ಮುಸ್ಲಿಂ ಸಮುದಾಯದ ವಿರುದ್ಧ ಅಲಾಹಾಬಾದ್ ಹೈಕೋರ್ಟ್ ನ್ಯಾಯಮೂರ್ತಿ ಶೇಖರ್ ಕುಮಾರ್ ಯಾದವ್ ಅವರು ಈಚೆಗೆ ನೀಡಿರುವ ಹೇಳಿಕೆ ಖಂಡಿಸಿ ವಾಗ್ದಂಡನೆ ವಿಧಿಸಬೇಕು ಎಂದು ಹಿರಿಯ ವಕೀಲ ಕಪಿಲ್ ಸಿಬಲ್ ಮಂಗಳವಾರ ಕರೆ ನೀಡಿದ್ದಾರೆ .
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರಾಜ್ಯಸಭಾ ಸದಸ್ಯರೂ ಆದ ಹಿರಿಯ ವಕೀಲ ಸಿಬಲ್ ಅವರು ನ್ಯಾ. ಯಾದವ್ ವಿರುದ್ಧ ಉಳಿದ ನಾಯಕರು, ಸಂಸದರೊಡನೆ ಸೇರಿ ಸಂಸತ್‌ನಲ್ಲಿ ವಾಗ್ದಂಡನೆ ನಿರ್ಣಯ ಮಂಡಿಸುವುದಾಗಿ ತಿಳಿಸಿದ್ದಾರೆ.
“ನಾವೆಲ್ಲಾ ಶೀಘ್ರವೇ ಒಗ್ಗೂಡಿ ನ್ಯಾಯಮೂರ್ತಿ ವಿರುದ್ಧ ವಾಗ್ದಂಡನೆ ನಿರ್ಣಯ ಮಂಡಿಸುತ್ತೇವೆ. ಬೇರಾವುದೇ ದಾರಿ ಉಳಿದಿಲ್ಲ. ನ್ಯಾಯ ವ್ಯವಸ್ಥೆ ಹೇಗೆ ವಿಫಲವಾಗಿದೆ ಎಂಬುದನ್ನು ಕಳೆದ ಕೆಲ ವರ್ಷಗಳಿಂದ ನೋಡುತ್ತಾ ಬಂದಿದ್ದೇವೆ” ಎಂದರು.
ಈ ನಿಟ್ಟಿನಲ್ಲಿ ಸುಪ್ರೀಂ ಕೋರ್ಟ್ ದೃಢ ನಿರ್ಧಾರಗಳನ್ನು ತೆಗೆದುಕೊಳ್ಳುವಂತೆಯೂ ಅವರು ಒತ್ತಾಯಿಸಿದರು. “ನ್ಯಾಯಾಲಯ ಕಠಿಣ ಕ್ರಮ ಕೈಗೊಂಡು ಅಂತಹ ವ್ಯಕ್ತಿಯನ್ನು ಆ ಹುದ್ದೆಯಲ್ಲಿರಲು ಬಿಡಬಾರದು. ಅವರ ಸೇವಾವಧಿಯಲ್ಲಿ ಅವರು ಯಾವುದೇ ಪ್ರಕರಣದ ವಿಚಾರಣೆ ನಡೆಸಬಾರದು ಎಂದು ಹೇಳುವ ಅಧಿಕಾರ ಸುಪ್ರೀಂ ಕೋರ್ಟ್‌ಗೆ ಇದೆ ಎಂದು ನಾನು ಭಾವಿಸಿದ್ದೇನೆ" ಎಂದರು.
ಸುಪ್ರೀಂ ಕೋರ್ಟ್ ವಕೀಲರ ಸಂಘದ ಅಧ್ಯಕ್ಷನಾಗಿ ತಾನಿಲ್ಲಿ ಮಾತನಾಡುತ್ತಿಲ್ಲ ಬದಲಿಗೆ ದೇಶದ ನಾಗರಿಕನಾಗಿ, ಸಂವಿಧಾನ, ಕಾನೂನು ಆಳ್ವಿಕೆ ಹಾಗೂ ನ್ಯಾಯಾಂಗ ಸ್ವಾತಂತ್ರ್ಯದಲ್ಲಿ ಉತ್ಕಟ ನಂಬಿಕೆಯುಳ್ಳವನಾಗಿ ಮಾತನಾಡುತ್ತಿದ್ದೇನೆ ಎಂದರು. ನ್ಯಾ. ಯಾದವ್ ವಿರುದ್ಧ ಕ್ರಮ ಕೈಗೊಳ್ಳಲು ಭಾರತದ ಪ್ರಧಾನಿ, ಗೃಹ ಸಚಿವರು ಹಾಗೂ ಸಂಸದರಾಗಿರುವ ಉಳಿದ ನಾಯಕರು ಸಹ ಬೆಂಬಲ ನೀಡುತ್ತಾರೆ ಎಂದು ಸಿಬಲ್ ಭರವಸೆ ವ್ಯಕ್ತಪಡಿಸಿದರು.
ಒಬ್ಬ ರಾಜಕಾರಣಿಯೇ ಅಂತಹ ಭಾಷಣ ಮಾಡಲು ಆಗದೇ ಇರುವಾಗ ನ್ಯಾಯಮೂರ್ತಿಯೊಬ್ಬರು ಹೇಗೆ ಮಾಡಲು ಸಾಧ್ಯ?ಹಿರಿಯ ವಕೀಲ ಕಪಿಲ್ ಸಿಬಲ್
ನ್ಯಾಯಾಧೀಶರು ಅದರಲ್ಲಿಯೂ ಹೈಕೋರ್ಟ್ ನ್ಯಾಯಮೂರ್ತಿಯೊಬ್ಬರು ಇಂತಹ ಭಾಷಣ ಮಾಡುವುದಾದರೆ ಅಂತಹವರನ್ನು ಹೇಗೆ ನೇಮಕ ಮಾಡಿಕೊಳ್ಳಲಾಗಿದೆ ಎಂಬ ಪ್ರಶ್ನೆ ಉದ್ಭವಿಸುತ್ತದೆ. ಅಂತಹವರಿಗೆ ಆ ಧೈರ್ಯ ಬಂದದ್ದಾದರೂ ಹೇಗೆ ಎಂಬ ಪ್ರಶ್ನೆಯೂ ಏಳುತ್ತದೆ. ಕಳೆದ 10 ವರ್ಷಗಳಲ್ಲಿ ಇಂತಹ ಘಟನೆಗಳು ಏಕೆ ಹೆಚ್ಚುತ್ತಿವೆ ಎಂಬ ಪ್ರಶ್ನೆಯೂ ತಲೆದೋರಿದೆ ಎಂದು ಸಿಬಲ್ ಹೇಳಿದರು.
ಕೋಲ್ಕತ್ತಾ ಹೈಕೋರ್ಟ್ ನ್ಯಾಯಮೂರ್ತಿ ಅಭಿಜಿತ್ ಗಂಗೋಪಾಧ್ಯಾಯ ಅವರು ಅಧಿಕಾರದಿಂದ ನಿವೃತ್ತರಾದ ಬಳಿಕ ಬಿಜೆಪಿ ಸೇರಿದ್ದನ್ನು ಪರೋಕ್ಷವಾಗಿ ಪ್ರಸ್ತಾಪಿಸಿದ ಸಿಬಲ್ ಅವರು ಕೋಲ್ಕತ್ತಾದ ನ್ಯಾಯಮೂರ್ತಿಯೊಬ್ಬರು ಹೈಕೋರ್ಟ್ ಕುರ್ಚಿಯಲ್ಲಿ ಕುಳಿತು ಇಂತಹ ನಿರ್ಧಾರ ತೆಗೆದುಕೊಳ್ಳುತ್ತಾರೆ. ತಕ್ಷಣವೇ ರಾಜೀನಾಮೆ ನೀಡಿ ಬಿಜೆಪಿ ಸೇರಿ ಈಗ ಸಂಸದರಾಗಿದ್ದಾರೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
ನ್ಯಾಯಾಧೀಶರು ಸಾರ್ವಜನಿಕ ಚರ್ಚೆಗಳಲ್ಲಿ ತೊಡಗುವ, ರಾಜಕೀಯ ವಿಷಯಗಳ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸುವ ಹಾಗೂ ತೀರ್ಪು ಬಾಕಿ ಇರುವ ಪ್ರಕರಣಗಳಲ್ಲಿ ಆ ಪ್ರಕರಣ ಕುರಿತು ಚರ್ಚಿಸುವುದನ್ನು ನಿಷೇಧಿಸುವ ನ್ಯಾಯಾಂಗ ತತ್ವಗಳನ್ನು ನ್ಯಾ. ಯಾದವ್ ಅವರ ಹೇಳಿಕೆಗಳು ಉಲ್ಲಂಘಿಸಿವೆ ಎಂದು ಅವರು ಹೇಳಿದ್ದಾರೆ.
ನ್ಯಾಯಮೂರ್ತಿ ಯಾದವ್ ವಿರುದ್ಧ ತ್ವರಿತವಾಗಿ ತನಿಖೆ ಆರಂಭಿಸಿ ಅವರ ವಿರುದ್ಧ ವಾಗ್ದಂಡನೆಯ ಕ್ರಮ ಕೈಗೊಂಡು ಇಂತಹ ಹೇಳಿಕೆ ನೀಡುವ ನ್ಯಾಯಾಧೀಶರು ದೇಶದಲ್ಲಿ ಎಲ್ಲಿಯೇ ಇದ್ದರೂ ಅಂತಹವರನ್ನು ಸಹಿಸುವುದಿಲ್ಲ ಎಂಬ ಸಂದೇಶವನ್ನು ಪ್ರಧಾನಿ ಹಾಗೂ ಆಡಳಿತ ಪಕ್ಷದ ಸದಸ್ಯರು ರವಾನಿಸಬೇಕು ಎಂದು ಅವರು ಒತ್ತಾಯಿಸಿದರು.
ವಿಎಚ್‌ಪಿ ಕಾನೂನು ಘಟಕ ಅಲಾಹಾಬಾದ್ ಹೈಕೋರ್ಟ್ ಆವರಣದಲ್ಲಿ ಕಳೆದ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮುಸ್ಲಿಂ ಸಮುದಾಯದ ವಿರುದ್ಧ ವಿವಾದಾಸ್ಪದ ಹೇಳಿಕೆ ನೀಡಿದ ನ್ಯಾಯಮೂರ್ತಿ ಯಾದವ್ ಅವರು ಬಹುಸಂಖ್ಯಾತ ಸಮುದಾಯದ ಆಶಯದಂತೆ ಭಾರತ ಕಾರ್ಯ ನಿರ್ವಹಿಸಲಿದೆ. ಬಹುಸಂಖ್ಯಾತರ ಕ್ಷೇಮ ಮತ್ತು ಸಂತೋಷ ಉಳಿದವರಿಗಿಂತ ಮೇಲುಗೈ ಸಾಧಿಸುತ್ತದೆ ಎಂದಿದ್ದರು. ವಾಟ್ಸಾಪ್ ಮತ್ತಿತರ ಸಾಮಾಜಿಕ ಮಾಧ್ಯಮಗಳಲ್ಲಿ ಸಾಮಾನ್ಯವಾಗಿ ಮುಸ್ಲಿಮರ ವಿರುದ್ಧ ಬಳಸಲಾಗುವ 'ಕಠ್‌ಮುಲ್ಲಾʼ ಪದ ಬಳಕೆಯೂ ಸೇರಿದಂತೆ ಅನೇಕ ವಿವಾದಾತ್ಮಕ ಹೇಳಿಕೆಗಳನ್ನು ಅವರು ನೀಡಿದ್ದರು.