Wayanad district and Kerala High Court 
ಸುದ್ದಿಗಳು

ವಯನಾಡ್ ಪರಿಹಾರ ಧನ ಕುರಿತು ಅಸ್ಪಷ್ಟತೆ: ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಕೇರಳ ಹೈಕೋರ್ಟ್

ಪ್ರತಿದಿನ ಕೇಂದ್ರ ಹಣ ನೀಡಿಲ್ಲ ಎಂಬ ಸುದ್ದಿ ಕಾಣುತ್ತೇವೆ. ಈ ಕೆಸರೆರಚಾಟ ಮುಂದುವರೆಯುತ್ತಲೇ ಇರುತ್ತದೆ. ಎಸ್‌ಡಿಆರ್‌ಎಫ್‌ ಹಣ ವಿನಿಯೋಗ ಕುರಿತಂತೆ ಕಿಂಚಿತ್ತಾದರೂ ಅರಿಯಿರಿ. ನಂತರ ಉಳಿದ ಸಹಾಯಕ್ಕಾಗಿ ಕೇಂದ್ರದ ಬಳಿ ತೆರಳಬಹುದು ಎಂದಿತು ಪೀಠ.

Bar & Bench

ಕೇರಳದ ವಯನಾಡಿನಲ್ಲಿ ಇತ್ತೀಚೆಗೆ ಸಂಭವಿಸಿದ ವಿನಾಶಕಾರಿ ಭೂಕುಸಿತಕ್ಕೆ ಸಂಬಂದಧಿಸಿದಂತೆ ಪರಿಹಾರ ಕಾರ್ಯ ಕೈಗೊಳ್ಳಲು ರಾಜ್ಯ ವಿಪತ್ತು ಪರಿಹಾರ ನಿಧಿಯಲ್ಲಿ ಉಳಿದಿರುವ ಹಣವೆಷ್ಟುಎಂಬುದನ್ನ ಕೇರಳ ಸರ್ಕಾರ ಸ್ಪಷ್ಟಪಡಿಸುತ್ತಿಲ್ಲ ಎಂದು ಕೇರಳ ಹೈಕೋರ್ಟ್‌ ಶನಿವಾರ ತರಾಟೆಗೆ ತೆಗೆದುಕೊಂಡಿದೆ ಕೇರಳದಲ್ಲಿ ನೈಸರ್ಗಿಕ ವಿಕೋಪ ತಡೆ ಮತ್ತು ನಿರ್ವಹಣೆ ಕುರಿತ ಸ್ವಯಂ ಪ್ರೇರಿತ ಪ್ರಕರಣ].

ಎಸ್‌ಡಿಆರ್‌ಎಫ್ ನಿಧಿಯಲ್ಲಿ ಎಷ್ಟು ಉಳಿದಿದೆ ಎಂಬುದರ ಕುರಿತು ನಿಖರವಾದ ವಿವರ ಇಲ್ಲದಿದ್ದರೆ ಕೇಂದ್ರ ಸರ್ಕಾರದಿಂದ ವಯನಾಡ್‌ಗೆ ಹಣಕಾಸು ನೆರವು ದೊರೆಯುವುದು ಇನ್ನಷ್ಟು ವಿಳಂಬವಾಗಬಹುದು ಎಂಬುದನ್ನು ನ್ಯಾಯಮೂರ್ತಿಗಳಾದ ಎಕೆ ಜಯಶಂಕರನ್ ನಂಬಿಯಾರ್ ಮತ್ತು ಮುಹಮ್ಮದ್ ನಿಯಾಸ್ ಸಿಪಿ ತಿಳಿಸಿದರು.

ಇದರಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ  ಸರೆರಚಾಟ ಇನ್ನಷ್ಟು ಮುಂದುವರೆಯಲಿದ್ದು ಸಾವು ನೋವಿನ ಸಹಿತ ಹಾನಿಯಾಗಿರುವುದರಿಂದ ವಯನಾಡಿನ ಜನ ತೊಂದರೆ ಅನುಭವಿಸುತ್ತಲೇ ಇರುತ್ತಾರೆ ಎಂದು ನ್ಯಾಯಾಲಯ ಬೇಸರ ವ್ಯಕ್ತಪಡಿಸಿದೆ.

ಪರಿಹಾರ ಬೇಗ ದೊರೆಯುವಂತೆ ನಾವು ನೋಡಿಕೊಳ್ಳಬೇಕಿದೆ. ಜೀವಹಾನಿಯೂ ಸಂಭವಿಸಿದೆ ಎಂಬುದನ್ನು ನೀವು ಅರ್ಥಮಾಡಿಕೊಳ್ಳಬೇಕು. ಜುಲೈನಲ್ಲೇ ಭೂಕುಸಿತ ಸಂಭವಿಸಿದ್ದರೂ ಇನ್ನೂ ಪರಿಹಾರ ಧನದ ಕುರಿತು ಸ್ಪಷ್ಟತೆ ಇಲ್ಲ. ಪ್ರತಿದಿನ ಕೇಂದ್ರ ಸರ್ಕಾರ ಹಣ ನೀಡಿಲ್ಲ ಎಂಬ ಸುದ್ದಿಯನ್ನು ಕಾಣುತ್ತೇವೆ. ಈ ಕೆಸರೆರಚಾಟ ಮುಂದುವರೆಯುತ್ತಲೇ ಇರುತ್ತದೆ ಎಂದು ನ್ಯಾಯಾಲಯ ವಿವರಿಸಿತು.

ಕಳೆದ ಜುಲೈ 30ರಂದು ಉಂಟಾಗಿದ್ದ ತೀವ್ರ ಭೂಕುಸಿತದಿಂದಾಗಿ ತೊಂದರೆ ಅನುಭವಿಸಿದ್ದ ವಯನಾಡಿನಲ್ಲಿ ಪರಿಹಾರ ಕಾರ್ಯದ ಮೇಲೆ ನಿಗಾ ಇಡುವ ಉದ್ದೇಶದಿಂದ ಸ್ವಯಂಪ್ರೇರಿತವಾಗಿ ದಾಖಲಿಸಿಕೊಂಡಿರುವ ಅರ್ಜಿಯ ವಿಚಾರಣೆ ವೇಳೆ ನ್ಯಾಯಾಲಯ ಅಸಮಾಧಾನ ಹೊರಹಾಕಿತು.

 ಪ್ರಕರಣದ ಹಿಂದಿನ ವಿಚಾರಣೆಗಳ ವೇಳೆ ವಯನಾಡ್‌ಗೆ ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಯಿಂದ (ಎನ್‌ಡಿಆರ್‌ಎಫ್) ಹಣ ಮಂಜೂರು ಮಾಡಿಸಲು ಕೇಂದ್ರ ಸರ್ಕಾರ ವಿಳಂಬ ಧೋರಣೆ ಅನುಸರಿಸುತ್ತಿದೆ ಎಂದು ಕೇರಳ ಸರ್ಕಾರ ದೂರಿತ್ತು.