ದೆಹಲಿ ಹೈಕೋರ್ಟ್
ದೆಹಲಿ ಹೈಕೋರ್ಟ್ 
ಸುದ್ದಿಗಳು

ಕೇರಳ ನರ್ಸ್‌ಗೆ ಗಲ್ಲು: ಕುಟುಂಬ ಯೆಮನ್‌ಗೆ ತೆರಳಲು ಅನುಮತಿಸಬಹುದೇ ಎಂದು ಕೇಂದ್ರಕ್ಕೆ ದೆಹಲಿ ಹೈಕೋರ್ಟ್ ಪ್ರಶ್ನೆ

Bar & Bench

ಯೆಮೆನ್‌ನಲ್ಲಿ ಮರಣದಂಡನೆಗೆ ಗುರಿಯಾಗಿರುವ ಕೇರಳದ ನರ್ಸ್ ನಿಮಿಷಾ ಪ್ರಿಯಾ ಅವರ ಜೀವ ಉಳಿಸುವುದಕ್ಕಾಗಿ ಆಕೆಯ ಕುಟುಂಬ ಯೆಮನ್ ಅಥವಾ ಯಾವುದೇ ನೆರೆಯ ದೇಶಕ್ಕೆ ಪ್ರಯಾಣಿಸಿ ಪರಿಹಾರ ಧನ (ಬ್ಲಡ್‌ ಮನಿ) ಪಾವತಿಗಾಗಿ ಮಾತುಕತೆ ನಡೆಸಲು ಅನುಮತಿ ನೀಡಬಹುದೇ ಎಂದು ಡಿಸೆಂಬರ್ 4ರೊಳಗೆ ನ್ಯಾಯಾಲಯಕ್ಕೆ ತಿಳಿಸುವಂತೆ ದೆಹಲಿ ಹೈಕೋರ್ಟ್ ಶನಿವಾರ ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ.

ಪ್ರಕರಣವನ್ನು ತುರ್ತಾಗಿ ವಿಚಾರಣೆ ನಡೆಸುವಂತೆ ಮನವಿ ಸಲ್ಲಿಸಿದಾಗ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಮನಮೋಹನ್, ನ್ಯಾಯಮೂರ್ತಿ ಮನ್ಮೀತ್ ಪ್ರೀತಮ್ ಸಿಂಗ್ ಅರೋರಾ ಅವರು ಶನಿವಾರ ಮಧ್ಯಾಹ್ನ ಪ್ರಕರಣ ಕೈಗೆತ್ತಿಕೊಂಡರು.

ಯೆಮನ್‌ಗೆ ಪ್ರಯಾಣಿಸಲು ಅನುಮತಿ ನೀಡುವಂತೆ ಮಾಡಿದ್ದ ಮನವಿಯನ್ನು ಸರ್ಕಾರ ಡಿಸೆಂಬರ್ 1ರಂದು (ಶುಕ್ರವಾರ) ತಿರಸ್ಕರಿಸಿದೆ. ಇದರಿಂದ ತಮ್ಮ ಮಗಳಿಗೆ ಯಾವುದೇ ಕ್ಷಣದಲ್ಲಿ ಮರಣದಂಡನೆ ವಿಧಿಸಬಹುದು ಎಂದು ನಿಮಿಷಾ ಪ್ರಿಯಾ ಅವರ ತಾಯಿ ಪ್ರೇಮಕುಮಾರಿ ನ್ಯಾಯಾಲಯಕ್ಕೆ ವಕೀಲರ ಮೂಲಕ ತಿಳಿಸಿದರು.

ಗಲ್ಲು ಶಿಕ್ಷೆ ವಿರುದ್ಧ ನಿಮಿಷಾ ಪ್ರಿಯಾ ಸಲ್ಲಿಸಿದ್ದ ಮೇಲ್ಮನವಿಯನ್ನು ಯೆಮೆನ್ ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ ಎಂದು ನವೆಂಬರ್ 14 ರಂದು ಕೇಂದ್ರ ಸರ್ಕಾರದ ವಕೀಲರು ಹೈಕೋರ್ಟ್‌ಗೆ ಮಾಹಿತಿ ನೀಡಿದ್ದರು. ನಂತರ, ಯೆಮನ್‌ಗೆ ಪ್ರಯಾಣಿಸಲು ಪ್ರಿಯಾ ಅವರ ಪೋಷಕರು ಸಲ್ಲಿಸಿರುವ ಮನವಿ ಪರಿಗಣಿಸುವಂತೆ ಹೈಕೋರ್ಟ್ ಸರ್ಕಾರಕ್ಕೆ ಸೂಚಿಸಿತ್ತು.

ಯೆಮನ್‌ನಲ್ಲಿ ಭಾರತದ ರಾಜ ತಾಂತ್ರಿಕ ವ್ಯವಸ್ಥೆ ಇಲ್ಲ. ಹೀಗಾಗಿ ಅಲ್ಲಿಗೆ ಪ್ರಯಾಣಿಸದಂತೆ ಪೋಷಕರಿಗೆ ಸರ್ಕಾರ ಸಲಹೆ ನೀಡಿದೆ ಎಂದು ಪ್ರಿಯಾ ಅವರ ತಾಯಿ ತಿಳಿಸಿದರು.

ಇತ್ತ ಕೇಂದ್ರ ಸರ್ಕಾರದ ಪರವಾಗಿ ಹಾಜರಾದ ವಕೀಲ ಪವನ್ ನಾರಂಗ್, ಆಡಳಿತ ಬದಲಾವಣೆಯ ನಂತರ ಯೆಮನ್ ನಲ್ಲಿ ಭಾರತ ಸರ್ಕಾರ ರಾಜತಾಂತ್ರಿಕ ವ್ಯವಸ್ಥೆ ಇಲ್ಲ. ಆದ್ದರಿಂದ, ಕುಟುಂಬದ ಸುರಕ್ಷತೆ ನೋಡಿಕೊಳ್ಳಲು ಸರ್ಕಾರಕ್ಕೆ ಸಾಧ್ಯವಾಗುವುದಿಲ್ಲ ಎಂದರು. ಆದರೆ ಯೆಮೆನ್‌ಗೆ ತೆರಳುವುದನ್ನು ಬಿಟ್ಟು ಬೇರೆ ದಾರಿ ತಮ್ಮ ಕುಟುಂಬಕ್ಕೆ ಇಲ್ಲ ಎಂದು ಪೋಷಕರು ವಾದಿಸಿದರು.

ಆಗ ನ್ಯಾ. ಅರೋರಾ ಅವರು ಕುಟುಂಬ ಯೆಮೆನ್‌ಗೆ ಪ್ರಯಾಣಿಸಲು ಅನುಮತಿಸಬಹುದೇ ಎಂಬ ಕುರಿತು ಕೇಂದ್ರದಿಂದ ಸೂಚನೆಗಳನ್ನು ಪಡೆಯುವಂತೆ ವಕೀಲ ನಾರಂಗ್‌ ಅವರಿಗೆ ಸೂಚಿಸಿದರು. ಇದೇ ವೇಳೆ ಅರ್ಜಿದಾರರ 10 ವರ್ಷದ ಮಗಳಿಗೆ ಪ್ರಯಾಣಕ್ಕೆ ಅನುಮತಿ ನೀಡಲಾಗುವುದಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

ಭಾರತದಲ್ಲಿನ ಯೆಮೆನ್ ರಾಯಭಾರ ಕಚೇರಿಯನ್ನು ಪ್ರಕರಣದಲ್ಲಿ ಪಕ್ಷಕಾರರನ್ನಾಗಿ ಮಾಡಲು ಬಯಸುವುದಾಗಿ ಅರ್ಜಿದಾರರ ಪರ ವಕೀಲರು ಹೇಳಿದ್ದರಿಂದ, ನ್ಯಾ. ಅರೋರಾ ಅವರು ಈ ಮನವಿಯನ್ನು ಸೋಮವಾರ ರೋಸ್ಟರ್ ಪೀಠ ಪರಿಗಣಿಸಲಿದೆ ಎಂದು ಹೇಳಿದರು.