ಸುದ್ದಿಗಳು

ವಕೀಲೆ ಜೀವಾ ಆತ್ಮಹತ್ಯೆ: ಡಿವೈಎಸ್‌ಪಿ ಕನಕಲಕ್ಷ್ಮಿ ಬಂಧನದ ಬಗ್ಗೆ ಹೈಕೋರ್ಟ್‌ಗೆ ಮಾಹಿತಿ ನೀಡಿದ ಸರ್ಕಾರ

ರಾಜ್ಯ ಸರ್ಕಾರವು ಮುಚ್ಚಿದ ಲಕೋಟೆಯಲ್ಲಿ ತನಿಖಾ ವರದಿ ಸಲ್ಲಿಸಿದೆ. ಹೀಗಾಗಿ, ಮಾರ್ಚ್‌ 18ಕ್ಕೆ ವಿಚಾರಣೆ ನಡೆಸಲಾಗುವುದು ಎಂದ ನ್ಯಾಯಾಲಯ.

Bar & Bench

ಭೋವಿ ಅಭಿವೃದ್ಧಿ ನಿಗಮ ಬಹುಕೋಟಿ ಹಗರಣ ತನಿಖೆಯ ನೆಪದಲ್ಲಿ ಸಿಐಡಿ ಪೊಲೀಸರು ನೀಡಿದ ಕಿರುಕುಳದಿಂದ ಮನನೊಂದು ವಕೀಲೆ ಎಸ್‌ ಜೀವಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾದ ಪ್ರಕರಣದಲ್ಲಿ ಆರೋಪಿಯಾಗಿರುವ ಡಿವೈಎಸ್‌ಪಿ ಬಿ ಎಂ ಕನಕಲಕ್ಷ್ಮಿ ಅವರನ್ನು ನ್ಯಾಯಾಲಯ ರಚಿಸಿರುವ ವಿಶೇಷ ತನಿಖಾ ದಳ (ಎಸ್‌ಐಟಿ) ಇಂದು ಬಂಧಿಸಿದೆ ಎಂದು ಎಂದು ರಾಜ್ಯ ಸರ್ಕಾರವು ಕರ್ನಾಟಕ ಹೈಕೋರ್ಟ್‌ಗೆ ತಿಳಿಸಿದೆ. ಇದರೊಂದಿಗೆ ನ್ಯಾಯಾಲಯವು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಮೂರೂವರೆ ತಿಂಗಳ ಬಳಿಕ ಕನಕಲಕ್ಷ್ಮಿ ಅವರ ಬಂಧನವಾದಂತಾಗಿದೆ.

ಜೀವಾ ಆತ್ಮಹತ್ಯೆಗೆ ಕಾರಣವಾಗಿರುವ ಪ್ರಕರಣವನ್ನು ಸಿಬಿಐ ಅಥವಾ ಸ್ವತಂತ್ರ ತನಿಖಾ ಸಂಸ್ಥೆಗೆ ವಹಿಸಬೇಕು ಎಂದು ಕೋರಿ ಬೆಂಗಳೂರು ವಕೀಲರ ಸಂಘ ಸಲ್ಲಿಸಿರುವ ಮಧ್ಯಂತರ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ಇಂದು ವಿಚಾರಣೆ ನಡೆಸಿತು.

ವಿಚಾರಣೆ ಆರಂಭವಾಗುತ್ತಿದ್ದಂತೆ ಸರ್ಕಾರದ ಪರವಾಗಿ ಹಾಜರಿದ್ದ ಹೆಚ್ಚುವರಿ ವಿಶೇಷ ಸರ್ಕಾರಿ ಅಭಿಯೋಜಕ ಬಿ ಎನ್‌ ಜಗದೀಶ್‌ ಅವರು “ಇಂದು ಬೆಳಗ್ಗೆ ಕನಕಲಕ್ಷ್ಮಿ ಅವರನ್ನು ಕಸ್ಟಡಿಗೆ ಪಡೆಯಲಾಗಿದೆ. ತನಿಖೆ ಪ್ರಗತಿಯಲ್ಲಿದೆ. ಈ ಸಂಬಂಧ ತನಿಖಾ ವರದಿ ಸಲ್ಲಿಕೆ ಮಾಡಲಾಗಿದೆ” ಎಂದರು.

ಬೆಂಗಳೂರು ವಕೀಲರ ಸಂಘ ಪ್ರತಿನಿಧಿಸಿದ್ದ ಹಿರಿಯ ಡಿ ಆರ್‌ ರವಿಶಂಕರ್‌ ಅವರು “ತನಿಖೆ ನಡೆಯುತ್ತಲೇ ಇರುತ್ತದೆ. ಕನಕ ಲಕ್ಷ್ಮಿ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದ್ದು, ಅಲ್ಲಿ ಬಂಧಿಸುವುದಿಲ್ಲ ಎಂದು ಸರ್ಕಾರ ಹೇಳಿತ್ತು. ಕನಕ ಲಕ್ಷ್ಮಿ ಅವರನ್ನು ಕಸ್ಟಡಿಗೆ ಪಡೆದಿದ್ದರೆ ಆ ಮಾಹಿತಿ ಗೊತ್ತಾಗಿರುತ್ತಿತ್ತು. ಹೀಗಾಗಿ, ಜಗದೀಶ್‌ ಹೇಳಿಕೆಯನ್ನು ದಾಖಲಿಸಿಕೊಳ್ಳಬೇಕು” ಎಂದರು.

ಆಗ ಪೀಠವು “ಎಲ್ಲವೂ ವಿಡಿಯೊ ಕಾನ್ಫರೆನ್ಸ್‌ನಲ್ಲಿ ಲಭ್ಯವಿದೆ. ಇನ್ನು ದಾಖಲಿಸಿಕೊಳ್ಳುವುದು ಏನಿದೆ? ಅಧಿಕಾರಿಯನ್ನು ಬಂಧಿಸಲಾಗಿದೆ. ಸರ್ಕಾರವು ಮುಚ್ಚಿದ ಲಕೋಟೆಯಲ್ಲಿ ತನಿಖಾ ವರದಿ ಸಲ್ಲಿಸಿದೆ. ಹೀಗಾಗಿ, ಮಾರ್ಚ್‌ 18ಕ್ಕೆ ವಿಚಾರಣೆ ನಡೆಸಲಾಗುವುದು” ಎಂದು ವಿಚಾರಣೆ ಮುಂದೂಡಿತು.

2024ರ ನವೆಂಬರ್‌ 27ರ ವಿಚಾರಣೆಯಂದು ಪೀಠವು “ಸಾಮಾನ್ಯ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡರೆ, ಅದು ಐಪಿಸಿ ಸೆಕ್ಷನ್‌ 306 ಅಡಿ ಅಪರಾಧವಾದರೇ ಏನು ಮಾಡುತ್ತೀರಿ? ಬಂಧಿಸುವುದಿಲ್ಲವೇ? ಐಪಿಸಿ ಸೆಕ್ಷನ್‌ 420 ಅಡಿಯ ಪ್ರಕರಣಗಳಲ್ಲೆಲ್ಲಾ ಬಂಧಿಸುತ್ತೀರಿ? ಅದು ವ್ಯಕ್ತಿಯನ್ನು ಆಧರಿಸಿರುತ್ತದೆಯೇ? ಯಾವ ತನಿಖೆ ನಡೆಸಿದ್ದೀರಿ? ವಕೀಲೆ ಜೀವಾ ಅವರು ಆತ್ಮಹತ್ಯೆ ಮಾಡಿಕೊಳ್ಳಲು ಪ್ರಚೋದನೆ ನೀಡಿದ ಡಿವೈಎಸ್‌ಪಿ ಕನಕಲಕ್ಷ್ಮಿ ಅವರ ವಿರುದ್ಧ ಯಾವ ಕ್ರಮಕೈಗೊಂಡಿದ್ದೀರಿ? ಆಕೆ ನಿರೀಕ್ಷಣಾ ಜಾಮೀನು ಪಡೆದುಕೊಂಡಿದ್ದಾರೆಯೇ? ಆಕೆ ಡಿವೈಎಸ್‌ಪಿ ಅದಕ್ಕೆ ನಿರೀಕ್ಷಣಾ ಜಾಮೀನು ಪಡೆದಿಲ್ಲ. ಏಕೆಂದರೆ ಕಾನೂನಿನ ಅಸ್ತ್ರ ಪೊಲೀಸರನ್ನು ತಲುಪುವುದಿಲ್ಲ. ಬೇರೆಯವರನ್ನು ದೂರು ದಾಖಲಾದ ತಕ್ಷಣ ಬಂಧಿಸುತ್ತೀರಲ್ಲಾ?” ಎಂದು ಆಕ್ರೋಶ ವ್ಯಕ್ತಪಡಿಸಿತ್ತು.

 “ತನಿಖೆಗೆ ಹಾಜರಾಗುವಂತೆ ಕನಕಲಕ್ಷ್ಮಿ ಅವರಿಗೆ ನೋಟಿಸ್‌ ಯಾಕೆ ನೀಡಿಲ್ಲ. ಕನಕಲಕ್ಷ್ಮಿ ಅವರನ್ನು ಏಕೆ ಸಾಮಾನ್ಯ ಆರೋಪಿ ಎಂದು ಪರಿಗಣಿಸಿಲ್ಲ? ಆಕೆ ಪೊಲೀಸ್‌ ಅಧಿಕಾರಿ ಎಂದ ಮಾತ್ರಕ್ಕೆ ಕಾನೂನು ಮೀರಬಹುದೇ? ಆರೋಪಿತ ಅಧಿಕಾರಿ ಆರಾಮಾವಾಗಿ ಓಡಾಡಿಕೊಂಡಿದ್ದಾರೆ. ಇದೇ ಸಾಮಾನ್ಯ ವ್ಯಕ್ತಿಯಾಗಿದ್ದರೆ ನೀವು ಬಿಡುತ್ತಿದ್ದೀರಾ? ಹತ್ತು ವರ್ಷಗಳ ಶಿಕ್ಷೆ ಆಗುವ ಸಂಜ್ಞೇ ಅಪರಾಧದಲ್ಲಿ ಯಾರನ್ನೂ ಬಂಧಿಸಿಲ್ಲ! ಬಡಪಾಯಿ ಸಿಲುಕಿಕೊಂಡರೆ ಕಾಟ ಕೊಡುತ್ತೀರಿ" ಎಂದು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿತ್ತು.

ಇನ್ನು, ಕನಕಲಕ್ಷ್ಮಿ ಅವರು ನಿರೀಕ್ಷಣಾ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯ ವೇಳೆ “ಸದ್ಯಕ್ಕೆ ಅವರನ್ನು ಬಂಧಿಸುವುದಿಲ್ಲ” ಎಂದು ರಾಜ್ಯ ಸರ್ಕಾರವು ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.

ಬೆಂಗಳೂರಿನ ಬನಶಂಕರಿ ಠಾಣೆಯಲ್ಲಿ ಕನಕಲಕ್ಷ್ಮಿ ವಿರುದ್ಧ ಬಿಎನ್‌ಎಸ್‌ ಸೆಕ್ಷನ್‌ 108 ಮತ್ತು ಭ್ರಷ್ಟಾಚಾರ ಪ್ರತಿಬಂಧಕ ಕಾಯಿದೆ ಸೆಕ್ಷನ್‌ 7(a) ಅಡಿ ಪ್ರಕರಣ ದಾಖಲಿಸಲಾಗಿದೆ.

ಭೋವಿ ಅಭಿವೃದ್ಧಿ ನಿಗಮ ಬಹುಕೋಟಿ ಹಗರಣ ತನಿಖೆಯ ನೆಪದಲ್ಲಿ ಸಿಐಡಿ ಪೊಲೀಸರು ನೀಡಿದ ಕಿರುಕುಳದಿಂದ ಮನನೊಂದು ವಕೀಲೆ ಎಸ್‌ ಜೀವಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾದ ಪ್ರಕರಣದ ತನಿಖೆ ನಡೆಸಲು ಹೈಕೋರ್ಟ್‌ ಮೂವರು ಐಪಿಎಸ್‌ ಅಧಿಕಾರಿಗಳನ್ನು ಒಳಗೊಂಡ ವಿಶೇಷ ತನಿಖಾ ತಂಡವನ್ನು (ಎಸ್‌ಐಟಿ) ರಚಿಸಿದೆ. ಬೆಂಗಳೂರು ಸಿಬಿಐನ ಪೊಲೀಸ್‌ ವರಿಷ್ಠಾಧಿಕಾರಿ ವಿನಾಯಕ್‌ ವರ್ಮಾ, ಕರ್ನಾಟಕ ಹೋಮ್‌ ಗಾರ್ಡ್‌ನ ಪೊಲೀಸ್‌ ವರಿಷ್ಠಾಧಿಕಾರಿಯಾಗಿರುವ ಅಕ್ಷಯ್‌ ಮಚೀಂದ್ರ ಹಾಕೆ, ಆಂತರಿಕ ಭದ್ರತಾ ವಿಭಾಗದ ಪೊಲೀಸ್‌ ವರಿಷ್ಠಾಧಿಕಾರಿ ನಿಶಾ ಜೇಮ್ಸ್‌ ಎಸ್‌ಐಟಿ ಸದಸ್ಯರಾಗಿದ್ದಾರೆ. ಈ ತಂಡವು ಇಂದು ಕನಕ ಲಕ್ಷ್ಮಿ ಅವರನ್ನು ಬಂಧಿಸಿದೆ.