ಸುದ್ದಿಗಳು

ಲಕ್ಷದ್ವೀಪದಲ್ಲಿ ಮುದ್ರಾಂಕ ಶುಲ್ಕ ಹೆಚ್ಚಳಕ್ಕೆ ಮಧ್ಯಂತರ ತಡೆ ನೀಡಿದ ಕೇರಳ ಹೈಕೋರ್ಟ್

ಭೂಮಿ ಪರಭಾರೆಗೆ ಸ್ತ್ರೀಯರಿಗೆ ಶೇ.6, ಗಂಡು ಮತ್ತು ಹೆಣ್ಣಿನ ಜಂಟಿ ಒಡೆತನದಲ್ಲಿರುವ ಭೂಮಿಗೆ ಶೇ.7 ಹಾಗೂ ಇತರರಿಗೆ ಶೇ.8ರಷ್ಟು ಮುದ್ರಾಂಕ ಶುಲ್ಕ ಹೆಚ್ಚಿಸಲಾಗಿದೆ. ಈ ಮೊದಲು ಇದು ಎಲ್ಲರಿಗೂ ಶೇ.1ರಷ್ಟು ಮಾತ್ರ ಇತ್ತು.

Bar & Bench

ಭೂಮಿ ಪರಭಾರೆಗಾಗಿ ವಿಧಿಸಲಾಗುವ ಮುದ್ರಾಂಕ ಶುಲ್ಕ ಹೆಚ್ಚಿಸಿ ಲಕ್ಷದ್ವೀಪ ಆಡಳಿತ ಹೊರಡಿಸಿರುವ ಅಧಿಸೂಚನೆಗೆ ಕೇರಳ ಹೈಕೋರ್ಟ್‌ ಗುರುವಾರ ಮಧ್ಯಂತರ ತಡೆ ನೀಡಿದೆ (ವಕೀಲ ಮೊಹಮ್ಮದ್‌ ಸಾಲಿಹ್‌ ಪಿ ಎಂ ಮತ್ತು ಕೇಂದ್ರ ಸರ್ಕಾರ ಮತ್ತಿತರರ ನಡುವಣ ಪ್ರಕರಣ).

ಈ ಸಂಬಂಧ ಲಕ್ಷದ್ವೀಪ ಆಡಳಿತಕ್ಕೆ ನೋಟಿಸ್‌ ಜಾರಿ ಮಾಡಿರುವ ನ್ಯಾಯಮೂರ್ತಿ ರಾಜ ವಿಜಯರಾಘನ್‌ ವಿ ಅವರು ಎರಡು ವಾರಗಳವರೆಗೆ ಅಧಿಸೂಚನೆ ಜಾರಿಯಾಗದಂತೆ ಮಧ್ಯಂತರ ಆದೇಶ ಹೊರಡಿಸಿದ್ದಾರೆ.

ಭೂಮಿ ಪರಭಾರೆಗೆ ಸ್ತ್ರೀಯರಿಗೆ ಶೇ.6 ಗಂಡು ಮತ್ತು ಹೆಣ್ಣಿನ ಜಂಟಿ ಒಡೆತನಕ್ಕೆ ಶೇ.7 ಹಾಗೂ ಇತರರಿಗೆ ಶೇ.8ರಷ್ಟು ಮುದ್ರಾಂಕ ಶುಲ್ಕ ಹೆಚ್ಚಿಸಿದೆ. ಈ ಮೊದಲು ಇದು ಎಲ್ಲರಿಗೂ ಶೇ.1ರಷ್ಟು ಇತ್ತು.

ಮೂರು ಭಿನ್ನ ವರ್ಗಗಳಿಗೆ ಭಿನ್ನ ದರದ ಸುಂಕ ವಿಧಿಸಿರುವುದನ್ನು ನ್ಯಾಯಮೂರ್ತಿಗಳು ಈ ಸಂದರ್ಭದಲ್ಲಿ ಪ್ರಶ್ನಿಸಿದರು. ಅಲ್ಲದೆ ಈ ವರ್ಗೀಕರಣಕ್ಕೆ ಯಾವುದಾದರೂ ಸಮರ್ಥನೆ ಇದೆಯೇ ಎಂದು ತಿಳಿಸಲು ಸೂಚಿಸಿದರು.

“ನೀವು ಇಲ್ಲಿಗೆ ಬಂದು ಇಲ್ಲಿ ವಾಸಿಸುತ್ತಿರುವ ಮೂಲಭೂತವಾಗಿ ಪರಿಶಿಷ್ಟ ಪಂಗಡಕ್ಕೆ ಸೇರಿರುವ ವ್ಯಕ್ತಿಗಳಿಗೆ ಮುದ್ರಾಂಕ ಶುಲ್ಕ ವಿಧಿಸುತ್ತೀರಿ. ನೀವು ಮುದ್ರಾಂಕ ಶುಲ್ಕ ಹೇರಿರುವುದನ್ನು ಯಾವ ರೀತಿಯಲ್ಲಿ ಸಮರ್ಥಿಸಬಹುದು? ಸ್ತ್ರೀಯರಿಗೆ ಶೇ.6 ಗಂಡು ಮತ್ತು ಹೆಣ್ಣಿನ ಜಂಟಿ ಒಡೆತನಕ್ಕೆ ಶೇ.7 ಹಾಗೂ ಇತರರಿಗೆ ಶೇ.8ರಷ್ಟು?” ಎಂದು ಪೀಠ ಪ್ರಶ್ನಿಸಿತು.

ಅಧಿಸೂಚನೆಗೆ ಜಿಲ್ಲಾಧಿಕಾರಿ ಸಹಿ ಇರುವುದನ್ನು ಗಮನಿಸಿದ ನ್ಯಾಯಾಲಯ “ಸಕ್ಷಮ ಪ್ರಾಧಿಕಾರದ ಅನುಮೋದನೆಯಿಂದ ಇದನ್ನು ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಹೇಗೆ ಹೇಳಬಹುದು?” ಎಂದು ಪ್ರಶ್ನಿಸಿತು.

ಇತ್ತೀಚೆಗೆ ಲಕ್ಷದ್ವೀಪದಲ್ಲಿ ಜಾರಿಗೊಳಿಸಲಾದ ಆದೇಶಗಳಲ್ಲಿ ಒಂದು ಬಗೆಯ ವಿನ್ಯಾಸ ಕಂಡುಬರುತ್ತಿದೆ ಎಂದು ಕೂಡ ನ್ಯಾಯಮೂರ್ತಿ ವಿಜಯರಾಘವನ್‌ ತಿಳಿಸಿದರು.

ಸರ್ಕಾರವು ಈ ಎಲ್ಲಾ ಆದೇಶಗಳನ್ನು ರವಾನಿಸಬೇಕು ಎಂದು ಕಾನೂನಿರುವಾಗ ಕೆಲ ಆದೇಶಗಳನ್ನು ಜಿಲ್ಲಾಧಿಕಾರಿಗಳು ಹೊರಡಿಸುತ್ತಾರೆ, ಕೆಲವನ್ನು ವಿಭಾಗ ಅಭಿವೃದ್ಧಿ ಅಧಿಕಾರಿಗಳು ಹೊರಡಿಸುತ್ತಿದ್ದಾರೆ ಎಂದು ಪೀಠವು ಅಸಮಾಧಾನ ವ್ಯಕ್ತಪಡಿಸಿತು.

ಲಕ್ಷದ್ವೀಪ ಆಡಳಿತ ಜಾರಿಗೆ ತಂದಿರುವ ಅಧಿಸೂಚನೆಯನ್ನು ಪ್ರಶ್ನಿಸಿ ಅಲ್ಲಿನ ನಿವಾಸಿಯೊಬ್ಬರು ಅರ್ಜಿ ಸಲ್ಲಿಸಿದ್ದರು. ಆಡಳಿತ ತನ್ನ ವ್ಯಾಪ್ತಿ ಮೀರಿ ಆದೇಶ ಹೊರಡಿಸಿದ್ದು ಇದು ಸ್ವೇಚ್ಛೆಯಿಂದ ಕೂಡಿದೆ, ಅಸಾಂವಿಧಾನಿಕವಾಗಿದ್ದು ಸಂವಿಧಾನದತ್ತವಾಗಿ ದೊರೆತ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸುತ್ತದೆ ಎಂದು ತಿಳಿಸಲಾಗಿತ್ತು. ಅರ್ಜಿದಾರರ ಪರ ವಕೀಲ ಸೈಬಿ ಜೋಸ್‌ ಕಿಡಂಗೂರ್‌ ಅವರು 1899ರ ಭಾರತೀಯ ಮುದ್ರಾಂಕ ಕಾಯಿದೆಯ ಸೆಕ್ಷನ್ 9ರ ನಿಬಂಧನೆ ಆಧರಿಸಿ ತಮ್ಮ ಪ್ರಾಥಮಿಕ ವಾದ ಮಂಡಿಸಿದರು.