Senior Citizens 
ಸುದ್ದಿಗಳು

ವೃದ್ಧೆ ತಾಯಿಗೆ ಜೀವನಾಂಶ ನೀಡಲು ಹಿಂದೇಟು: ಪುತ್ರನಿಗೆ ಪಂಜಾಬ್ ಹೈಕೋರ್ಟ್ ₹50 ಸಾವಿರ ದಂಡ

ದಂಡದ ಮೊತ್ತವನ್ನು ತಾಯಿಯ ಹೆಸರಿನಲ್ಲೇ ಠೇವಣಿ ಇಡುವಂತೆ ನ್ಯಾಯಾಲಯ ತಾಕೀತು ಮಾಡಿತು.

Bar & Bench

ತನ್ನ 77 ವರ್ಷದ ತಾಯಿಗೆ ₹5,000 ಜೀವನಾಂಶ ನೀಡುವುದನ್ನು ಪ್ರಶ್ನಿಸಿದ್ದ ಪುತ್ರನ ನಡೆಗೆ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಇತ್ತೀಚೆಗೆ ಆಘಾತ ವ್ಯಕ್ತಪಡಿಸಿದ್ದು ₹ 50,000 ದಂಡ ವಿಧಿಸಿದೆ.

ಈ ಕುರಿತು ಆದೇಶಿಸಿರುವ ನ್ಯಾ. ಜಸ್‌ಗುರು ಪ್ರೀತ್‌ ಸಿಂಗ್ ಪುರಿ ಅವರು ಮೂರು ತಿಂಗಳೊಳಗೆ ಸಂಗ್ರೂರಿನ ಕೌಟುಂಬಿಕ ನ್ಯಾಯಾಲಯದ ಪ್ರಧಾನ ನ್ಯಾಯಾಧೀಶರೆದುರು ತನ್ನ ತಾಯಿ ಹೆಸರಿನಲ್ಲಿ ದಂಡದ ಮೊತ್ತವನ್ನು ಠೇವಣಿ ಇರಿಸಲು ವೃದ್ಧೆಯ ಪುತ್ರನಿಗೆ ಸೂಚಿಸಿದರು.

ಆದೇಶದ ವೇಳೆ ನ್ಯಾಯಾಲಯವು, “ಈ ಪ್ರಕರಣ ಕಲಿಗಾಲಕ್ಕೆ ಶ್ರೇಷ್ಠ ಉದಾಹರಣೆ. ಇದು ನ್ಯಾಯಾಲಯದ ಆತ್ಮಸಾಕ್ಷಿಯನ್ನು ಕಲಕಿದೆ. ಕೌಟುಂಬಿಕ ನ್ಯಾಯಾಲಯ ನೀಡಿದ್ದ ಆದೇಶದಲ್ಲಿ ಲೋಪ ಇಲ್ಲ. ಪ್ರತಿವಾದಿಯಾದ ತಾಯಿಯು ಜೀವನಾಂಶದ ಮೊತ್ತ ಹೆಚ್ಚಿಸುವಂತೆ ಕೇಳಿಲ್ಲವಾದರೂ ಆ ₹5,000 ಜೀವನಾಂಶ ತೀರಾ ಕಡಿಮೆಯಾಯಿತು ಎಂದು ಉಲ್ಲೇಖಿಸುವುದು ತಪ್ಪಾಗದು” ಎಂದು ಜೀವನಾಂಶದ ವಿರುದ್ಧ ಅರ್ಜಿ ಸಲ್ಲಿಸಿದ್ದ ಪುತ್ರನಿಗೆ ಛೀಮಾರಿ ಹಾಕಿತು.

ಹಿನ್ನೆಲೆ: ವೃದ್ಧೆ ಮಹಿಳೆಯ ಪತಿ 1992 ರಲ್ಲಿ ನಿಧನರಾಗಿದ್ದರು. ಆಕೆಗೆ ಒಬ್ಬ ಮಗ ಮತ್ತು ವಿವಾಹಿತ ಮಗಳು ಇದ್ದಾರೆ. ಇನ್ನೊಬ್ಬ ವಿವಾಹಿತ ಮಗ ಕೂಡ ನಿಧನ ಹೊಂದಿದ್ದಾರೆ.

ಗಂಡನ ನಿಧನಾನಂತರ ವೃದ್ಧೆ ಪತ್ನಿಯ 50 ಭಿಗಾ ಜಮೀನನ್ನು ಅರ್ಜಿದಾರ ಪುತ್ರನಿಗೂ ಹಾಗೂ ಮೃತ ಮತ್ತೊಬ್ಬ ಮಗನ ಮಕ್ಕಳಿಗೂ ಹಂಚಿಕೆ ಮಾಡಲಾಗಿತ್ತು. 1993ರಲ್ಲಿ ಜೀವನ ನಿರ್ವಹಣೆಗಾಗಿ ವೃದ್ಧೆಗೆ ₹ 1 ಲಕ್ಷ ಪರಿಹಾರ ನೀಡಲಾಗಿತ್ತು. ನಂತರ ಮಗಳೊಂದಿಗೆ ಆಕೆ ವಾಸಿಸುತ್ತಿದ್ದರು. ಆದರೆ ತನ್ನ ತಾಯಿ ತನ್ನೊಂದಿಗೆ ವಾಸಿಸುತ್ತಿಲ್ಲ. ಹೀಗಾಗಿ ಕೌಟುಂಬಿಕ ನ್ಯಾಯಾಲಯವು ತನಗೆ ನೀಡಲು ಆದೇಶಿಸಿರುವ ₹5000 ಜೀವನಾಂಶವನ್ನು ರದ್ದುಗೊಳಿಸಬೇಕು ಎಂದು ವ್ಯಕ್ತಿಯು ವಾದಿಸಿದ್ದ.

ಆದರೆ ತಾಯಿಗೆ ಸ್ವಂತ ಆದಾಯ ಮೂಲಗಳಿಲ್ಲ. ಅಲ್ಲದೆ, ಗಂಡನ ಮನೆಯಲ್ಲಿರುವ ಮಗಳ ಮರ್ಜಿಯಲ್ಲಿ ಆಕೆ ಬದುಕಬೇಕಿದೆ. ಅದನ್ನು ಬಿಟ್ಟರೆ ಅನ್ಯದಾರಿಯಿಲ್ಲ ಎಂದು ಆಕೆಯ ಪರ ವಕೀಲರು ವಾದಿಸಿದ್ದರು.

ಇದು ದುರದೃಷ್ಟಕರ ಪ್ರಕರಣ ಎಂದ ನ್ಯಾಯಾಲಯ ವೃದ್ಧೆಗೆ ಯಾವುದೇ ಆದಾಯ ಮೂಲವಿಲ್ಲದಿದ್ದರೂ ಮಗ ಅರ್ಜಿ ಸಲ್ಲಿಸಲು ಕಾರಣವಿಲ್ಲ ಎಂದಿತು. ಅಲ್ಲದೆ₹ 5,000 ಜೀವನಾಂಶ ನಿಗದಿಪಡಿಸುವುದನ್ನು ಪ್ರಶ್ನಿಸಿ ತನ್ನ ಸ್ವಂತ ತಾಯಿಯ ವಿರುದ್ಧ ಪ್ರಸ್ತುತ ಅರ್ಜಿ ಸಲ್ಲಿಸಿರುವುದು ಈ ನ್ಯಾಯಾಲಯದ ಆತ್ಮಸಾಕ್ಷಿಯನ್ನು ನಿಜಕ್ಕೂ ಕದಡಿದೆ ಎಂದ ನ್ಯಾಯಾಲಯ ಅರ್ಜಿ ವಜಾಗೊಳಿಸಿತು