Justice Yashwant Varma and Supreme Court 
ಸುದ್ದಿಗಳು

ನಗದು ಪತ್ತೆ ಪ್ರಕರಣದಲ್ಲಿ ತಮ್ಮ ಪಾತ್ರವಿಲ್ಲ: ಸಂಸದೀಯ ಸಮಿತಿ ಎದುರು ನ್ಯಾ. ಯಶವಂತ್ ವರ್ಮಾ ಸಮರ್ಥನೆ

ಮನೆಯಲ್ಲಿ ಬೆಂಕಿ ಅವಘಡ ಸಂಭವಿಸಿದ ವೇಳೆ ತಾವು ಸ್ಥಳದಲ್ಲಿ ಇರಲಿಲ್ಲ. ಅಲ್ಲದೆ ನಗದು ಪತ್ತೆ ಆಗಿಲ್ಲ ಎಂದು ಅವರು ಹೇಳಿದ್ದಾರೆ.

Bar & Bench

ದೆಹಲಿ ಹೈಕೋರ್ಟ್‌ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾಗ ತಮ್ಮ ನಿವಾಸದಲ್ಲಿ ಅಪಾರ ಪ್ರಮಾಣದ ಸುಟ್ಟು ಕರಕಲಾದ ನಗದು ರಾಶಿ ಪತ್ತೆಯಾದ ಪ್ರಕರಣದಲ್ಲಿ ತಮ್ಮ ಪಾತ್ರ ಇಲ್ಲ ಎಂದು ಅಲಾಹಾಬಾದ್‌ ಹೈಕೋರ್ಟ್‌ ನ್ಯಾಯಮೂರ್ತಿ ಯಶವಂತ್‌ ವರ್ಮಾ ಅವರು ವಾಗ್ದಂಡನೆ ಗೊತ್ತುವಳಿ ಪರಿಶೀಲಿಸುತ್ತಿರುವ ಸಂಸದೀಯ ಸಮಿತಿ ಎದುರು ಸಮರ್ಥಿಸಿಕೊಂಡಿದ್ದಾರೆ.

ಮೂಲಗಳ ಪ್ರಕಾರ, ಬೆಂಕಿ ಅವಘಡ ಸಂಭವಿಸಿದ ವೇಳೆ ತಾವು ತಮ್ಮ ಅಧಿಕೃತ ನಿವಾಸದಲ್ಲಿ ಇರಲಿಲ್ಲ ಮತ್ತು ಬೆಂಕಿ ನಂದಿಸಲು ಬಂದ ಅಗ್ನಿಶಾಮಕ ದಳವು ಆ ಸ್ಥಳದಿಂದ ಯಾವುದೇ ನಗದು ವಶಪಡಿಸಿಕೊಂಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಅಲ್ಲದೆ ಪ್ರಕರಣದಲ್ಲಿ ತಾವು ಮೊದಲ ಪ್ರತಿಕ್ರಿಯಾಕಾರನಲ್ಲ. ಸ್ಥಳವನ್ನು ಸುರಕ್ಷಿತವಾಗಿರುಡವ ಹೊಣೆ ಮೊದಲು ಸ್ಥಳಕ್ಕೆ ಬಂದ ಅಧಿಕಾರಿಗಳದ್ದೇ ಆಗಿತ್ತು ಎಂದು ಅವರು ಹೇಳಿದ್ದಾರೆ.

ತಮ್ಮ ನಿವಾಸದಿಂದ ಅಪಾರ ಪ್ರಮಾಣದ ನಗದು ಪತ್ತೆಯಾಗಿದೆ ಎಂಬ ಆರೋಪಗಳನ್ನು ನ್ಯಾ. ವರ್ಮಾ ಅವರು ನಿರಾಕರಿಸಿದ್ದಾರೆ. ಬೆಂಕಿ ಅವಘಡದ ನಂತರ ಸ್ಥಳವನ್ನು ಸಮರ್ಪಕವಾಗಿ ಸುರಕ್ಷಿತಗೊಳಿಸುವಲ್ಲಿ ಯಾವುದೇ ಲೋಪವಾಗಿದ್ದರೂ, ತಮ್ಮ ಬದಲು ಸ್ಥಳಕ್ಕೆ ಮೊದಲು ಬಂದ ಪ್ರತಿಕ್ರಿಯಾಕಾರರ ಹೊಣೆಗಾರಿಕೆಯಾಗಿತ್ತು ಎಂದು ಅವರು ವಾದಿಸಿದ್ದಾರೆ ಎಂಬುದಾಗಿ ಮೂಲಗಳು ತಿಳಿಸಿವೆ.

ಜನವರಿ 12ರಂದು ನ್ಯಾ. ವರ್ಮಾ ಅವರು ಸಮಿತಿಗೆ ಪ್ರತಿಕ್ರಿಯೆ ಸಲ್ಲಿಸಿದ್ದಾರೆ. ಅವರು ಸಲ್ಲಿಸಿರುವ ದಾಖಲೆ ಸಾರ್ವಜನಿಕವಾಗಿ ಲಭ್ಯವಿಲ್ಲ. ಆದರೆ ಅದರ ವಿವರಗಳ ಬಗ್ಗೆ ಬಲ್ಲ ಮೂಲಗಳು ಬಾರ್‌ ಅಂಡ್‌ ಬೆಂಚ್‌ಗೆ ದೃಢಪಡಿಸಿವೆ.  

ನ್ಯಾ.ವರ್ಮಾ ಅವರ ದೆಹಲಿ ನಿವಾಸದಲ್ಲಿ ಮಾರ್ಚ್ 14ರ ಸಂಜೆ ಅಗ್ನಿ ಅವಗಢ ಸಂಭವಿಸಿತ್ತು. ಈ ವೇಳೆ ಅಗ್ನಿಶಾಮಕ ದಳ ಬೆಂಕಿ ನಂದಿಸುವಾಗ ಸುಟ್ಟ ನೋಟಿನ ಕಂತೆಗಳು ಪತ್ತೆಯಾಗಿದೆ ಎಂಬ ಆರೋಪ ದೇಶಾದ್ಯಂತ ಸಂಚಲನ ಸೃಷ್ಟಿಸಿತ್ತು. ಈ ವಿಚಾರವಾಗಿ ನ್ಯಾ. ವರ್ಮಾ ಅವರನ್ನು ದೆಹಲಿ ಹೈಕೋರ್ಟ್‌ನಿಂದ ಅಲಾಹಾಬಾದ್‌ ಹೈಕೋರ್ಟ್‌ಗೆ ವರ್ಗಾವಣೆ ಮಾಡಲಾಗಿತ್ತು.

ಘಟನೆಯ ತನಿಖೆಗಾಗಿ ಅಂದಿನ ಸಿಜೆಐ ಸಂಜೀವ್‌ ಖನ್ನಾ ಅವರು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಶೀಲ್ ನಾಗು, ಹಿಮಾಚಲ ಪ್ರದೇಶ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಜಿ ಎಸ್ ಸಂಧವಾಲಿಯಾ ಹಾಗೂ ಕರ್ನಾಟಕ ಹೈಕೋರ್ಟ್‌ ನ್ಯಾಯಮೂರ್ತಿ ಅನು ಶಿವರಾಮನ್‌ ಅವರನ್ನೊಳಗೊಂಡ ಸಮಿತಿ ರಚಿಸಿದ್ದರು.

ಮಾರ್ಚ್ 25ರಂದು ತನಿಖೆ ಆರಂಭಿಸಿದ್ದ ಸಮಿತಿ ಮೇ4 ರಂದು ಅಂದಿನ ಸಿಜೆಐ ಖನ್ನಾ ಅವರಿಗೆ ವರದಿ ಸಲ್ಲಿಸಿತ್ತು. ನ್ಯಾ. ವರ್ಮಾ ಅವರು ರಾಜೀನಾಮೆ ನೀಡಬೇಕು ಇಲ್ಲವೇ ವಾಗ್ದಂಡನಾ ಪ್ರಕ್ರಿಯೆ ಎದುರಿಸಬೇಕು ಎಂದು ವರದಿ ಸ್ವೀಕರಿಸಿದ್ದ ನ್ಯಾ. ಖನ್ನಾ ತಿಳಿಸಿದ್ದರು. ಆದರೆ ನ್ಯಾ. ವರ್ಮಾ ಅವರು ರಾಜೀನಾಮೆ ನೀಡಲು ಒಪ್ಪದ ಹಿನ್ನೆಲೆಯಲ್ಲಿ ನ್ಯಾ. ವರ್ಮಾ ಅವರನ್ನು ವಜಾಗೊಳಿಸುವಂತೆ ತಿಳಿಸಿ ರಾಷ್ಟ್ರಪತಿ ಮತ್ತು ಪ್ರಧಾನಮಂತ್ರಿ ಅವರಿಗೆ ಪತ್ರ ಬರೆದಿದ್ದರು.

ಆಗಸ್ಟ್‌ನಲ್ಲಿ, ಲೋಕಸಭಾ ಸ್ಪೀಕರ್ ಅವರು ಸಂಸದರು ಸಲ್ಲಿಸಿದ ವಾಗ್ದಂಡನೆ ಪ್ರಸ್ತಾವನೆಯನ್ನು ಅಂಗೀಕರಿಸಿದ್ದರು, ಹೈಕೋರ್ಟ್ ನ್ಯಾಯಮೂರ್ತಿ ಹುದ್ದೆಯಿಂದ ನ್ಯಾ. ವರ್ಮಾ ಅವರನ್ನು ವಜಾಗೊಳಿಸುವ ಪ್ರಕ್ರಿಯೆ ಆರಂಭಿಸಿದರು.

ನ್ಯಾಯಮೂರ್ತಿಗಳ (ವಿಚಾರಣೆ) ಕಾಯಿದೆಯಡಿ, ಈ ಘಟನೆ ಕುರಿತು ತನಿಖೆ ನಡೆಸಲು ಸ್ಪೀಕರ್ ಅವರು ತ್ರಿಸದಸ್ಯ ಸಮಿತಿ ರಚಿಸಿದ್ದರು. ಬಳಿಕ, ಆರೋಪಗಳು ಹಾಗೂ ನ್ಯಾಯಮೂರ್ತಿಯ ಪ್ರತಿಕ್ರಿಯೆ ಪರಿಶೀಲಿಸಲು ಸಂಸದೀಯ ಸಮಿತಿಯನ್ನು ರಚಿಸಲಾಗಿತ್ತು.

ಈ ಮಧ್ಯೆ, ಸಂಸದೀಯ ಸಮಿತಿ ರಚನೆ ಪ್ರಶ್ನಿಸಿ ನ್ಯಾ.  ವರ್ಮಾ ಅವರು ಸಲ್ಲಿಸಿದ್ದ ಅರ್ಜಿಯ ಕುರಿತು ಸುಪ್ರೀಂ ಕೋರ್ಟ್ ಕೆಲ ದಿನಗಳ ಹಿಂದೆ ತನ್ನ ತೀರ್ಪು ಕಾಯ್ದಿರಿಸಿತ್ತು.