ಸುದ್ದಿಗಳು

ಕೋವಿಡ್ ಹಿನ್ನೆಲೆಯಲ್ಲಿ ವಿಚಾರಣೆ ಮುಂದೂಡುವಂತೆ ಬಿಷಪ್ ಮುಲಕ್ಕಲ್ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಕೇರಳ ಹೈಕೋರ್ಟ್

Bar & Bench

ಕೋವಿಡ್- 19 ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ವಿಚಾರಣೆ ಮುಂದೂಡುವಂತೆ ಕೋರಿದ್ದ ಅತ್ಯಾಚಾರ ಆರೋಪಿ ಕ್ಯಾಥೊಲಿಕ್ ಬಿಷಪ್ ಫ್ರಾಂಕೊ ಮುಲಕ್ಕಲ್ ಅವರ ಮನವಿಯನ್ನು ಗುರುವಾರ ಕೇರಳ ಹೈಕೋರ್ಟ್ ವಜಾಗೊಳಿಸಿದೆ.

ಸಾಂಕ್ರಾಮಿಕ ರೋಗದ ನಡುವೆಯೂ ವಿಚಾರಣೆ ಮುಂದುವರೆಸಬೇಕಾದ ಅಗತ್ಯವನ್ನು ನ್ಯಾ. ವಿ ಜಿ ಅರುಣ್ ಒತ್ತಿ ಹೇಳಿದರು.

ಕೋವಿಡ್ - 19 ಸಾಂಕ್ರಾಮಿಕ ರೋಗ ವ್ಯಾಪಕವಾಗಿ ಹರಡಿದ ಹಿನ್ನೆಲೆಯಲ್ಲಿ ಅರ್ಜಿದಾರರ ಪರವಾಗಿ ವಕೀಲರು ವ್ಯಕ್ತಪಡಿಸಿದ ಆತಂಕ ಸೂಕ್ತವಾಗಿದೆ. ಆದರೆ, ಈ ವಾಸ್ತವ ಒಪ್ಪಿಕೊಂಡು ನಮ್ಮ ವ್ಯವಹಾರಗಳಲ್ಲಿ ಮುಂದುವರೆಯುವುದು ಅನಿವಾರ್ಯ. ಯಾವುದೇ ಸಂದರ್ಭದಲ್ಲಿ , ಸಾಂಕ್ರಾಮಿಕ ರೋಗದ ಕಾರಣದಿಂದ ನ್ಯಾಯ ವಿತರಣಾ ವ್ಯವಸ್ಥೆಯ ಚಕ್ರಗಳು ತಟಸ್ಥವಾಗಲು ಸಾಧ್ಯವಿಲ್ಲ.
ಕೇರಳ ಹೈಕೋರ್ಟ್

ಪ್ರಕರಣದ ಹಿರಿಯ ವಕೀಲರು ಹಿರಿಯ ನಾಗರಿಕರಾಗಿದ್ದು, ವಯೋಸಂಬಂಧಿ ಕಾಯಿಲೆಗಳಿಂದ ಬಳಲುತ್ತಿದ್ದಾರೆ. ವಿಚಾರಣೆಗಾಗಿ ಅವರು ಎರ್ನಾಕುಲಂನಿಂದ ಕೊಟ್ಟಾಯಂಗೆ ಪ್ರಯಾಣಿಸಬೇಕಿರುವುದರಿಂದ ಪ್ರಕರಣದ ವಿಚಾರಣೆ ಮುಂದೂಡುವಂತೆ ಕೋರಲಾಗಿತ್ತು. ಇದನ್ನು ಕೊಟ್ಟಾಯಂ ನ್ಯಾಯಾಲಯ ಪುರಸ್ಕರಿಸಿ ಎರಡು ವಾರಗಳ ಕಾಲ ವಿಚಾರಣೆ ಮುಂದೂಡಿತ್ತು. ಬಳಿಕ ಇನ್ನಷ್ಟು ಕಾಲ ವಿಚಾರಣೆ ಮುಂದೂಡಲು ಕೋರಲಾಗಿತ್ತು. ಆದರೆ ಕೋರ್ಟ್ ಇದನ್ನು ಪುರಸ್ಕರಿಸಿರಲಿಲ್ಲ. ಇದನ್ನು ಪ್ರಶ್ನಿಸಿ ಮುಲಕ್ಕಲ್ ಅವರು ಹೈಕೋರ್ಟ್ ಮೊರೆ ಹೋಗಿದ್ದರು.

ತಮ್ಮ ಮೇಲೆ ಎರಡು ವರ್ಷಗಳ ಕಾಲ ಅತ್ಯಾಚಾರ ನಡೆಸಲಾಗಿದೆ ಎಂದು ಮುಲಕ್ಕಲ್ ವಿರುದ್ಧ ಕ್ರೈಸ್ತ ಸನ್ಯಾಸಿನಿ 2018ರಲ್ಲಿ ಕೊಟ್ಟಾಯಂ ಪೊಲೀಸರಿಗೆ ದೂರು ನೀಡಿದ್ದ ಹಿನ್ನೆಲೆಯಲ್ಲಿ ವಿಶೇಷ ತನಿಖಾ ತಂಡ ಅವರನ್ನು ಬಂಧಿಸಿತ್ತು.