Karnataka HC and online games

 
ಸುದ್ದಿಗಳು

ಆನ್‌ಲೈನ್‌ ಗೇಮಿಂಗ್: ಕರ್ನಾಟಕ ಪೊಲೀಸ್‌ ತಿದ್ದುಪಡಿ ಕಾಯಿದೆಯ ಆಕ್ಷೇಪಾರ್ಹ ನಿಬಂಧನೆಗಳನ್ನು ರದ್ದುಗೊಳಿಸಿದ ಹೈಕೋರ್ಟ್‌

ಪೋಕರ್‌, ಚೆಸ್‌, ರಮ್ಮಿ, ಫ್ಯಾಂಟಸಿ ಆಟಗಳು (ಫ್ಯಾಂಟಸಿ ಕ್ರಿಕೆಟ್‌, ಫುಟ್‌ಬಾಲ್‌ ಮತ್ತು ಬ್ಯಾಸ್ಕೆಟ್‌ಬಾಲ್‌), ತಾತ್ಕಾಲಿಕ ಆಟಗಳು ಮತ್ತು ಇ-ಕ್ರೀಡೆಗಳು ಕೌಶಲ್ಯ ಸಂಬಂಧಿಸಿದ್ದಾಗಿವೆ ಎಂದು ವಾದಿಸಿದ್ದ ಗೇಮಿಂಗ್‌ ಕಂಪೆನಿಗಳ ಪರ ವಕೀಲರು.

Siddesh M S

ಆನ್‌ಲೈನ್‌ ಜೂಜಾಟ ನಿಷೇಧಿಸುವ ಸಂಬಂಧ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಕರ್ನಾಟಕ ಪೊಲೀಸ್‌ (ತಿದ್ದುಪಡಿ) ಕಾಯಿದೆ-2021ಯ ಆಕ್ಷೇಪಾರ್ಹ ನಿಬಂಧನೆಗಳನ್ನು ಸೋಮವಾರ ರದ್ದುಗೊಳಿಸಿದೆ. ಇಂದಿನಿಂದ ಕರ್ನಾಟಕ ವಿಧಾನ ಮಂಡಲ ಅಧಿವೇಶ ಆರಂಭವಾಗಿರುವ ನಡುವೆ ನ್ಯಾಯಾಲಯದ ತೀರ್ಪು ಭಾರಿ ಮಹತ್ವ ಪಡೆದುಕೊಂಡಿದೆ.

ಮುಂಬೈನಲ್ಲಿ ಕೇಂದ್ರ ಕಚೇರಿ ಹೊಂದಿರುವ ಆಲ್ ಇಂಡಿಯಾ ಗೇಮಿಂಗ್ ಫೆಡರೇಷನ್ ಒಳಗೊಂಡು 11 ಖಾಸಗಿ ಕಂಪೆನಿಗಳು ಸಲ್ಲಿಸಿದ್ದ ಮನವಿಗಳ ವಿಚಾರಣೆಯನ್ನು ನಡೆಸಿ, ಡಿಸೆಂಬರ್‌ 22ರಂದು ತೀರ್ಪು ಕಾಯ್ದಿರಿಸಿದ್ದ ಮುಖ್ಯ ನ್ಯಾಯಮೂರ್ತಿ ರಿತುರಾಜ್‌ ಅವಸ್ಥಿ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್‌ ದೀಕ್ಷಿತ್ ನೇತೃತ್ವದ ವಿಭಾಗೀಯ ಪೀಠವು ಇಂದು ತೀರ್ಪು ಪ್ರಕಟಿಸಿದೆ. ನವೆಂಬರ್‌ 18ರಂದು ಮನವಿಗಳ ವಿಚಾರಣೆ ಆರಂಭಿಸಿದ್ದ ಪೀಠವು ಆ ಬಳಿಕ ಪಕ್ಷಕಾರರ ವಾದವನ್ನು ಸುದೀರ್ಘವಾಗಿ ಆಲಿಸಿತ್ತು.

ಅರ್ಜಿದಾರರ ಮನವಿಯನ್ನು ಪುರಸ್ಕರಿಸುವ ನ್ಯಾಯಾಲಯವು ಕರ್ನಾಟಕ ಪೊಲೀಸ್‌ ತಿದ್ದುಪಡಿ ಕಾಯಿದೆಯ ವ್ಯಾಜ್ಯಕ್ಕೆ ಕಾರಣವಾಗಿದ್ದ ಆಕ್ಷೇಪಾರ್ಹ ನಿಬಂಧನೆಗಳನ್ನು ರದ್ದುಗೊಳಿಸಿದೆ. "ಈ ನಿಬಂಧನೆಗಳು ಸಂವಿಧಾನದ ಅಧಿಕಾರವ್ಯಾಪ್ತಿಯ ಹೊರತಾಗಿದೆ" ಎಂದು ತೀರ್ಪಿನಲ್ಲಿ ಹೇಳಲಾಗಿದೆ. ಇಡೀ ಕಾಯಿದೆಯನ್ನು ರದ್ದುಪಡಿಸಲಾಗಿಲ್ಲ ಎಂದು ತೀರ್ಪಿನಲ್ಲಿ ಸ್ಪಷ್ಟಪಡಿಸಲಾಗಿದೆ. ಸಾಂವಿಧಾನಿಕ ನಿಯಮಗಳಿಗೆ ಅನುಗುಣವಾಗಿ ಬೆಟ್ಟಿಂಗ್‌ ಮತ್ತು ಗ್ಯಾಬ್ಲಿಂಗ್‌ಗೆ ಸಂಬಂಧಿಸಿದಂತೆ ಸೂಕ್ತ ಕಾನೂನು ತರಲು ಸರ್ಕಾರವನ್ನು ನಿರ್ಬಂಧಿಸಲಾಗಿಲ್ಲ ಎಂದು ಹೇಳಲಾಗಿದೆ. ಆನ್‌ಲೈನ್‌ ಗೇಮಿಂಗ್‌ ಉದ್ಯಮ ಮತ್ತು ಸಂಬಂಧಿತ ಚಟುವಟಿಕೆಗಳಲ್ಲಿ ಮಧ್ಯಪ್ರವೇಶಿಸಿದಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಲಾಗಿದೆ ಎಂದು ಸುಮಾರು 120 ಪುಟಗಳ ತೀರ್ಪಿನಲ್ಲಿ ಹೇಳಲಾಗಿದೆ.

ಪೋಕರ್‌, ಚೆಸ್‌, ರಮ್ಮಿ, ಫ್ಯಾಂಟಸಿ ಆಟಗಳು (ಫ್ಯಾಂಟಸಿ ಕ್ರಿಕೆಟ್‌, ಫುಟ್‌ಬಾಲ್‌ ಮತ್ತು ಬ್ಯಾಸ್ಕೆಟ್‌ಬಾಲ್‌), ತಾತ್ಕಾಲಿಕ ಆಟಗಳು ಮತ್ತು ಇ-ಕ್ರೀಡೆಗಳು ಕೌಶಲ್ಯ ಸಂಬಂಧಿಸಿದ್ದಾಗಿವೆ ಎಂದು ಹಲವು ನ್ಯಾಯಾಲಯಗಳು ಹೇಳಿವೆ. ಕೆಲವು ಆಟಗಳು ಹಣದ ಅಪಾಯವನ್ನು ಒಳಗೊಂಡಿವೆಯಾದರೂ ಅವು ಜೂಜಾಟಕ್ಕೆ ಸಂಬಂಧಿಸಿಲ್ಲ ಎಂದು ಅರ್ಜಿದಾರರು ವಾದಿಸಿದ್ದರು.

ಆನ್‌ಲೈನ್‌ ಗೇಮಿಂಗ್‌ ಸಂಸ್ಥೆಗಳ ಒಕ್ಕೂಟವಾದ ಆಲ್ ಇಂಡಿಯಾ ಗೇಮಿಂಗ್ ಫೆಡರೇಷನ್ ಅನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಸಿ ಆರ್ಯಮಾ ಸುಂದರಂ ಅವರು “ಕರ್ನಾಟಕ ಸರ್ಕಾರ ಜಾರಿಗೊಳಿಸಿರುವ ಆಕ್ಷೇಪಿತ ಕಾಯಿದೆಯು ಸಂವಿಧಾನಕ್ಕೆ ವಿರುದ್ಧವಾಗಿದೆ. ಆನ್‌ಲೈನ್‌ ಗೇಮ್‌ಗಳು ಕೌಶಲಕ್ಕೆ ಸಂಬಂಧಿಸಿದ್ದಾಗಿವೆ. ಹೀಗಾಗಿ, ಇದು ಜೂಜಾಟವಲ್ಲ. ಈ ಕ್ಷೇತ್ರದಲ್ಲಿ 3,500ಕ್ಕೂ ಹೆಚ್ಚು ಉದ್ಯೋಗಿಗಳಾಗಿದ್ದಾರೆ. 300 ಕೋಟಿ ರೂಪಾಯಿ ಬಂಡವಾಳ ಹೂಡಲಾಗಿದೆ. ನಿಷೇಧ ಮುಂದುವರಿದರೆ ಉದ್ಯೋಗಿಗಳು ಮತ್ತು ಪಾಲುದಾರರು ಆನ್‌ಲೈನ್‌ ಗೇಮಿಂಗ್‌ ಕಂಪೆನಿಗಳ ವಿರುದ್ಧ ಕ್ರಿಮಿನಲ್‌ ದೂರು ದಾಖಲಿಸಬಹುದು. ಹೀಗಾಗಿ, ಕಾಯಿದೆಯನ್ನು ಪರಿಗಣನೆಗೆ ಒಳಪಡಿಸಬೇಕಿದೆ” ಎಂದು ವಾದಿಸಿದ್ದರು.

ಗೇಮ್ಸ್‌ಕ್ರಾಫ್ಟ್‌ ಟೆಕ್ನಾಲಜೀಸ್‌ ಪ್ರೈವೇಟ್‌ ಲಿಮಿಟೆಡ್‌ ಪ್ರತಿನಿಧಿಸಿದ್ದ ಹಿರಿಯ ವಕೀಲ ಡಾ. ಅಭಿಷೇಕ್‌ ಮನು ಸಿಂಘ್ವಿ ಅವರು "ಪ್ರತಿಯೊಂದು ಕಾನೂನು ಮತ್ತು ಸುವ್ಯವಸ್ಥೆ ಪ್ರಶ್ನೆಯು ಸಾರ್ವಜನಿಕ ಸುವ್ಯವಸ್ಥೆಯ ಪ್ರಶ್ನೆಯಾಗುವುದಿಲ್ಲ. ಹೀಗಾಗಿ, ಆನ್‌ಲೈನ್‌ ಗೇಮ್‌ಗಳನ್ನು ನಿಷೇಧಿಸಲು ಕಾನೂನು ತಂದಿರುವುದು ತಪ್ಪಾದ ನಡೆ. ಈ ಕಾಯಿದೆಯ ಅನುಪಸ್ಥಿತಿಯಲ್ಲಿ ರಮ್ಮಿ ಆಡುವುದು ಸಾರ್ವಜನಿಕ ಸುವ್ಯವಸ್ಥೆಗೆ ಎರವಾಗಿತ್ತು ಎಂದು ಹೆಳಲು ಸಾಧ್ಯವೇ?. ಎಂ ಜೆ ಶಿವಾನಿ ವರ್ಸಸ್‌ ಕರ್ನಾಟಕ ರಾಜ್ಯ, ಚಮರ್‌ಭಾಗವಾಲಾ, ಡಾ. ಕೆ ಆರ್‌ ಲಕ್ಷ್ಮಣನ್‌ ವರ್ಸಸ್‌ ತಮಿಳುನಾಡು ರಾಜ್ಯ ಮತ್ತಿತರ ಪ್ರಕರಣಗಳನ್ನು ತಮ್ಮ ವಾದಕ್ಕೆ ಪೂರಕವಾಗಿ ಉಲ್ಲೇಖಿಸಿದ್ದ ಸಿಂಘ್ವಿ ಕರ್ನಾಟಕ ಸರ್ಕಾರದ ಕಾನೂನು ಸಂವಿಧಾನ ವಿರೋಧಿಯಾಗಿದೆ" ಎಂದು ವಾದಿಸಿದ್ದರು.

ಫೆಡರೇಷನ್‌ ಆಫ್‌ ಇಂಡಿಯನ್‌ ಫ್ಯಾಂಟಸಿ ಸ್ಪೋರ್ಟ್ಸ್‌ (ಎಫ್‌ಐಎಫ್‌ಎಸ್‌) ಪ್ರತಿನಿಧಿಸಿದ್ದ ಹಿರಿಯ ವಕೀಲ ಮುಕುಲ್‌ ರೋಹಟ್ಗಿ ಅವರು “ಅರ್ಜಿದಾರರು ಪ್ರವರ್ತಕರಾಗಿರುವ ಫ್ಯಾಂಟಸಿ ಆಟಗಳು ಕರ್ನಾಟಕ ಪೊಲೀಸ್‌ ತಿದ್ದುಪಡಿ ಕಾಯಿದೆಯ ವ್ಯಾಪ್ತಿಗೆ ಯಾವುದೇ ರೀತಿಯಲ್ಲಿಯೂ ಒಳಪಡುವುದಿಲ್ಲ. ಕೌಶಲಕ್ಕೆ ಸಂಬಂಧಿಸಿದ ಆಟಗಳನ್ನು ನಿಷೇಧಿಸಲು ಜಾರಿಗೆ ತಂದಿರುವ ಪೊಲೀಸ್‌ ತಿದ್ದುಪಡಿ ಕಾಯಿದೆ ಅಧಿಕಾರತೀತವಾಗಿದೆ. ರಾಜ್ಯ ಸರ್ಕಾರ ಜಾರಿಗೆ ತಂದಿರುವ ಕಾನೂನು ಸ್ವೇಚ್ಛೆಯಿಂದ ಕೂಡಿದೆ” ಎಂದು ತಕರಾರು ಎತ್ತಿದ್ದರು.

ಹಿರಿಯ ವಕೀಲ ಡಿ ಎಲ್‌ ಎನ್‌ ರಾವ್‌ ಅವರು “ಸುಪ್ರೀಂ ಕೋರ್ಟ್‌ ತೀರ್ಪಿನ ಹೊರತಾಗಿಯೂ ಕರ್ನಾಟಕ ಸರ್ಕಾರವು ಪೊಲೀಸ್‌ ಕಾಯಿದೆಗೆ ತಿದ್ದುಪಡಿ ತಂದಿದೆ. ಶಾಸಕಾಂಗದ ಮಿತಿಯನ್ನು ಮೀರಿ ಕಾನೂನು ರೂಪಿಸಲಾಗಿದ್ದು, ಇದು ಸಂವಿಧಾನದ 19(1)(ಜಿ)ಗೆ ವಿರುದ್ಧವಾಗಿದೆ. ಹೀಗಾಗಿ, ಪೊಲೀಸ್‌ ತಿದ್ದುಪಡಿ ಕಾಯಿದೆಗೆ ತಡೆ ನೀಡಬೇಕು” ಎಂದು ಕೋರಿದರು.

ಹಿರಿಯ ವಕೀಲ ಸಜ್ಜನ್‌ ಪೂವಯ್ಯ ಅವರು “ರಮ್ಮಿ ಮತ್ತು ಕುದುರೆ ರೇಸ್‌ ಕೌಶಲಕ್ಕೆ ಸಂಬಂಧಿಸಿದ ಆಟಗಳು ಎಂದು ಸುಪ್ರೀಂ ಕೋರ್ಟ್‌ ಹೇಳಿದೆ. ಆಕ್ಷೇಪಾರ್ಹವಾದ ಕರ್ನಾಟಕ ಪೊಲೀಸ್‌ ತಿದ್ದುಪಡಿ ಕಾಯಿದೆಯಲ್ಲೂ ಕೌಶಲದ ಆಟಗಳಿಗೆ ರಕ್ಷಣೆ ಒದಗಿಸಲಾಗಿದೆ. ಕೇರಳ ಹೈಕೋರ್ಟ್‌ ಮತ್ತು ಮದ್ರಾಸ್‌ ಹೈಕೋರ್ಟ್‌ಗಳು ಇಂಥದ್ದೇ ಕಾನೂನುಗಳನ್ನು ವಜಾ ಮಾಡಿವೆ. ಹೀಗಾಗಿ, ನ್ಯಾಯಾಲಯದ ಅಂತಿಮ ತೀರ್ಪಿಗೆ ಒಳಪಟ್ಟು ಕರ್ನಾಟಕ ಪೊಲೀಸ್‌ ತಿದ್ದುಪಡಿ ಕಾಯಿದೆಗೆ ತಡೆಯಾಜ್ಞೆ ನೀಡಬೇಕು” ಎಂದು ಮನವಿ ಮಾಡಿದ್ದರು.

ರಾಜ್ಯ ಸರ್ಕಾರವನ್ನು ಪ್ರತಿನಿಧಿಸಿದ್ದ ಅಡ್ವೊಕೇಟ್‌ ಜನರಲ್‌ ಪ್ರಭುಲಿಂಗ ನಾವದಗಿ ಅವರು “ಮೂರನೇ ವ್ಯಕ್ತಿಯ ಕೌಶಲವನ್ನು ಆಧರಿಸಿ ಫ್ಯಾಂಟಸಿ ಆಟಗಳು ಜೂಜಿಗೆ ಅನುಮತಿಸುತ್ತವೆ. ಇದು ಆಯ್ಕೆಯ ಆಟಕ್ಕೆ ಸಂಬಂಧಿಸಿದ್ದಾಗಿದೆ. ಆನ್‌ಲೈನ್‌ ಗೇಮಿಂಗ್‌ ಚಟುವಟಿಕೆಗಳಲ್ಲಿ ಅಪಾರ ಪ್ರಮಾಣದ ಹವಾಲಾ ಹಣವನ್ನು ಗಮನದಲ್ಲಿಟ್ಟುಕೊಂಡು ತಿದ್ದುಪಡಿ ಕಾಯಿದೆಯನ್ನು ಜಾರಿಗೊಳಿಸಲಾಗಿದೆ” ಎಂದು ಸಮರ್ಥಿಸಿದ್ದರು.

“ಸರ್ಕಾರ ತಂದಿರುವ ತಿದ್ದುಪಡಿಯನ್ನು ನ್ಯಾಯಾಲಯ ಕೇವಲ ಮಾಹಿತಿ ತಂತ್ರಜ್ಞಾನ ಕಾಯಿದೆ ಅಥವಾ ಪ್ರಸರಣ ಕಾಯಿದೆ ಅಡಿಯಲ್ಲಿ ನೋಡಬಾರದು. ಸಮಾಜದಲ್ಲಿ ಹಲವರು ಹಣ ಕಳೆದುಕೊಳ್ಳುತ್ತಿರುವುದರಿಂದ ಆನ್‌ಲೈನ್ ಗೇಮ್ ಗಳನ್ನು ನಿಷೇಸಲಾಗಿದೆ. ಜೂಜು ನಿಷೇಧಕ್ಕೆ ಸಂಬಂಧಿಸಿದಂತೆ ಪೊಲೀಸ್‌ ಮಹಾನಿರ್ದೇಶಕ ಪ್ರವೀಣ್ ಸೂದ್ ವರದಿಯ ಶಿಫಾರಸುಗಳನ್ನು ಆಧರಿಸಿಯೇ ಸರ್ಕಾರವು ಕಾಯಿದೆಗೆ ತಿದ್ದುಪಡಿ ತಂದಿದೆ” ಎಂದು ವಿವರಿಸಿದ್ದರು.

“ಇದೊಂದು ಹೊಸ ಮತ್ತು ಅಪರೂಪದ ಸಂದರ್ಭ. ಈ ಪ್ರಕರಣವನ್ನು ಕಾನೂನಾತ್ಮಕ ವಿಮರ್ಶೆಯ ಜೊತೆ ಜೊತೆಗೇ, ಜೂಜನ್ನು ಒಂದು ಪಿಡುಗು ಎಂದು ಭಾವಿಸಿ ಪರಿಶೀಲಿಸಬೇಕಾದ ಅವಶ್ಯಕತೆ ಇದೆ. ತಿದ್ದುಪಡಿ ಮಸೂದೆಗೆ ಶಾಸನಸಭೆಯ ಸದಸ್ಯರು ಅತ್ಯಂತ ವಿವೇಚನೆಯಿಂದ ಒಪ್ಪಿಗೆ ನೀಡಿದ್ದಾರೆ. ಆದ್ದರಿಂದ, ಪೀಠವು ಇದನ್ನು ಸೂಕ್ಷ್ಮವಾಗಿ ಪರಿಶೀಲಿಸಬೇಕು” ಎಂದು ಮನವಿ ಮಾಡಿದ್ದರು.

“ಆಟದ ಫಲಿತಾಂಶದ ಬಗ್ಗೆ ತಿಳಿಯದಿರುವಾಗ ಆಟದ ಫಲಿತಾಂಶದ ಮೇಲೆ ಬೆಟ್ಟಿಂಗ್‌ ಕಟ್ಟುವುದು ಆಯ್ಕೆಯನ್ನು ಆಧರಿಸಿರಲಿ ಅಥವಾ ಕೌಶಲವನ್ನು ಆಧರಿಸಿರಲಿ, ಅದು ಬಾಜಿಗೆ ಸಮನಾಗಿರುತ್ತದೆ. ಬಾಜಿ ಅಥವಾ ಬೆಟ್ಟಿಂಗ್‌ ಅನ್ನು ಸರಳ ಭಾಷೆಯಲ್ಲಿ ಹೇಳುವುದಾದರೆ ಒಬ್ಬರಿಂದ ಹಣ ಸಂಗ್ರಹಿಸಿ, ಹಣದ ರೂಪದಲ್ಲಿ ಬಹುಮಾನದ ಮೊತ್ತ ಹಂಚಿಕೆ ಮಾಡುವುದಾಗಿದೆ. ಮುಂದೆ ಹೊರಹೊಮ್ಮಬಹುದಾದ ಫಲಿತಾಂಶದ ಬಗ್ಗೆ ತಿಳಿಯದೇ ತಮ್ಮ ಹಣ ಅಥವಾ ಇನ್ನಾವುದಾದರ ಮೇಲೆ ರಿಸ್ಕ್‌ ತೆಗೆದುಕೊಳ್ಳುವುದು ಬಾಜಿ ಅಥವಾ ಬೆಟ್ಟಿಂಗ್‌ಗೆ ಸಮನಾಗುತ್ತದೆ. ಹೀಗೆ ಮುಂಚಿತವಾಗಿಯೇ ಫಲಿತಾಂಶ ಗೊತ್ತಿಲ್ಲದ ಆಟವು ಆಯ್ಕೆ ಆಧಾರಿತ ಆಟ (ಗೇಮ್‌ ಆಫ್ ಚಾಯ್ಸ್‌) ಆಗಿರಬಹುದು ಅಥವಾ ಕೌಶಲದ ಆಟವಾಗಿರಬಹುದು (ಗೇಮ್‌ ಆಫ್‌ ಸ್ಕಿಲ್‌)” ಎಂದು ನಾವದಗಿ ಹೇಳಿದ್ದರು.

“ಭಾರತ ಮತ್ತು ಪಾಕಿಸ್ತಾನ ಪಂದ್ಯವನ್ನು ಉದಾಹರಿಸಿದ ಎಜಿ ನಾವದಗಿ ಅವರು “ಭಾರತ ವರ್ಸಸ್‌ ಪಾಕಿಸ್ತಾನ ಆಟವಾಡುತ್ತಿದ್ದರೆ ಅದು ಕೌಶಲದ ಆಟ. ಸದರಿ ಆಟದ ಫಲಿತಾಂಶ ತಿಳಿಯದಿರುವಾಗ ಹಲವರಿಂದ ಬೆಟ್ಟಿಂಗ್‌ ಹಣವನ್ನು ನಾನು ಸಂಗ್ರಹಿಸುತ್ತೇನೆ. ಅದು ಕೌಶಲದ ಆಟವಾಗಿರಬಹುದು” ಎಂದಿದ್ದರು.

“ಗೊತ್ತಿಲ್ಲದ ಫಲಿತಾಂಶವನ್ನು ಆಧರಿಸಿ ಸಂಘಟಿತವಾಗಿ ಹಣ ಸಂಗ್ರಹಿಸುವ ಮತ್ತು ಬೆಟ್ಟಿಂಗ್‌ಗೆ ತಡೆಯೊಡ್ಡುವುದನ್ನು ನಿಷೇಧಿಸಬೇಕೆ ಅಥವಾ ಬೇಡವೇ? ಎಂಬುದು ನ್ಯಾಯಾಲಯದ ಮುಂದಿರುವ ಪ್ರಶ್ನೆ ಎಂದರು. “ನೀವು ಆನ್‌ಲೈನ್‌ ಗೇಮ್‌ ಮಾಲೀಕರಾಗಿದ್ದು, ಬಾಜಿ ಮತ್ತು ಬೆಟ್ಟಿಂಗ್‌ಗೆ ಅದನ್ನು ಬಳಸಿದರೆ ಅದು ಅಪರಾಧವಾಗುತ್ತದೆ. ಕಾಯಿದೆಯನ್ನು ಪ್ರಶ್ನಿಸಿರುವ ಯಾವುದೇ ಅರ್ಜಿದಾರರ ವಿರುದ್ಧ ದೂರು ದಾಖಲಿಸಲಾಗಿಲ್ಲ ಎಂದ ನಾವದಗಿ ಅವರು ತಡೆಯಾಜ್ಞೆ ನೀಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದರು. “ಕಾಯಿದೆಯ ಸಿಂಧುತ್ವ ಪ್ರಶ್ನಿಸಿರುವುದು ಅಳುಕಿನಿಂದ ಅಥವಾ ಕಳಕಳಿಯಿಂದ ಅಲ್ಲ. ತಮ್ಮ ವಿರುದ್ಧ ಕ್ರಮಕೈಗೊಳ್ಳಲಾಗಿದೆಯೇ ಎಂಬುದನ್ನು ಅವರು (ಅರ್ಜಿದಾರರು) ಹೇಳಬೇಕು” ಎಂದರು.

ಇದಕ್ಕೆ ನ್ಯಾಯಾಲಯವು “ಗ್ಯಾಂಗ್ರೀನ್‌ ಪತ್ತೆಯಾಗುವವರೆಗೆ ಕಾಯುವ ಅಗತ್ಯವಿಲ್ಲ. ಶ್ರೇಯಾ ಸಿಂಘಾಲ್ ವರ್ಸಸ್‌ ಭಾರತ ಸರ್ಕಾರ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ನ ತೀರ್ಪಿನ ಪ್ರಕಾರ ನಾಗರಿಕರು ನ್ಯಾಯಾಲಯಗಳನ್ನು ಸಂಪರ್ಕಿಸಲು ಕಾಯಬೇಕಾಗಿಲ್ಲ" ಎಂದಿತ್ತು.

“ಆನ್‌ಲೈನ್‌ ಜೂಜಾಟದಿಂದ ಸಾಕಷ್ಟು ಮಂದಿ ಹಣ, ಜೀವ ಕಳೆದುಕೊಂಡಿದ್ದಾರೆ. ಇದನ್ನು ನಿಷೇಧಿಸುವುದಕ್ಕೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಮನವಿ ಸಲ್ಲಿಕೆಯಾಗಿದೆ. ಈ ಸಂಬಂಧ ಪೀಠವು ನಿಲುವು ತಿಳಿಸುವಂತೆ ರಾಜ್ಯ ಸರ್ಕಾರಕ್ಕೆ ಆದೇಶಿಸಿತ್ತು. ಅಂತೆಯೇ, ರಾಜ್ಯ ಸರ್ಕಾರ ಕಾನೂನು ಜಾರಿಗೊಳಿಸಲಿದೆ ಎಂದು ಪೀಠಕ್ಕೆ ತಿಳಿಸಲಾಗಿತ್ತು. ಬಳಿಕ ಕರ್ನಾಟಕ ಪೊಲೀಸ್‌ ತಿದ್ದುಪಡಿ ಕಾಯಿದೆ ಜಾರಿಗೊಳಿಸಲಾಗಿದೆ” ಎಂದು ಪೀಠಕ್ಕೆ ಎಜಿ ವಿವರಿಸಿದ್ದರು. ವಕೀಲ ಶ್ರೀಧರ್‌ ಪ್ರಭು ಅವರು ರಾಜ್ಯ ಸರ್ಕಾರ ಜಾರಿಗೊಳಿಸಿರುವ ಕಾನೂನನ್ನು ಸಮರ್ಥಿಸಿದ್ದರು.

ಮದ್ರಾಸ್‌ ಮತ್ತು ಕೇರಳ ಹೈಕೋರ್ಟ್‌ಗಳು ಈಗಾಗಲೇ ರಾಜ್ಯ ಸರ್ಕಾರ ಜಾರಿಗೊಳಿಸಿದ್ದ ಕಾನೂನುಗಳನ್ನು ಬದಿಗೆ ಸರಿಸಿ, ತೀರ್ಪು ನೀಡಿದೆ.