ಸುದ್ದಿಗಳು

ಸೆಷನ್ಸ್ ನ್ಯಾಯಾಲಯಗಳಲ್ಲಿ ಬಾಕಿ ಇರುವ ಯುಎಪಿಎ ಪ್ರಕರಣಗಳ ಮಾಹಿತಿ ಬಯಸಿದ ಕರ್ನಾಟಕ ಹೈಕೋರ್ಟ್

Bar & Bench

ಸೆಷನ್ಸ್‌ ನ್ಯಾಯಾಲಯಗಳಲ್ಲಿ ಬಾಕಿ ಉಳಿದಿರುವ ʼಕಾನೂನುಬಾಹಿರ ಚಟುವಟಿಕೆಗಳ (ತಡೆ) ಕಾಯಿದೆʼ [ಯುಎಪಿಎ] ಅಡಿಯಲ್ಲಿ ದಾಖಲಾದ ಪ್ರಕರಣಗಳ ವಿವರ ಪಡೆಯುವಂತೆ ಹೈಕೋರ್ಟ್‌ನ ರಿಜಿಸ್ಟ್ರಾರ್‌ ಜನರಲ್‌ ಅವರಿಗೆ ಕರ್ನಾಟಕ ಹೈಕೋರ್ಟ್‌ ಇತ್ತೀಚೆಗೆ ನಿರ್ದೇಶನ ನೀಡಿದೆ.

ರಾಜ್ಯದಲ್ಲಿ ಹೆಚ್ಚುವರಿಯಾಗಿ ಯುಎಪಿಎ ನ್ಯಾಯಾಲಯ ಸ್ಥಾಪಿಸಬೇಕೆಂದು ಕೋರಿ ವಸೀಮುದ್ದೀನ್ ಎಂಬುವವರು ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕಾ ನೇತೃತ್ವದ ವಿಭಾಗೀಯ ಪೀಠ ಪ್ರಸ್ತುತ ಆದೇಶ ಹೊರಡಿಸಿದೆ.

12 ವರ್ಷಗಳಿಂದ ಅನೇಕ ಪ್ರಕರಣಗಳು ಬಾಕಿ ಉಳಿದಿವೆ ಎಂದು ಅರ್ಜಿದಾರರ ಪರ ವಕೀಲ ಮೊಹಮ್ಮದ್ ತಾಹಿರ್ ಅವರು ವಿಚಾರಣೆ ವೇಳೆ ವಾದ ಮಂಡಿಸಿದರು. ಅಪರಾಧ ಪ್ರಕ್ರಿಯಾ ಸಂಹಿತೆಯ (ಸಿಆರ್‌ಪಿಸಿ) ಸೆಕ್ಷನ್ 309 (ವಿಚಾರಣೆಯನ್ನು ಮುಂದೂಡುವ ಅಥವಾ ತಡೆಹಿಡಿಯುವ ಅಧಿಕಾರ) ಅಡಿಯಲ್ಲಿ ಆದೇಶ ಹೊರಡಿಸುವಂತೆ ಅವರು ಕೋರಿದರಾದರೂ ನ್ಯಾಯಾಲಯ ಅದನ್ನು ಪುರಸ್ಕರಿಸಲಿಲ್ಲ.

ಇದೇ ವೇಳೆ ಯುಎಪಿಎ ಅಡಿಯಲ್ಲಿ 56 ಪ್ರಕರಣಗಳು ದಾಖಲಾಗಿವೆ ಎಂದು ತಿಳಿಸಲಾಯಿತು. ಆಗ ನ್ಯಾಯಾಲಯ “ನಿಮಗೆ ವಿಶೇಷ ನ್ಯಾಯಾಲಯ ಏಕೆ ಬೇಕು? ಬಾಕಿ ಇರುವ ಪ್ರಕರಣಗಳ ಸಂಖ್ಯೆಯನ್ನು ನೋಡಿ” ಎಂದು ಹೇಳಿತು. " ತ್ವರಿತ ವಿಚಾರಣೆಗೆ ಅವಕಾಶಗಳಿದ್ದರೂ ಕೂಡ ಸಾಕ್ಷಿಗಳನ್ನು ಕೂಡಲೇ ವಿಚಾರಣೆ ನಡೆಸುತ್ತಿಲ್ಲ ಇಲ್ಲವೇ ಪೀಠದ ನೇತೃತ್ವ ವಹಿಸಿರುವ ನ್ಯಾಯಾಧೀಶರು ಕೂಡ ವಿಚಾರಣೆ ಚುರುಕುಗೊಳಿಸುವಂತೆ ಯಾವುದೇ ಒತ್ತಡ ಹೇರುತ್ತಿಲ್ಲ” ಎಂದು ತಾಹಿರ್‌ ಪ್ರತಿಕ್ರಿಯಿಸಿದರು.

ಯುಎಪಿಎ ಪ್ರಕರಣಗಳಲ್ಲಿ ಸಾಮಾನ್ಯ ಆರೋಪಿಗಳನ್ನು ಕೂಡ ವಿಶೇಷ ವರ್ಗದ ಆರೋಪಿಗಳೆಂದು ಪರಿಗಣಿಸಲಾಗುತ್ತದೆ . ತನಿಖೆಯಿಂದ ಹಿಡಿದು ವಿಚಾರಣೆ ಪೂರ್ಣವಾಗುವವರೆಗೆ ಸಾಕಷ್ಟು ಸಮಯ ಹಿಡಿಯುತ್ತದೆ. ದುರದೃಷ್ಟವಶಾತ್, ಸಿಆರ್‌ಪಿಸಿಯ ಸೆಕ್ಷನ್ 309 ಮತ್ತು ಎನ್‌ಐಎಯ ಸೆಕ್ಷನ್ 19 ರ ಅಡಿಯಲ್ಲಿ ತ್ವರಿತ ವಿಚಾರಣೆ ಅಥವಾ ಪ್ರತಿನಿತ್ಯ ವಿಚಾರಣೆ ನಡೆಸುವಂತೆ ತನಿಖಾ ಸಂಸ್ಥೆಗಳನ್ನು ಪ್ರಾಸಿಕ್ಯೂಟರ್‌ಗಳನ್ನು ಅಧ್ಯಕ್ಷೀಯ ಅಧಿಕಾರಿಗಳು ಒತ್ತಾಯಿಸದೇ ಇರುವುದರಿಂದಾಗಿ ಆರೋಪಿಗಳು ತೊಂದರೆ ಅನುಭವಿಸುತ್ತಿದ್ದಾರೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.

ವಾರಕ್ಕೆ ಒಂದು ಬಾರಿ ವಿಚಾರಣೆ ನಡೆಸುವ 34 ನೇ ಹೆಚ್ಚುವರಿ ನಗರ ಸಿವಿಲ್ ನ್ಯಾಯಾಲಯದಲ್ಲಿ ಯುಎಪಿಎಗೆ ಸಂಬಂಧಿಸಿದ ಒಂದೆರಡು ಪ್ರಕರಣಗಳು ಬಾಕಿ ಉಳಿದಿವೆ. ಪ್ರತಿದಿನ ವಿಚಾರಣೆ ನಡೆಸಿದರೂ ಯುಎಪಿಎ ಪ್ರಕರಣಗಳು ಇತ್ಯರ್ಥಗೊಳ್ಳಲು ವರ್ಷಗಳೇ ಬೇಕಾಗಬಹುದು ಎಂದು ಅರ್ಜಿದಾರರು ವಾದ ಮಂಡಿಸಿದ್ದರು. ಇದು ಸಂವಿಧಾನದ 21 ನೇ ಪರಿಚ್ಛೇದದ ಭಾಗವಾಗಿರುವ ತ್ವರಿತ ವಿಚಾರಣೆಯ ಹಕ್ಕಿನ ಸಂಪೂರ್ಣ ಉಲ್ಲಂಘನೆ. ಆದ್ದರಿಂದ, ಯುಎಪಿಎ ಪ್ರಕರಣಗಳನ್ನು ಪ್ರತ್ಯೇಕವಾಗಿ ನಿರ್ವಹಿಸಲು ವಿಶೇಷ ನ್ಯಾಯಾಲಯ ಅವಶ್ಯಕವಾಗಿದೆ. ಈ ಹಿನ್ನೆಲೆಯಲ್ಲಿ ಹೆಚ್ಚುವರಿ ಸೆಷನ್ಸ್‌ ನ್ಯಾಯಾಲಯವೊಂದನ್ನು ಸ್ಥಾಪಿಸುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಅರ್ಜಿಯಲ್ಲಿ ಕೋರಲಾಗಿತ್ತು.

5 ವರ್ಷಗಳಿಗಿಂತ ಹೆಚ್ಚು ಕಾಲ ಜೈಲು ಶಿಕ್ಷೆ ಅನುಭವಿಸಿದ ಯುಎಪಿಎ ಆರೋಪಿಗಳಿಗೆ ಸುಪ್ರೀಂ ಕೋರ್ಟ್ ಇತ್ತೀಚೆಗೆ ಜಾಮೀನು ನೀಡಿದೆ. ಜಾಮೀನು ನೀಡುವಾಗ ಅದು ಸಂವಿಧಾನದ 21 ನೇ ಪರಿಚ್ಛೇದದ ಅಡಿಯಲ್ಲಿ ನ್ಯಾಯ ಪಡೆಯುವ ಮತ್ತು ತ್ವರಿತ ವಿಚಾರಣೆಗೆ ಆಗ್ರಹಿಸುವ ಹಕ್ಕನ್ನು ಪರಿಗಣಿಸಿದೆ. ಜಾಮೀನು ನೀಡುವಾಗ ಸುಪ್ರೀಂಕೋರ್ಟ್‌, ಮೂಲಭೂತ ಹಕ್ಕುಗಳ ಉಲ್ಲಂಘನೆಯ ಆಧಾರದ ಮೇಲೆ ಜಾಮೀನು ನೀಡುವ ಸಾಂವಿಧಾನಿಕ ನ್ಯಾಯಾಲಯಗಳ ವ್ಯಾಪ್ತಿಯನ್ನು ಈ ನಿಬಂಧನೆ ಬಹಿಷ್ಕರಿಸುವುದಿಲ್ಲ ಎಂದು ಸ್ಪಷ್ಟಪಡಿಸಿತ್ತು.