Justice Abdul Nazir inaugurating newly Constructed Court building at Udupi Court Complex.

 
ಸುದ್ದಿಗಳು

ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳ ಸಂಖ್ಯೆ ಕಡಿಮೆ ಮಾಡಲು ಶಾಸನ ರೂಪಿಸುವ ಅಗತ್ಯವಿದೆ: ನ್ಯಾ. ಅಬ್ದುಲ್ ನಜೀರ್

ಸರ್ಕಾರ ಮೂಲಸೌಕರ್ಯವನ್ನು ಹೆಚ್ಚಿಸುತ್ತಿದೆಯಾದರೂ ವ್ಯಾಜ್ಯಗಳು ಹೆಚ್ಚಿದರೆ ಶಾಂತಿ ಇರುವುದಿಲ್ಲ ಎಂದು ನ್ಯಾ. ನಜೀರ್‌ ಈ ಸಂದರ್ಭದಲ್ಲಿ ಬೇಸರ ವ್ಯಕ್ತಪಡಿಸಿದರು.

Bar & Bench

ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳ ಸಂಖ್ಯೆ ಕಡಿಮೆಯಾಗಬೇಕು ಎಂದು ಕಳೆದ 75 ವರ್ಷಗಳಿಂದ ಶ್ರಮಿಸುತ್ತಿದ್ದರೂ ಅವುಗಳ ಬಾಕಿ ಉಳಿಯುವಿಕೆ ಕಡಿಮೆಯಾಗುತ್ತಿಲ್ಲ. ಮೂಲಭೂತವಾಗಿ ಏನೋ ಸಮಸ್ಯೆ ಇದೆ. ಇದಕ್ಕೆ ಸಂಬಂಧಿಸಿದಂತೆ ವಿಧಾನಸಭೆ ಶಾಸನ ರೂಪಿಸುವ ಅಗತ್ಯವಿದೆ” ಎಂದು ಸುಪ್ರೀಂಕೋರ್ಟ್‌ ನ್ಯಾಯಮೂರ್ತಿ ಅಬ್ದುಲ್‌ ನಜೀರ್‌ ಸಲಹೆ ನೀಡಿದರು.

ಉಡುಪಿ ಜಿಲ್ಲಾ ನ್ಯಾಯಾಂಗ, ಲೋಕೋಪಯೋಗಿ ಇಲಾಖೆ ಹಾಗೂ ವಕೀಲರ ಸಂಘದ ಆಶ್ರಯದಲ್ಲಿ ಶನಿವಾರ ನೂತನವಾಗಿ ನಿರ್ಮಿಸಲಾದ ನ್ಯಾಯಾಲಯ ಕಟ್ಟಡದ 3ನೇ ಮಹಡಿ ಮತ್ತು 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ನ್ಯಾಯಾಂಗದ ಇವತ್ತಿನ ಸಮಸ್ಯೆ ಏನೆಂದರೆ ಡಾಕೆಟ್‌ ಎಕ್ಸ್‌ಕ್ಲೂಷನ್‌ (ನ್ಯಾಯ ಕೇಳದಂತೆ ಜನರನ್ನು ಹೊರಗಿಡುವುದು) ಮತ್ತು ಮತ್ತೊಂದೆಡೆ ಡಾಕೆಟ್‌ ಎಕ್ಸ್‌ಪ್ಲೋಷನ್‌ (ಪ್ರಕರಣಗಳ ಸ್ಫೋಟ) ಕಂಡುಬರುತ್ತಿದೆ. ಕರ್ನಾಟಕ ನ್ಯಾಯಾಂಗ ಮೂಲಸೌಕರ್ಯ ಒದಗಿಸುವಲ್ಲಿ ದೇಶದಲ್ಲೇ ಮುಂದಿದೆ. ಸರ್ಕಾರ ಮೂಲಸೌಕರ್ಯವನ್ನು ಹೆಚ್ಚಿಸುತ್ತಿದೆಯಾದರೂ ವ್ಯಾಜ್ಯಗಳು ಹೆಚ್ಚಿದರೆ ಶಾಂತಿ ಇರುವುದಿಲ್ಲ. ವ್ಯಾಜ್ಯ ಎಂಬುದು ಕ್ಯಾನ್ಸರ್‌ ಇದ್ದಂತೆ. ಕ್ಯಾನ್ಸರನ್ನು ಸಮಾಜದಲ್ಲಿಟ್ಟುಕೊಂಡು ಇಷ್ಟೆಲ್ಲಾ ಸೌಲಭ್ಯಗಳನ್ನು ಕಲ್ಪಿಸಿದರೆ ಏನು ಪ್ರಯೋಜನ?” ಎಂದು ಅವರು ಪ್ರಶ್ನಿಸಿದರು. ಪ್ರಸಕ್ತ ಸನ್ನಿವೇಶದಲ್ಲಿ ಐಎ, ಮರುಪರಿಶೀಲನಾ ಅರ್ಜಿಗಳನ್ನು ಕಡಿಮೆ ಹಾಕುವಂತೆಯೂ ಅವರು ಇದೇ ಸಂದರ್ಭದಲ್ಲಿ ವಕೀಲ ಸಮುದಾಯವನ್ನು ಕೋರಿದರು.

ಜಿಲ್ಲಾ ನ್ಯಾಯಾಲಯ ಎಂದರೆ ಅದಕ್ಕೆ ಅದರದ್ದೇ ಆದ ಕೆಲವು ಘಟಕಗಳು ಬೇಕಾಗುತ್ತವೆ. ಆದರೆ ಮಂಗಳೂರು ಮತ್ತು ಉಡುಪಿಯಂತಹ ಜಿಲ್ಲಾ ಕೇಂದ್ರದಲ್ಲಿ ವಕೀಲರ ಸಂಘಕ್ಕೆ ಸ್ವಂತ ಕಟ್ಟಡವೇ ಇಲ್ಲ ಎಂದು ನ್ಯಾ. ನಜೀರ್‌ ಅವರು ತಿಳಿಸಿದಾಗ ಲೋಕೋಪಯೋಗಿ ಇಲಾಖೆ ಸಚಿವ ಸಿ ಸಿ ಪಾಟೀಲ್ ಇನ್ನೆರಡು ತಿಂಗಳಲ್ಲಿ ವಕೀಲರ ಸಂಘಕ್ಕೆ ಕಟ್ಟಡ ಒದಗಿಸುವುದಾಗಿ ಭರವಸೆ ನೀಡಿದರು.

ಜಿಲ್ಲೆಯ ಸಂಸ್ಕೃತಿ ಇತಿಹಾಸ ಮತ್ತು ಜಿಲ್ಲಾ ನ್ಯಾಯಾಂಗ ವ್ಯವಸ್ಥೆ ಸಾಗಿ ಬಂದ ಹಾದಿಯ ಕುರಿತು ಕರ್ನಾಟಕ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ರಿತುರಾಜ್‌ ಅವಸ್ಥಿ ಅವರು ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿದರು. ಅಲ್ಲದೆ “ಉತ್ತಮ ಮೂಲಸೌಕರ್ಯ ವ್ಯವಸ್ಥೆ ಅತ್ಯುತ್ತಮ ಕೆಲಸ ನಿರ್ವಹಣೆಯ ವಾತಾವರಣವನ್ನು ಮತ್ತು ಉತ್ತಮವಾದ ಕೆಲಸದ ಸಂಸ್ಕೃತಿಯನ್ನು ಒದಗಿಸಿ ಉತ್ಪಾದನೆಯನ್ನು ಹೆಚ್ಚಿಸುತ್ತದೆ.

“ನ್ಯಾಯಾಂಗ ವ್ಯವಸ್ಥೆ ಸೂಕ್ತವಾಗಿ ಕೆಲಸ ಮಾಡಲು ಅಗತ್ಯ ಮೂಲಭೂತ ಸೌಕರ್ಯವನ್ನು ಒದಗಿಸುವುದು ರಾಜ್ಯ ಸರ್ಕಾರದ ಹೊಣೆ. ಕರ್ನಾಟಕ ಸರ್ಕಾರ ಈ ನಿಟ್ಟಿನಲ್ಲಿ ಸಕ್ರಿಯವಾಗಿ ಸಹಕಾರ ನೀಡುತ್ತಿದ್ದು ಇದಕ್ಕಾಗಿ ಸರ್ಕಾರಕ್ಕೆ ಧನ್ಯವಾದ ಅರ್ಪಿಸುವುದಾಗಿ ತಿಳಿಸಿದರು. ಈಗ ಒದಗಿಸಲಾಗಿರುವ ಮೂಲಸೌಕರ್ಯವನ್ನು ಸದುಪಯೋಗಪಡಿಸಿಕೊಳ್ಳುವಂತೆ ಅವರು ಈ ಸಂದರ್ಭದಲ್ಲಿ ಕರೆ ನೀಡಿದರು.

ಕರ್ನಾಟಕ ಹೈಕೋರ್ಟ್‌ ನ್ಯಾಯಮೂರ್ತಿ ಮತ್ತು ಉಡುಪಿ ಜಿಲ್ಲೆ ಆಡಳಿತಾತ್ಮಕ ನ್ಯಾಯಾಧೀಶರಾದ ರಂಗಸ್ವಾಮಿ ನಟರಾಜ್‌, ಕರ್ನಾಟಕ ಹೈಕೋರ್ಟ್‌ ರಿಜಿಸ್ಟ್ರಾರ್‌ ಜನರಲ್‌ ಟಿ ಜಿ ಶಿವಶಂಕರೇಗೌಡ, ಕಾನೂನು ಇಲಾಖೆ ಪ್ರಧಾನ ಕಾರ್ಯದರ್ಶಿ ಟಿ. ವೆಂಕಟೇಶ್‌ ನಾಯಕ್‌, ಉಡುಪಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಜೆ ಎನ್‌ ಸುಬ್ರಮಣ್ಯ, ಉಡುಪಿ ವಕೀಲರ ಸಂಘದ ಅಧ್ಯಕ್ಷ ಬಿ ನಾಗರಾಜ್‌ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮದ ಪೂರ್ಣ ದೃಶ್ಯಾವಳಿಯನ್ನು ಇಲ್ಲಿ ವೀಕ್ಷಿಸಿ.