ಜಾರ್ಖಂಡ್ ಹೈಕೋರ್ಟ್
ಜಾರ್ಖಂಡ್ ಹೈಕೋರ್ಟ್ 
ಸುದ್ದಿಗಳು

ಸ್ಥಳೀಯರಿಗೆ ಶೇ 100 ಮೀಸಲಾತಿ: 2,400ಕ್ಕೂ ಹೆಚ್ಚು ಶಿಕ್ಷಕರ ನೇಮಕ ರದ್ದು ಮಾಡಿದ ಜಾರ್ಖಂಡ್ ಹೈಕೋರ್ಟ್

Bar & Bench

2016 ರಲ್ಲಿ ಪ್ರಕಟವಾದ ಜಾಹೀರಾತಿನ ಅನುಸಾರವಾಗಿ ಜಾರ್ಖಂಡ್ ರಾಜ್ಯದ ಅನುಸೂಚಿತ (ಪರಿಶಿಷ್ಟ ಸಮುದಾಯ ಹೆಚ್ಚಿರುವ ಜಿಲ್ಲೆಗಳು) ಜಿಲ್ಲೆಗಳ ಸರ್ಕಾರಿ ಮಾಧ್ಯಮಿಕ ಶಾಲೆಗಳಲ್ಲಿ 2,400 ಕ್ಕೂ ಹೆಚ್ಚು ತರಬೇತಿ ಪಡೆದ ಪದವಿ ಶಿಕ್ಷಕರ ನೇಮಕಾತಿಯನ್ನು ಜಾರ್ಖಂಡ್ ಹೈಕೋರ್ಟ್ ಸೋಮವಾರ ರದ್ದುಪಡಿಸಿದೆ.

ರಾಜ್ಯಪಾಲರು ಹೊರಡಿಸಿದ್ದ ಅಧಿಸೂಚನೆಯಲ್ಲಿ ಸ್ಥಳೀಯರಿಗೆ ಶೇ 100ರಷ್ಟು ಮೀಸಲಾತಿ ನೀಡಿರುವುದನ್ನು ಆ ಮೂಲಕ ಅನುಸೂಚಿತ ಜಿಲ್ಲೆಗಳ ಹೊರಗಿನ ನಾಗರಿಕರ ಮೂಲಭೂತ ಹಕ್ಕುಗಳನ್ನು ಸಂಪೂರ್ಣವಾಗಿ ಕಡೆಗಣಿಸಿರುವುದನ್ನು ನ್ಯಾಯಾಲಯ ಗಮನಿಸಿದೆ.

ಇಂದ್ರ ಸಾಹ್ನಿ ಪ್ರಕರಣದಲ್ಲಿ ನಿಗದಿಪಡಿಸಿದಂತೆ ಬಾಹ್ಯ ಮಿತಿ ಶೇ 50 ಆಗಿರುವುದರಿಂದ ಸಂವಿಧಾನದಡಿಯಲ್ಲಿ ಅಂತಹ ಮೀಸಲಾತಿಗೆ ಅವಕಾಶ ಮಾಡಿಕೊಡುವುದಿಲ್ಲ ಎಂದು ಕೋರ್ಟ್ ತಿಳಿಸಿದೆ.

ಮುಖ್ಯ ನ್ಯಾಯಮೂರ್ತಿ ಎಚ್‌ಸಿ ಮಿಶ್ರಾ ಮತ್ತು ನ್ಯಾಯಮೂರ್ತಿಗಳಾದ ಚಂದ್ರಶೇಖರ್ ಮತ್ತು ದೀಪಕ್ ರೋಶನ್ ಅವರಿದ್ದ ನ್ಯಾಯಪೀಠ ಈ ತೀರ್ಪು ನೀಡಿದೆ.

“ವಾಸಸ್ಥಳ ಅಥವಾ ತಾಯ್ನೆಲದ ಆಧಾರದ ಮೇಲೆ ಮೀಸಲಾತಿ ಅಥವಾ ಆದ್ಯತೆ ನೀಡುವ ಈ 'ಮಣ್ಣಿನ ಮಕ್ಕಳ' ನೀತಿ ಕುರಿತಂತೆ ಈಗಾಗಲೇ ಡಾ. ಪ್ರದೀಪ್ ಜೈನ್ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ತೀರ್ಪು ನೀಡಿದೆ, ಸ್ಥಳೀಯತೆ ಆಧಾರದ ಮೇಲೆ ತಾರತಮ್ಯ ನಿಷೇಧಿಸಲಾಗಿದ್ದು ಸಂಸತ್ತಿಗೆ ಮಾತ್ರ ಈ ಕುರಿತು ವಿನಾಯಿತಿ ನೀಡುವ ಹಕ್ಕನ್ನು ಕೊಡಲಾಗಿದೆ"
ಜಾರ್ಖಂಡ್ ಹೈಕೋರ್ಟ್

13 ಅನುಸೂಚಿತ ಜಿಲ್ಲೆಗಳ ಸ್ಥಳೀಯ ನಿವಾಸಿಗಳನ್ನು ಮಾತ್ರ ಹತ್ತು ವರ್ಷಗಳ ಅವಧಿಗೆ ನೇಮಕಾತಿ ಮಾಡಿದ್ದ ಹಿನ್ನೆಲೆಯಲ್ಲಿ ಸರ್ಕಾರ ಹೊರಡಿಸಿದ್ದ ನೇಮಕಾತಿ ಅಧಿಸೂಚನೆಯ ಸಾಂವಿಧಾನಿಕ ಸಿಂಧುತ್ವವನ್ನು ಅರ್ಜಿದಾರರು ಪ್ರಶ್ನಿಸಿದ್ದರು.

ಕಡಿಮೆ ಮಾನವ ಅಭಿವೃದ್ಧಿ ಸೂಚ್ಯಂಕ, ಹಿಂದುಳಿದಿರುವಿಕೆ, ಬಡತನ ಇತ್ಯಾದಿ ಸಮಸ್ಯೆಗಳನ್ನು ನಿವಾರಿಸುವ ಮತ್ತು ಸಾಮಾಜಿಕ ಭದ್ರತೆ ಹಾಗೂ ರಾಜಕೀಯ ನ್ಯಾಯವನ್ನು ರಕ್ಷಿಸುವ ಉದ್ದೇಶದಿಂದ ಮತ್ತು ಅನುಸೂಚಿತ ಜಿಲ್ಲೆಗಳಲ್ಲಿ ವಾಸಿಸುತ್ತಿರುವವರ ಹಿತಾಸಕ್ತಿ ಕಾಪಾಡುವ ಸಲುವಾಗಿ ಅಧಿಸೂಚನೆ ಹೊರಡಿಸಲಾಗಿದೆ ಎಂಬ ಅಡ್ವೊಕೇಟ್ ಜನರಲ್ ಅಜಿತ್ ಕುಮಾರ್ ಅವರ ವಾದವನ್ನು ನ್ಯಾಯಾಲಯ ತಿರಸ್ಕರಿಸಿತು.

"ರಾಜ್ಯ ಸರ್ಕಾರದ ಇಂತಹ ಕಾನೂನುಬಾಹಿರ ಕ್ರಮಗಳಿಗೆ ನಾವು ಮೂಕಪ್ರೇಕ್ಷಕರಾಗಲು ಸಾಧ್ಯವಿಲ್ಲ ಮತ್ತು ರಾಜ್ಯ ಇಂತಹ ಯಾವುದೇ ಯತ್ನವನ್ನು ಅದರ ಆರಂಭದಲ್ಲಿಯೇ ಸ್ಥಗಿತಗೊಳಿಸಬೇಕು. ಅಂತಹ ನೇಮಕಾತಿಗಳು, ಹೆಚ್ಚು ಅರ್ಹತೆ ಇರುವ ಅಭ್ಯರ್ಥಿಗಳ ಹಕ್ಕುಗಳನ್ನು ಕಡೆಗಣಿಸಿ, ಸ್ಥಳೀಯತೆ ಆಧಾರದಲ್ಲಿ ಮಾತ್ರ ಅವಕಾಶ ಕಲ್ಪಿಸುತ್ತವೆ. ಸಂಪೂರ್ಣವಾಗಿ ಕಾನೂನುಬಾಹಿರ ಮತ್ತು ಅಸಂವಿಧಾನಿಕವಾಗಿರುವ ಇದನ್ನು ರದ್ದುಗೊಳಿಸಬೇಕಾಗಿದೆ".
ಜಾರ್ಖಂಡ್ ಹೈಕೋರ್ಟ್

ಕಾನೂನಿನ ಪ್ರಕಾರ ಹೊಸದಾಗಿ ಆಯ್ಕೆ ಪ್ರಕ್ರಿಯೆ ಆರಂಭಿಸುವಂತೆ ನ್ಯಾಯಾಲಯ ನಿರ್ದೇಶನ ನೀಡಿದೆ. ಈ ಹಿಂದೆ ಅರ್ಜಿ ಸಲ್ಲಿಸಿದ್ದವರು ವಯೋಮಾನದ ಆಧಾರದಲ್ಲಿ ಹೊಸದಾಗಿ ಅರ್ಜಿ ಸಲ್ಲಿಸಲು ಅರ್ಹರು ಎಂದೂ ಅದು ತಿಳಿಸಿದೆ.