A1
ಸುದ್ದಿಗಳು

ಐಸಿಸ್ ನಂಟು: ಆರೋಪಿಗೆ ಜಾಮೀನು ನಿರಾಕರಿಸಿದ ಕರ್ನಾಟಕ ಹೈಕೋರ್ಟ್

ನ್ಯಾಯಾಂಗ ಬಂಧನ ವಿಸ್ತರಣೆ ಮತ್ತು ಜಾಮೀನು ನಿರಾಕರಿಸಿದ್ದ ವಿಚಾರಣಾ ನ್ಯಾಯಾಲಯದ ಆದೇಶ ಪ್ರಶ್ಜಿಸಿದ್ದ ಅರ್ಜಿಯನ್ನು ಹೈಕೋರ್ಟ್ ತಿರಸ್ಕರಿಸಿದೆ.

Bar & Bench

ಭಯೋತ್ಪಾದಕ ಸಂಘಟನೆಯಾದ ಐಸಿಸ್‌ ಜೊತೆ ನಂಟು ಹೊಂದಿದ ಆರೋಪಿಗೆ ಕರ್ನಾಟಕ ಹೈಕೋರ್ಟ್‌ ಇತ್ತೀಚೆಗೆ ಡಿಫಾಲ್ಟ್‌ ಜಾಮೀನು ನಿರಾಕರಿಸಿದೆ.

ನ್ಯಾ. ಎಂ ನಾಗಪ್ರಸನ್ನ ಅವರು ಅರ್ಜಿ ತಿರಸ್ಕರಿಸಿದ್ದು ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯಿದೆ (ಯುಎಪಿಎ) ಸೆಕ್ಷನ್ 43 ಡಿ (2) (ಬಿ) ಅಡಿಯಲ್ಲಿ ಆರೋಪಿ ಅರ್ಜಿದಾರನ ನ್ಯಾಯಾಂಗ ಬಂಧನವನ್ನು ವಿಸ್ತರಿಸಲು ಕೂಡ ಅನುಮತಿ ನೀಡಿದರು.

''ಯುಎಪಿಎ 1967ರ ಸೆಕ್ಷನ್‌ 43 ಅನ್ವಯ ಎಸ್‌ಪಿಪಿ ಹೇಳಿಕೆ ಆಧರಿಸಿ ನ್ಯಾಯಾಂಗ ಬಂಧನ ಅವಧಿಯನ್ನು ವಿಸ್ತರಿಸುವ ಅಧೀನ ನ್ಯಾಯಾಲಯದ ಆದೇಶ ಸರಿ ಇದೆ. ಅದರಲ್ಲಿ ಹಸ್ತಕ್ಷೇಪ ಮಾಡಲು ಸಾಧ್ಯವಿಲ್ಲ" ಎಂದು ನ್ಯಾಯಾಲಯ ಹೇಳಿತು.

ಅರ್ಜಿದಾರ ಜುಹಾಬ್‌ ಹಮೀದ್‌ ಶಕೀಲ್‌ ಮನ್ನಾ ಅಲಿಯಾಸ್‌ ಜೋಹಿಬ್‌ ಮನ್ನಾ ವಿರುದ್ಧ ಐಪಿಸಿ ಸೆಕ್ಷನ್‌ ) ಸೆಕ್ಷನ್ 120ಬಿ (ಕ್ರಿಮಿನಲ್ ಪಿತೂರಿಗೆ ಶಿಕ್ಷೆ) ಮತ್ತು 125 (ಭಾರತ ಸರ್ಕಾರದೊಂದಿಗೆ ಮೈತ್ರಿ ಮಾಡಿಕೊಂಡಿರುವ ಯಾವುದೇ ಏಷ್ಯಾ ಶಕ್ತಿಯ ವಿರುದ್ಧ ಯುದ್ಧ ಮಾಡುವುದು) ಮತ್ತು ಸೆಕ್ಷನ್ 17 (ಭಯೋತ್ಪಾದಕರಿಗೆ ನಿಧಿ ಸಂಗ್ರಹಿಸುವುದಕ್ಕಾಗಿ ಶಿಕ್ಷೆ) ಅಡಿ ಹಾಗೂ ಯುಎಪಿಎ ಸೆಕ್ಷನ್‌ 18 ಬಿ ಅಡಿ (ಯಾವುದೇ ವ್ಯಕ್ತಿ ಅಥವಾ ವ್ಯಕ್ತಿಗಳನ್ನು ಭಯೋತ್ಪಾದಕ ಕೃತ್ಯಕ್ಕಾಗಿ ನೇಮಕ ಮಾಡುವ ಶಿಕ್ಷೆ). ಪ್ರಕರಣ ದಾಖಲಿಸಲಾಗಿತ್ತು.

ಸೌದಿ ಅರೇಬಿಯಾದಲ್ಲಿ ಕೆಲಸ ಮಾಡುತ್ತಿದ್ದ ಆರೋಪಿ ಅರ್ಜಿದಾರನನ್ನು ಎನ್‌ಐಎ ಕೋರಿಕೆ ಮೇರೆಗೆ ಅಲ್ಲಿ ಬಂಧಿಸಿ ಭಾರತಕ್ಕೆ ಗಡಿಪಾರು ಮಾಡಲಾಗಿತ್ತು. ನಿಷೇಧಿತ ಭಯೋತ್ಪಾದಕ ಸಂಘಟನೆಗಳೊಂದಿಗೆ ಆರೋಪಿ ಸಂಬಂಧ ಹೊಂದಿದ್ದಾನೆ. ಅಲ್ಲದೆ ಆರೋಪಿ ಐಸಿಸ್‌ ಸಂಘಟನೆಗೆ ಮುಸ್ಲಿಂ ಯುವಕರನ್ನು ಪ್ರಚೋದಿಸಿ ಸೇರಿಸಿ ಅವರ ಜತೆ ಕ್ರಿಮಿನಲ್‌ ಪಿತೂರಿ ನಡೆಸುತ್ತಿದ್ದ. ಜೊತೆಗೆ ಸಂಘಟನೆಗಾಗಿ ಹಣ ಸಂಗ್ರಹ ಕಾರ್ಯದಲ್ಲಿ ತೊಡಗಿದ್ದ ಎಂದು ಗಂಭೀರ ಆರೋಪ ಹೊರಿಸಲಾಗಿತ್ತು.

ಅರ್ಜಿದಾರರನ್ನು 30 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು. ನಂತರ ಕಾಲಕಾಲಕ್ಕೆ ಅದನ್ನು ವಿಸ್ತರಿಸಲಾಗಿತ್ತು. 90 ದಿನಗಳ ನಂತರ ಕಸ್ಟಡಿ ಅವಧಿಯನ್ನು 180 ದಿನಗಳವರೆಗೆ ವಿಸ್ತರಿಸಲು ವರದಿ ಸಲ್ಲಿಸಲಾಗಿತ್ತು. ಕಾನೂನಿನ ಪ್ರಕಾರ 90 ದಿನಗಳಲ್ಲಿ ಆರೋಪಪಟ್ಟಿ ಸಲ್ಲಿಸದ ಕಾರಣ ನ್ಯಾಯಾಂಗ ಬಂಧನ ವಿಸ್ತರಿಸಬಾರದು ಎಂದು ಅರ್ಜಿದಾರರು ಆಕ್ಷೇಪಿಸಿದರು. ಅಲ್ಲದೆ ಇಪ್ಪತ್ನಾಲ್ಕು ಗಂಟೆಗಳಲ್ಲಿ ತನಿಖೆಯನ್ನು ಪೂರ್ಣಗೊಳಿಸಲು ಸಾಧ್ಯವಾಗದಿದ್ದಾಗ- ತೊಂಬತ್ತು ದಿನಗಳ ಕಾಲ ಬಂಧನದಲ್ಲಿರುವ ಆರೋಪಿಯನ್ನು ಕ್ರಿಮಿನಲ್ ಪ್ರಕ್ರಿಯಾ ಸಂಹಿತೆಯಡಿ ಜಾಮೀನಿನ ಮೇಲೆ ಬಿಡುಗಡೆ ಮಾಡಬೇಕು ಎಂದು ತಿಳಿಸುವ ಸೆಕ್ಷನ್‌ 167 (2) ಅಡಿಯಲ್ಲಿ ಜಾಮೀನು ಕೋರಿದ್ದರು.

ಆದರೆ, ನ್ಯಾಯಾಂಗ ಬಂಧನವನ್ನು 180 ದಿನಗಳವರೆಗೆ ವಿಸ್ತರಿಸಿದ ಎನ್‌ಐಎ ವಿಶೇಷ ನ್ಯಾಯಾಲಯ, ಜಾಮೀನು ಅರ್ಜಿಯನ್ನು ನಿರಾಕರಿಸಿತ್ತು. ನಂತರ ಇದನ್ನು ಪ್ರಶ್ನಿಸಿ ಆರೋಪಿ ಹೈಕೋರ್ಟ್‌ ಮೊರೆ ಹೋಗಿದ್ದರು.

ತೊಂಬತ್ತು ದಿನಗಳಲ್ಲಿ ತನಿಖೆ ಪೂರ್ಣಗೊಳಿಸಲು ಸಾಧ್ಯವಾಗದಿದ್ದರೆ, ನ್ಯಾಯಾಲಯ 180 ದಿನಗಳವರೆಗೆ ಬಂಧನ ಅವಧಿ ವಿಸ್ತರಿಸಬಹುದು ಎನ್ನುವ ಯುಎಪಿಎ ಸೆಕ್ಷನ್ 43 ಡಿ (2) (ಬಿ) ಅಡಿ ಆರೋಪಿಯ ಬಂಧನ ಅವಧಿ ವಿಸ್ತರಿಸಲಾಗಿದೆ ಎಂಬುದನ್ನು ಹೈಕೋರ್ಟ್‌ ಗಮನಿಸಿದೆ. ಅವಧಿ ವಿಸ್ತರಣೆಗೆ ಅನಮತಿಸಿದ್ದ ವಿಶೇಷ ನ್ಯಾಯಾಲಯ ಈ ಸಂಬಂಧ ವಿವರವಾದ ಆದೇಶ ನೀಡಿತ್ತು ಎಂಬುದನ್ನು ಗಮನಿಸಿದ ಹೈಕೋರ್ಟ್‌ ಜಾಮೀನು ನಿರಾಕರಿಸಿತು. ವಕೀಲ ಉಸ್ಮಾನ್‌ ಪಿ ಅರ್ಜಿದಾರ ಆರೋಪಿಯ ಪರವಾಗಿ ವಾದಿಸಿದ್ದರು.