ಸೋನಾಲಿ ಫೋಗಟ್ ಪ್ರಕರಣ: ಆಜ್ ತಕ್ ವಿರುದ್ಧ ಗೋಪಾಲ್ ಕಾಂಡಾ ದಾಖಲಿಸಿದ್ದ ಮಾನನಷ್ಟ ಮೊಕದ್ದಮೆಗೆ ಸುಪ್ರೀಂ ತಡೆ
ಗೋವಾದಲ್ಲಿ 2022ರಲ್ಲಿ ಮೃತಪಟ್ಟಿದ್ದ ಬಿಜೆಪಿ ನಾಯಕಿ ಸೋನಾಲಿ ಫೋಗಟ್ ಅವರ ಸಾವಿಗೆ ಸಂಬಂಧಿಸಿದಂತೆ ತನ್ನ ವಿರುದ್ಧ ಮಾನಹಾನಿ ಮಾಡಲಾಗಿದೆ ಎಂದು ದೂರಿ ಎಂದು ಹರಿಯಾಣದ ಮಾಜಿ ಶಾಸಕ ಮತ್ತು ಉದ್ಯಮಿ ಗೋಪಾಲ್ ಕಾಂಡಾ ಅವರು ಟಿವಿ ಟುಡೇ ನೆಟ್ವರ್ಕ್ ಒಡೆತನದ ಆಜ್ ತಕ್ ವಿರುದ್ಧ ಹೂಡಿದ್ದ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಗೆ ಸುಪ್ರೀಂ ಕೋರ್ಟ್ ಈಚೆಗೆ ತಡೆ ನೀಡಿದೆ. [ಟಿವಿ ಟುಡೇ ನೆಟ್ವರ್ಕ್ ಲಿಮಿಟೆಡ್ ಮತ್ತು ಸರ್ಕಾರ ಇನ್ನಿತರರ ನಡುವಣ ಪ್ರಕರಣ].
ಆಜ್ ತಕ್ ಮಾಲೀಕತ್ವದ ಟಿವಿ ಟುಡೇ ನೆಟ್‌ವರ್ಕ್ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ನೋಟಿಸ್ ನೀಡಿದ ನ್ಯಾಯಮೂರ್ತಿಗಳಾದ ದೀಪಂಕರ್ ದತ್ತ ಮತ್ತು ಆಗಸ್ಟೀನ್ ಜಾರ್ಜ್ ಮಸಿಹ್ ಅವರಿದ್ದ ಪೀಠ, ತಾನು ವಿಚಾರಣೆ ನಡೆಸುವ ದಿನದವರೆಗೆ ವಿಚಾರಣಾ ನ್ಯಾಯಾಲಯ ಅರ್ಜಿ ಆಲಿಸದಂತೆ ತಡೆ ನೀಡಿತು.
ಅಕ್ಟೋಬರ್ 2020 ರಲ್ಲಿ ಕಾಂಡಾ ಹಲವು ಮಾಧ್ಯಮಗಳಿಗೆ ನೋಟಿಸ್ ನೀಡಿ ತನ್ನ ವರ್ಚಸ್ಸಿಗೆ ಧಕ್ಕೆ ಒದಗುವಂತಹ ಸುದ್ದಿ ಪ್ರಕಟಿಸದಂತೆ ನೋಟಿಸ್ ನೀಡಿದ್ದರು. ಪೋಗಟ್ ಮೃತ್ಯು ಪ್ರಕರಣಕ್ಕೆಸಂಬಂಧಿಸಿದಂತೆ ಮಾನಹಾನಿ ಮಾಡಲಾಗಿದೆ ಎಂದು ದೂರಿ ಡಿಸೆಂಬರ್ 2022 ರಲ್ಲಿ ಕಾಂಡಾ ಅವರು ಟಿವಿ ಟುಡೇ ಸೇರಿದಂತೆ ಹತ್ತು ಸುದ್ದಿ ವಾಹಿನಿಗಳ ವಿರುದ್ಧ ದೂರು ದಾಖಲಿಸಿದ್ದರು.
ಇದು ಅಸಂಜ್ಞೇಯ ಅಪರಾಧ ವರ್ಗದಡಿ ಬರುತ್ತದೆ ಎಂದು ನಿರ್ಧರಿಸಿದ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಸಿಆರ್‌ಪಿಸಿ ಕ್ಷನ್ 155(2) ರ ಅಡಿಯಲ್ಲಿ ನಾನ್-ಕಾಗ್ನಿಜಬಲ್ ರಿಪೋರ್ಟ್ ದಾಖಲಿಸಿ ತನಿಖೆ ನಡೆಸುವಂತೆ ನಿರ್ದೇಶಿಸಿತ್ತು.
ಈ ಹಿನ್ನೆಲೆಯಲ್ಲಿ ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್ ಮೆಟ್ಟಿಲೇರಿದ ಟಿವಿ ಟುಡೆ, ಎನ್‌ಸಿಆರ್, ಆರೋಪಪಟ್ಟಿ ಹಾಗೂ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ನೀಡಿದ ಆದೇಶ ರದ್ದುಗೊಳಿಸುವಂತೆ ಕೋರಿ ಅರ್ಜಿ ಸಲ್ಲಿಸಿತು. ಆದರೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ನೀಡಿದ್ದ ಆದೇಶದಲ್ಲಿ ಯಾವುದೇ ದೋಷ ಇಲ್ಲ ಎಂದು ತಿಳಿಸಿದ ಹೈಕೋರ್ಟ್ ಆಗಸ್ಟ್ 6, 2024ರಂದು ಅರ್ಜಿ ತಿರಸ್ಕರಿಸಿತ್ತು.
ಈ ಹಿನ್ನೆಲೆಯಲ್ಲಿ ಸುದ್ದಿವಾಹಿನಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತು. ನ್ಯಾಯಾಲಯದ ವಿಚಾರಣೆ ದೋಷಯುಕ್ತವಾಗಿದೆ. ಯಾವ ವಿಷಯವು ಮಾನನಷ್ಟಕರವಾಗಿದೆ ಎಂಬುದನ್ನು ನಿರ್ಧರಿಸುವ ಅಧಿಕಾರವನ್ನು ಪೊಲೀಸರಿಗೆ ವಹಿಸುವುದು ಸಂವಿಧಾನದ 19(1)(a) ವಿಧಿಯ ಅಡಿಯಲ್ಲಿ ತನ್ನ ಹಕ್ಕುಗಳನ್ನು ಉಲ್ಲಂಘಿಸುತ್ತದೆ ಎಂದಿತು. ಫೋಗಟ್ ಸಾವಿನಂತಹ ಉನ್ನತ ಮಟ್ಟದ ಪ್ರಕರಣಗಳ ವರದಿಗಾರಿಕೆಯನ್ನು ಸಂರಕ್ಷಿತ ಅಭಿವ್ಯಕ್ತಿ ಎಂದು ಕೂಡ ವಾದಿಸಿತು.
ಟಿವಿ ಟುಡೆಯನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಸಿದ್ಧಾರ್ಥ್ ಲೂತ್ರಾ ಹಾಗೂ ಅವರ ತಂಡದ ವಾದ ಆಲಿಸಿದ ಸುಪ್ರೀಂ ಕೋರ್ಟ್, ಮುಂದಿನ ವಿಚಾರಣೆಯ ದಿನದವರೆಗೆ ವಿಚಾರಣಾ ನ್ಯಾಯಾಲಯದ ಅರ್ಜಿ ಆಲಿಸದಂತೆ ಮಧ್ಯಂತರ ರಕ್ಷಣೆ ನೀಡಿತು.