ವಯನಾಡ್ ಭೂಕುಸಿತ: ಪರಿಹಾರ ಧನ ಏಕೆ ವಿತರಿಸಿಲ್ಲ ಎಂದು ಕೇಂದ್ರಕ್ಕೆ ಕೇರಳ ಹೈಕೋರ್ಟ್ ಪ್ರಶ್ನೆ

ಕರ್ನಾಟಕ ಮತ್ತು ತಮಿಳುನಾಡಿನಂತಹ ನೆರೆಯ ರಾಜ್ಯಗಳಿಗೆ ವಿಪತ್ತು ಪರಿಹಾರ ನಿಧಿಯಿಂದ ಪರಿಹಾರ ಧನ ಒದಗಿಸಲಾಗಿದೆ ಎಂಬ ವಿಚಾರವನ್ನು ಪೀಠ ಗಮನಿಸಿತು.
Wayanad district and Kerala High Court
Wayanad district and Kerala High Court
Published on

ವಯನಾಡ್‌ ಭೂಕುಸಿತ ದುರಂತಕ್ಕೆ ಸಂಬಂಧಿಸಿದಂತೆ ಕೇರಳಕ್ಕೆ ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿ ಮತ್ತು ಪ್ರಧಾನ ಮಂತ್ರಿ ಪರಿಹಾರ ನಿಧಿಯಿಂದ ಹಣ ವಿತರಿಸಲು ಕೇಂದ್ರ ಸರ್ಕಾರ ವಿಳಂಬ ಮಾಡುತ್ತಿರುವ ಬಗ್ಗೆ ಕೇರಳ ಹೈಕೋರ್ಟ್ ಶುಕ್ರವಾರ ಕಳವಳ ವ್ಯಕ್ತಪಡಿಸಿದೆ [ಸ್ವಯಂ ಪ್ರೇರಿತ ಪ್ರಕರಣ ಮತ್ತು ಕೇರಳ ಸರ್ಕಾರ ಇನ್ನಿತರರ ನಡುವಣ ಪ್ರಕರಣ].

ಕರ್ನಾಟಕ ಮತ್ತು ತಮಿಳುನಾಡಿನಂತಹ ನೆರೆಯ ರಾಜ್ಯಗಳಿಗೆ ವಿಪತ್ತು ಪರಿಹಾರ ನಿಧಿಯಿಂದ ಪರಿಹಾರ ಧನ ಒದಗಿಸಲಾಗಿದೆ ಎಂಬ ವಿಚಾರವನ್ನು ನ್ಯಾಯಮೂರ್ತಿ ಎ ಕೆ ಜಯಶಂಕರನ್ ನಂಬಿಯಾರ್ ಮತ್ತು ನ್ಯಾಯಮೂರ್ತಿ ಶ್ಯಾಮ್ ಕುಮಾರ್ ವಿ ಎಂ ಅವರಿದ್ದ ವಿಭಾಗೀಯ ಪೀಠ ಗಮನಿಸಿತು. ಈ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಪರಿಹಾರ ನಿಧಿ ವಿತರಿಸುವುದನ್ನು ಪರಿಗಣಿಸಬೇಕು ಎಂದು ಅದು ಸೂಚಿಸಿತು.

Also Read
ಅನುಕಂಪ ಕಳೆದುಕೊಂಡಿದ್ದೇವೆ: ವಯನಾಡ್‌ ಭೂದುರಂತದ ಪರಿಹಾರದ ಹಣದಲ್ಲಿ ಇಎಂಐ ಕಡಿತಕ್ಕೆ ಕೇರಳ ಹೈಕೋರ್ಟ್‌ ಕಿಡಿ

ಭೂಕುಸಿತದಿಂದ ತೀವ್ರ ಹಾನಿ ಮತ್ತು ನಷ್ಟ ಅನುಭವಿಸಿದ್ದರೂ ಕೇರಳಕ್ಕೆ ಇನ್ನೂ ಯಾವುದೇ ಪರಿಹಾರ ಧನ ಒದಗಿಸಿಲ್ಲ ಎಂದು ಅಮಿಕಸ್ ಕ್ಯೂರಿ (ಪ್ರಕರಣದಲ್ಲಿ ನ್ಯಾಯಾಲಯಕ್ಕೆ ಸಹಾಯ ಮಾಡುವ ವಕೀಲ) ರಂಜಿತ್ ಥಂಪನ್ ಗಮನ ಸೆಳೆದ ಹಿನ್ನೆಲೆಯಲ್ಲಿ ನ್ಯಾಯಾಲಯ ಈ ವಿಚಾರ ತಿಳಿಸಿತು.

ಕೇಂದ್ರ ಸರ್ಕಾರದ ಪರವಾಗಿ ಹಾಜರಾದ ಹೆಚ್ಚುವರಿ ಸಾಲಿಸಿಟರ್ ಜನರಲ್, ಅಮಿಕಸ್ ನೀಡಿದ ಸಲಹೆಗಳಿಗೆ ಪ್ರತಿಕ್ರಿಯಿಸಲು ಸಮಯಾವಕಾಶ ಕೋರಿದರು. ಹೀಗಾಗಿ ಅಕ್ಟೋಬರ್ 18ರೊಳಗೆ ವಿವರವಾದ ಪ್ರತಿಕ್ರಿಯೆ ನೀಡುವಂತೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಎನ್‌ಡಿಎಂಎ) ಮತ್ತು ಕೇಂದ್ರ ಸರ್ಕಾರಕ್ಕೆ ನ್ಯಾಯಾಲಯ ಸೂಚಿಸಿದೆ

ವಯನಾಡ್ ಭೂಕುಸಿತದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ವಿಪತ್ತು ನಿರ್ವಹಣೆ ಮತ್ತುನಿಯಂತ್ರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ  ಸ್ವಯಂ ಪ್ರೇರಿತ ಮೊಕದ್ದಮೆ ದಾಖಲಿಸಿಕೊಂಡಿತ್ತು.

Also Read
ವಯನಾಡ್‌ ಭೂಕುಸಿತ: ಸಂತ್ರಸ್ತರ ಪುನರ್ವಸತಿ, ಮುಂಜಾಗರೂಕತಾ ಕ್ರಮದ ಕುರಿತು ಪ್ರತಿ ಶುಕ್ರವಾರ ಕೇರಳ ಹೈಕೋರ್ಟ್‌ ವಿಚಾರಣೆ

ಕಳೆದ ಜುಲೈ 30ರ ನಸುಕಿನಲ್ಲಿ ಸಂಭವಿಸಿದ್ದ ಭೂಕುಸಿತದಿಂದಾಗಿ ವಯನಾಡ್‌ ಜಿಲ್ಲೆಯ ಮುಂಡಕ್ಕೈ ಮತ್ತು ಚೂರಲ್‌ಮಲ ಗ್ರಾಮಗಳು ನಾಮಾವೇಶಷವಾಗಿ 420 ಮಂದಿ ಪ್ರಾಣ ತೊರೆದಿದ್ದರು. 100 ಕ್ಕೂ ಹೆಚ್ಚು ಜನ ನಾಪತ್ತೆಯಾಗಿದ್ದರು.

ಇಂದಿನ ವಿಚಾರಣೆ ಸಂದರ್ಭದಲ್ಲಿ, ವಯನಾಡ್ ದುರಂತದ ಸಂತ್ರಸ್ತರ ಅಹವಾಲುಗಳ ವಿಚಾರ ಮತ್ತು ಅಧಿಕಾರಿಗಳ ಪರಿಹಾರ  ವಿತರಣೆ ಕುರಿತಂತೆ ಪೀಠ  ಪ್ರಸ್ತಾಪಿಸಿತು. ಪರಿಹಾರ ಧನಕ್ಕೆ ಸಂಬಂಧಿಸಿದಂತೆ ಎರಡು ವಾರಗಳಿಗೂ ಹೆಚ್ಚು ಕಾಲ ಇತ್ಯರ್ಥವಾಗದೇ ಉಳಿದ ದೂರುಗಳ ಪರಿಷ್ಕೃತ ಪಟ್ಟಿ ನೀಡಬೇಕು. ವಿಪತ್ತು ಪೀಡಿತ ಪ್ರದೇಶಗಳ್ಲಲಿ ಅಕ್ರಮ ಗಣಿಗಾರಿಕೆ ತಡೆಯಲು ರಾಜ್ಯ, ಜಿಲ್ಲೆ ಮತ್ತು ಸ್ಥಳೀಯ ಮಟ್ಟದಲ್ಲಿ ಜಾಗೃತ ಮತ್ತು ಮೇಲ್ವಿಚಾರಣಾ ಸಮಿತಿ ರಚಿಸಬೇಕು ಎಂದು ಅದು ತಿಳಿಸಿತು. ಅಕ್ಟೋಬರ್ 11ಕ್ಕೆ ವಿಚಾರಣೆ ಮುಂದೂಡಲಾಗಿದೆ.

Kannada Bar & Bench
kannada.barandbench.com