ಸಹ ಜೀವನ ನಡೆಸುತ್ತಿರುವವರಲ್ಲಿ ಒಬ್ಬರಿಗೆ ಈಗಾಗಲೇ ವಿವಾಹವಾಗಿದ್ದರೂ ಆ ಜೋಡಿ ರಕ್ಷಣೆಗೆ ಅರ್ಹ: ಪಂಜಾಬ್ ಹೈಕೋರ್ಟ್

ಇದೇ ವೇಳೆ ಯಾವುದೇ ಧರ್ಮಕ್ಕೆ ಸೇರಿದ ಅಪ್ರಾಪ್ತ ವಯಸ್ಕರು ಸಹ ಜೀವನ ನಡೆಸಿದರೆ ಅಂತಹವರಿಗೆ ರಕ್ಷಣೆ ನೀಡಲಾಗದು ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
Punjab and Haryana High Court
Punjab and Haryana High Court
Published on

ಬೆದರಿಕೆ ಎದುರಿಸುತ್ತಿರುವ ಸಹ‌ಜೀವನ ಜೋಡಿಗಳಲ್ಲಿ ಒಬ್ಬರು ಈಗಾಗಲೇ ಬೇರೆ ವ್ಯಕ್ತಿಯನ್ನು ವಿವಾಹವಾಗಿದ್ದರೂ ಕೂಡ ರಕ್ಷಣೆಗೆ ಅರ್ಹರಾಗಿರುತ್ತಾರೆ ಎಂದು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಇತ್ತೀಚೆಗೆ ತೀರ್ಪು ನೀಡಿದೆ [ಯಶ್ ಪಾಲ್ ಮತ್ತಿತರರು ಹಾಗೂ ಹರಿಯಾಣ ಸರ್ಕಾರ ಇನ್ನಿತರರ ನಡುವಣ ಪ್ರಕರಣ].

ಅಂತಹ ಲಿವ್-ಇನ್ ಸಂಬಂಧಗಳ ಸಾಮಾಜಿಕ-ನೈತಿಕ ಪರಿಣಾಮಗಳನ್ನು ಲೆಕ್ಕಿಸದೆ, ಅದರ ವಿವಿಧ ರೂಪಗಳಲ್ಲಿ ಸ್ವಯಂ ಸ್ವಾಯತ್ತತೆಯನ್ನು ದಂಪತಿಗಳಿಗೆ ನೀಡಬೇಕು ಎಂದು  ನ್ಯಾಯಮೂರ್ತಿ ಸುರೇಶ್ ಠಾಕೂರ್ ಮತ್ತು ನ್ಯಾಯಮೂರ್ತಿ ಸುದೀಪ್ತಿ ಶರ್ಮಾ ಅವರಿದ್ದ ವಿಭಾಗೀಯ ಪೀಠ ಹೇಳಿದೆ.

Also Read
ಲಿವ್‌-ಇನ್‌ ಸಂಬಂಧ ಸುಪ್ರೀಂ ಪ್ರೋತ್ಸಾಹಿಸದು: ಅಂತರ್‌ಧರ್ಮೀಯ ಸಹಜೀವನ ಜೋಡಿ ರಕ್ಷಣೆಗೆ ಅಲಾಹಾಬಾದ್ ಹೈಕೋರ್ಟ್ ನಕಾರ

"ಲಿವ್-ಇನ್ ಜೋಡಿಗಳಲ್ಲಿ ಒಬ್ಬರು ವಿವಾಹವಾಗಿದ್ದರೆ, ಆಯಾ ಕುಟುಂಬದ ಯಾವುದೇ ಸದಸ್ಯರು ಅಥವಾ ಯಾವುದೇ ನೈತಿಕ ಪೊಲೀಸರಿಂದ ಜೋಡಿಗೆ ಸ್ಪಷ್ಟ ಬೆದರಿಕೆ ಎದುರಾಗುವುದು ವೇದ್ಯವಾದರೆ ಸಹ‌ಜೀವನ ಜೋಡಿ ರಕ್ಷಣೆ ಪಡೆಯಲು ಅರ್ಹರಾಗುತ್ತಾರೆ ಎಂದು ನ್ಯಾಯಾಲಯ ಹೇಳಿದೆ.

ಆದರೆ, ಈ ಜೋಡಿಯಲ್ಲಿ ಯಾರಿಗಾದರೂ ಅಪ್ರಾಪ್ತ ಮಗು ಇದ್ದರೆ, ನ್ಯಾಯಾಲಯಗಳು ಆ ಮಗುವಿನ ಆರೈಕೆ ಮಾಡುವಂತೆ ಮಗುವಿನ ಪೋಷಕ ಅಥವಾ ಪೋಷಕಿಗೆ ನಿರ್ದೇಶಿಸಬಹುದು ಎಂದು ಪೀಠ ಹೇಳಿದೆ.

ರಕ್ಷಣೆ ವಿಚಾರದಲ್ಲಿ ಏಕಸದಸ್ಯ ಪೀಠಗಳು ನೀಡಿದ್ದ ವ್ಯತಿರಿಕ್ತ ತೀರ್ಪುಗಳನ್ನು ಗಮನಿಸಿದ ವಿಭಾಗೀಯ ಪೀಠ ಈ ತೀರ್ಪು ನೀಡಿದೆ.

ವ್ಯಭಿಚಾರ ಅಪರಾಧವಲ್ಲ ಎಂದು ಸುಪ್ರೀಂ ಕೋರ್ಟ್‌ ಜೋಸೆಫ್‌ ಶೈನ್‌ ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣ ಸೇರಿದಂತೆ ವಿವಿಧ ತೀರ್ಪುಗಳನ್ನು ಪರಿಶೀಲಿಸಿ ನ್ಯಾಯಾಲಯ ಈ ಆದೇಶ ನೀಡಿದೆ.

ಆದಾಗ್ಯೂ, ರಿಟ್ ಕೋರ್ಟ್‌ಗಳಲ್ಲಿ ಸಹ ಜೀವನ ಜೋಡಿಯ ರಕ್ಷಣೆಗಾಗಿ ಅರ್ಜಿ ಸಲ್ಲಿಸುವುದನ್ನು ತಪ್ಪಿಸಲು, ಇತರ ಕೆಲವು ಕಾರ್ಯವಿಧಾನಗಳನ್ನು ಸಹ ರೂಪಿಸುವ ಅಗತ್ಯವಿದೆ ಎಂದು ನ್ಯಾಯಾಲಯ ಹೇಳಿದೆ.

Also Read
ಪರಸ್ಪರ ಸಮ್ಮತಿಯ ಇಬ್ಬರು ವಯಸ್ಕರ ಲಿವ್‌-ಇನ್ ಸಂಬಂಧ ಅಪರಾಧವಲ್ಲ: ಅಲಾಹಾಬಾದ್‌ ಹೈಕೋರ್ಟ್‌

ಪೊಲೀಸರಿಗೆ ಈಗಾಗಲೇ ಸಾಕಷ್ಟು ಹೊರೆ ಇದ್ದು ಜೋಡಿಯೊಂದಿಗೆ ಪೊಲೀಸರನ್ನು ನಿಯೋಜಿಸುವುದರಿಂದ ಅವರಿಗೆ ಇನ್ನಷ್ಟು ಹೊರೆ ಹೊರಿಸಿದಂತಾಗುತ್ತದೆ ಎಂದ ನ್ಯಾಯಾಲಯ ಹೀಗಾಗಿ ಜೋಡಿ ಅರೆ ಕಾನೂನು ಸ್ವಯಂ ಸೇವಕರು ಅಥವಾ ಆಪ್ತ ಸಲಹೆಗಾರರ ಸಹಾಯ ಪಡೆಯಬಹುದು. ಇಲ್ಲವೇ ರಾಜ್ಯ ಮಾನವ ಹಕ್ಕುಗಳ ಆಯೋಗವನ್ನು ಸಂಪರ್ಕಿಸಬಹುದು ಎಂದು ಸಲಹೆ ನೀಡಿತು.

ಇದೇ ವೇಳೆ ಯಾವುದೇ ಧರ್ಮಕ್ಕೆ ಸೇರಿದ ಅಪ್ರಾಪ್ತ ವಯಸ್ಕರು ಸಹ ಜೀವನ ನಡೆಸಿದರೆ ಅಂತಹವರಿಗೆ ರಕ್ಷಣೆ ನೀಡಲಾಗದು ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ಹಾಗೆ ರಕ್ಷಣೆ ಒದಗಿಸಿದರೆ ಅದು ಕೆಲ ಸಮಸ್ಯೆಗಳನ್ನು ಸೃಷ್ಟಿಸಬಹುದು ಎಂದಿರುವ ನ್ಯಾಯಾಲಯ ಇದೇ ವೇಳೆ ಅಪ್ರಾಪ್ರರಿಗೆ ತೀವ್ರ ಜೀವ ಬೆದರಿಕೆ ಇದ್ದರೆ ಆಗ ನ್ಯಾಯಾಲಯವು ಪಾಲಕನ ಹೊಣೆಗಾರಿಕೆಯನ್ನು ಹೊತ್ತು ಅವರ ರಕ್ಷಣೆಗೆ ಮುಂದಾಗಬೇಕಾಗುತ್ತದೆ ಎಂದಿದೆ.

Kannada Bar & Bench
kannada.barandbench.com