Kerala High Court 
ಸುದ್ದಿಗಳು

ರಾಜಕೀಯ ಪಕ್ಷಗಳ ಅಕ್ರಮ ಫಲಕ ತೆರವು: ಆದೇಶ ನಿರ್ಲಕ್ಷಿಸಿದ ರಾಜ್ಯ ಸರ್ಕಾರಕ್ಕೆ ಕೇರಳ ಹೈಕೋರ್ಟ್ ತರಾಟೆ

ತಿರುವನಂತಪುರದೆಲ್ಲೆಡೆ ಇರುವ ಪ್ರಭಾವಿ ಪಕ್ಷಗಳ ಫಲಕಗಳನ್ನು ತೆಗೆದುಹಾಕುವ ಆದೇಶ ಪಾಲಿಸಲು ವಿಫಲವಾದರೆ ಸ್ಥಳೀಯ ಅಧಿಕಾರಿಗಳ ವಿರುದ್ಧ ನ್ಯಾಯಾಂಗ ನಿಂದನೆ ಕ್ರಮ ಕೈಗೊಳ್ಳಲಾಗುವುದು ಎಂದು ಪೀಠ ಎಚ್ಚರಿಕೆ ನೀಡಿದೆ.

Bar & Bench

ತಿರುವನಂತಪುರ ರಾಜಧಾನಿಯಲ್ಲಿ ರಾಜಕೀಯ ಪಕ್ಷಗಳು ಹಾಕಿರುವ ಅಕ್ರಮ ಬ್ಯಾನರ್‌ಗಳು, ಹೋರ್ಡಿಂಗ್‌ಗಳನ್ನು (ಫಲಕಗಳು) ತೆಗೆದು ಹಾಕುವಂತೆ ನ್ಯಾಯಾಲಯ ಸ್ಪಷ್ಟ ನಿರ್ದೇಶನ ನೀಡಿದ್ದರೂ ಕಣ್ಣು ಮುಚ್ಚಿ ಕುಳಿತ ಅಧಿಕಾರಿಗಳನ್ನು ಕೇರಳ ಹೈಕೋರ್ಟ್‌ ಬುಧವಾರ ತರಾಟೆಗೆ ತೆಗೆದುಕೊಂಡಿದೆ  [ಸೇಂಟ್ ಸ್ಟೀಫನ್ಸ್ ಮಲಂಕಾರ ಕ್ಯಾಥೋಲಿಕ್ ಚರ್ಚ್ ಕಟ್ಟಣಂ ಗ್ರಾಮ ಮತ್ತು ಕೇರಳ ಸರ್ಕಾರ ಇನ್ನಿತರರ ನಡುವಣ ಪ್ರಕರಣ ].

ಅಧಿಕಾರದಲ್ಲಿರುವವರು ಮತ್ತು ಆಡಳಿತ ನಡೆಸುವವರೇ ರಾಜಕೀಯ ಹೋರ್ಡಿಂಗ್‌ಗಳನ್ನು ಅಳವಡಿಸಿರುವಾಗ ಇಂತಹ ಕಾನೂನು ಉಲ್ಲಂಘನೆಯನ್ನು ಸಹಿಸಿಕೊಳ್ಳುವುದಾದರೂ ಹೇಗೆ ಎಂದು ನ್ಯಾ. ದೇವನ್‌ ರಾಮಚಂದ್ರನ್‌ ಸರ್ಕಾರಿ ವಕೀಲರನ್ನು ಪ್ರಶ್ನಿಸಿದರು. ಆಡಳಿತದಲ್ಲಿರುವರವರಿಗೇ ಕಾನೂನಿನ ಬಗ್ಗೆ ಕಾಳಜಿ ಇಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ತಿರುವನಂತಪುರದೆಲ್ಲೆಡೆ ಇರುವ ಪ್ರಭಾವಿ ಪಕ್ಷಗಳ ಫಲಕಗಳನ್ನು ತೆಗೆದುಹಾಕುವ ತನ್ನ ಹಿಂದಿನ ಆದೇಶ  ಪಾಲಿಸಲು ವಿಫಲವಾದರೆ ಸ್ಥಳೀಯ ಅಧಿಕಾರಿಗಳ ವಿರುದ್ಧ ನ್ಯಾಯಾಂಗ ನಿಂದನೆ ಮೊಕದ್ದಮೆ ದಾಖಲಿಸಿಕೊಳ್ಳಲಾಗುವುದು ಎಂದು ಪೀಠ ಎಚ್ಚರಿಕೆ ನೀಡಿದೆ.

ತಿರುವನಂತಪುರ ನಗರವನ್ನು ಈ ತೊಂದರೆಯಿಂದ ಮುಕ್ತಗೊಳಿಸುವುದು ನ್ಯಾಯಾಲಯದ ಸಂಕಲ್ಪವಾಗಿದೆ. ಅಧಿಕಾರಿಗಳು ಅಸಮರ್ಪಕವಾಗಿ ನಡೆದುಕೊಂಡರೆ ಈ ನ್ಯಾಯಾಲಯ ನ್ಯಾಯಾಂಗ ನಿಂದನೆ ಕ್ರಮ ಕೈಗೊಳ್ಳುವುದು ಅನಿವಾರ್ಯವಾಗುತ್ತದೆ ಮತ್ತು ದಂಡ ವಸೂಲಿ ಮಾಡುವ ವೈಯಕ್ತಿಕ ಜವಾಬ್ದಾರಿ ವಹಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿತು.

ರಸ್ತೆಗಳಲ್ಲಿನ ಅಕ್ರಮ ಜಾಹೀರಾತು ಫಲಕಗಳು, ಫ್ಲೆಕ್ಸ್‌ಗಳು ಮತ್ತು ಬ್ಯಾನರ್‌ಗಳ ತೆರವಿಗೆ ಸಂಬಂಧಿಸಿದ ಪ್ರಕರಣದ ವಿಚಾರಣೆ ನ್ಯಾಯಾಲಯದಲ್ಲಿ ನಡೆಯಿತು.

ಕೇರಳ ಪುರಸಭೆ ನಿಯಮಗಳ ಅಡಿ ಪ್ರತಿ ಅಕ್ರಮ ಫಲಕಗಳಿಗೆ ₹ 5,000 ದಂಡ ವಿಧಿಸುವಂತೆ ನ್ಯಾಯಾಲಯ ಅಧಿಕಾರಿಗಳಿಗೆ ಸೂಚಿಸಿತ್ತು. ತಿರುವನಂತಪುರದಲ್ಲಿ ಅತಿ ಹೆಚ್ಚು ಫಲಕಗಳನ್ನು ಅಳವಡಿಸಿರುವ ಬಗ್ಗೆ ನಿನ್ನೆ ಅಮಿಕಸ್‌ ಕ್ಯೂರಿ ಅವರು ಮತ್ತೊಂದು ವರದಿ ನೀಡಿದ್ದರು.

ನಿಯಮ ಉಲ್ಲಂಘಿಸಿದ್ದರೂ ಕ್ರಮ ಕೈಗೊಳ್ಳದ ಅಧಿಕಾರಿಗಳಿಗೆ ಛೀಮಾರಿ ಹಾಕಿದ ನ್ಯಾಯಾಲಯ ಅಧಿಕಾರದಲ್ಲಿರುವವರು ಕಾನೂನು ಜಾರಿಗೊಳಿಸುವ ಬದಲು ಸಮಸ್ಯೆಗೆ ಮತ್ತಷ್ಟು ಕೊಡುಗೆ ನೀಡುವ ಮೂಲಕ ಕಳಪೆ ಮಾದರಿ ಅನುಸರಿಸುತ್ತಿದ್ದಾರೆ ಎಂದಿತು.

ನಗರದ ಫಲಕಗಳ ಕುರಿತು ತನಿಖೆ ನಡೆಸಿ ವಿವರವಾದ ವರದಿ ಸಲ್ಲಿಸುವಂತೆ ತಿರುವನಂತಪುರ ಪಾಲಿಕೆಯ ಸ್ಥಾಯಿ ವಕೀಲರಿಗೆ ನ್ಯಾಯಾಲಯ ಸೂಚಿಸಿತು. ವರದಿ ಸಲ್ಲಿಸಲು ವಕೀಲರು ಒಂದು ವಾರದ ಕಾಲಾವಕಾಶ ಕೋರಿದರು. ಪ್ರಕರಣದ ಮುಂದಿನ ವಿಚಾರಣೆ ಅಕ್ಟೋಬರ್ 16, 2024ಕ್ಕೆ ನಿಗದಿಯಾಗಿದೆ.