ತಮಿಳುನಾಡಿನ ಕರೂರಿನಲ್ಲಿ ನಟ ವಿಜಯ್ ಅವರ ರಾಜಕೀಯ ಪಕ್ಷ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಸೆಪ್ಟೆಂಬರ್ 27ರಂದು ನಡೆಸಿದ್ದ ರಾಜಕೀಯ ಸಮಾವೇಶದ ವೇಳೆ ನಟನ ಭಾಷಣ ಕೇಳಲು ದೊಡ್ಡಮಟ್ಟದಲ್ಲಿ ಜನಸಮೂಹ ಹರಿದುಬಂದ ಪರಿಣಾಮ 41 ಜನ ಸಾವನ್ನಪ್ಪಿದ್ದ ಪ್ರಕರಣವನ್ನು ಎಎಸ್‌ಐಟಿ ತನಿಖೆ ನಡೆಸುವಂತೆ ಮದ್ರಾಸ್ ಹೈಕೋರ್ಟ್ ಅಕ್ಟೋಬರ್ 3ರಂದು ಹೊರಡಿಸಿದ್ದ ಆದೇಶವನ್ನು ಟಿವಿಕೆ ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದೆ [ತಮಿಳಗ ವೆಟ್ರಿ ಕಳಗಂ ಮತ್ತು ಪಿಎಚ್ ದಿನೇಶ್ ನಡುವಣ ಪ್ರಕರಣ].
ರಾಜ್ಯ ಸರ್ಕಾರ ನಡೆಸಿದ ತನಿಖೆ ನಿರೀಕ್ಷಿತ ಮಟ್ಟದಲ್ಲಿಲ್ಲ ಎಂದಿದ್ದ ಎನ್ ಸೆಂಥಿಲ್ ಕುಮಾರ್ ಎಸ್‌ಐಟಿ ತನಿಖೆಗೆ ಆದೇಶಿಸಿದ್ದರು.
ಕಾಲ್ತುಳಿತದ ನಡುವೆ ವಿಜಯ್ ಅವರ ಬಸ್ ಡಿಕ್ಕಿ ಹೊಡೆದ ಎರಡು ಅಪಘಾತ ಪ್ರಕರಣಗಳಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಯಾವುದೇ ಕ್ರಿಮಿನಲ್ ಪ್ರಕರಣ ದಾಖಲಿಸಿಲ್ಲ ಎಂದು ಏಕ ಸದಸ್ಯ ಪೀಠ ಪ್ರಶ್ನಿಸಿತ್ತು.
ಅಲ್ಲದೆ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ದಾಖಲಾದ ಯಾವುದೇ ಎಫ್‌ಐಆರ್‌ನಲ್ಲಿ ವಿಜಯ್ ಹೆಸರಿರಲಿಲ್ಲ. ಆದರೆ ಹೈಕೋರ್ಟ್ ಆದೇಶದ ಬಳಿಕವಷ್ಟೇ ಎರಡು ಗುದ್ದೋಡಿದ ಪ್ರಕರಣಗಳಿಗೆ ಸಂಬಂಧಿಸಿದಂತೆ ವಿಜಯ್ ಅವರ ಪ್ರಚಾರ ವಾಹನದ ಚಾಲಕನ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಲಾಗಿತ್ತು ಎಂದು ವರದಿಯಾಗಿದೆ.
ರಾಜಕೀಯ ಸಮಾವೇಶಗಳ ವೇಳೆ ಪಾಲಿಸಬೇಕಾದ ಪ್ರಮಾಣಿತ ಕಾರ್ಯಾಚರಣಾ ವಿಧಾನ ಜಾರಿಗೆ ತರುವಂತೆ ಕೋರಿ ಸಲ್ಲಿಸಲಾದ ಅರ್ಜಿಗೆ ಸಂಬಂಧಿಸಿಂದಂತೆ ಹೈಕೋರ್ಟ್ ಅಕ್ಟೋಬರ್ 3ರಂದು ಆದೇಶ ಹೊರಡಿಸಿತ್ತು.
ತಾನು ಕಣ್ಣು ಮುಚ್ಚಿ ಮೂಕ ಪ್ರೇಕ್ಷಕನಾಗಿ ಉಳಿಯಲಾಗದು ಮತ್ತು ತನ್ನ ಸಾಂವಿಧಾನಿಕ ಜವಾಬ್ದಾರಿಗಳಿಂದ ನುಣುಚಿಕೊಳ್ಳಲಾಗದು ಎಂದು ನ್ಯಾಯಾಲಯ ಈ ವೇಳೆ ತಿಳಿಸಿತ್ತು.
ಕಾಲ್ತುಳಿತದ ನಂತರ ಟಿವಿಕೆ ನಾಯಕತ್ವ ತೋರಿದ ವರ್ತನೆಯನ್ನು ಹೈಕೋರ್ಟ್ ತೀವ್ರವಾಗಿ ಟೀಕಿಸಿತು.
ಏಕ ಸದಸ್ಯ ಪೀಠದ ಆದೇಶವನ್ನು ಟಿವಿಕೆ ಈಗ ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದ್ದು ವಕೀಲ ಯಶ್ ಎಸ್ ವಿಜಯ್ ಅವರ ಮೂಲಕ ಮೇಲ್ಮನವಿ ಸಲ್ಲಿಸಲಾಗಿದೆ.
ಕುತೂಹಲಕರ ಸಂಗತಿ ಎಂದರೆ ಮಧುರೈ ಪೀಠ ಪ್ರಕರಣ ಸಿಬಿಐಗೆ ವಹಿಸಲು ನಿರಾಕರಿಸಿದ ದಿನ ಸಂಜೆಯೇ ವಿಶೇಷ ತನಿಖಾ ತಂಡ ರಚಿಸಿ ಹೈಕೋರ್ಟ್ ಪ್ರಧಾನ ಪೀಠ ಆದೇಶ ಹೊರಡಿಸಿತ್ತು.
ಘಟನೆಯ ಕುರಿತು ತಮಿಳುನಾಡು ಪೊಲೀಸರ ತನಿಖೆ ಆರಂಭಿಕ ಹಂತದಲ್ಲಿದ್ದು ಸಿಬಿಐ ತನಿಖೆ ಕೋರಿದ ಅರ್ಜಿದಾರರು ಕಾಲ್ತುಳಿತ ಘಟನೆಯ ಸಂತ್ರಸ್ತರಲ್ಲ ಎಂಬುದನ್ನು ನ್ಯಾಯಮೂರ್ತಿಗಳಾದ ಎಂ ದಂಡಪಾಣಿ ಮತ್ತು ಎಂ ಜೋತಿರಾಮನ್ ಅವರಿದ್ದ ಮಧುರೈ ಪೀಠ ಹೇಳಿತ್ತು.
ಕಾಲ್ತುಳಿತಕ್ಕೊಳಗಾದ ವ್ಯಕ್ತಿಯ ತಂದೆಯೊಬ್ಬರು ತನಿಖೆಯನ್ನು ಸಿಬಿಐಗೆ ವರ್ಗಾಯಿಸುವಂತೆ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಅಕ್ಟೋಬರ್ 10 ರಂದು ಈ ಅರ್ಜಿಯನ್ನು ವಿಚಾರಣೆ ನಡೆಸಬಹುದು ಎಂದು ಸುಪ್ರೀಂ ಕೋರ್ಟ್ ನಿನ್ನೆತಿಳಿಸಿದೆ.
ಗಮನಾರ್ಹ ಅಂಶವೆಂದರೆ, ವಕೀಲ ಜಿ ಎಸ್ ಮಣಿ ಕೂಡ ಈಗ ಸುಪ್ರೀಂ ಕೋರ್ಟ್‌ನಲ್ಲಿ ಕಾಲ್ತುಳಿತದ ಬಗ್ಗೆ ಸಿಬಿಐ ತನಿಖೆ ಕೋರಿ ಅರ್ಜಿ ಸಲ್ಲಿಸಿದ್ದಾರೆ. ಮದ್ರಾಸ್ ಹೈಕೋರ್ಟ್‌ನ ವಿಭಾಗೀಯ ಪೀಠ ಅಕ್ಟೋಬರ್ 3ರಂದು ಅವರ ಅರ್ಜಿ ಸೇರಿದಂತೆ ವಿವಿಧ ಅರ್ಜಿಗಳನ್ನು ವಜಾಗೊಳಿಸಿತ್ತು.