ತೋರುತ್ತಿದೆ ಎಂದು ಅದು ಹೇಳಿತ್ತು.

ಆಕ್ಷೇಪಿತ ಜಾಹೀರಾತಿನಲ್ಲಿ ಜಾರ್ಖಂಡ್‌ನ ಜನಾಂಗೀಯ ಚಹರೆಯನ್ನು ಬದಲಿಸುವ ರೀತಿಯಲ್ಲಿ ಒಂದು ಕೋಮಿನ ಜನತೆ ಅತಿಕ್ರಮಿಸಲು ಸಜ್ಜಾಗಿರುವಂತೆ ಹಾಗೂ ಅದಕ್ಕೆ ಜಾರ್ಖಂಡ್‌ ಮುಖ್ಯಮಂತ್ರಿ ಹೇಮಂತ್‌ ಸೊರೇನ್‌ ಪ್ರಚೋದಿಸುತ್ತಿರುವಂತೆ ಚಿತ್ರಿಸಲಾಗಿತ್ತು.

ಸರ್ಕಾರ ಸಂಬಂಧಪಟ್ಟವರ ಗಮನಕ್ಕೆ ತಂದಿರುವ ಕಾನೂನುಬಾಹಿರ ಹೇಳಿಕೆಗಳನ್ನು ತೆಗೆದುಹಾಕಲು ಅವರು ವಿಫಲವಾದರೆ ಕ್ರಮ ಎದುರಿಸಬೇಕಾಗುತ್ತದೆ ಎನ್ನುವ ಮಾಹಿತಿ ತಂತ್ರಜ್ಞಾನ ಕಾಯಿದೆ 2000ರ ಸೆಕ್ಷನ್ 79(3) (ಬಿ) ಅನ್ವಯ ಕ್ರಮ ಕೈಗೊಳ್ಳಬೇಕಿದೆ ಎಂದು ಇಸಿಐ ತನ್ನ ಆದೇಶದಲ್ಲಿ ತಿಳಿಸಿತ್ತು.

ಜಾರ್ಖಂಡ್‌ ವಿಧಾನಸಭೆಗೆ  ನವೆಂಬರ್ 13ರಂದು ಮತದಾನ ನಡೆದಿದ್ದು ನಾಳೆ (ನ. 20) ಎರಡನೇ ಹಂತ ನಿಗದಿಯಾಗಿದೆ. ನವೆಂಬರ್ 23ರಂದು ಮಹಾರಾಷ್ಟ್ರ ಚುನಾವಣಾ ಫಲಿತಾಂಶ ಪ್ರಕಟವಾಗುವ ದಿನವೇ ಜಾರ್ಖಂಡ್‌ ವಿಧಾನಸಭೆಯ ಚುನಾವಣಾ ಫಲಿತಾಂಶ ಕೂಡ ಪ್ರಕಟವಾಗಲಿದೆ.