ಮುಸ್ಲಿಮರ ಕುರಿತು ನ್ಯಾಯಮೂರ್ತಿ ವಿವಾದಾತ್ಮಕ ಹೇಳಿಕೆ: ಅಲಾಹಾಬಾದ್ ಹೈಕೋರ್ಟ್‌ ವರದಿ ಕೇಳಿದ ಸುಪ್ರೀಂ ಕೋರ್ಟ್

ಬಹುಸಂಖ್ಯಾತರ ಆಶಯದಂತೆ ಭಾರತ ಕೆಲಸ ಮಾಡಲಿದೆ ಎಂದು ನ್ಯಾ. ಯಾದವ್‌ ಅವರು ಭಾನುವಾರ ನಡೆದ ಕಾರ್ಯಕ್ರಮವೊಂದರಲ್ಲಿ ತಿಳಿಸಿದ್ದರು.
ಮುಸ್ಲಿಮರ ಕುರಿತು ನ್ಯಾಯಮೂರ್ತಿ ವಿವಾದಾತ್ಮಕ ಹೇಳಿಕೆ:   ಅಲಾಹಾಬಾದ್ ಹೈಕೋರ್ಟ್‌ ವರದಿ ಕೇಳಿದ ಸುಪ್ರೀಂ ಕೋರ್ಟ್
Published on

ಬಲಪಂಥೀಯ ಸಂಘಟನೆಯಾದ ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಕಾನೂನು ಘಟಕ ಡಿಸೆಂಬರ್ 8ರಂದು ಅಲಾಹಾಬಾದ್‌ ಹೈಕೋರ್ಟ್‌ನ ಗ್ರಂಥಾಲಯ ಸಭಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ  ಹೈಕೋರ್ಟ್‌ ನ್ಯಾಯಮೂರ್ತಿ ಶೇಖರ್‌ ಕುಮಾರ್‌ ಯಾದವ್‌ ಅವರು ನೀಡಿದ್ದ ಹೇಳಿಕೆಗೆ ಸಂಬಂಧಿಸಿದಂತೆ ವರದಿ ನೀಡುವಂತೆ ಅಲಾಹಾಬಾದ್ ಉಚ್ಚ ನ್ಯಾಯಾಲಯಕ್ಕೆ ಸುಪ್ರೀಂ ಕೋರ್ಟ್‌ ಮಂಗಳವಾರ ಸೂಚಿಸಿದೆ.

ಸುಪ್ರೀಂ ಕೋರ್ಟ್‌ನ ಆಡಳಿತ ವಿಭಾಗ ಈ ಸಂಬಂಧ ವಿವರಗಳನ್ನು ಬಯಸಿದ್ದು ಪ್ರಕರಣ ಪರಿಗಣನೆಯಲ್ಲಿದೆ ಎಂದು ಮೂಲಗಳು ತಿಳಿಸಿವೆ.  ಹೈಕೋರ್ಟ್‌ನ ಹಾಲಿ ನ್ಯಾಯಮೂರ್ತಿಯಾಗಿ ಯಾದವ್‌ ಅವರು ನೀಡಿರುವ ಹೇಳಿಕೆಗಳು ದೋಷಾರೋಪ ಮಾಡುವಂತಹ ಅಪರಾಧಗಳಾಗಿವೆ. ಅವರನ್ನು ನ್ಯಾಯಾಂಗ ಕಾರ್ಯದಿಂದ ವಿಮುಖರನ್ನಾಗಿ ಮಾಡಬೇಕು ಎಂಬ ಬೇಡಿಕೆಗಳು ಕೇಳಿ ಬಂದಿದ್ದವು.

Also Read
ನ್ಯಾ. ಶೇಖರ್ ಕುಮಾರ್ ಯಾದವ್ ಮತ್ತು ವಿವಾದಾತ್ಮಕ ಹೇಳಿಕೆಗಳು: ಒಂದು ಹಿನ್ನೋಟ

ಯಾದವ್ ಅವರ ವಿರುದ್ಧ ಆಂತರಿಕ ತನಿಖೆಗೆ ಒತ್ತಾಯಿಸಿ  ಕ್ಯಾಂಪೈನ್ ಫಾರ್ ಜುಡಿಷಿಯಲ್ ಅಕೌಂಟಬಿಲಿಟಿ (ಸಿಜೆಎಆರ್‌) ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ಅವರಿಗೆ ಇಂದು ಪತ್ರ ಬರೆದಿದೆ. ಮತ್ತೊಂದೆಡೆ  ಶ್ರೀನಗರದ ಸಂಸದರಾದ ರುಹುಲ್ಲಾ ಮೆಹದಿ ಅವರು ನ್ಯಾ. ಯಾದವ್‌ ಅವರಿಗೆ ವಾಗ್ದಂಡನೆ ವಿಧಿಸುವ ಸಲುವಾಗಿ ಸಂಸತ್‌ನಲ್ಲಿ ನಿರ್ಣಯ ಮಂಡಿಸುತ್ತಿರುವುದಾಗಿ ಟ್ವೀಟ್‌ ಮಾಡಿದ್ದಾರೆ.

Also Read
ವಿಎಚ್‌ಪಿ ಕಾರ್ಯಕ್ರಮದಲ್ಲಿ ಯುಸಿಸಿ, ಮತಾಂತರ ಕುರಿತು ಉಪನ್ಯಾಸ ನೀಡಿದ ಅಲಾಹಾಬಾದ್ ಹೈಕೋರ್ಟ್ ಹಾಲಿ ನ್ಯಾಯಮೂರ್ತಿ

ವಿಎಚ್‌ಪಿ ಕಾನೂನು ಘಟಕ ಅಲಾಹಾಬಾದ್ ಹೈಕೋರ್ಟ್ ಆವರಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮುಸ್ಲಿಂ ಸಮುದಾಯದ ವಿರುದ್ಧ ವಿವಾದಾಸ್ಪದ ಹೇಳಿಕೆ ನೀಡಿದ ನ್ಯಾಯಮೂರ್ತಿಗಳು ಬಹುಸಂಖ್ಯಾತ ಸಮುದಾಯದ ಆಶಯದಂತೆ ಭಾರತ ಕಾರ್ಯ ನಿರ್ವಹಿಸಲಿದೆ. ಬಹುಸಂಖ್ಯಾತರ ಕ್ಷೇಮ ಮತ್ತು ಸಂತೋಷ ಉಳಿದವರಿಗಿಂತ ಮೇಲುಗೈ ಸಾಧಿಸುತ್ತದೆ ಎಂದಿದ್ದರು.

Also Read
ಬಹುಸಂಖ್ಯಾತರ ಆಶಯದಂತೆ ಭಾರತ ಕೆಲಸ ಮಾಡಲಿದೆ; 'ಕಠ್‌ಮುಲ್ಲಾಗಳು' ದೇಶವಿರೋಧಿಗಳು:‌ ಅಲಾಹಾಬಾದ್ ಹೈಕೋರ್ಟ್ ನ್ಯಾಯಮೂರ್ತಿ

"ಇದು ಹಿಂದೂಸ್ಥಾನ ಎಂದು ಹೇಳಲು ನನಗೆ ಯಾವುದೇ ಹಿಂಜರಿಕೆಯಿಲ್ಲ, ಈ ದೇಶ ಇಲ್ಲಿ ವಾಸಿಸುವ ಬಹುಸಂಖ್ಯಾತರ ಇಚ್ಛೆಗೆ ಅನುಗುಣವಾಗಿ ಕಾರ್ಯನಿರ್ವಹಿಸುತ್ತದೆ. ಇದು ಕಾನೂನು. ಇದನ್ನು ಹೈಕೋರ್ಟ್ ನ್ಯಾಯಮೂರ್ತಿಯಾಗಿ ಮಾತನಾಡುತ್ತಿಲ್ಲ ಬದಲಿಗೆ, ಬಹುಸಂಖ್ಯಾತರಿಗೆ ಅನುಗುಣವಾಗಿ ಕಾನೂನು ಕಾರ್ಯನಿರ್ವಹಿಸುತ್ತದೆ. ಇದನ್ನು ಕುಟುಂಬ ಅಥವಾ ಸಮಾಜದಂತೆ ಪರಿಗಣಿಸಿ - ಬಹುಸಂಖ್ಯಾತರ ಯೋಗಕ್ಷೇಮ ಮತ್ತು ಸಂತೋಷವನ್ನು ಯಾವುದು ಖಾತ್ರಿ ಪಡಿಸುತ್ತದೋ ಅದನ್ನು ಒಪ್ಪಲಾಗುತ್ತದೆ " ಎಂದು ಅವರು ವಿವರಿಸಿದ್ದರು.

ನ್ಯಾಯಮೂರ್ತಿಗಳು ವಾಟ್ಸಾಪ್ ಮತ್ತಿತರ ಸಾಮಾಜಿಕ ಮಾಧ್ಯಮಗಳಲ್ಲಿ ಸಾಮಾನ್ಯವಾಗಿ ಮುಸ್ಲಿಮರ ವಿರುದ್ಧ ಬಳಸಲಾಗುವ 'ಕಠ್‌ಮುಲ್ಲಾʼ ಪದ  ಬಳಕೆಯೂ ಸೇರಿದಂತೆ ಅನೇಕ ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ್ದರು. ಉಗ್ರರನ್ನು ಕಠ್ಮುಲ್ಲಾಗಳೆಂದು ಕರೆದ ಅವರು ದೇಶವು ಅವರ ಬಗ್ಗೆ ಎಚ್ಚರಿಕೆಯಿಂದ ಇರಬೇಕು ಎಂದಿದ್ದರು.

Kannada Bar & Bench
kannada.barandbench.com