Couple in Courtroom 
ಸುದ್ದಿಗಳು

ಮಾಜಿ ಪ್ರೇಮಿಯೊಂದಿಗಿನ ಛಾಯಾಚಿತ್ರ ಕುರಿತು ಪತಿ ಅವಮಾನ: ಪತ್ನಿ ವಿಚ್ಛೇದನ ಪಡೆಯಲು ಜಾರ್ಖಂಡ್ ಹೈಕೋರ್ಟ್ ಅವಕಾಶ

ಪತಿ ಮತ್ತು ಪತ್ನಿಯ ನಡುವಿನ ಸಂಬಂಧ ಪರಸ್ಪರ ನಂಬಿಕೆ ಮತ್ತು ಗೌರವ ಆಧರಿಸಿದ್ದು, ಅದು ಒಮ್ಮೆ ಮುರಿದುಬಿದ್ದರೆ ಸರಿಪಡಿಸುವುದು ಅಸಾಧ್ಯ. ಏಕೆಂದರೆ ನಂಬಿಕೆಯೇ ಮದುವೆಯ ಮೂಲಾಧಾರ,” ಎಂದಿದೆ ಪೀಠ.

Bar & Bench

ಮದುವೆಗೆ ಮುನ್ನ ಪ್ರಿಯಕರನೊಂದಿಗೆ ತೆಗೆಸಿಕೊಂಡಿದ್ದ ಛಾಯಾಚಿತ್ರಗಳಿಂದಾಗಿ ಗಂಡನ ಮನೆ ಕಡೆಯವರಿಂದ ನಿರಂತರ ಅಪಮಾನಕ್ಕೆ ತುತ್ತಾಗಿದ್ದ ಮಹಿಳೆ ವಿಚ್ಛೇದನ ಪಡೆಯಲು ಜಾರ್ಖಂಡ್‌ ಹೈಕೋರ್ಟ್‌ ಈಚೆಗೆ ಅವಕಾಶ ನೀಡಿದೆ.

ಮಹಿಳೆಯ ಪತಿ ಆಕೆಯ ಗೂಗಲ್ ಡ್ರೈವ್‌ನಿಂದ ಆಕ್ಷೇಪಿತ ಛಾಯಾಚಿತ್ರವನ್ನು  ವರ್ಗಾಯಿಸಿಕೊಂಡು ತನ್ನ ಕುಟುಂಬ ಸದಸ್ಯರೊಂದಿಗೆ ಹಂಚಿಕೊಂಡಿದ್ದಾನೆ ಎಂದು ನ್ಯಾಯಮೂರ್ತಿಗಳಾದ ಸುಜಿತ್ ನಾರಾಯಣ್ ಪ್ರಸಾದ್ ಮತ್ತು ಅರುಣ್ ಕುಮಾರ್ ರೈ ಅವರಿದ್ದ ಪೀಠ ತಿಳಿಸಿತು.

"ಪ್ರತಿವಾದಿ-ಪತಿ ಆ ಆಕ್ಷೇಪಾರ್ಹ ಛಾಯಾಚಿತ್ರಗಳನ್ನು ತನ್ನ ಕುಟುಂಬ ಸದಸ್ಯರಿಗೆ ತೋರಿಸುವ ಮೂಲಕ ಮತ್ತು ಅದರ ಆಧಾರದ ಮೇಲೆ ಆತನ ಕುಟುಂಬ ಸದಸ್ಯರು ಆಕೆಯನ್ನು ಅವಮಾನಿಸಿದ್ದಾರೆ. ಇದು ಪತಿಯೇ ಆತನ ಪತ್ನಿಯ ಚಾರಿತ್ರ್ಯ ಹರಣಕ್ಕಿಂತಲೂ ಬೇರೇನೂ ಅಲ್ಲ” ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ನಂಬಿಕೆಯ ಎಳೆ ಈಗಾಗಲೇ ಹರಿದು ಹೋಗಿರುವುದರಿಂದ ಪತಿಯೊಂದಿಗೆ ಪತ್ನಿ ವಾಸಿಸಲಾಗದಷ್ಟು ಅಸಾಧ್ಯವಾದ ಮಾನಸಿಕ ಯಾತನೆ ಉಂಟಾಗಿದೆ ಎಂದು ಅದು ತೀರ್ಪು ನೀಡಿದೆ.

“ಪತಿ ಮತ್ತು ಪತ್ನಿಯ ನಡುವಿನ ಸಂಬಂಧ ಪರಸ್ಪರ ನಂಬಿಕೆ ಮತ್ತು  ಗೌರವ ಆಧರಿಸಿದ್ದು, ಅದು ಒಮ್ಮೆ ಮುರಿದುಬಿದ್ದರೆ ಸರಿಪಡಿಸುವುದು ಅಸಾಧ್ಯ. ಏಕೆಂದರೆ ನಂಬಿಕೆಯೇ ಮದುವೆಯ ಮೂಲಾಧಾರ̤̤ ಮದುವೆಯು ಪರಸ್ಪರ ನಂಬಿಕೆ, ಒಡನಾಟ ಮತ್ತು ಹಂಚಿಕೊಂಡ ಅನುಭವಗಳ ಮೇಲೆ ನಿರ್ಮಿಸಲಾದ ಸಂಬಂಧವಾಗಿದೆ " ಎಂದು ಪೀಠ ಹೇಳಿದೆ.

2020ರಲ್ಲಿ ಮದುವೆಯಾದ 32 ವರ್ಷದ ಮಹಿಳೆ ಸಲ್ಲಿಸಿದ್ದ ಮೇಲ್ಮನವಿಯನ್ನು ಪರಿಗಣಿಸಿದ ಹೈಕೋರ್ಟ್, 2023ರಲ್ಲಿ ವಿಚ್ಛೇದನವನ್ನು ನಿರಾಕರಿಸಿದ್ದ ಕುಟುಂಬ ನ್ಯಾಯಾಲಯದ ತೀರ್ಪನ್ನು ರದ್ದುಪಡಿಸಿತು.

ಪ್ರಕರಣದಲ್ಲಿ ದೈಹಿಕ ಹಿಂಸೆಗೆ ಸಾಕ್ಷ್ಯ ಇಲ್ಲದಿದ್ದರೂ, ಮಾನಸಿಕ ಕ್ರೌರ್ಯ ಕೂಡ ಕ್ರೂರತೆಯೇ ಆಗಿದೆ ಎಂದು ಹೇಳಿದ ಅದು ಹಿಂದೂ ವಿವಾಹ ಕಾಯಿದೆಯ ಸೆಕ್ಷನ್‌ 13(1)(i-a) ಅಡಿ ಮಹಿಳೆ ವಿಚ್ಛೇದನ ಪಡೆಯುವಂತೆ ಆದೇಶಿಸಿತು.