ಸುದ್ದಿಗಳು

ಭಾರೀ ಪ್ರಮಾಣದ ನಗದು ದೊರೆತ ಆರೋಪ: ಹಿರಿಯ ವಕೀಲರಿಂದ ಕಾನೂನು ಸಲಹೆ ಪಡೆಯುತ್ತಿರುವ ನ್ಯಾ. ವರ್ಮಾ

ಸಿದ್ಧಾರ್ಥ್ ಅಗರ್‌ವಾಲ್‌, ಅರುಂಧತಿ ಕಾಟ್ಜು, ತಾರಾ ನರುಲಾ, ಸ್ತುತಿ ಗುಜ್ರಾಲ್ ಸೇರಿದಂತೆ ಹಿರಿಯ ವಕೀಲರು ಹಾಗೂ ನ್ಯಾಯವಾದಿಗಳು ಈ ಸೋಮವಾರ ಮತ್ತು ಬುಧವಾರ ನ್ಯಾ. ವರ್ಮಾ ಅವರ ನಿವಾಸಕ್ಕೆ ಭೇಟಿ ನೀಡಿದ್ದರು.

Bar & Bench

ತಮ್ಮ ನಿವಾಸದಲ್ಲಿ ನಗದು ರಾಶಿ ಪತ್ತೆಯಾದ ಆರೋಪದ ತನಿಖೆಗಾಗಿ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ಅವರು ರಚಿಸಿದ್ದ ತ್ರಿಸದಸ್ಯ ಆಂತರಿಕ ಸಮಿತಿ ಹೇಳಿಕೆ ಪಡೆಯಲಿರುವ ಹಿನ್ನೆಲೆಯಲ್ಲಿ ದೆಹಲಿ ಹೈಕೋರ್ಟ್ ನ್ಯಾಯಮೂರ್ತಿ ಯಶವಂತ್ ವರ್ಮಾ ಅವರು  ಕಾನೂನು ಸಲಹೆ ಪಡೆಯಲು ಕೆಲ ವಕೀಲರನ್ನು ಭೇಟಿಯಾಗಿದ್ದಾರೆ.  

ಹಿರಿಯ ವಕೀಲರಾದ ಸಿದ್ಧಾರ್ಥ್ ಅಗರ್ವಾಲ್, ಅರುಂಧತಿ ಕಾಟ್ಜು, ವಕೀಲರಾದ ತಾರಾ ನರುಲಾ, ಸ್ತುತಿ ಗುಜ್ರಾಲ್ ಹಾಗೂ ಮತ್ತೊಬ್ಬ ನ್ಯಾಯವಾದಿ ಈ ಸೋಮವಾರ ಮತ್ತು ಬುಧವಾರ ನ್ಯಾ. ವರ್ಮಾ ಅವರ ನಿವಾಸಕ್ಕೆ ಭೇಟಿ ನೀಡಿದ್ದರು.

ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಶೀಲ್ ನಾಗು, ಹಿಮಾಚಲ ಪ್ರದೇಶ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಜಿಎಸ್ ಸಂಧವಾಲಿಯಾ ಹಾಗೂ ಕರ್ನಾಟಕ ಹೈಕೋರ್ಟ್‌ ನ್ಯಾಯಮೂರ್ತಿ ಅನು ಶಿವರಾಮನ್‌ ಅವರಿರುವ ಸಮಿತಿ ದೆಹಲಿಯಲ್ಲಿ ಬೀಡುಬಿಟ್ಟಿದ್ದು ಈ ವಾರ ಹಲವು ಬಾರಿ ನ್ಯಾ. ವರ್ಮಾ ಅವರನ್ನು ಭೇಟಿಯಾಗುವ ಸಾಧ್ಯತೆಗಳಿವೆ.

ತನಿಖಾ ಸಮಿತಿಯ ಎದುರು ನೀಡಬೇಕಾದ ಪ್ರತಿಕ್ರಿಯೆ ಭವಿಷ್ಯದಲ್ಲಿ ಕೈಗೊಳ್ಳಲಿರುವ ಕ್ರಮಗಳಿಗೆ ಆಧಾರವಾಗುವುದರಿಂದ ನ್ಯಾಯಮೂರ್ತಿಗಳು ತಮ್ಮ ಪ್ರತಿಕ್ರಿಯೆಯನ್ನು ಪರಿಷ್ಕರಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

"ಈ ಪ್ರಕ್ರಿಯೆಗಳು ತ್ರಾಸದಾಯಕವಾಗಿವೆ. ಇದು ವಾಗ್ದಂಡನೆ ಮತ್ತು ಸಂಭಾವ್ಯ ಕ್ರಿಮಿನಲ್ ವಿಚಾರಣೆಗೆ ಮುನ್ನುಡಿಯಾಗಲಿರುವುದರಿಂದ ಕಾನೂನು ಅಭಿಪ್ರಾಯ ಪಡೆಯಲಾಗುತ್ತಿದೆ" ಎಂಬುದಾಗಿ ಉನ್ನತ ಮೂಲಗಳು ವಿವರಿಸಿವೆ.

ಮಾರ್ಚ್ 14 ರ ಸಂಜೆ ನ್ಯಾಯಮೂರ್ತಿ ವರ್ಮಾ ಅವರ ಮನೆಯಲ್ಲಿ ಬೆಂಕಿ ಆಕಸ್ಮಿಕ ಸಂಭವಿಸಿತ್ತು. ಬೆಂಕಿ ನಂದಿಸಲು ಹೋದ ಅಗ್ನಿಶಾಮಕ ಸಿಬ್ಬಂದಿಗೆ ಅವರ ಮನೆಯಲ್ಲಿ ಸುಟ್ಟು ಕರಕಲಾದ ಅಪಾರ ಪ್ರಮಾಣದ ನಗದು ದೊರೆತಿತ್ತು ಎಂಬ ಆರೋಪ ಕೇಳಿ ಬಂದಿತ್ತು.