ಸುದ್ದಿಗಳು

ಕೇರಳ ಸರ್ಕಾರದ ಲೈಫ್ ಮಿಷನ್ ಯೋಜನೆ ಕುರಿತ ಸಿಬಿಐ ತನಿಖೆಗೆ ತಡೆ ನೀಡಲು ಕೇರಳ ಹೈಕೋರ್ಟ್ ನಕಾರ; ಸಿಇಒಗೆ ಇಲ್ಲ ವಿನಾಯ್ತಿ

Bar & Bench

ಲೈಫ್ ಮಿಷನ್ ಪ್ರಕರಣದಲ್ಲಿ ಕೇಂದ್ರೀಯ ತನಿಖಾ ದಳ (ಸಿಬಿಐ) ನಡೆಸುತ್ತಿರುವ ತನಿಖೆಗೆ ತಡೆ ನೀಡಲು ಕೇರಳ ಹೈಕೋರ್ಟ್ ನ್ಯಾಯಮೂರ್ತಿ ವಿ ಜಿ ಅರುಣ್ ಅವರಿದ್ದ ಏಕಸದಸ್ಯ ಪೀಠ ನಿರಾಕರಿಸಿದೆ.

ಲೈಫ್ ಮಿಷನ್ ಎಂಬುದು ಮನೆಯಿಲ್ಲದವರಿಗೆ, ಅದರಲ್ಲಿಯೂ ವಿಶೇಷವಾಗಿ 2018ರ ಪ್ರವಾಹದ ವೇಳೆ ಮನೆ ಕಳೆದುಕೊಂಡವರಿಗೆ ವಸತಿ ಸೌಕರ್ಯ ಕಲ್ಪಿಸಲು ಕೇರಳ ಸರ್ಕಾರ ಕೈಗೊಂಡ ಯೋಜನೆ.

ಅರಬ್ ದೇಶಗಳಿಂದ ಹಣ ಸ್ವೀಕರಿಸಿದ ಆರೋಪದಡಿಯಲ್ಲಿ 2010ರ ವಿದೇಶಿ ನಿಯಂತ್ರಣ ಕಾಯ್ದೆ (ಎಫ್‌ಸಿಆರ್‌ಎ) ಉಲ್ಲಂಘಿಸಿರುವುದಾಗಿ ಸಿಬಿಐ, 'ಲೈಫ್ ಮಿಷನ್' ಯೋಜನೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಯು ವಿ ಜೋಸ್ ವಿರುದ್ಧ ಎಫ್‌ಐಆರ್‌ ದಾಖಲಿಸಿದ್ದು ಇದಕ್ಕೆ ತಡೆ ನೀಡಲು ಕೋರ್ಟ್ ನಿರಾಕರಿಸಿತು.

ತನಿಖೆಗೆ ಸಂಬಂಧಿಸಿದಂತೆ ದಾಖಲಾದ ಎಫ್‌ಐಆರ್‌ನಲ್ಲಿ, ಎಫ್‌ಸಿಆರ್‌ಎ ಮಾನದಂಡಗಳನ್ನು ಉಲ್ಲಂಘಿಸಿ ಯುನಿಟಾಕ್ ಬಿಲ್ಡರ್ಸ್ ಮತ್ತು ಸೇನ್ ಕನ್ಸ್ಟ್ರಕ್ಷನ್‌ ಸಂಸ್ಥೆಗಳಿಗೆ ರೆಡ್ ಕ್ರೆಸೆಂಟ್ ಹಾಗೂ ಸಂಯುಕ್ತ ಅರಬ್ ಸಂಸ್ಥಾನ (ಯುಎಇ), ವರ್ಗಾಯಿಸಿದ ಹಣವನ್ನು ರಾಜ್ಯ ಸರ್ಕಾರ ಪಡೆದುಕೊಂಡಿದೆ ಎಂದು ಸಿಬಿಐ ಆರೋಪಿಸಿದೆ.

ರೆಡ್ ಕ್ರೆಸೆಂಟ್, ಅರಬ್ ಸಂಯುಕ್ತ ಸಂಸ್ಥಾನ (ಯುಎಇ) ಮತ್ತು ಖಾಸಗಿ ಗುತ್ತಿಗೆದಾರರಾದ ಯುನಿಟಾಕ್ ಮತ್ತು ಸೇನ್ ಕನ್ಸ್ಟ್ರಕ್ಷನ್ಸ್ ನಡುವಿನ ಒಪ್ಪಂದದಲ್ಲಿ ರಾಜ್ಯ ಸರ್ಕಾರದ ಯಾವುದೇ ಪಾತ್ರವಿಲ್ಲ ಎಂದು ಜೋಸ್ ಪರ ಹಿರಿಯ ವಕೀಲ ಕೆ.ವಿ.ವಿಶ್ವನಾಥನ್ ವಾದ ಮಂಡಿಸಿದರು.

ಕೇರಳ ಸರ್ಕಾರ ಮತ್ತು ಯುಎಇ ನಡುವೆ ಒಪ್ಪಂದ ಏರ್ಪಟ್ಟ ಬಳಿಕವಷ್ಟೇ ಹಣದ ವಹಿವಾಟು ನಡೆದಿರುವುದು ಸ್ಪಷ್ಟ ಎಂದು ಸಿಬಿಐ ಪರ ವಕೀಲ ಸಸ್ತಮಂಗಲಂ ಅಜಿತ್‌ಕುಮಾರ್ ವಾದಿಸಿದರು.

ಅಕ್ಟೋಬರ್ 8ಕ್ಕೆ ವಿಚಾರಣೆ ಮುಂದೂಡಲಾಗಿದೆ.