ಕರ್ನಾಟಕ ನ್ಯಾಯವಾದಿ ವರ್ಗದಿಂದ ನ್ಯಾಯಮೂರ್ತಿಗಳಾಗಿ ಪದೋನ್ನತಿ ಪಡೆದವರ ವಿರುದ್ಧ ವಿವಾದಾತ್ಮಕ ಆರೋಪ ಮಾಡಿದ ಕಾರಣಕ್ಕಾಗಿ ಅರ್ಜಿದಾರರೊಬ್ಬರಿಗೆ ಇತ್ತೀಚೆಗೆ ರಾಜ್ಯ ಹೈಕೋರ್ಟ್ ರೂ 1 ಲಕ್ಷ ದಂಡ ವಿಧಿಸಿದೆ.
ಕರ್ನಾಟಕ ನ್ಯಾಯವಾದಿ ವರ್ಗದಿಂದ ಬಂದಿರುವ ಬಹುತೇಕ ನ್ಯಾಯಮೂರ್ತಿಗಳು ಒಂದಲ್ಲಾ ಒಂದು ರೀತಿಯಲ್ಲಿ ಸುಪ್ರೀಂಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿಯೊಬ್ಬರಿಗೆ ನಿಷ್ಠೆ ತೋರುತ್ತಾರೆ ಎಂದು ಅರ್ಜಿದಾರರು ಆರೋಪಿಸಿದ್ದರು. ಈ ಹಿನ್ನೆಲೆಯಲ್ಲಿ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳೇ ಅರ್ಜಿಯ ವಿಚಾರಣೆ ನಡೆಸಬೇಕು, ಇಲ್ಲವೇ ಕರ್ನಾಟಕ ಮೂಲದ ನ್ಯಾಯಮೂರ್ತಿಗಳ ಬದಲಿಗೆ ಹೊರ ರಾಜ್ಯದ ನ್ಯಾಯಮೂರ್ತಿಗಳ ಮುಂದೆ ವಿಚಾರಣೆಗೆ ನಿಗದಿಗೊಳಿಸುವಂತೆ ಅರ್ಜಿದಾರರಾದ ವಿ ಗುರುರಾಜ್ ಕೋರಿದ್ದರು.
ಆದರೆ ಅರ್ಜಿಯನ್ನು ವಜಾಗೊಳಿಸಿದ ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕಾ ಮತ್ತು ನ್ಯಾಯಮೂರ್ತಿ ಸಚಿನ್ ಶಂಕರ್ ಮಗದುಮ್ ಅವರಿದ್ದ ವಿಭಾಗೀಯ ನ್ಯಾಯಪೀಠ ಗುರುರಾಜ್ ಅವರಿಗೆ ಭಾರಿ ಮೊತ್ತದ ದಂಡ ವಿಧಿಸಿತು.
ಈ ಸಂದರ್ಭದಲ್ಲಿ ಪೀಠವು, "ಬಹುತೇಕ ನ್ಯಾಯಮೂರ್ತಿಗಳು ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿಗಳ ನಿರ್ವಿವಾದಿತ ಬುದ್ಧಿಮತ್ತೆಗೆ ಗೌರವ ತೋರುತ್ತಾರೆ ಎನ್ನಲಾಗುತ್ತಿದೆ… ಸಾಂವಿಧಾನಿಕ ಹುದ್ದೆಗಳನ್ನು ಅಲಂಕರಿಸುವ ಗೌರವಾನ್ವಿತ ನ್ಯಾಯಮೂರ್ತಿಗಳು ಕೂಡ ಮನುಷ್ಯರು ಮತ್ತು ಯಾರು ನಿಜವಾಗಿಯೂ ಗೌರವಾನ್ವಿತರೋ ಮತ್ತು ಉತ್ತಮ ಬುದ್ಧಿಶಕ್ತಿ ಹೊಂದಿರುತ್ತಾರೋ ಅವರಿಗೆ ಇವರು ಗೌರವ ತೋರಲು ಬದ್ಧರಾಗಿರುತ್ತಾರೆ ಎಂಬುದನ್ನು ನಾವು ಅರ್ಜಿದಾರರಿಗೆ ನೆನಪಿಸಿಕೊಡಬೇಕಿದೆ. ನ್ಯಾಯಮೂರ್ತಿಗಳು ಸಂವಿಧಾನದ ಅಡಿಯಲ್ಲಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಅವರು ಯಾರನ್ನಾದರೂ ಗೌರವಿಸುತ್ತಾರೆ ಎಂದ ಮಾತ್ರಕ್ಕೆ ಅರ್ಜಿದಾರರು ಹೇಳಿದ ವ್ಯಕ್ತಿಯಿಂದ ಮಾರ್ಗದರ್ಶನ ಪಡೆಯುತ್ತಾರೆ ಎಂದು ಅರ್ಥವಲ್ಲ,” ಎಂದು ಹೇಳಿದ್ದಾರೆ.
ಇದೇ ವೇಳೆ ಪೀಠವು "ಇದು ನ್ಯಾಯಾಲಯವನ್ನು ಹಗರಣಕ್ಕೀಡುಮಾಡುವ ಗಂಭೀರ ಯತ್ನ. ಇದನ್ನು ಪ್ರಬಲ ಮಾತುಗಳಲ್ಲಿ ಖಂಡಿಸಬೇಕಿದೆ," ಎಂದು ಅಭಿಪ್ರಾಯಪಟ್ಟಿದೆ. ಆದರೆ ಅರ್ಜಿದಾರರ ವಿರುದ್ಧ ಸ್ವಯಂ ಪ್ರೇರಿತ ಮೊಕದ್ದಮೆ ದಾಖಲಿಸಿಕೊಳ್ಳುವ ಬದಲು ಅರ್ಜಿದಾರರ ಆರೋಪಗಳನ್ನು ಗಮನಿಸುವಂತೆ ವಕೀಲ ಕೆ ಜಿ ಕುಮಾರ್ ಅವರಿಗೆ ಸೋಮವಾರ ಸೂಚಿಸಿತ್ತು. ಅರ್ಜಿದಾರರ ವಿರುದ್ಧ ಕ್ರಿಮಿನಲ್ ನಿಂದನೆ ಆರೋಪ ಹೊರಿಸುವುದರಿಂದ ಸ್ವಯಂ ತಡೆದ ನ್ಯಾಯಾಲಯವು ತನ್ನ ಈ ಉದಾರತೆಗೆ ಈ ಹಿಂದೆ ಎಸ್ ಮುಲಗಾಂವ್‌ಕರ್ ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯವು ನೀಡಿದ್ದ ಉಲ್ಲೇಖವನ್ನು ನೆನಪಿಸಿಕೊಂಡಿತು.
ಯಾವುದೇ ದೊಡ್ಡತನ ತೋರುವುದಾದರೆ ಅದು ಸಾಂವಿಧಾನಿಕ ಹುದ್ದೆ ಅಲಂಕರಿಸಿರುವ ವ್ಯಕ್ತಿಗಳಿಂದ ಸಾದ್ಯವಾಗಬೇಕು ಎಂದು ನಾವು ನಂಬುತ್ತೇವೆ.- ಕರ್ನಾಟಕ ಹೈಕೋರ್ಟ್
ಒಂದು ಹಂತದಲ್ಲಿ ಪ್ರಕರಣದಲ್ಲಿ ಮುಂದುವರೆಯುವುದಿಲ್ಲ ಎಂದು ವಕೀಲ ಕುಮಾರ್ ಅರ್ಜಿದಾರರಿಗೆ ಮಾಹಿತಿ ನೀಡಿದರು. ಆದರೆ ಪ್ರಕರಣದಿಂದ ಹಿಂದೆ ಸರಿಯಬಾರದು ಎಂದು ನ್ಯಾಯಾಲಯ ಕುಮಾರ್ ಅವರಿಗೆ ಈ ಸಂದರ್ಭದಲ್ಲಿ ತಿಳಿಸಿತು. ಹೈಕೋರ್ಟ್ ನ್ಯಾಯಮೂರ್ತಿ ಕೃಷ್ಣ ದೀಕ್ಷಿತ್ ಅವರ ಮುಂದೆ ಅರ್ಜಿದಾರರ ಮತ್ತೊಂದು ಪ್ರಕರಣವು ವಿಚಾರಣೆಯಲ್ಲಿದೆ. ಅವರಿಂದ ತಮಗೆ ನ್ಯಾಯ ದೊರೆಯುವುದಿಲ್ಲ ಎನ್ನುವ ಆತಂಕವನ್ನು ವ್ಯಕ್ತಪಡಿಸಿದ್ದ ಅರ್ಜಿದಾರರು ಇದೆಲ್ಲದರ ಹಿಂದೆ ಕರ್ನಾಟಕ ಮೂಲದ ನಿವೃತ್ತ ಮುಖ್ಯ ನ್ಯಾಯಮೂರ್ತಿಯೊಬ್ಬರ ಪ್ರಭಾವವಿದೆ ಎಂದಿದ್ದರು. ಅಲ್ಲದೆ, ಕರ್ನಾಟಕೇತರ ನ್ಯಾಯಮೂರ್ತಿಗಳಿಂದ ಪ್ರಕರಣದ ವಿಚಾರಣೆ ನಡೆಸಬೇಕು ಎಂದು ಕೋರಿದ್ದರು.
ಅರ್ಜಿದಾರರ ಈ ನಡೆಯು ನ್ಯಾಯಾಲಯದ ಕೆಂಗಣ್ಣಿಗೆ ಗುರಿಯಾಗಿತ್ತು. "ಪ್ರಕರಣ ಮುಗಿದಿದೆ ಎಂದು ಅರ್ಜಿದಾರರು ಭಾವಿಸಬಾರದು. ಅರ್ಜಿದಾರರು ಏಕ ಸದಸ್ಯ ಪೀಠದ ಮುಂದೆ ನೀಡಿದ ಹೇಳಿಕೆಯನ್ನು ನಾವು ಗಮನಿಸಿದ್ದೇವೆ. ಅರ್ಜಿದಾರರು ತಕ್ಷಣವೇ ಏಕ ಸದಸ್ಯ ಪೀಠದ ಮುಂದೆ ಹೋಗಿ ವಾದ ಹಿಂತೆಗೆದುಕೊಳ್ಳಬೇಕೆಂದು ನಾವು ನಿರೀಕ್ಷಿಸುತ್ತೇವೆ. ವಾದ ಹಿಂತೆಗೆದುಕೊಳ್ಳದಿದ್ದರೆ ಸ್ವಯಂಪ್ರೇರಿತ ಮೊಕದ್ದಮೆ ದಾಖಲಿಸಿಕೊಳ್ಳುವ ಆಯ್ಕೆ ನ್ಯಾಯಾಲಯಕ್ಕೆ ಯಾವಾಗಲೂ ಮುಕ್ತವಾಗಿರುತ್ತದೆ ” ಎಂದು ಪೀಠವು ಹೇಳಿತು.
ವಿಚಾರಣೆ ಅಂತಿಮ ಹಂತಕ್ಕೆ ಬಂದ ವೇಳೆ ಮುಖ್ಯ ನ್ಯಾಯಮೂರ್ತಿ ಓಕಾ ಅವರು ಮೌಖಿಕವಾಗಿ ಈ ರೀತಿ ಹೇಳಿದರು:
“ನನ್ನನ್ನು ನಾನು ಕರ್ನಾಟಕದ ಭಾಗ ಎಂದು ಪರಿಗಣಿಸುತ್ತೇನೆ. ಈಗ ನೀವು ಎಲ್ಲಿಗೆ ಹೋಗುತ್ತೀರಿ? ಮುಖ್ಯ ನ್ಯಾಯಮೂರ್ತಿ ಕೂಡ ಕರ್ನಾಟಕದ ಭಾಗ ಎಂದು ಹೇಳಿದರೆ ನೀವು ಎಲ್ಲಿಗೆ ಹೋಗುತ್ತೀರಿ?”ಅಭಯ್ ಶ್ರೀನಿವಾಸ್ ಓಕಾ
ಅಂತಿಮವಾಗಿ ನ್ಯಾಯಾಲಯವು ಪ್ರಕರಣವನ್ನು ವಿಲೇವಾರಿ ಮಾಡಿದರೂ, ವೆಚ್ಚಗಳ ಪಾವತಿಗೆ ಸಂಬಂಧಿಸಿದಂತೆ ಕೈಗೊಂಡ ಕ್ರಮಗಳನ್ನು ವರದಿ ಮಾಡಲು ಫೆಬ್ರವರಿ 19ಕ್ಕೆ ದಿನಾಂಕ ನಿಗದಿಗೊಳಿಸಿತು.