Kerala High Court, Malayalam 
ಸುದ್ದಿಗಳು

ದೇಶದಲ್ಲಿಯೇ ಮೊದಲ ಬಾರಿಗೆ ಪ್ರಾದೇಶಿಕ ಭಾಷೆಯಲ್ಲಿ ತೀರ್ಪುಗಳನ್ನು ಪ್ರಕಟಿಸಲಾರಂಭಿಸಿದ ಕೇರಳ ಹೈಕೋರ್ಟ್

ತನ್ನ ತೀರ್ಪುಗಳನ್ನು ಪ್ರಾದೇಶಿಕ ಭಾಷೆಯಲ್ಲಿ ಪ್ರಕಟಿಸಿದ ದೇಶದ ಮೊದಲ ಹೈಕೋರ್ಟ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಕೇರಳ ಉಚ್ಚ ನ್ಯಾಯಾಲಯ.

Bar & Bench

ದೇಶದಲ್ಲೇ ಪ್ರಥಮ ಬಾರಿಗೆ ಕೇರಳ ಹೈಕೋರ್ಟ್‌ ತನ್ನ ಎರಡು ತೀರ್ಪುಗಳನ್ನು ರಾಜ್ಯಭಾಷೆಯಾದ ಮಲಯಾಳಂನಲ್ಲಿ ಪ್ರಕಟಿಸಿದೆ.

ಕಳೆದ ಜನವರಿಯಲ್ಲಿ ಮುಖ್ಯ ನ್ಯಾಯಮೂರ್ತಿ ಎಸ್ ಮಣಿಕುಮಾರ್ ಮತ್ತು ನ್ಯಾಯಮೂರ್ತಿ ಶಾಜಿ ಪಿ ಚಾಲಿ ಅವರಿದ್ದ ವಿಭಾಗೀಯ ಪೀಠ ನೀಡಿದ್ದ ತೀರ್ಪುಗಳನ್ನು ಇತ್ತೀಚೆಗೆ ಮಲಯಾಳಂ ಭಾಷೆಯಲ್ಲಿ ಪ್ರಕಟಿಸಲಾಗಿದ್ದು ಆ ತೀರ್ಪುಗಳು ಉಚ್ಚ ನ್ಯಾಯಾಲಯದ ಜಾಲತಾಣದಲ್ಲಿ ಲಭ್ಯ ಇವೆ.

ನವೆಂಬರ್ 2022 ರಲ್ಲಿ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ ವೈ ಚಂದ್ರಚೂಡ್‌ ಅವರು ಅಧಿಕಾರ ವಹಿಸಿಕೊಂಡಾಗಿನಿಂದ ಪ್ರಾದೇಶಿಕ ಭಾಷೆಗಳಲ್ಲಿ ಹೈಕೋರ್ಟ್‌ಗಳು ಮತ್ತು ಸುಪ್ರೀಂ ಕೋರ್ಟ್‌ಗಳ ತೀರ್ಪು ಪ್ರಕಟಿಸುವಂತೆ ಕಾರ್ಯಾಂಗ ಮತ್ತು ನ್ಯಾಯಾಂಗದ ಕಡೆಯಿಂದ ಸಾಮೂಹಿಕ ಒತ್ತಡವಿದೆ ಎಂದಿದ್ದರು.

ಈ ತೀರ್ಪುಗಳನ್ನು ನೀಡಲಾದ ವೇಳೆಯಲ್ಲಿಯೇ  (ಅಂದರೆ ಜನವರಿಯಲ್ಲಿ) ಸಿಜೆಐ ಚಂದ್ರಚೂಡ್‌ ಅವರು ʼಸುಪ್ರೀಂ ಕೋರ್ಟ್‌ ತೀರ್ಪುಗಳನ್ನು ಪ್ರಾದೇಶಿಕ ಭಾಷೆಗಳಲ್ಲಿ ಪ್ರಕಟಿಸುವ ಪ್ರಕ್ರಿಯೆ ಆರಂಭವಾಗಿದೆʼ ಎಂದಿದ್ದರು.

ಇದರ ಮೊದಲ ಹೆಜ್ಜೆಯಾಗಿ, ಗಣರಾಜ್ಯೋತ್ಸವದಂದು ಒಡಿಯಾ, ಗಾರೊ ಮತ್ತಿತರ ಪ್ರಾದೇಶಿಕ ಭಾಷೆಗಳಲ್ಲಿ ಸುಪ್ರೀಂ ಕೋರ್ಟ್‌ನ 1,091 ತೀರ್ಪುಗಳನ್ನು ಪ್ರಕಟಿಸಲಾಗಿತ್ತು.

ಅದಕ್ಕೂ ಒಂದು ದಿನ ಮೊದಲು ಅಂದರೆ ಜನವರಿ 25ರಂದು ದೆಹಲಿ ಹೈಕೋರ್ಟ್‌ನ ಆನ್‌ಲೈನ್ ಇ- ಇನ್‌ಸ್ಪೆಕ್ಷನ್‌ ಸಾಫ್ಟ್‌ವೇರ್ ಉದ್ಘಾಟನಾ ಸಮಾರಂಭದಲ್ಲಿ  ಸಿಜೆಐ ಅವರು ಸುಪ್ರೀಂಕೋರ್ಟ್ ತೀರ್ಪುಗಳನ್ನು ಪ್ರಾದೇಶಿಕ ಭಾಷೆಗಳಿಗೆ ಭಾಷಾಂತರಿಸಲು ನ್ಯಾಯಮೂರ್ತಿ ಎ ಎಸ್ ಓಕಾ ಅವರ ನೇತೃತ್ವದ ಸಮಿತಿ ರಚಿಸಲಾಗಿದೆ ಎಂದು ಹೇಳಿದ್ದರು.

ಸಮಿತಿಯ ಸದಸ್ಯರನ್ನಾಗಿ ಕರ್ನಾಟಕ ಹೈಕೋರ್ಟ್‌ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್, ನ್ಯಾಷನಲ್‌ ಇನ್ಫರ್ಮಾಟಿಕ್ಸ್‌ ಸೆಂಟರ್‌ನ ಶರ್ಮಿಷ್ಠಾ, ಐಐಟಿ ದೆಹಲಿ ಮಿತೇಶ್‌ ಕಪ್ರಾ, ಏಕ್‌ ಸ್ಟೆಪ್‌ ಪ್ರತಿಷ್ಠಾನದ ವಿವೇಕ್‌ ರಾಘವನ್‌, ಅಗಾಮಿ ಸಂಸ್ಥೆಯ ಸುಪ್ರಿಯಾ ಶಂಕರನ್‌ ಅವರನ್ನು ನೇಮಿಸಿತ್ತು.

ಈಗ ಈ ಗುರಿ ಸಾಧಿಸಿದ ಮೊದಲ ಹೈಕೋರ್ಟ್‌ ಎಂಬ ಹೆಗ್ಗಳಿಕೆಗೆ ಕೇರಳ ಹೈಕೋರ್ಟ್‌ ಪಾತ್ರವಾಗಿದೆ.

[ಮಲಯಾಳಂ ಭಾಷೆಯಲ್ಲಿ ಪ್ರಕಟಿಸಲಾಗಿರುವ ತೀರ್ಪುಗಳನ್ನು ಇಲ್ಲಿ ಗಮನಿಸಿ]

Kotak_Mahindra_Private_Ltd__v_Jose_Karyan___Ors____Malayalam.pdf
Preview
Shafeeq_Alunkal_v_District_Collector___Malayalam.pdf
Preview