ಕೃಷ್ಣ ಜನ್ಮಭೂಮಿ - ಶಾಹಿ ಈದ್ಗಾ ವಿವಾದ
ಕೃಷ್ಣ ಜನ್ಮಭೂಮಿ - ಶಾಹಿ ಈದ್ಗಾ ವಿವಾದ 
ಸುದ್ದಿಗಳು

ಕೃಷ್ಣ ಜನ್ಮಭೂಮಿ ಪ್ರಕರಣ: ಶಾಹಿ ಈದ್ಗಾ ಮಸೀದಿ ಪರಿಶೀಲನೆಗೆ ಕಮಿಷನರ್‌ ನೇಮಕಕ್ಕೆ ಅಲಾಹಾಬಾದ್ ಹೈಕೋರ್ಟ್ ಅಸ್ತು

Bar & Bench

ಕೃಷ್ಣ ಜನ್ಮಭೂಮಿ ವಿವಾದಕ್ಕೆ ಸಂಬಂಧಿಸಿದಂತೆ ಶಾಹಿ-ಈದ್ಗಾ ಮಸೀದಿಯನ್ನು ಪರಿಶೀಲಿಸಲು ಕೋರ್ಟ್‌ ಕಮಿಷನರ್‌ ನೇಮಿಸಬೇಕೆಂಬ ಕೋರಿಕೆಗೆ ಅಲಾಹಾಬಾದ್ ಹೈಕೋರ್ಟ್ ಗುರುವಾರ ಸಮ್ಮತಿಸಿದೆ.

ಹಿಂದೂ ದೇವರಾದ ಭಗವಾನ್ ಶ್ರೀ ಕೃಷ್ಣ ವಿರಾಜಮಾನ್‌ ಹಾಗೂ ಇತರ ಏಳು ಹಿಂದೂ ಪಕ್ಷಕಾರರ ಪರವಾಗಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಮಾಯಾಂಕ್ ಕುಮಾರ್ ಜೈನ್ ಈ ನಿರ್ದೇಶನ ನೀಡಿದ್ದಾರೆ.

ಹೈಕೋರ್ಟ್‌ನಲ್ಲಿ ಬಾಕಿ ಇರುವ ಮೂಲ ದಾವೆಯ ಭಾಗವಾಗಿ ಸಲ್ಲಿಸಿರುವ ಈ ಅರ್ಜಿಯಲ್ಲಿ ಮಥುರಾ ಶಾಹಿ ಈದ್ಗಾ ಮಸೀದಿಯನ್ನು ಕೃಷ್ಣ ಜನ್ಮಭೂಮಿಯಲ್ಲಿ ನಿರ್ಮಿಸಲಾಗಿದೆ ಎಂದು ಅರ್ಜಿದಾರರು (ಹಿಂದೂ ಪಕ್ಷಕಾರರು) ದೂರಿದ್ದರು.

ಶಾಹಿ-ಈದ್ಗಾ ಮಸೀದಿ ವಾಸ್ತವವಾಗಿ ಹಿಂದೂ ದೇವಾಲಯವಾಗಿದೆ ಎಂಬ ಅಭಿಪ್ರಾಯವನ್ನು ಬೆಂಬಲಿಸಲು ವಿವಿಧ ಪುರಾವೆಗಳಿವೆ ಆದ್ದರಿಂದ, ಸ್ಥಳ ಪರಿಶೀಲಿಸಲು ಆಯೋಗ ರಚಿಸುವಂತೆ ಅರ್ಜಿದಾರರು ನ್ಯಾಯಾಲಯವನ್ನು ಒತ್ತಾಯಿಸಿದ್ದರು.

ವಕೀಲರಾದ ಹರಿಶಂಕರ್ ಜೈನ್, ವಿಷ್ಣು ಶಂಕರ್ ಜೈನ್, ಪ್ರಭಾಶ್ ಪಾಂಡೆ ಹಾಗೂ ದೇವಕಿ ನಂದನ್ ಅವರ ಮೂಲಕ ಈ ಅರ್ಜಿ ಸಲ್ಲಿಸಲಾಗಿದೆ.

ಮಥುರಾ ಶಾಹಿ ಈದ್ಗಾ ಮಸೀದಿಯನ್ನು ಕೃಷ್ಣ ಜನ್ಮಭೂಮಿಯಲ್ಲಿ ನಿರ್ಮಿಸಲಾಗಿದ್ದು ಅದನ್ನು ತೆರವುಗೊಳಿಸಬೇಕೆಂದು ಪ್ರಧಾನ ಮೊಕದ್ದಮೆಯಲ್ಲಿ ಕೋರಲಾಗಿದೆ.

ಪೂಜಾ ಸ್ಥಳಗಳ (ವಿಶೇಷ ನಿಬಂಧನೆಗಳು) ಕಾಯಿದೆ- 1991ರ ಅಡಿಯಲ್ಲಿ ಪ್ರಕರಣವನ್ನು ಸ್ವೀಕರಿಸಲು ಇರುವ ನಿರ್ಬಂಧ ಉಲ್ಲೇಖಿಸಿ ಸಿವಿಲ್ ನ್ಯಾಯಾಲ ಈ ಹಿಂದೆ ದಾವೆಯನ್ನು ವಜಾಗೊಳಿಸಿತ್ತು. ಆದರೆ, ಮಥುರಾ ಜಿಲ್ಲಾ ನ್ಯಾಯಾಲಯ ಈ ತೀರ್ಪನ್ನು ರದ್ದುಗೊಳಿಸಿತ್ತು.

ಭಗವಾನ್ ಕೃಷ್ಣನ ಭಕ್ತರಾಗಿ, ಸಂವಿಧಾನದ 25ನೇ ವಿಧಿಯ ಅಡಿಯಲ್ಲಿ ತಮ್ಮ ಮೂಲಭೂತ ಧಾರ್ಮಿಕ ಹಕ್ಕಿನಂತೆ ನಮಗೆ ದಾವೆ ಹೂಡುವ ಹಕ್ಕಿದೆ ಎಂದು ಮೇಲ್ಮನವಿದಾರರು ಪ್ರತಿಪಾದಿಸಿದ್ದರು.

ಮೇ 2022 ರಲ್ಲಿ ಮಥುರಾ ಜಿಲ್ಲಾ ನ್ಯಾಯಾಲಯವು ದಾವೆಯನ್ನು ನಿರ್ವಹಿಸಬಹುದು ಎಂದು ಅಭಿಪ್ರಾಯಪಟ್ಟಿತು ಮತ್ತು ದಾವೆಯನ್ನು ವಜಾಗೊಳಿಸಿದ್ದ ಸಿವಿಲ್ ನ್ಯಾಯಾಲಯದ ಆದೇಶವನ್ನು ರದ್ದುಗೊಳಿಸಿತ್ತು.

ನಂತರ, ಮೇ 2023 ರಲ್ಲಿ, ವಿಚಾರಣಾ ನ್ಯಾಯಾಲಯದಿಂದ ಹೈಕೋರ್ಟ್‌ಗೆ ದಾವೆಯನ್ನು ವರ್ಗಾಯಿಸುವಂತೆ ಕೋರಿ ಹಿಂದೂ ಪಕ್ಷಕಾರರು ಸಲ್ಲಿಸಿದ್ದ ಮನವಿಗೆ ಹೈಕೋರ್ಟ್ ಅನುಮತಿಸಿತು.

ಹೈಕೋರ್ಟ್‌ ನ್ಯಾಯಮೂರ್ತಿ ನಳಿನ್ ಕುಮಾರ್ ಶ್ರೀವಾಸ್ತವ  ಅವರು ಫೆಬ್ರವರಿ 1 ರಂದು ನೀಡಿದ ಆದೇಶದಲ್ಲಿ ಪ್ರಕರಣ ಪರಿಗಣಿಸುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು. ಜೊತೆಗೆ ಈ ಬಗ್ಗೆ ಪ್ರತಿವಾದಿಗಳು ಉತ್ತರಿಸುವಂತೆ ಸೂಚಿಸಿದ್ದರು. ಈ ಪ್ರಕರಣ ಹೈಕೋರ್ಟ್‌ನಲ್ಲಿ ಬಾಕಿ ಇದೆ.