CM Basavaraj Bommai and Karnataka HC
CM Basavaraj Bommai and Karnataka HC 
ಸುದ್ದಿಗಳು

ಪಚ್ಚನಾಡಿ ಘನತ್ಯಾಜ್ಯ ವಿಲೇವಾರಿ ಕಾಮಗಾರಿಗೆ ಸಿಎಂ ಅನುಮೋದನೆ; ಪ್ರಗತಿ ವರದಿ ಸಲ್ಲಿಸಲು ಪಾಲಿಕೆಗೆ ಹೈಕೋರ್ಟ್‌ ಸೂಚನೆ

Bar & Bench

ಮಂಗಳೂರಿನ ಪಚ್ಚನಾಡಿ ಭೂಭರ್ತಿ ಘಟಕದಲ್ಲಿ ಬಹಳ ವರ್ಷಗಳಿಂದ ಸಂಗ್ರಹವಾಗಿರುವ ಘನತ್ಯಾಜ್ಯವನ್ನು ತೆರವುಗೊಳಿಸುವ ಕಾಮಗಾರಿಗೆ ಮುಖ್ಯಮಂತ್ರಿ ಅನುಮೋದನೆ ನೀಡಿದ್ದಾರೆ ಎಂದು ರಾಜ್ಯ ಸರ್ಕಾರವು ಬುಧವಾರ ಕರ್ನಾಟಕ ಹೈಕೋರ್ಟ್‌ಗೆ ತಿಳಿಸಿತು.

ಫೆಬ್ರವರಿ 11ರಂದು ಇದೇ ಪ್ರಕರಣದ ವಿಚಾರಣೆಯಲ್ಲಿ ʼಈಗಿರುವುದು ಅತ್ಯಂತ ಸಂವೇದನಾರಹಿತ ಸರ್ಕಾರ, ಸರ್ಕಾರಕ್ಕೆ ಛೀಮಾರಿ ಹಾಕುತ್ತೇವೆʼ ಎಂದು ಪೀಠವು ಹೇಳಿತ್ತು. ತದನಂತರ ಫೆಬ್ರವರಿ 23ರ ವಿಚಾರಣೆಯಂದು "ಸರ್ಕಾರ ಹೇಗೆ ಕೆಲಸ ಮಾಡುತ್ತಿದೆ ಎಂಬುದನ್ನು ಐದು ತಿಂಗಳಿಂದ ನೋಡುತ್ತಿರುವೆ" ಎಂದು ಮುಖ್ಯ ನ್ಯಾಯಮೂರ್ತಿ ರಿತುರಾಜ್‌ ಅವಸ್ಥಿ ಅವರು ಮೌಖಿಕವಾಗಿ ಚಾಟಿ ಬೀಸಿದ್ದರು.

ಮಂಗಳೂರಿನ ಪಚ್ಚನಾಡಿ ಪ್ರದೇಶ ಮತ್ತು ಮರವೂರ ಜಲಾಶಯದ ವ್ಯಾಪ್ತಿಯಲ್ಲಿ ಕುಡಿಯುವ ನೀರು ಕಲುಷಿತವಾಗಿರುವುದರಿಂದ 13 ಗ್ರಾಮಗಳ ಜನರಿಗೆ ಕಲುಷಿತ ನೀರು ಪೂರೈಕೆಯಾಗುತ್ತಿದೆ ಎಂದು ಆಕ್ಷೇಪಿಸಿ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ (ಕೆಎಸ್‌ಎಲ್‌ಎಸ್‌ಎ) ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಮನವಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್‌ ಅವಸ್ಥಿ ಮತ್ತು ನ್ಯಾಯಮೂರ್ತಿ ಎಸ್‌ ಆರ್‌ ಕೃಷ್ಣಕುಮಾರ್‌ ಅವರ ನೇತೃತ್ವದ ವಿಭಾಗೀಯ ಪೀಠವು ನಡೆಸಿತು.

ವಿಚಾರಣೆ ಆರಂಭವಾಗುತ್ತಿದ್ದಂತೆ ಮಂಗಳೂರು ಮಹಾನಗರ ಪಾಲಿಕೆ ಪ್ರತಿನಿಧಿಸಿದ್ದ ಹೆಚ್ಚುವರಿ ಅಡ್ವೊಕೇಟ್ ಜನರಲ್ ಧ್ಯಾನ್ ಚಿನ್ನಪ್ಪ ಅವರು “ಬಹಳ ವರ್ಷಗಳಿಂದ ಸಂಗ್ರಹವಾಗಿರುವ ಘನತ್ಯಾಜ್ಯ ವಿಲೇವಾರಿ ಕಾಮಗಾರಿಯ 73 ಕೋಟಿ ರೂಪಾಯಿ ಯೋಜನೆಗೆ ಮುಖ್ಯಮಂತ್ರಿ ಘಟನೋತ್ತರ ಅನುಮೋದನೆ ನೀಡಿದ್ದಾರೆ. ಅಲ್ಲದೇ ಮಹಾನಗರ ಪಾಲಿಕೆ ಆಯುಕ್ತರು ಟೆಂಡರ್‌ದಾರರಿಗೆ ಮಾರ್ಚ್‌ 8ರಂದು ಒಪ್ಪಿಗೆ ಪತ್ರ ಸಹ ನೀಡಿದ್ದು, ಕಾಮಗಾರಿ ಆರಂಭವಾಗಿದೆ” ಎಂದರು.

ಇದನ್ನು ಆಲಿಸಿದ ಪೀಠವು “ನಾಲ್ಕು ದಿನಗಳಲ್ಲಿ ಈ ಬಗ್ಗೆ ಅಫಿಡವಿಟ್‌ ಸಲ್ಲಿಸಬೇಕು. ಕಾಮಗಾರಿಯ ಪ್ರಗತಿ ವರದಿಯನ್ನು ಕಾಲ ಕಾಲಕ್ಕೆ ನ್ಯಾಯಾಲಯಕ್ಕೆ ಸಲ್ಲಿಸಬೇಕು. ಮುಂದಿನ ವಿಚಾರಣೆಗೆ ಮಂಗಳೂರು ಮಹಾನಗರ ಪಾಲಿಕೆ ಆಯುಕ್ತ ಅಕ್ಷಯ್‌ ಶ್ರೀಧರ್‌ ಅವರು ಹಾಜರಾಗುವ ಅವಶ್ಯಕತೆ ಇಲ್ಲ” ಎಂದು ಆದೇಶದಲ್ಲಿ ಹೇಳಿದ್ದು, ವಿಚಾರಣೆಯನ್ನು ಮೂರು ವಾರಗಳ ಕಾಲ ಮುಂದೂಡಿತು.

“ಜಲ ಮಾಲಿನ್ಯಕ್ಕೆ ಕಾರಣವಾಗಿರುವ ಸುದೀರ್ಘ ಕಾಲದಿಂದ ಸಂಗ್ರಹವಾಗಿರುವ ತ್ಯಾಜ್ಯ ವಿಲೇವಾರಿಗೆ ರಾಜ್ಯ ಸರ್ಕಾರವು 73 ಕೋಟಿ ರೂಪಾಯಿ ಹಂಚಿಕೆ ಮಾಡಿದೆ ಎಂಬ ವಿಚಾರ ನಮ್ಮ ಗಮನದಲ್ಲಿದೆ. ಆದರೆ, ಇದುವರೆಗೂ ತ್ಯಾಜ್ಯ ವಿಲೇವಾರಿ ಮಾಡುವ ಕೆಲಸ ಆರಂಭವಾಗಿಲ್ಲ. ಫಲ್ಗುಣಿ ಉಪನದಿಯ ಕುಡಿಯುವ ನೀರು ಸಂಪೂರ್ಣವಾಗಿ ಕಲುಷಿತಗೊಂಡಿದ್ದು, ಸಾರ್ವಜನಿಕ ಹಿತಾಸಕ್ತಿಯ ದೃಷ್ಟಿಯಿಂದ ಪ್ರತಿವಾದಿಗಳು ಕೆಲಸ ಆರಂಭಿಸುವ ವಿಚಾರದಲ್ಲಿ ನಿರಂತರವಾಗಿ ನ್ಯಾಯಾಲಯ ಒತ್ತಡ ಹಾಕುತ್ತಿದೆ. ಕಳೆದ ವರ್ಷದ ಜುಲೈ 26ರಂದು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು (ಕೆಎಸ್‌ಪಿಸಿಬಿ) ವಿಶ್ಲೇಷಣಾ ವರದಿ ಸಲ್ಲಿಸಿದ್ದು, ಇದರಲ್ಲಿ ಅಲ್ಲಿನ ನೀರು ಕುಡಿಯಲು ಯೋಗ್ಯವಾಗಿಲ್ಲ ಎಂದು ವಿವರಿಸಿದೆ. ಹೀಗಾಗಿ, ಸಾರ್ವಜನಿಕ ಹಿತಾಸಕ್ತಿ ಇರುವುದರಿಂದ ಪ್ರತಿವಾದಿಗಳಿಗೆ ಕೆಲಸ ಆರಂಭಿಸುವ ಅವಶ್ಯಕತೆಯನ್ನು ಮನವರಿಕೆ ಮಾಡಿಕೊಡಲು ಯತ್ನಿಸಲಾಗುತ್ತಿದೆ. ಆದರೆ, ಅವರಿಗೆ ಇದು ಅರಿವಾಗುತ್ತಿಲ್ಲ” ಎಂದು ಬೇಸರದಿಂದ ಪೀಠವು ಈ ಹಿಂದೆ ಆದೇಶದಲ್ಲಿ ಹೇಳಿತ್ತು.

“ಪ್ರತಿ ಬಾರಿಯೂ ಪ್ರಕರಣ ವಿಚಾರಣೆಗೆ ಬಂದಾಗ ಕೆಲಸ ಆರಂಭಿಸದಿರುವುದಕ್ಕೆ ನೆಪಗಳನ್ನು ಹೇಳಲಾಗುತ್ತಿದೆ. ಈ ಬಾರಿ, ಹಣಕಾಸು ಅನುಮೋದನೆ ದೊರೆತಿದ್ದು, ಸದರಿ ವಿಚಾರವನ್ನು ಸಂಪುಟದ ಒಪ್ಪಿಗೆಗೆ ಮಂಡಿಸಲಾಗಿದೆ ಎಂದು ಹೇಳಲಾಗಿದೆ. ಸುದೀರ್ಘ ಅವಧಿಯಿಂದ ಇರುವ ತ್ಯಾಜ್ಯದಿಂದ ಹಲವು ಮಂದಿ ಸಾವಿಗೀಡಾಗಿದ್ದು, ಸಾರ್ವಜನಿಕ ಹಿತಾಸಕ್ತಿ ವಿಚಾರ ಅಡಕವಾಗಿರುವುದನ್ನು ಪರಿಗಣಿಸಿ, ರಾಜ್ಯದ ಮುಖ್ಯ ಕಾರ್ಯದರ್ಶಿಯು ವೈಯಕ್ತಿಕವಾಗಿ ಈ ವಿಚಾರದತ್ತ ಗಮನಹರಿಸಬೇಕು. ಸುದೀರ್ಘ ಅವಧಿಯಿಂದ ಶೇಖರಣೆಯಾಗಿರುವ ತ್ಯಾಜ್ಯವನ್ನು ವಿಲೇವಾರಿ ಮಾಡುವ ಕೆಲಸ ತಕ್ಷಣ ಆರಂಭ ಮಾಡುವ ಕುರಿತು ಎಲ್ಲಾ ಅಗತ್ಯ ಕ್ರಮಕೈಗೊಳ್ಳಬೇಕು” ಎಂದು ಪೀಠವು ಆದೇಶಿಸಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.