Couple, J&K High Court, Srinagar Wing 
ಸುದ್ದಿಗಳು

ವಯಸ್ಸಿನ ದೃಢೀಕರಣಕ್ಕಾಗಿ ದಂತವೈದ್ಯರ ಪ್ರಿಸ್ಕ್ರಿಪ್ಷನ್, ಆಧಾರ್ ಒದಗಿಸಿದ್ದ ದಂಪತಿಗೆ ಕಾಶ್ಮೀರ ಹೈಕೋರ್ಟ್ ರಕ್ಷಣೆ

ಮಹಿಳೆ ಪ್ರೌಢ ವಯಸ್ಕರು ಎಂಬ ವಾದ ಸಮರ್ಥಿಸಿಕೊಳ್ಳುವುದಕ್ಕಾಗಿ ಆಧಾರ್‌ನಲ್ಲಿ ಇರುವಂತೆ ಆಕೆಗೆ 45 ವರ್ಷ ಎಂದು ಪ್ರಮಾಣೀಕರಿಸುವ ದಂತ ಶಸ್ತ್ರಚಿಕಿತ್ಸಕನ ಪ್ರಿಸ್ಕ್ರಿಪ್ಷನ್ ಅನ್ನು ಆಕೆಯ ಪರ ವಕೀಲರು ಸಲ್ಲಿಸಿದ್ದರು.

Bar & Bench

ತಮ್ಮ ವಿವಾಹದ ಬಳಿಕ ಸಂಬಂಧಿಕರು ಮತ್ತಿತರರಿಂದ ಬೆದರಿಕೆಗೆ ಒಳಗಾಗಿದ್ದ ಮುಸ್ಲಿಂ ದಂಪತಿಗೆ ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್ ಹೈಕೋರ್ಟ್ ಇತ್ತೀಚೆಗೆ ರಕ್ಷಣೆ ನೀಡಿದೆ [ಶಕೀಲಾ ಮತ್ತಿತರರು ಹಾಗೂ ಜಮ್ಮು ಕಾಶ್ಮೀರ ಕೇಂದ್ರಾಡಳಿತ ಪ್ರದೇಶ ಸರ್ಕಾರ ಇನ್ನಿತರರ ನಡುವಣ ಪ್ರಕರಣ].

ಮಹಿಳೆ ಪ್ರೌಢ ವಯಸ್ಕರು ಎಂಬ ವಾದ ಸಮರ್ಥಿಸಿಕೊಳ್ಳುವುದಕ್ಕಾಗಿ ಆಧಾರ್‌ನಲ್ಲಿ ಇರುವಂತೆ ಆಕೆಗೆ 45 ವರ್ಷ ಎಂದು ಪ್ರಮಾಣೀಕರಿಸುವ ದಂತ ಶಸ್ತ್ರಚಿಕಿತ್ಸಕನ ಪ್ರಿಸ್ಕ್ರಿಪ್ಷನ್‌ ಅನ್ನು ಆಕೆಯ ಪರ ವಕೀಲರು  ಸಲ್ಲಿಸಿದ್ದರು.

ಪತಿ-ಪತ್ನಿ ಇಬ್ಬರೂ ವಯಸ್ಕರಾಗಿದ್ದು, ಅವರ ಸ್ವಂತ ಇಚ್ಛೆಯ ಮೇರೆಗೆ ವಿವಾಹವಾಗಿರುವುದರಿಂದ ಅವರ ಶಾಂತಿಯುತ ದಾಂಪತ್ಯ ಜೀವನದಲ್ಲಿ ಹಸ್ತಕ್ಷೇಪ ಮಾಡಲು ಪೊಲೀಸರು ಸೇರಿದಂತೆ ಯಾರಿಗೂ ಯಾವುದೇ ಹಕ್ಕಿಲ್ಲ ಎಂದು ನ್ಯಾಯಮೂರ್ತಿ ಮೋಕ್ಷಾ ಖಜುರಿಯಾ ಕಜ್ಮಿ ಹೇಳಿದ್ದಾರೆ.

"ಪೊಲೀಸರು ಸೇರಿದಂತೆ ಯಾವುದೇ ಪ್ರತಿವಾದಿಗಳು ಅರ್ಜಿದಾರರ ವೈವಾಹಿಕ ಜೀವನದಲ್ಲಿ ಮಧ್ಯಪ್ರವೇಶಿಸಬಾರದು ಅಥವಾ ಯಾವುದೇ ಹಸ್ತಕ್ಷೇಪ ಮಾಡಬಾರದು ಎಂಬ ಷರತ್ತಿನೊಂದಿಗೆ ಅರ್ಜಿ ವಿಲೇವಾರಿ ಮಾಡಲಾಗಿದೆ. ಅರ್ಜಿದಾರರು ವಯಸ್ಕರು ಮತ್ತು ಅವರ ಸ್ವಂತ ಇಚ್ಛೆಯಿಂದ ಮದುವೆಯಾಗಿದ್ದಾರೆ ಎಂಬ ಬಗ್ಗೆ ನ್ಯಾಯಾಲಯಕ್ಕೆ ಮನವರಿಕೆಯಾದ ಹಿನ್ನೆಲೆಯಲ್ಲಿ ಈ ನಿರ್ದೇಶನ ನೀಡಲಾಗಿದೆ” ಎಂದು ನ್ಯಾಯಾಲಯ ವಿವರಿಸಿದೆ.

ಸಂಬಂಧಿಕರ ಬೆದರಿಕೆಗಳಿಂದ ರಕ್ಷಣೆ ಕೋರಿದ್ದ ದಂಪತಿ ತಾವು ಶರೀಯತ್ ಕಾನೂನಿನ ಪ್ರಕಾರ ತಮ್ಮ ಇಚ್ಚೆಗೆ ಅನುಗುಣವಾಗಿ ವಿವಾಹವಾಗಿರುವುದಾಗಿ ತಿಳಿಸಿದ್ದರು.

ದಾಖಲೆಯಲ್ಲಿರುವ ಸಾಕ್ಷ್ಯಗಳನ್ನು ಪರಿಗಣಿಸಿದ ನ್ಯಾಯಾಲಯ, ಮಹಿಳೆ ತನ್ನ ಸ್ವಂತ ಇಚ್ಛೆಯಿಂದ ವಿವಾಹವಾಗಿರುವುದರಿಂದ ಅವರ ವೈಯಕ್ತಿಕ ಜೀವನದಲ್ಲಿ ಯಾರೂ ಹಸ್ತಕ್ಷೇಪ ಮಾಡುವಂತಿಲ್ಲ ಎಂದ ಪೀಠ ಅವರ ಶಾಂತಿಯುತ ದಾಂಪತ್ಯ ಜೀವನದಲ್ಲಿ ಹಸ್ತಕ್ಷೇಪ ಮಾಡುವ ಹಕ್ಕು ಪೊಲೀಸರಿಗೂ ಇಲ್ಲ ಎಂಬುದಾಗಿ ತಿಳಿಸಿತು.