ಹತ್ತು ಲಕ್ಷ ಜನಸಂಖ್ಯೆಗೆ 25 ನ್ಯಾಯಾಧೀಶರೂ ಇಲ್ಲದಿದ್ದರೂ ಅವರ ಕೆಲಸದ ಹೊರೆ ಮಾತ್ರ ಏರುತ್ತಲೇ ಇದೆ ಎಂದು ಸುಪ್ರೀಂ ಕೋರ್ಟ್ ಶುಕ್ರವಾರ ವಿಷಾದ ವ್ಯಕ್ತಪಡಿಸಿದೆ.
ನ್ಯಾಯಾಧೀಶರು ಒತ್ತಡದಲ್ಲಿ ಕಾರ್ಯ ನಿರ್ವಹಿಸುವುದನ್ನು ಕಂಡಾಗ ಅವರಿಂದ ತಪ್ಪುಗಳಾಗುತ್ತವೆ ಎಂದು ನ್ಯಾಯಮೂರ್ತಿಗಳಾದ ಅಭಯ್ ಎಸ್ ಓಕಾ, ಅಹ್ಸಾನುದ್ದೀನ್ ಅಮಾನುಲ್ಲಾ ಹಾಗೂ ಆಗಸ್ಟಿನ್ ಜಾರ್ಜ್ ಮಸೀಹ್ ಅವರಿದ್ದ ಪೀಠ ತಿಳಿಸಿತು.
"ನ್ಯಾಯಾಧೀಶರು ಮನುಷ್ಯರು. ಎಲ್ಲಾ ಮನುಷ್ಯರು ತಪ್ಪು ಮಾಡುತ್ತಾರೆ. ತಪ್ಪು ಮಾಡುವುದು ಮನುಷ್ಯರ ಸಹಜಗುಣ. ನಮ್ಮ ದೇಶದ ಬಹುತೇಕ ಎಲ್ಲಾ ನ್ಯಾಯಾಲಯಗಳು (ಕೆಲಸದ) ಹೊರೆ ಹೊತ್ತಿವೆ. 2002ರಲ್ಲಿ, "ಅಖಿಲ ಭಾರತ ನ್ಯಾಯಾಧೀಶರ ಸಂಘ (3) ಇನ್ನಿತರರು ಮತ್ತು ಭಾರತ ಒಕ್ಕೂಟ ಮತ್ತಿತರರ ನಡುವಣ ಪ್ರಕರಣದಲ್ಲಿ ಐದು ವರ್ಷದೊಳಗೆ ಹತ್ತು ಲಕ್ಷ ಜನಸಂಖ್ಯೆಗೆ ನ್ಯಾಯಾಧೀಶರ ಸಂಖ್ಯೆಯನ್ನು 50ಕ್ಕೆ ಹೆಚ್ಚಿಸಬೇಕು ಎಂದಿತ್ತು. ಆದರೆ ಜನಸಂಖ್ಯೆ ಮತ್ತು ದಾವೆ ಸಂಖ್ಯೆ ಗಣನೀಯವಾಗಿ ಹೆಚ್ಚಿತು” ಎಂದು ಅದು ನುಡಿಯಿತು.
ನ್ಯಾಯಾಧೀಶರು ಅವರು ಯಾವುದೇ ಜವಾಬ್ದಾರಿ ನಿರ್ವಹಿಸುತ್ತಿದ್ದರೂ ಕೆಲಸದ ಒತ್ತಡದಂತಹ ಕಾರಣಗಳಿಂದಾಗಿ ದೋಷ ಎಸಗುವ ಸಾದ್ಯತೆ ಇದೆ. ಹೀಗಾಗಿ ತಪ್ಪೆಸಗುವ ನ್ಯಾಯಾಧೀಶರ ವಿರುದ್ಧ ಪ್ರತಿಕೂಲ ಹೇಳಿಕೆ ನೀಡುವಾಗ ಉನ್ನತ ನ್ಯಾಯಾಲಯಗಳು ಸಂಯಮ ತೋರಬೇಕು ವೈಯಕ್ತಿಕ ಟೀಕೆ ಮಾಡುವುದನ್ನು ಅಥವಾ ತೀರ್ಪುಗಳಲ್ಲಿ ನ್ಯಾಯಾಧೀಶರ ನಡೆ ದಾಖಲಿಸುವುದುನ್ನು ತಪ್ಪಿಸಬೇಕು ಎಂದು ಅದು ಹೇಳಿದೆ.
ತನ್ನ ನ್ಯಾಯಾಂಗ ಆದೇಶದಲ್ಲಿ ದೆಹಲಿ ಪೊಲೀಸರ ನಡೆಯನ್ನು ನ್ಯಾಯಾಧೀಶರೊಬ್ಬರು ಖಂಡಿಸಿದ್ದರು. ಹೀಗಾಗಿ ದೆಹಲಿ ಹೈಕೋರ್ಟ್ ಅವರ ವಿರುದ್ಧ ಪ್ರತಿಕೂಲ ಟೀಕೆ ಮಾಡಿತ್ತು. ಈ ಟೀಕೆಗಳನ್ನು ದಾಖಲೆಗಳಿಂದ ತೆಗೆದುಹಾಕುವಂತೆ ಕೋರಿ ನ್ಯಾಯಾಧೀಶ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಮನವಿಯನ್ನು ಪುರಸ್ಕರಿಸಿ ಶುಕ್ರವಾರ ನೀಡಿದ್ದ ತೀರ್ಪಿನಲ್ಲಿ ಸುಪ್ರೀಂ ಕೋರ್ಟ್ ಈ ಅಭಿಪ್ರಾಯ ವ್ಯಕ್ತಪಡಿಸಿದೆ.
ಪ್ರತಿಕೂಲ ಹೇಳಿಕೆಗಳು ನ್ಯಾಯಾಧೀಶರ ವೃತ್ತಿಗೆ ಮಾರಕವಾಗಲಿದ್ದು ಸಾಂವಿಧಾನಿಕ ನ್ಯಾಯಾಲಯಗಳು ಕೂಡ ತಪ್ಪೆಸಗುವ ಸಾಧ್ಯತೆ ಇದೆ ಎಂದು ಪೀಠ ತಿಳಿಸಿದೆ.