

ಈರುಳ್ಳಿ- ಬೆಳ್ಳುಳ್ಳಿ ಸೇವಿಸದ ಹೆಂಡತಿಯ ಧಾರ್ಮಿಕ ಆಚರಣೆಗಳಿಂದಾಗಿ ಸಂಸಾರದಲ್ಲಿ ಒಡಕು ಮೂಡಿದ ಹಿನ್ನೆಲೆಯಲ್ಲಿ ದಂಪತಿಗೆ ವಿಚ್ಛೇದನ ನೀಡಿದ್ದ ಕೌಟುಂಬಿಕ ನ್ಯಾಯಾಲಯದ ಆದೇಶವನ್ನು ಗುಜರಾತ್ ಹೈಕೋರ್ಟ್ ಇತ್ತೀಚೆಗೆ ಎತ್ತಿಹಿಡಿದಿದೆ.
ವಿಚ್ಛೇದನ ಆದೇಶವನ್ನು ಇಬ್ಬರೂ ವಿರೋಧಿಸಲಿಲ್ಲವಾದರೂ ಜೀವನಾಂಶ ಕುರಿತಾದ ತಕರಾರಿನಿಂದಾಗಿ ಪ್ರಕರಣ ಹೈಕೋರ್ಟ್ ಮೆಟ್ಟಿಲೇರಿತ್ತು.
ಸ್ವಾಮಿ ನಾರಾಯಣರ ಭಕ್ತೆಯಾಗಿದ್ದ ಪತ್ನಿ ಈರುಳ್ಳಿ ಬೆಳ್ಳುಳ್ಳಿ ಸೇವಿಸದ ಕಾರಣಕ್ಕೆ ಪ್ರತ್ಯೇಕ ಅಡುಗೆ ಮಾಡುವ ವಿಚಾರದಲ್ಲಿ ಸಂಸಾರದಲ್ಲಿ ಮನಸ್ತಾಪಗಳು ಉಂಟಾಗಿತ್ತು. ತನ್ನ ತಾಯಿ ಹೆಂಡತಿಗೆ ಪ್ರತ್ಯೇಕವಾಗಿ ಈರುಳ್ಳಿ ಬೆಳ್ಳುಳ್ಳಿ ಇಲ್ಲದ ಆಹಾರ ಹಾಗೂ ಮನೆಯ ಉಳಿದ ಸದಸ್ಯರಿಗೆ ಈರುಳ್ಳಿ ಬೆಳ್ಳುಳ್ಳಿ ಇರುವ ಆಹಾರ ಸಿದ್ಧಪಡಿಸಬೇಕು ಎಂದು ಪತಿ ಹೈಕೋರ್ಟ್‌ಗೆ ತಿಳಿಸಿದರು.
ಧರ್ಮ ಪಾಲನೆ ಮತ್ತು ಈರುಳ್ಳಿ- ಬೆಳ್ಳುಳ್ಳಿ ಸೇವನೆ ವಿಚಾರ ಕಕ್ಷಿದಾರರ ನಡುವಿನ ಭಿನ್ನಾಭಿಪ್ರಾಯಗಳಿಗೆ ಪ್ರಚೋದಕ ಅಂಶವಾಗಿದೆ ಎಂದು ಹೈಕೋರ್ಟ್ ಹೇಳಿದೆ. ವಿವಾಹಕ್ಕೂ ಮೊದಲೇ ತನ್ನ ಆಹಾರ ಪದ್ದತಿ ಬಗ್ಗೆ ಪತಿಗೆ ತಿಳಿದಿತ್ತು ಎಂದು ಹೆಂಡತಿ ವಾದಿಸಿದರು.
ಕೌಟುಂಬಿಕ ನ್ಯಾಯಾಲಯ ಆದೇಶಿಸಿದ ಜೀವನಾಂಶ ಮೊತ್ತದಲ್ಲಿ ಹೆಚ್ಚಳ ಮಾಡಬೇಕು. ಪತಿ ಪ್ರತಿ ತಿಂಗಳು ಜೀವನಾಂಶ ಪಾವತಿಸಬೇಕು ಎಂದು ಹೆಂಡತಿ ಬೇಡಿಕೆ ಇಟ್ಟರೆ ಒಟ್ಟಿಗೆ ಜೀವನಾಂಶ ಪಾವತಿಸುವುದಾಗಿ ಪತಿ ಹೇಳಿದ್ದರು.
ಎರಡೂ ಮೇಲ್ಮನವಿಗಳನ್ನು ವಜಾಗೊಳಿಸಿದನ್ಯಾಯಮೂರ್ತಿಗಳಾದ ಸಂಗೀತಾ ಕೆ. ವಿಷೇಣ್ ಮತ್ತು ನಿಶಾ ಎಂ. ಠಾಕೋರ್ ಅವರಿದ್ದ ವಿಭಾಗೀಯ ಪೀಠ ವಿಚ್ಛೇದನ ಆದೇಶ ಎತ್ತಿಹಿಡಿಯಿತು.
ಒಂದೇ ಬಾರಿಗೆ ಜೀವನಾಂಶ ಪಾವತಿಸಲು ಪತ್ನಿ ವಿಚಾರಣೆ ವೇಳೆ ಒಪ್ಪದ ಹಿನ್ನೆಲೆಯಲ್ಲಿ ಈ ಕುರಿತಂತೆ ವಾದಿಸುವುದಿಲ್ಲ ಎಂದು ಪತಿಯ ಪರ ವಕೀಲರು ತಿಳಿಸಿದರು.
ಪತಿಯ ಆದಾಯ, ಕುಟುಂಬ ಜವಾಬ್ದಾರಿ, ಹೆಂಡತಿಯ ಈ ಹಿಂದಿನ ಔದ್ಯೋಗಿಕ ಸ್ಥಿತಿ ಇತ್ಯಾದಿ ದಾಖಲೆಗಳನ್ನು ಪರಿಶೀಲಿಸಿದ ನಂತರ, ಕೌಟುಂಬಿಕ ನ್ಯಾಯಾಲಯ ನಿಗದಿಪಡಿಸಿದ್ದ ₹10,000 ಜೀವನಾಂಶ ಮೊತ್ತವನ್ನು ಬದಲಾಯಿಸಲು ಯಾವುದೇ ಆಧಾರವಿಲ್ಲ ಎಂದು ಹೈಕೋರ್ಟ್ ತೀರ್ಮಾನಿಸಿತು. ಕೌಟುಂಬಿಕ ನ್ಯಾಯಾಲಯ ನಿಗದಿಪಡಿಸಿದ್ದ ಜೀವನಾಂಶ ಮೊತ್ತ ಹಾಗೆಯೇ ಮುಂದುವರೆಯಲಿದೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿತು.