Sabarimala Temple 
ಸುದ್ದಿಗಳು

ಪೊಟ್ಟುಕುತಲ್ ಆಚರಣೆಗಾಗಿ ಶಬರಿಮಲೆ ಯಾತ್ರಾರ್ಥಿಗಳಿಗೆ ಶುಲ್ಕ: ದೇವಸ್ವಂ ಮಂಡಳಿಗೆ ಕೇರಳ ಹೈಕೋರ್ಟ್ ಪ್ರಶ್ನೆ

ಯಾವುದೇ ರೀತಿಯಲ್ಲಿ ಯಾತ್ರಾರ್ಥಿಗಳ ಶೋಷಣೆಗೆ ಅವಕಾಶ ನೀಡುವುದಿಲ್ಲ ಎಂದು ನ್ಯಾಯಾಲಯ ಒತ್ತಿ ಹೇಳಿದೆ.

Bar & Bench

ಶಬರಿಮಲೆ ದೇವಸ್ಥಾನಕ್ಕೆ ಭೇಟಿ ನೀಡುವ ಯಾತ್ರಾರ್ಥಿಗಳ ಮೇಲೆ ಪೊಟ್ಟುಕುತಲ್ ( ವಿಭೂತಿ, ಸಿಂಧೂರ, ಅಥವಾ ಚಂದನ ಲೇಪಿಸುವುದು) ವಿಧಿವಿಧಾನ ಆಚರಣೆಗೆ ಶುಲ್ಕ ವಿಧಿಸುತ್ತಿರುವುದಕ್ಕೆ ಕೇರಳ ಹೈಕೋರ್ಟ್‌ ಶುಕ್ರವಾರ ಅಸಮಾಧಾನ ವ್ಯಕ್ತಪಡಿಸಿದೆ [ಮನೋಜ್ ಎಸ್ ನಾಯರ್ ಮತ್ತಿತರರು ಹಾಗೂ ತಿರುವಾಂಕೂರು ದೇವಸ್ವಂ ಮಂಡಳಿ ನಡುವಣ ಪ್ರಕರಣ].

ಯಾತ್ರಾರ್ಥಿಗಳ ಮುಖ್ಯ ಬೇಸ್ ಕ್ಯಾಂಪ್ ಆಗಿರುವ ಏರುಮೇಲಿಯಲ್ಲಿ ಪ್ರತಿ ವ್ಯಕ್ತಿಯಿಂದ  ₹ 10 ಸಂಗ್ರಹಿಸಲು ಖಾಸಗಿ ಸಂಸ್ಥೆಗಳಿಗೆ  ಟೆಂಡರ್ ನೀಡುವ  ಅಧಿಸೂಚನೆ  ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿಗಳಾದ ಅನಿಲ್ ಕೆ ನರೇಂದ್ರನ್ ಮತ್ತು ಪಿ ಜಿ ಅಜಿತ್‌ಕುಮಾರ್ ಅವರಿದ್ದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

ಅನಧಿಕೃತ ವ್ಯಕ್ತಿಗಳು ಪೊಟ್ಟುಕುತಲ್‌ಗಾಗಿ ಯಾತ್ರಾರ್ಥಿಗಳಿಂದ ಅಧಿಕ ಶುಲ್ಕ ವಸೂಲಿ ಮಾಡುವುದನ್ನು ತಡೆಯಲೆಂದು ಈ ಕ್ರಮಕೈಗೊಂಡಿರುವುದಾಗಿ ಮಂಡಳಿಯ ಸ್ಥಾಯಿ ವಕೀಲರು ನ್ಯಾಯಾಲಯಕ್ಕೆ ತಿಳಿಸಿದರು .ಆದರೆ ಯಾತ್ರಾರ್ಥಿಗಳ ಶೋಷಣೆಗೆ ಯಾವುದೇ ರೀತಿಯಲ್ಲಿ ಅವಕಾಶ ನೀಡುವುದಿಲ್ಲ ಎಂದು ಪೀಠ ಮೌಖಿಕವಾಗಿ ಹೇಳಿತು.

ಕಳೆದ ಆಗಸ್ಟ್‌ನಲ್ಲಿ ಮಂಡಳಿ ಹೊರಡಿಸಿದ್ದ ಟೆಂಡರ್ ಅಧಿಸೂಚನೆಯಲ್ಲಿನ ಎರಡು ಷರತ್ತುಗಳನ್ನು ರದ್ದುಗೊಳಿಸುವಂತೆ ಕೋರಿ ಇಬ್ಬರು ಶಬರಿಮಲೆ ಅಯ್ಯಪ್ಪ  ಭಕ್ತರು ಅರ್ಜಿ ಸಲ್ಲಿಸಿದ್ದರು.  ಪೊಟ್ಟುಕುತಲ್ ಟೆಂಡರ್‌ ಕೂಡ ಆ ಷರತ್ತುಗಳಲ್ಲಿ ಒಂದಾಗಿತ್ತು.

ಮುಂಬರುವ ಮಕರವಿಳಕ್ಕು, ಮೇದ ವಿಷು ಋತುಗಳಲ್ಲಿ ದೇವಸ್ಥಾನ ಯಾತ್ರಾರ್ಥಿಗಳಿಂದ ತುಂಬಿರುತ್ತದೆ ಎಂಬ ನಿರೀಕ್ಷೆಯಲ್ಲಿ ಈ ಅಧಿಸೂಚನೆ ಹೊರಡಿಸಲಾಗಿದೆ. ಆದರೆ ಹಿಂದೆ  ಮಂಡಳಿ ಇಂತಹ ಅಧಿಸೂಚನೆ ಹೊರಡಿಸುತ್ತಿರಲಿಲ್ಲ  ಎಂದು ಅರ್ಜಿದಾರರು ತಿಳಿಸಿದ್ದರು.

ಯಾತ್ರಾರ್ಥಿಗಳ ಅತ್ಯಗತ್ಯವಾದ ಈ ಸಾಂಪ್ರದಾಯಿಕ ಆಚರಣೆಗೆ ಹಣ ನೀಡುವಂತೆ ಒತ್ತಾಯಿಸುವುದು ತಿರುವಾಂಕೂರು ಕೊಚ್ಚಿನ್ ಹಿಂದೂ ಧಾರ್ಮಿಕ ಸಂಸ್ಥೆಗಳ ಕಾಯಿದೆ ಪ್ರಕಾರ ಧಾರ್ಮಿಕ ಸ್ವಾತಂತ್ರ್ಯದ ಹಕ್ಕು ಮತ್ತು ಮಂಡಳಿಯ ಕರ್ತವ್ಯಗಳ ಉಲ್ಲಂಘನೆಯಾಗಿದೆ ಎಂದು ಅವರು ವಾದಿಸಿದ್ದರು.

ಶುಕ್ರವಾರ (ಅಕ್ಟೋಬರ್ 4) ನ್ಯಾಯಾಲಯ ಪೊಟ್ಟುಕುತಲ್ ಅತ್ಯಗತ್ಯ ಧಾರ್ಮಿಕ ಆಚರಣೆಯೇ ಎಂಬುದನ್ನು ತಿಳಿಸುವಂತೆ ಮಂಡಳಿಯ ಸ್ಥಾಯಿ ವಕೀಲರನ್ನು ಕೇಳಿದ್ದು  ಮುಂದಿನ ವಿಚಾರಣೆ  ಅಕ್ಟೋಬರ್ 8ರಂದು ನಡೆಯಲಿದೆ.