Temple  Image for representative purpose
ಸುದ್ದಿಗಳು

ದೇವಾಲಯಗಳಲ್ಲಿ ಹಿಂದೂಯೇತರರಿಗೆ ಸಂಪೂರ್ಣ ನಿಷೇಧ ವಿಧಿಸುವ ನಿಯಮ: ಪರಿಶೀಲನೆಗೆ ಕೇರಳ ಹೈಕೋರ್ಟ್ ಸೂಚನೆ

ವಿಭಿನ್ನ ಧರ್ಮ, ಜಾತಿ, ಉಪಜಾತಿ ಅಥವಾ ಸಮುದಾಯಗಳ ನಡುವೆ ಕಲಹ ಅಥವಾ ಅಸಾಮರಸ್ಯ ಉಂಟುಮಾಡುವ ಸಾಧನಗಳಾಗಿ ಕಾನೂನು, ನಿಯಮ ಮತ್ತು ವಿಧಿಗಳು ರೂಪಾಂತರಗೊಳ್ಳಲು ಅವಕಾಶ ನೀಡಬಾರದು ಎಂದಿದೆ ಪೀಠ.

Bar & Bench

ಕಾಲಾನುಗತವಾಗಿ ಬದಲಾಗುತ್ತಿರುವ ಪರಿಸ್ಥಿತಿಗಳು ಮತ್ತು ಸಂವಿಧಾನಾತ್ಮಕ ತತ್ವಗಳಿಗೆ ಅನುಗುಣವಾಗಿ ಹಿಂದೂ ದೇವಾಲಯಗಳಲ್ಲಿ ಹಿಂದೂಯೇತರರಿಗೆ ಪ್ರವೇಶವನ್ನು ನಿಷೇಧಿಸುವ ನಿಯಮ ಪರಿಶೀಲನೆಗೆ ಒಳಗಾಗುವ ಅಗತ್ಯವಿದೆ ಎಂದು ಕೇರಳ ಹೈಕೋರ್ಟ್‌ ಈಚೆಗೆ ಹೇಳಿದೆ [ಸನಿಲ್‌ ನಾರಾಯಣನ್‌ ನಂಬೂದರಿ ಮತ್ತು ಕೇರಳ ಹೈಕೋರ್ಟ್‌ ಇನ್ನಿತರರ ನಡುವಣ ಪ್ರಕರಣ].

ಧಾರ್ಮಿಕ ಸ್ಥಳಗಳನ್ನು ನಿಯಂತ್ರಿಸುವ ಕಾನೂನುಗಳು ಸಮಾಜದಲ್ಲಿ ಧಾರ್ಮಿಕ, ಜಾತಿ ಅಥವಾ ಸಮುದಾಯ ಮಟ್ಟದಲ್ಲಿ ಅಸಮರಸ್ಯ ಮತ್ತು ಕಲಹಕ್ಕೆ ಕಾರಣವಾಗಬಾರದು ಎಂದು ನ್ಯಾಯಮೂರ್ತಿಗಳಾದ ರಾಜಾ ವಿಜಯರಾಘವನ್ ವಿ ಮತ್ತು ಕೆ.ವಿ. ಜಯಕುಮಾರ್ ಅವರಿದ್ದ ವಿಭಾಗೀಯ ಪೀಠ ಎಚ್ಚರಿಕೆ ನೀಡಿದೆ.

“ವಿಭಿನ್ನ ಧರ್ಮಗಳು, ಜಾತಿಗಳು, ಉಪಜಾತಿಗಳು ಅಥವಾ ಸಮುದಾಯಗಳ ನಡುವೆ ಕಲಹ ಅಥವಾ ಅಸಾಮರಸ್ಯ ಉಂಟುಮಾಡುವ ಸಾಧನಗಳಾಗಿ ಕಾನೂನು, ನಿಯಮ ಮತ್ತು ವಿಧಿಗಳು ರೂಪಾಂತರಗೊಳ್ಳಲು ಅವಕಾಶ ನೀಡಬಾರದು” ಎಂದು ಅದು ಹೇಳಿದೆ.

ಶ್ರೀಕೃಷ್ಣ ಜಯಂತಿ ಆಚರಣೆ ಸಂದರ್ಭದಲ್ಲಿ ಅಡೂರು ಶ್ರೀ ಪಾರ್ಥಸಾರಥಿ ದೇವಾಲಯಕ್ಕೆ ಅಲ್ಲಿನ ಅರ್ಚಕರ ಅನುಮತಿಯೊಂದಿಗೆ ಇಬ್ಬರು ಕ್ರೈಸ್ತ ಪಾದ್ರಿಗಳು ಪ್ರವೇಶಿಸಿದುದನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯ ವಿಚಾರಣೆ ವೇಳೆ ನ್ಯಾಯಾಲಯ ಈ ವಿಚಾರ ತಿಳಿಸಿದೆ.

ಕ್ರೈಸ್ತ ಪಾದ್ರಿಗಳು ಹಕ್ಕಿನ ಆಧಾರದ ಮೇಲಲ್ಲ ಬದಲಿಗೆ, ಅನುಮತಿಯ ಆಧಾರದ ಮೇಲೆ ದೇಗುಲ ಪ್ರವೇಶಿಸಿರುವುದರಿಂದ, 1965ರ ಕೇರಳ ಹಿಂದೂ ಸಾರ್ವಜನಿಕ ಆರಾಧನಾ ಸ್ಥಳಗಳ (ಪ್ರವೇಶಕ್ಕೆ ಅನುಮತಿ) ಕಾಯಿದೆ ಅಥವಾ ಅದರಡಿ ರೂಪಿಸಲಾದ ನಿಯಮಗಳ ಉಲ್ಲಂಘನೆ ಆಗುವುದಿಲ್ಲ ಎಂದು ಪೀಠ ತೀರ್ಪು ನೀಡಿದೆ.

ಕಾಯಿದೆಯ ಉದ್ದೇಶ ಎಲ್ಲಾ ವರ್ಗಗಳ ಹಿಂದೂಗಳಿಗೆ ದೇವಾಲಯ ಪ್ರವೇಶವನ್ನು ಖಚಿತಪಡಿಸುವುದಾಗಿದ್ದು, ಹಿಂದೂಗಳಲ್ಲದವರ ಪ್ರವೇಶವನ್ನು ನಿಷೇಧಿಸುವ ಯಾವುದೇ ಸ್ಪಷ್ಟ ವಿಧಿ ಅದರಲ್ಲಿ ಇಲ್ಲ ಎಂದಿದೆ. ಆದರೆ ಹಿಂದೂಗಳಲ್ಲದವರ ಮೇಲಿನ ಸಂಪೂರ್ಣ ನಿಷೇಧವು ಕೇವಲ 1965ರ ನಿಯಮಗಳಲ್ಲಿನ ನಿಯಮ 3(a) ಯಲ್ಲಿ ಮಾತ್ರ ಕಾಣಿಸಿಕೊಳ್ಳುತ್ತದೆ ಎಂದ ಅದು ಉಪಕಾನೂನುಗಳು ಮೂಲ ಕಾಯ್ದೆಯ ವ್ಯಾಪ್ತಿಯನ್ನು ಮೀರಬಾರದು ಎಂಬ ಸುಪ್ರೀಂ ಕೋರ್ಟ್ ತೀರ್ಪುಗಳನ್ನು ಉಲ್ಲೇಖಿಸಿದೆ.

ಈ ಹಿನ್ನೆಲೆಯಲ್ಲಿ, ಸೆಕ್ಷನ್‌ 3(ಎ) ಅನ್ನು ಅದರ ಇಂದಿನ ರೂಪದಲ್ಲೇ ಮುಂದುವರಿಸಬೇಕೋ ಅಥವಾ ದೇವಸ್ವಂ ಮಂಡಳಿ, ಅರ್ಚಕರು, ಧಾರ್ಮಿಕ ಪಂಡಿತರು ಮತ್ತಿತರರೊಂದಿಗೆ ಸಮಾಲೋಚನೆ ನಡೆಸಿ ತಿದ್ದುಪಡಿ ಮಾಡಬೇಕೋ ಎಂಬುದನ್ನು ಸರ್ಕಾರ ಪರಿಗಣಿಸಬೇಕೆಂದು ಕೇರಳ ಹೈಕೋರ್ಟ್ ಸೂಚಿಸಿದೆ.

[ಆದೇಶದ ಪ್ರತಿ]

Sanil_Narayanan_Nampoothiri_v_State_of_Kerala___ors.pdf
Preview