Ashish Mishra, Lakhimpur Kheri Violence 
ಸುದ್ದಿಗಳು

ಲಖಿಂಪುರ್ ಖೇರಿ ಪ್ರಕರಣ: ಆಶಿಶ್ ಮಿಶ್ರಾ ಜಾಮೀನು ಹಿಂಪಡೆಯಲು ಸುಪ್ರೀಂ ನಕಾರ

ರಾಮ ನವಮಿಯಂದು ಲಖಿಂಪುರ್ ಖೇರಿಗೆ ಭೇಟಿ ನೀಡಲು ಮಿಶ್ರಾ ಅವರಿಗೆ ನ್ಯಾಯಾಲಯ ಅನುಮತಿ ನೀಡಿದೆ.

Bar & Bench

ಪ್ರತಿಭಟನಾ ನಿರತ ರೈತರೂ ಸೇರಿದಂತೆ 8 ಮಂದಿಯ ಸಾವಿಗೆ ಕಾರಣವಾದ ಲಖೀಂಪುರ್‌ ಖೇರಿ ಹಿಂಸಾಚಾರ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ಕೇಂದ್ರದ ಮಾಜಿ ಸಚಿವ ಅಜಯ್‌ ಮಿಶ್ರಾ ಟೇನಿ ಅವರ ಪುತ್ರ ಆಶೀಶ್‌ ಮಿಶ್ರಾ ಅವರಿಗೆ ನೀಡಿದ್ದ ಜಾಮೀನು ಹಿಂಪಡೆಯಲು ಸುಪ್ರೀಂ ಕೋರ್ಟ್‌ ಸೋಮವಾರ ನಿರಾಕರಿಸಿದೆ [ಆಶಿಶ್ ಮಿಶ್ರಾ ಅಲಿಯಾಸ್‌ ಮೋನು ಮತ್ತು ಉತ್ತರ ಪ್ರದೇಶ ಸರ್ಕಾರ ಇನ್ನಿತರರ ನಡುವಣ ಪ್ರಕರಣ].

ಮಿಶ್ರಾ ಅವರ ಆಪ್ತ ವ್ಯಕ್ತಿಯೊಬ್ಬರು ಸಾಕ್ಷಿಗಳ ಮೇಲೆ ಪ್ರಭಾವ ಬೀರಲು ಪ್ರಯತ್ನಿಸಿದ್ದಾರೆ ಎಂಬ ಆರೋಪವನ್ನು ಪೊಲೀಸ್ ವರದಿ ದೃಢೀಕರಿಸುವುದಿಲ್ಲ ಎಂದು ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ಎನ್ ಕೋಟೀಶ್ವರ್ ಸಿಂಗ್ ಅವರಿದ್ದ ಪೀಠ ತಿಳಿಸಿತು.

ಆದಾಗ್ಯೂ, ಸಾಕ್ಷಿ ಸ್ಥಳೀಯ ಪೊಲೀಸರಿಗೆ ದೂರು ಸಲ್ಲಿಸಲು ಸ್ವಾತಂತ್ರ್ಯ ನೀಡಿದ ನ್ಯಾಯಾಲಯ ಅದನ್ನು ಪ್ರತ್ಯೇಕವಾಗಿ ಪರಿಗಣಿಸುವಂತೆ ಆದೇಶಿಸಿತು. ಅಲ್ಲದೆ, ಲಖೀಂಪುರ್‌ ಖೇರಿ ಪ್ರಕರಣಕ್ಕೆ ಸಂಬಂಧಿಸಿದ ನಿರ್ಣಾಯಕ ಸಾಕ್ಷಿಗಳನ್ನು ತ್ವರಿತ ರೀತಿಯಲ್ಲಿ ವಿಚಾರಣೆ ನಡೆಸುವಂತೆ ಆದೇಶಿಸಿತು.

"ತನಿಖೆ ಮುಂದುವರಿಯಲಿ ಮತ್ತು ಮುಂದಿನ ವಿಚಾರಣಾ ದಿನಾಂಕ ಏಪ್ರಿಲ್ 16 ರಂದು ಇರುವುದರಿಂದ  ಪ್ರತ್ಯಕ್ಷದರ್ಶಿಗಳು ಮತ್ತು ನಿರ್ಣಾಯಕ ಸಾಕ್ಷಿಗಳ ಪರೀಕ್ಷೆಗೆ ಆದ್ಯತೆ ನೀಡಲಿ. ಸಾಕ್ಷಿಗಳನ್ನು ಆಲಿಸುವ ವೇಳಾಪಟ್ಟಿಯ ವಿವರ ನೀಡಲಿ" ಎಂದು ಅದು ನಿರ್ದೇಶಿಸಿತು.

ತನ್ನ ಜಾಮೀನು ಅರ್ಜಿಯನ್ನು ಆಕ್ಷೇಪಿಸಿ ಮಾಡಲಾದ ಆರೋಪಗಳಿಗೆ ಪ್ರತಿಕ್ರಿಯಿಸುವಂತೆ 2024ರ ನವೆಂಬರ್‌ನಲ್ಲಿ ನ್ಯಾಯಾಲಯ ಮಿಶ್ರಾ ಅವರಿಗೆ ಸೂಚಿಸಿತ್ತು. ಸಾಕ್ಷಿಗಳಿಗೆ ಬೆದರಿಕೆ ಒಡ್ಡುತ್ತಿರುವ ಆರೋಪದ ಪ್ರಕರಣವನ್ನು ಪರಿಶೀಲಿಸುವಂತೆ ಲಖಿಂಪುರ್‌ ಪೊಲೀಸ್ ವರಿಷ್ಠಾಧಿಕಾರಿಗೂ ಸೂಚಿಸಿತ್ತು. ಇಂದು (ಸೋಮವಾರ) ಪೊಲೀಸರು ಈ ಸಂಬಂಧದ ವರದಿ ಸಲ್ಲಿಸಿದರು.

ಈ ಮಧ್ಯೆ, ಏಪ್ರಿಲ್ 5ರಂದು ರಾಮ ನವಮಿ ಇದ್ದು ಅಂದು ಮಿಶ್ರಾ ಅವರು ಲಖಿಂಪುರ ಖೇರಿಗೆ ಭೇಟಿ ನೀಡಲು ನ್ಯಾಯಾಲಯ ಅನುಮತಿ ನೀಡಿತು. ಅರ್ಜಿದಾರರ ಪರವಾಗಿ ವಕೀಲ ಪ್ರಶಾಂತ್‌ ಭೂಷಣ್‌, ಮಿಶ್ರಾ ಪರವಾಗಿ ಹಿರಿಯ ನ್ಯಾಯವಾದಿ ಸಿದ್ಧಾರ್ಥ್‌ ದವೆ ವಾದ ಮಂಡಿಸಿದರು.