ತಮ್ಮ ಮಾಜಿ ಪತ್ನಿ ಈಚೆಗೆ ನೀಡಿರುವ ಸಂದರ್ಶನಗಳು ಮತ್ತು ಸಾಮಾಜಿಕ ಜಾಲತಾಣದ ಹೇಳಿಕೆಗಳು ತಮ್ಮ ಗೌರವಕ್ಕೆ ಗಂಭೀರ ಧಕ್ಕೆ ತಂದಿವೆ ಎಂದು ಆರೋಪಿಸಿ ಬಾಲಿವುಡ್ ಹಿನ್ನೆಲೆ ಗಾಯಕ ಕುಮಾರ್ ಸಾನು ಅಲಿಯಾಸ್ ಸಾನು ಭಟ್ಟಾಚಾರ್ಯ ಅವರು ಬಾಂಬೆ ಹೈಕೋರ್ಟ್‌ನಲ್ಲಿ ₹50 ಕೋಟಿ ಮೊತ್ತದ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ [ಸಾನುಭಟ್ಟಾಚಾರ್ಯ ಅಲಿಯಾಸ್ ಕುಮಾರ್ ಸಾನು ಮತ್ತು ರಿಟಾ ಭಟ್ಟಾಚಾರ್ಯ ಇನ್ನಿತರರ ನಡುವಣ ಪ್ರಕರಣ].
ತಮ್ಮ ಹಾಗೂ ತಮ್ಮ ಕುಟುಂಬದ ವಿರುದ್ಧ ಮಾನಹಾನಿಕರ ವಿಚಾರಗಳನ್ನು ಪ್ರಕಟಿಸದಂತೆ ಇಲ್ಲವೇ ಪ್ರಸಾರ ಮಾಡದಂತೆ ತಮ್ಮ ಮಾಜಿ ಪತ್ನಿ ರಿಟಾ ಭಟ್ಟಾಚಾರ್ಯ ಹಾಗೂ ಗೂಗಲ್, ಮೆಟಾ ಸೇರಿದಂತೆ ಆನ್‌ಲೈನ್ ವೇದಿಕೆಗಳ ವಿರುದ್ಧ ಶಾಶ್ವತ ಮತ್ತು ಕಡ್ಡಾಯ ಪ್ರತಿಬಂಧಕಾಜ್ಞೆ ಜಾರಿಗೊಳಿಸುವಂತೆ ಕುಮಾರ್ ಸಾನು ಕೋರಿದ್ದಾರೆ.
ತುರ್ತು ಮಧ್ಯಂತರ ಪರಿಹಾರ ಕೋರಿರುವ ಅರ್ಜಿಯನ್ನು ಡಿಸೆಂಬರ್ 24ರಂದು ನ್ಯಾಯಮೂರ್ತಿ ಮಿಲಿಂದ್ ಜಾಧವ್ ಅವರು ವಿಚಾರಣೆ ನಡೆಸುವ ಸಾಧ್ಯತೆ ಇದೆ.
2025ರ ಸೆಪ್ಟೆಂಬರ್‌ನಲ್ಲಿ ಫಿಲ್ಮ್ ವಿಂಡೋ, ವೈರಲ್ ಭಯಾನಿ ಹಾಗೂ ಸಿದ್ಧಾರ್ಥ್ ಕನ್ನನ್ ಎಂಬ ಯೂಟ್ಯೂಬ್ ಚಾನೆಲ್‌ಗಳಿಗೆ ರಿಟಾ ಅವರು ಸಂದರ್ಶನ ನೀಡಿದ್ದು ಅದರಲ್ಲಿ,ತಮ್ಮಿಬ್ಬರ ವೈವಾಹಿಕ ಜೀವನದ ಅವಧಿಯಲ್ಲಿ ತಮ್ಮ ನಡೆ ಕುರಿತು ಸುಳ್ಳು ಹಾಗೂ ಅಪಮಾನಕಾರ ಆರೋಪ ಮಾಡಲಾಗಿದೆ ಎಂದು ಕುಮಾರ್ ಅವರು ವಕೀಲರಾದ ಸನಾ ರಯೀಸ್ ಖಾನ್ ಅವರ ಮೂಲಕ ಸಲ್ಲಿಸಿದ ದಾವೆಯಲ್ಲಿ ವಾದಿಸಿದ್ದಾರೆ.
ಈ ಹೇಳಿಕೆಗಳು ವೀಡಿಯೊ ತುಣುಕು ಮತ್ತು ರೀಲ್ಸ್‌ಗಳ ಮೂಲಕ ವ್ಯಾಪಕವಾಗಿ ಪ್ರಸಾರವಾಗಿ 15 ಲಕ್ಷಕ್ಕೂ ಹೆಚ್ಚು ವೀಕ್ಷಣೆ ಪಡೆದಿದ್ದು ಇದರಿಂದ ತಮ್ಮ ವರ್ಚಸ್ಸಿಗೆ ಧಕ್ಕೆಯಾಗಿ ವೃತ್ತಿಪರ ಕೆಲಸ ಕಾರ್ಯಗಳಿಗೆ ಸರಿಪಡಿಸಲಾಗದಷ್ಟು ಹಾನಿ ಉಂಟಾಗಿದೆ ಎಂದಿದ್ದಾರೆ.
ಹೀಗಾಗಿ ರದ್ದಾದ ವೃತ್ತಿಪರ ಕಾರ್ಯಕ್ರಮಗಳು ಸೇರಿರದಂತೆ ವಾಣಿಜ್ಯ ನಷ್ಟ ಉಂಟು ಮಾಡಿದ್ದಕ್ಕೆ ₹15 ಕೋಟಿ; ವೃತ್ತಿಪರ ವರ್ಚಸ್ಸು ಹಾಗೂ ತಮ್ಮ ಬಗೆಗಿನ ಸದ್ಭಾವನೆಗೆ ಹಾನಿ ಮಾಡಿದ್ದಕ್ಕೆ ₹10 ಕೋಟಿ; ತಾನು ಮಾನಸಿಕ ಯಾತನೆ ಅಪಮಾನ ಅನುಭವಿಸಿದ ಹಿನ್ನೆಲೆಯಲ್ಲಿ ₹15 ಕೋಟಿ ಹಾಗೂ ಇದೇ ರೀತಿಯ ಅಪಪ್ರಚಾರ ತಡೆಯಲು ಮಾದರಿ ಹಾಗೂ ದಂಡನಾತ್ಮಕ ಪರಿಹಾರವಾಗಿ ₹10 ಕೋಟಿ ಪರಿಹಾರ ನೀಡುವಂತೆ ಅವರು ಕೋರಿದ್ದಾರೆ.
ಇದಲ್ಲದೆ, 2001ರ ವಿಚ್ಛೇದನದ ವೇಳೆ ಮಾಡಿಕೊಂಡ ಒಪ್ಪಂದ ಷರತ್ತುಗಳನ್ನು ಉಲ್ಲಂಘಿಸಿ, 32 ವರ್ಷಗಳ ಬಳಿಕ ಮತ್ತೆ ಹಳೆಯ ಆರೋಪ ಮಾಡಲಾಗಿದೆ. ಈ ನಡೆ ನ್ಯಾಯಾಂಗ ನಿಂದನೆಯಾಗಿದ್ದು ಒಪ್ಪಂದ ಉಲ್ಲಂಘನೆ ಎನಿಸಿಕೊಂಡಿದೆ ಎಂದು ದಾವೆಯಲ್ಲಿ ಉಲ್ಲೇಖಿಸಲಾಗಿದೆ.
ಸಾಮಾಜಿಕ ಜಾಲತಾಣಗಳಲ್ಲಿಗ ತಮ್ಮ ವಿರುದ್ಧ ಪ್ರಸಾರವಾಗುತ್ತಿರುವ ವಸ್ತು ವಿಷಯಗಳನ್ನು ತೆಗೆದುಹಾಕಬೇಕು ಹಾಗೂ ಭವಿಷ್ಯದಲ್ಲಿ ಇಂತಹ ಮಾನಹಾನಿಕಾರ ಹೇಳಿಕೆ ಪ್ರಸಾರ ಮಾಡದಂತೆ ತಡೆಯಲು ಅನಾಮಧೇಯ ವ್ಯಕ್ತಿಗಳ ವಿರುದ್ಧ ವಸ್ತು ವಿಷಯ ತೆರವುಗೊಳಿಸುವಂತಹ ಆದೇಶ ನೀಡಬೇಕು ಎಂದು ಕೂಡ ಕುಮಾರ್ ಸಾನು ವಿನಂತಿಸಿದ್ದಾರೆ.