Kunal Kamra YouTube
ಸುದ್ದಿಗಳು

ಪೋಷಕರಿಗೆ ಕಿರುಕುಳ ನೀಡಲಾಗುತ್ತಿದೆ ಎಂದ ಕಮ್ರಾ: ಮಧ್ಯಂತರ ರಕ್ಷಣೆ ಮುಂದುವರೆಸಿದ ಮದ್ರಾಸ್ ಹೈಕೋರ್ಟ್

ಕಾರ್ಯಕ್ರಮವೊಂದರಲ್ಲಿ ಮಹಾರಾಷ್ಟ್ರದ ಉಪ ಮುಖ್ಯಮಂತ್ರಿಯನ್ನು ಅವಮಾನಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿದ್ದು, ನಿರೀಕ್ಷಣಾ ಜಾಮೀನು ಕೋರಿ ಹಾಸ್ಯ ಕಲಾವಿದ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

Bar & Bench

ಮಹಾರಾಷ್ಟ್ರ ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರನ್ನು ಅಪಮಾನಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಮುಂಬೈನಲ್ಲಿ ದಾಖಲಾಗಿರುವ ಕ್ರಿಮಿನಲ್ ಪ್ರಕರಣದಲ್ಲಿ ಹಾಸ್ಯ ಕಲಾವಿದ ಕುನಾಲ್ ಕಮ್ರಾ ಅವರಿಗೆ ಬಂಧನದಿಂದ ನೀಡಲಾಗಿದ್ದ ಮಧ್ಯಂತರ ರಕ್ಷಣೆಯನ್ನು  ಏಪ್ರಿಲ್ 17ರವರೆಗೆ ವಿಸ್ತರಿಸಿ ಸೋಮವಾರ ಆದೇಶ ನೀಡಿದೆ.

ರಾಜಕೀಯ ಪಕ್ಷವೊಂದರ ಕಾರ್ಯಕರ್ತರಿಂದ ದೈಹಿಕ ಹಿಂಸೆಯ ಬೆದರಿಕೆ ಇರುವುದರಿಂದ ಕಮ್ರಾ ಮುಂಬೈ ಅಧಿಕಾರಿಗಳನ್ನು ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ ಹೀಗಾಗಿ ತನಗೆ ಟ್ರಾನ್ಸಿಟ್‌ ನಿರೀಕ್ಷಣಾ ಜಾಮೀನು ನೀಡುವಂತೆ ಕಮ್ರಾ ಹೈಕೋರ್ಟ್‌ ಮೊರೆ ಹೋಗಿದ್ದರು.

ಮಾರ್ಚ್ 28ರಂದು ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ಸುಂದರ್ ಮೋಹನ್ ಅವರು ಏಪ್ರಿಲ್ 7ರವರೆಗೆ (ಇಂದು) ಮಧ್ಯಂತರ ನಿರೀಕ್ಷಣಾ ಜಾಮೀನು ನೀಡಿದ್ದರು. ಹಾಸ್ಯ ಕಾರ್ಯಕ್ರಮ ನಡೆದ ಸ್ಥಳವಾದ ಮುಂಬೈನ ಪೊಲೀಸರಿಗೆ ನೋಟಿಸ್‌ ನೀಡಲಾಗಿದೆ ಎಂದು ಕಮ್ರಾ ಪರ ವಕೀಲ ವಿ ಸುರೇಶ್ ನ್ಯಾಯಾಲಯದ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಅಲ್ಲದೆ ಕಮ್ರಾ ಹೇಳಿಕೆಗಳ ವಿರುದ್ಧ ದ್ವೇಷ ಕಾರುವುದು ಮುಂದುವರೆದಿದ್ದು ನ್ಯಾಯಾಲಯ ನಡೆಸಿದ್ದ ಕಳೆದ ವಿಚಾರಣೆಯ ದಿನದಿಂದ ಈವರೆಗೆ ಇನ್ನೂ ಮೂರು ಎಫ್‌ಐಆರ್‌ ದಾಖಲಾಗಿವೆ ಎಂದರು. ಜೊತೆಗೆ ಕಮ್ರಾ ಅವರ ಪೋಷಕರಿಗೂ ಕಿರುಕುಳ ನೀಡಲಾಗುತ್ತಿದೆ. ಅಲ್ಲದೆ ಪ್ರದರ್ಶನದಲ್ಲಿ ಪ್ರೇಕ್ಷಕರಾಗಿ ಭಾಗಿಯಾದವರ ವಿವರಗಳನ್ನೂ ಕಲೆಹಾಕಲಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಅಂತಿಮವಾಗಿ ನ್ಯಾಯಾಧೀಶರು ಏಪ್ರಿಲ್ 17ಕ್ಕೆ ಪ್ರಕರಣ ಮುಂದೂಡಿದರು. ಮುಂಬೈ ಪೊಲೀಸರಿಗೆ ನೋಟಿಸ್‌ ನೀಡಲಾಗಿದೆಯೇ ಎಂಬುದನ್ನು ದೃಢೀಕರಿಸುವಂತೆ ಕೋರಿದ ಅವರು ಪ್ರಕರಣಗಳ ದಾವೆ ಪಟ್ಟಿಯಲ್ಲಿ ಈ ಅಂಶ ನಮೂದಿಸುವಂತೆ ರಿಜಿಸ್ಟ್ರಿಗೆ ಸೂಚಿಸಿದರು.

ಹಾಸ್ಯ ಕಾರ್ಯಕ್ರಮವೊಂದರಲ್ಲಿ 2022ರಲ್ಲಿ ಆಗಿನ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ವಿರುದ್ಧ ಶಿಂಧೆ ರಾಜಕೀಯ ಬಂಡಾಯ ಎದ್ದಿದ್ದನ್ನು ಪ್ರಸ್ತಾಪಿಸಿ ಶಿಂಧೆ ದೇಶದ್ರೋಹಿ ಎಂದು ಕಮ್ರಾ ಬಣ್ಣಿಸಿದ್ದರು. ಶಿಂಧೆ ಬಂಡಾಯದ ನಂತರ ಶಿವಸೇನೆ ಹೋಳಾಗಿತ್ತು. ಶಿಂಧೆ ಅವರ ಆಲೋಚನೆ ಮತ್ತು ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರೊಂದಿಗಿನ ಮೈತ್ರಿಯನ್ನು ಅಣಕಿಸಿ  ಬಾಲಿವುಡ್ ಚಲನಚಿತ್ರ ದಿಲ್ ತೋ ಪಾಗಲ್ ಹೈ ಚಿತ್ರದ 'ಬೊಲೀಸಿ ಸೂರತ್‌' ಹಾಡನ್ನು ವಿಡಂಬನಾತ್ಮಕವಾಗಿ ಕಮ್ರಾ ಪ್ರಸ್ತುತಪಡಿಸಿದ್ದರು.

ಶಿವಸೇನಾ ಶಾಸಕ ಮುರಾಜಿ ಪಟೇಲ್ ಸಲ್ಲಿಸಿದ ದೂರಿನ ಆಧಾರದ ಮೇಲೆ ಕಮ್ರಾ ವಿರುದ್ಧ ಸೆಕ್ಷನ್ 353(1) (b), 353 (2) (ಸಾರ್ವಜನಿಕ ಕಿರುಕುಳ) ಮತ್ತು 356 (2) (ಮಾನನಷ್ಟ) ಅಡಿಯಲ್ಲಿ ಅಪರಾಧ ದಾಖಲಿಸಲಾಗಿತ್ತು.

ಕಮ್ರಾ ತಮಿಳುನಾಡಿನ ವಿಲ್ಲುಪರಂ ನಿವಾಸಿಯಾಗಿದ್ದರೂ, ಅವರ ವಿರುದ್ಧದ ಎಫ್‌ಐಆರ್ ಮುಂಬೈನಲ್ಲಿ ದಾಖಲಾಗಿತ್ತು. ನಂತರ ಅವರು ಟ್ರಾನ್ಸಿಟ್‌ ನಿರೀಕ್ಷಣಾ ಜಾಮೀನು ಕೋರಿ ಮದ್ರಾಸ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ಕುನಾಲ್‌ ತನ್ನ ಕಾರ್ಯಕ್ರಮದಲ್ಲಿ ಯಾರನ್ನೂ ನಿರ್ದಿಷ್ಟವಾಗಿ ಹೆಸರಿಸಿಲ್ಲ ಎಂದು ಅವರ ವಕೀಲರು ವಾದಿಸಿದರು, ಟೀಕೆ ಮತ್ತು ವಿಡಂಬನೆ ವಾಕ್ ಸ್ವಾತಂತ್ರ್ಯದ ಭಾಗವಾಗಿದೆ ಎಂದು ಹೇಳಿದರು. ರಾಜಕೀಯ ಕಾರ್ಯಕರ್ತರು ಮತ್ತು ಸಚಿವರಿಂದ ಕೂಡ ಅವರಿಗೆ ಬೆದರಿಕೆಗಳಿವೆ ಎಂದು ಅವರು ವಾದಿಸಿದರು.

ಶಿವಸೇನಾ ಶೈಲಿಯಲ್ಲಿ ಕಮ್ರಾ ಅವರಿಗೆ ಬುದ್ಧಿ ಕಲಿಸುವುದಾಗಿ ಹೇಳಲಾಗುತ್ತಿದೆ. ಶಿವಸೇನಾ ಶೈಲಿ ಎಂದರೇನು ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ ಎಂದು ವಕೀಲ ಸುರೇಶ್‌ ಹೇಳಿದರು.

 ಹೀಗಾಗಿ ಕಮ್ರಾ ಅವರು ಮಹಾರಾಷ್ಟ್ರದ ನ್ಯಾಯಾಲಯಗಳನ್ನು ಸಂಪರ್ಕಿಸಿ ರಕ್ಷಣೆ ಪಡೆಯಲು ಸಾಧ್ಯವಾಗುತ್ತಿಲ್ಲ ಎಂದು ಕಮ್ರಾ ಪ್ರಾಥಮಿಕ ಪ್ರಕರಣ ದಾಖಲಿಸಿದ್ದಾರೆ ಎಂಬುದನ್ನು ಗಮನಿಸಿದ ನ್ಯಾಯಾಲಯ ಮಧ್ಯಂತರ ರಕ್ಷಣೆ ನೀಡಿತು.

ಈ ಮಧ್ಯೆ, ಕಮ್ರಾ ಬಾಂಬೆ ಹೈಕೋರ್ಟ್‌ ಮೊರೆ ಹೋಗಿದ್ದು ತಮ್ಮ ವಿರುದ್ಧದ ಎಫ್‌ಐಆರ್ ರದ್ದುಗೊಳಿಸುವಂತೆ ಕೋರಿದ್ದಾರೆ. ಪ್ರಕರಣದ ವಿಚಾರಣೆ ನಾಳೆ ನಡೆಯಲಿದೆ.