ಗುತ್ತಿಗೆ ಆಧರಿತ ನೇಮಕಾತಿ ವೇಳೆ ಪರಿಶಿಷ್ಟ ಜಾತಿ, ಪಂಗಡ ಮತ್ತು ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ ಮೀಸಲಾತಿ ಕಲ್ಪಿಸುವ ತಿದ್ದುಪಡಿ ವಿಧೇಯಕ, ವೈದ್ಯ ಸಿಬ್ಬಂದಿ ಮೇಲೆ ಹಲ್ಲೆ ಅಥವಾ ಆಸ್ಪತ್ರೆಗೆ ಹಾನಿ ಮಾಡಿದರೆ 7 ವರ್ಷ ಜೈಲುಶಿಕ್ಷೆ ಸೇರಿದಂತೆ ಆರು ವಿಧೇಯಕಗಳನ್ನು ಈ ಬಾರಿಯ ವಿಧಾನ ಮಂಡಲದ ಅಧಿವೇಶನದಲ್ಲಿ ಅಂಗೀಕರಿಸಲಾಗಿದೆ.
ವಿಧಾನಸಭೆಯಲ್ಲಿ ಅನುಮೋದನೆಗೊಂಡು ಅಂಗೀಕೃತ ರೂಪದಲ್ಲಿದ್ದ ಮಸೂದೆಗಳಿಗೆ ಗುರುವಾರ ವಿಧಾನ ಪರಿಷತ್‌ನಲ್ಲಿಯೂ ಅಂಗೀಕಾರ ದೊರೆಯಿತು. ಆ ಮೂಲಕ ಎರಡೂ ಸದನಗಳಲ್ಲಿ ಈ ಮಸೂದೆಗಳು ಅಂಗೀಕೃತಗೊಂಡಿದ್ದು ರಾಜ್ಯಪಾಲರ ಅಂಕಿತಕ್ಕೆ ಇವುಗಳನ್ನು ಕಳುಹಿಸಲಾಗುವುದು.
ಅಂಗೀಕೃತಗೊಂಡಿರುವ ಮಸೂದೆಗಳ ವಿವರ:
'ಕರ್ನಾಟಕ ಅನುಸೂಚಿತ ಜಾತಿಗಳು, ಅನುಸೂಚಿತ ಬುಡಕಟ್ಟುಗಳು ಮತ್ತು ಇತರ ಹಿಂದುಳಿದ ವರ್ಗಗಳ (ನೇಮಕಾತಿ ಮುಂತಾದವುಗಳ ಮೀಸಲಾತಿ) (ತಿದ್ದುಪಡಿ) ವಿಧೇಯಕ-2024'ರಲ್ಲಿ ಸರ್ಕಾರಿ ಇಲಾಖೆ, ಮಂಡಳಿ, ನಿಗಮ ಹಾಗೂ ವಿಶ್ವವಿದ್ಯಾಲಯಗಳು ಸೇರಿದಂತೆ ಇತರೆಡೆ ಗುತ್ತಿಗೆ ಆಧಾರಿತ ನೇಮಕಾತಿಯಲ್ಲಿಎಸ್‌ಸಿ, ಎಸ್‌ಟಿ ಹಾಗೂ ಇತರೆ ಹಿಂದುಳಿದ ವರ್ಗಗಳಿಗೆ ಮೀಸಲಾತಿ ಕಲ್ಪಿಸಲು ಅವಕಾಶ ಮಾಡಿಕೊಡಲಾಗಿದೆ.
ಹೊರಗುತ್ತಿಗೆ ಸಂದರ್ಭದಲ್ಲಿ ಸರ್ಕಾರದಿಂದ ಮಾನ್ಯತೆ ಪಡೆದ ಮಾನವ ಸಂಪನ್ಮೂಲ ಪೂರೈಕೆ ಸಂಸ್ಥೆಯು ಎಸ್‌ಸಿ, ಎಸ್‌ಟಿ ಮತ್ತು ಇತರೆ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ಪ್ರಾತಿನಿಧ್ಯ ನೀಡಬೇಕೆಂದು ವಿಧೇಯಕದಲ್ಲಿ ವಿವರಿಸಲಾಗಿದೆ.
ಹೊರಗುತ್ತಿಗೆ ಆಧಾರದ ನೇಮಕಾತಿ ತಾತ್ಕಾಲಿಕವಾಗಿರಬೇಕು. ಅದನ್ನು ನೇರ ನೇಮಕಾತಿ ಮೀಸಲಾತಿಗೆ ಪರಿಗಣಿಸಬಾರದು. ಹೊರಗುತ್ತಿಗೆ ಆಧಾರದ ನೇಮಕವು ನೇರ ನೇಮಕಾತಿಗೆ ಮಂಜೂರಾದ ಹುದ್ದೆಗಳ ಶೇ 10ರಷ್ಟು ಮೀರುವಂತಿಲ್ಲ. ನೇಮಕಾತಿಯು ಮಂಜೂರಾದ ಹುದ್ದೆಗಳ ಸಂಖ್ಯಾ ಬಲದ ಶೇ 10ರಷ್ಟು ಮೀರಿದ್ದರೆ, ಅಂಥಹ ನೇಮಕಾತಿಗಳನ್ನು ಪ್ರತಿ ವರ್ಷ ಶೇ 10ರಷ್ಟು ಕಡಿಮೆಗೊಳಿಸಬೇಕು ಎಂದು ತಿಳಿಸಲಾಗಿದೆ.
ವೈದ್ಯ ಸಿಬ್ಬಂದಿ ಮೇಲೆ ಹಲ್ಲೆ ಮಾಡುವವರಿಗೆ 7 ವರ್ಷಗಳವರೆಗೆ ಜೈಲು
ವೈದ್ಯ ಸಿಬ್ಬಂದಿ ಮೇಲೆ ಹಲ್ಲೆಮಾಡುವ ಹಾಗೂ ಆಸ್ಪತ್ರೆಗಳ ಆಸ್ತಿಗಳಿಗೆ ಹಾನಿ ಎಸಗುವವರಿಗೆ 7 ವರ್ಷಗಳವರೆಗೆ ಜೈಲು ಶಿಕ್ಷೆ ಹಾಗೂ ರೂ 2 ಲಕ್ಷದ ವರೆಗೆ ದಂಡ ವಿಧಿಸಲು ಅವಕಾಶ ಕಲ್ಪಿಸುವ ಕರ್ನಾಟಕ ವೈದ್ಯಕೀಯ ನೋಂದಣಿ ಮತ್ತಿತರೆ ಕೆಲವು ಕಾನೂನು (ತಿದ್ದುಪಡಿ) ವಿಧೇಯಕ-2024ಕ್ಕೆ ಒಪ್ಪಿಗೆ ನೀಡಲಾಗಿದೆ.
ವೈದ್ಯೋಪಚಾರ ಸಿಬ್ಬಂದಿ ಕರ್ತವ್ಯಕ್ಕೆ ಸಂಬಂಧಿಸಿದಂತೆ ಅನಧಿಕೃತವಾಗಿ ಆಡಿಯೊ, ವಿಡಿಯೋ ರೆಕಾರ್ಡಿಂಗ್ ಮಾಡುವುದು, ಛಾಯಾಚಿತ್ರ ತೆಗೆಯುವ ಮೂಲಕ ಅವಮಾನಿಸುವುದು, ಹಲ್ಲೆಮಾಡುವುದು ಹಾಗೂ ವೈದ್ಯಕೀಯ ಸಂಸ್ಥೆಗಳ ಆಸ್ತಿಗಳಿಗೆ ಹಾನಿ ಮಾಡುವುದನ್ನು ನಿಷೇಧಿಸಿ ಕಾಯಿದೆಗೆ ತಿದ್ದುಪಡಿ ತರಲಾಗಿದೆ.
ಈ ಮಸೂದೆಗಳು ಮಾತ್ರವೇ ಅಲ್ಲದೆ, ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನಲ್ಲಿರುವ ಶ್ರೀ ರೇಣುಕಾಯಲ್ಲಮ್ಮ ದೇವಾಲಯದ ಅಭಿವೃದ್ಧಿ ಮತ್ತು ನಿರ್ವಹಣಾ ಕಾಮಗಾರಿಗಳನ್ನು ಕೈಗೊಳ್ಳಲು ಸ್ವತಂತ್ರ ಶಾಸನಬದ್ಧ ಪ್ರಾಧಿಕಾರದ ರಚನೆಗೆ ಅವಕಾಶ ಕಲ್ಪಿಸಲು 'ಶ್ರೀ ರೇಣುಕಾಯಲ್ಲಮ್ಮ ದೇವಸ್ಥಾನ ಅಭಿವೃದ್ಧಿ ಪ್ರಾಧಿಕಾರ ವಿಧೇಯಕ-2024' ಅನುಮೋದನೆಗೊಂಡಿದೆ.
ಪುರಾತತ್ವ ಸ್ಥಳಗಳನ್ನು ದತ್ತು ಪಡೆದು ಆಧುನಿಕ ಸೌಲಭ್ಯಗಳನ್ನು ಅಭಿವೃದ್ಧಿಪಡಿಸುವುದಕ್ಕಾಗಿ ಕಂಪನಿಗಳು, ಸೀಮಿತ ಹೊಣೆಗಾರಿಕೆ ಸಹಭಾಗಿತ್ವ ಸಂಸ್ಥೆಗಳು, ಪಾಲುದಾರಿಕೆ ಕಂಪನಿಗಳು, ಸೊಸೈಟಿಗಳು, ಸಹಕಾರ ಸಂಘಗಳು, ಟ್ರಸ್ಟ್‌ಗಳು, ಸರಕಾರೇತರ ಸಂಸ್ಥೆಗಳು, ವ್ಯಕ್ತಿಗಳನ್ನು 'ಸ್ಮಾರಕ ಮಿತ್ರರು' ಪಟ್ಟಿಗೆ ಸೇರಿಸಲು ಕರ್ನಾಟಕ ಪ್ರಾಚೀನ ಮತ್ತು ಐತಿಹಾಸಿಕ ಸ್ಮಾರಕಗಳು ಮತ್ತು ಪುರಾತತ್ವ ಸ್ಥಳಗಳ ಮತ್ತು ಅವಶೇಷಗಳ (ತಿದ್ದುಪಡಿ) ವಿಧೇಯಕ-2024 ಅಂಗೀಕೃತಗೊಂಡಿದೆ.
ಕಂದಾಯ ಆಯುಕ್ತಾಲಯದ ನೇಮಕಾತಿ, ಕರ್ತವ್ಯಗಳು ಹಾಗೂ ಪ್ರಕಾರ್ಯಗಳ ಕುರಿತು ಉಪಬಂಧಗಳನ್ನು ಕಲ್ಪಿಸಲು ಕರ್ನಾಟಕ ಭೂಕಂದಾಯ ಕಾಯಿದೆಗೆ ತಿದ್ದುಪಡಿ ತರಲಾಗಿದ್ದು, ಅದು ಸಹ ಅಂಗೀಕೃತಗೊಂಡಿದೆ.
ನಂದಿ ಬೆಟ್ಟದ ರೋಪ್ ವೇ ಯೋಜನೆಯಡಿ ಮೇಲು ಮಾರ್ಗಾಂತ್ಯ ಸ್ಥಳವನ್ನು (ಯುಟಿಪಿ) ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿಅಭಿವೃದ್ಧಿಪಡಿಸಲು 30 ವರ್ಷಗಳ ಅವಧಿಗೆ 2 ಎಕರೆ ಒದಗಿಸುವ ಸರ್ಕಾರಿ ಉದ್ಯಾನವನಗಳ (ಸಂರಕ್ಷಣೆ) (ತಿದ್ದುಪಡಿ) ವಿಧೇಯಕ ಕೂಡ ಅಂಗೀಕಾರಗೊಂಡಿದೆ.