K Chandrashekar Rao, Harish Rao, Telangana HC Facebook
ಸುದ್ದಿಗಳು

[ಕಾಳೇಶ್ವರಂ ಯೋಜನೆ] ಮಾಜಿ ಸಿಎಂ ಕೆಸಿಆರ್, ಹರೀಶ್ ರಾವ್‌ ವಿರುದ್ಧ ಬಲವಂತದ ಕ್ರಮ ಬೇಡ: ತೆಲಂಗಾಣ ಹೈಕೋರ್ಟ್‌

ನ್ಯಾಯಾಂಗ ತನಿಖೆ ಬಳಿಕ ಸಲ್ಲಿಸಲಾದ ಕಾಳೇಶ್ವರಂ ಯೋಜನೆಯ ವರದಿಯಲ್ಲಿ ಕೆಸಿಆರ್ ಮತ್ತು ಹರೀಶ್ ರಾವ್ ಗಂಭೀರ ಭ್ರಷ್ಟಾಚಾರ ಎಸಗಿದ್ದಾರೆ ಎಂದು ಆರೋಪಿಸಲಾಗಿತ್ತು.

Bar & Bench

ಕಾಳೇಶ್ವರಂ ಏತ ನೀರಾವರಿ ಯೋಜನೆಯಲ್ಲಿನ ಅಕ್ರಮಗಳಿಗೆ ಸಂಬಂಧಿಸಿದಂತೆ  ತೆಲಂಗಾಣದ ಮಾಜಿ ಮುಖ್ಯಮಂತ್ರಿ ಮತ್ತು ಭಾರತ ರಾಷ್ಟ್ರ ಸಮಿತಿ (ಬಿಆರ್‌ಎಸ್) ಮುಖ್ಯಸ್ಥ ಕೆ ಚಂದ್ರಶೇಖರ ರಾವ್ (ಕೆಸಿಆರ್) ಹಾಗೂ ಮಾಜಿ ಸಚಿವ ಹರೀಶ್ ರಾವ್ ಅವರ ವಿರುದ್ಧ ಬಲವಂತದ ಕ್ರಮ ಕೈಗೊಳ್ಳದಂತೆ ತೆಲಂಗಾಣ ಹೈಕೋರ್ಟ್ ಮಧ್ಯಂತರ ಪರಿಹಾರ ನೀಡಿದೆ [ಕಲ್ವಕುಂಟ್ಲ ಚಂದ್ರಶೇಖರ ರಾವ್ ಮತ್ತು ತೆಲಂಗಾಣ ಸರ್ಕಾರ ಇನ್ನಿತರರ ನಡುವಣ ಪ್ರಕರಣ ಮತ್ತು ಸಂಬಂಧಿತ ದಾವೆಗಳು].

ಕಾಳೇಶ್ವರಂ ಯೋಜನೆಗೆ ಸಂಬಂಧಿಸಿದಂತೆ ನ್ಯಾಯಮೂರ್ತಿ ಪಿ ಸಿ ಘೋಷ್ ಅವರು ನೀಡಿದ್ದ ವರದಿ ಪ್ರಶ್ನಿಸಿ ಕೆಸಿಆರ್ ಮತ್ತು ಹರೀಶ್ ರಾವ್ ಅವರು ಸಲ್ಲಿಸಿದ್ದ ಅರ್ಜಿಗಳಿಗೆ ಸಂಬಂಧಿಸಿದಂತೆ ಮುಖ್ಯ ನ್ಯಾಯಮೂರ್ತಿ ಅಪರೇಶ್ ಕುಮಾರ್ ಸಿಂಗ್ ಮತ್ತು ನ್ಯಾಯಮೂರ್ತಿ ಜಿ ಎಂ ಮೊಹಿಯುದ್ದೀನ್ ಅವರಿದ್ದ ಪೀಠ ಮಧ್ಯಂತರ ಆದೇಶ ನೀಡಿತು.

ನ್ಯಾಯಾಂಗ ತನಿಖೆ ಬಳಿಕ ಜುಲೈ 31 ರಂದು ಸಲ್ಲಿಸಲಾದ ಕಾಳೇಶ್ವರಂ ಯೋಜನೆಯ ವರದಿಯಲ್ಲಿ ಕೆಸಿಆರ್ ಮತ್ತು ಹರೀಶ್ ರಾವ್  ಗಂಭೀರ ಭ್ರಷ್ಟಾಚಾರ ಎಸಗಿದ್ದಾರೆ ಎಂದು ಆರೋಪಿಸಲಾಗಿತ್ತು. ರಾಜ್ಯದ ಆಡಳಿತಾರೂಢ ಕಾಂಗ್ರೆಸ್‌ ಸರ್ಕಾರ ಪ್ರಕರಣವನ್ನು ಸಿಬಿಐಗೆ ವಹಿಸಲು ಒಪ್ಪಿಗೆ ನೀಡಿತ್ತು.

ಈ ಬೆಳವಣಿಗೆಗಳ ನಡುವೆ ಕೆಸಿಆರ್ ಮತ್ತು ಹರೀಶ್ ರಾವ್ ಅವರಿಗೆ ಮುಂದಿನ ವಿಚಾರಣೆ ನಡೆಯಲಿರುವ ಅಕ್ಟೋಬರ್ 7ರವರೆಗೆ ಬಲವಂತದ ಕ್ರಮ ಕೈಗೊಳ್ಳದಂತೆ ಮಂಗಳವಾರ ಹೈಕೋರ್ಟ್ ಮಧ್ಯಂತರ ರಕ್ಷಣೆ ನೀಡಿದೆ.

ನ್ಯಾಯಾಂಗ ಆಯೋಗದ ಜುಲೈ 31ರ ವರದಿ ಆಧಾರದ ಮೇಲೆ ಯಾವುದೇ ಪ್ರತಿಕೂಲ ಕ್ರಮ ಕೈಗೊಳ್ಳುವ ಬಗ್ಗೆ ಚಿಂತನೆ ನಡೆಸುತ್ತಿಲ್ಲ ಎಂದು ಅಡ್ವೊಕೇಟ್ ಜನರಲ್ ಎ ಸುದರ್ಶನ್ ರೆಡ್ಡಿ ಅವರು ಅರ್ಜಿ ಸಲ್ಲಿಸಿದರಾದರೂ ನ್ಯಾಯಾಲಯ ಈ ಆದೇಶ ನೀಡಿತು.

"ರಾಷ್ಟ್ರೀಯ ಅಣೆಕಟ್ಟು ಸುರಕ್ಷತಾ ಪ್ರಾಧಿಕಾರ ಸಲ್ಲಿಸಿದ ವರದಿಗಳು ಇನ್ನಿತರ ವರದಿಗಳ ಆಧಾರದ ಮೇಲೆ ಕಾಳೇಶ್ವರಂ ಅಣೆಕಟ್ಟಿನ ನಿರ್ಮಾಣ ಮತ್ತು ಯೋಜನೆ ಅನುಷ್ಠಾನ ಅಕ್ರಮಗಳಿಗೆ ಸಂಬಂಧಿಸಿದ ಪ್ರಕರಣವನ್ನು ಸಿಬಿಐಗೆ ವಹಿಸಲಾಗಿದೆ... ಪ್ರಕರಣವನ್ನು 07.10.2025ರಂದು ಅರ್ಜಿ ಸಲ್ಲಿಸಿದಾಗ ಪಟ್ಟಿ ಮಾಡೋಣ... ಈ ಮಧ್ಯೆ, ಆಯೋಗದ ವರದಿ  ಆಧರಿಸಿ ಮುಂದಿನ ವಿಚಾರಣೆಯ ದಿನದವರೆಗೆ ಅರ್ಜಿದಾರರ ವಿರುದ್ಧ ಪ್ರತಿಕೂಲ ಕ್ರಮ ಕೈಗೊಳ್ಳಬಾರದು" ಎಂದು ನ್ಯಾಯಾಲಯದ ಆದೇಶ ವಿವರಿಸಿದೆ.

ಆಯೋಗವು ಸ್ವಾಭಾವಿಕ ನ್ಯಾಯ ಉಲ್ಲಂಘಿಸಿದೆ. ಸರ್ಕಾರ ಮಾಧ್ಯಮಗಳಲ್ಲಿ ವರದಿ ಬಹಿರಂಗಪಡಿಸಿರುವುದು ತಪ್ಪು ಎಂದು ಆಗಸ್ಟ್ 21 ರಂದು ನಡೆದ ವಿಚಾರಣೆ ವೇಳೆ ಅರ್ಜಿದಾರರು ವಾದಿಸಿದ್ದರು. ಆಗ ವರದಿಯ ವಿವರಗಳನ್ನು ಸರ್ಕಾರ ಜಾಲತಾಣದಿಂದ ತೆರವುಗೊಳಿಸಬೇಕು ಎಂದು ಹೈಕೋರ್ಟ್‌ ಸೂಚಿಸಿತ್ತು.

ಅರ್ಜಿದಾರರ ಪರವಾಗಿ ಹಿರಿಯ ವಕೀಲರಾದ ಆರ್ಯಮ ಸುಂದರಂ ಮತ್ತು ದಾಮ ಶೇಷಾದ್ರಿ ನಾಯ್ಡು , ಜಗ್ಗಣ್ಣಗಿರಿ ವೆಂಕಟ್ ಸಾಯಿ ಹಾಗೂ ಪೊನುಗೋಟಿ ಮೋಹಿತ್ ರಾವ್ ವಾದ ಮಂಡಿಸಿದರು. 

ತೆಲಂಗಾಣ ಸರ್ಕಾರವನ್ನು  ಅಡ್ವೊಕೇಟ್ ಜನರಲ್ ಎ ಸುದರ್ಶನ್ ರೆಡ್ಡಿ ಮತ್ತು ಹಿರಿಯ ವಕೀಲ ಎಸ್ ನಿರಂಜನ್ ರೆಡ್ಡಿಪ್ರತಿನಿಧಿಸಿದ್ದರು.

[ತೀರ್ಪಿನ ಪ್ರತಿ]

Sri_Kalvakuntla_Chandrashekar_Rao_v_State_of_Telangana.pdf
Preview