
ತಮಿಳುನಾಡಿನ ಕರೂರಿನಲ್ಲಿ ನಡೆದ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷದ ರ‍್ಯಾಲಿ ವೇಳೆ ಸಂಭವಿಸಿದ್ದ ಕಾಲ್ತುಳಿತ ಪ್ರಕರಣ ಸುಪ್ರೀಂ ಕೋರ್ಟ್ ಅಂಗಳ ತಲುಪಿದ್ದು ಸಿಬಿಐ ತನಿಖೆ ನಿರಾಕರಿಸಿದ್ದ ಮದ್ರಾಸ್ ಹೈಕೋರ್ಟ್ ಆದೇಶದ ವಿರುದ್ಧ ಮಂಗಳವಾರ ಮೇಲ್ಮನವಿ ಸಲ್ಲಿಸಲಾಗಿದೆ.
ಬಿಜೆಪಿ ನಾಯಕಿ ಉಮಾ ಆನಂದನ್ ಸಲ್ಲಿಸಿದ್ದ ಮೇಲ್ಮನವಿಯನ್ನು ಸಿಜೆಐ ಬಿ ಆರ್ ಗವಾಯಿ ಅವರೆದುರು ಪ್ರಸ್ತಾಪಿಸಲಾಯಿತು. ಅವರು ಅಕ್ಟೋಬರ್ 10ರಂದು ಪ್ರಕರಣ ಪಟ್ಟಿ ಮಾಡಲು ಸಮ್ಮತಿಸಿದರು.
ತಮಿಳುನಾಡಿನ ಕರೂರಿನಲ್ಲಿ ನಟ ವಿಜಯ್ ಅವರ ರಾಜಕೀಯ ಪಕ್ಷ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಸೆಪ್ಟೆಂಬರ್ 27ರಂದು ನಡೆಸಿದ್ದ ರಾಜಕೀಯ ಸಮಾವೇಶದಲ್ಲಿ ಕಾಲ್ತುಳಿತ ಸಂಭವಿಸಿ 41 ಮಂದಿ ಮೃತಪಟ್ಟಿದ್ದರು. ಈ ಹಿನ್ನೆಲೆಯಲ್ಲಿ ವಿಜಯ್ ಹೊರತುಪಡಿಸಿ ವಿವಿಧ ಟಿವಿಕೆ ಕಾರ್ಯಕರ್ತರ ವಿರುದ್ಧ ಕೊಲೆಗೆ ಸಮನಲ್ಲದ ಅಪರಾಧಿಕ ನರಹತ್ಯೆ, ಸುರಕ್ಷತೆ ಕಾಯ್ದುಕೊಳ್ಳುವಲ್ಲಿ ವೈಫಲ್ಯ, ಜನಸಂದಣಿಯ ಪ್ರಮಾಣ ಮತ್ತು ಸ್ಥಳದ ವ್ಯವಸ್ಥೆ ಅಂದಾಜಿಸುವಲ್ಲಿ ಎಡವಿದ್ದಕ್ಕಾಗಿ ಎಫ್‌ಐಆರ್ ದಾಖಲಿಸಲಾಗಿತ್ತು. ಅಕ್ಟೋಬರ್ 3 ರಂದು ಮದ್ರಾಸ್ ಹೈಕೋರ್ಟ್ ಮಧುರೈ ಪೀಠ ಘಟನೆಯ ಬಗ್ಗೆ ಸಿಬಿಐ ತನಿಖೆಗೆ ಆದೇಶಿಸಲು ನಿರಾಕರಿಸಿತ್ತು.
ಘಟನೆಯ ಕುರಿತು ತಮಿಳುನಾಡು ಪೊಲೀಸರ ತನಿಖೆ ಆರಂಭಿಕ ಹಂತದಲ್ಲಿದ್ದು ಸಿಬಿಐ ತನಿಖೆ ಕೋರಿದ ಅರ್ಜಿದಾರರು ಕಾಲ್ತುಳಿತ ಘಟನೆಯ ಸಂತ್ರಸ್ತರಲ್ಲ ಎಂಬುದನ್ನು ನ್ಯಾಯಮೂರ್ತಿಗಳಾದ ಎಂ ದಂಡಪಾಣಿ ಮತ್ತು ಎಂ ಜೋತಿರಾಮನ್ ಅವರಿದ್ದ ಪೀಠ ತಿಳಿಸಿತ್ತು.
ಪ್ರಮಾಣಿತ ಕಾರ್ಯಾಚರಣಾ ವಿಧಾನ ರೂಪಿಸುವವರೆಗೆ ರಾಜ್ಯ ಅಥವಾ ರಾಷ್ಟ್ರೀಯ ಹೆದ್ದಾರಿಗಳ ಬಳಿ ಯಾವುದೇ ರ‍್ಯಾಲಿಗೆ ಅನುಮತಿ ನೀಡುವುದಿಲ್ಲ ಎಂಬ ರಾಜ್ಯ ಸರ್ಕಾರದ ವಾದವನ್ನು ಇದೇ ವೇಳೆ ನ್ಯಾಯಾಲಯ ದಾಖಲಿಸಿಕೊಂಡಿತ್ತು. ಸಿಬಿಐ ತನಿಖೆಗೆ ನೀಡಲು ನಿರಾಕರಿಸಿದ ನ್ಯಾಯಾಲಯದ ಆದೇಶ ಪ್ರಶ್ನಿಸಿ ಉಮಾ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ.
ಕುತೂಹಲಕರ ಸಂಗತಿ ಎಂದರೆ ಮಧುರೈ ಪೀಠ ಪ್ರಕರಣ ಸಿಬಿಐಗೆ ವಹಿಸಲು ನಿರಾಕರಿಸಿದ ದಿನ ಸಂಜೆ ವಿಶೇಷ ತನಿಖಾ ತಂಡ ರಚಿಸಿ ಹೈಕೋರ್ಟ್ ಪ್ರಧಾನ ಪೀಠ ಆದೇಶ ಹೊರಡಿಸಿತ್ತು.