ನ್ಯಾಯಾಲಯದ ನಿರ್ಬಂಧದ ಹೊರತಾಗಿಯೂ ನಿವೃತ್ತ ನ್ಯಾಯಮೂರ್ತಿ ಸಿ ಎಸ್ ಕರ್ಣನ್ ಅವರು ಅವಹೇಳನಕಾರಿ ವೀಡಿಯೊ ಅಪ್‌ಲೋಡ್ ಮಾಡುವುದನ್ನು ನಿಲ್ಲಿಸಿಲ್ಲ ಎಂದು ಪೊಲೀಸರು ಮದ್ರಾಸ್ ಹೈಕೋರ್ಟ್‌ಗೆ ತಿಳಿಸಿದ್ದಾರೆ. ಮಹಿಳೆಯರು ಮತ್ತು ನ್ಯಾಯಾಂಗದ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ್ದಕ್ಕಾಗಿ ಕರ್ಣನ್ ಅವರ ವಿರುದ್ಧ ಕ್ರಿಮಿನಲ್ ಕ್ರಮ ಕೈಗೊಳ್ಳಬೇಕೆಂದು ಕೋರಿ ತಮಿಳುನಾಡು ವಕೀಲರ ಪರಿಷತ್ ದೂರು ನೀಡಿತ್ತು. ಅಲ್ಲದೆ ಮೂರು ಎಫ್‌ಐಆರ್‌ಗಳನ್ನು ಕೂಡ ದಾಖಲಿಸಲಾಗಿತ್ತು.
ದೂರಿಗೆ ಸಂಬಂಧಿಸಿದಂತೆ ತನಿಖೆಯ ಪ್ರಗತಿಯನ್ನು ತಿಳಿಸಲು ಸಲ್ಲಿಸಲಾದ ಪ್ರಮಾಣಪತ್ರದಲ್ಲಿ ಪೊಲೀಸರು “ಆದೇಶದ ನಂತರವೂ ಕೆಲಕಾಲ ಕರ್ಣನ್ ಮತ್ತು ಅವರ ಪಕ್ಷವಾದ 'ಆಂಟಿ ಕರಪ್ಷನ್ ಡೈನಮಿಕ್ ಪಾರ್ಟಿ'ಯ ಎಂ ದಾನಶೇಖರನ್ ಅವರು ವೀಡಿಯೊ ಅಪ್‌ಲೋಡ್ ಮಾಡುತ್ತಿದ್ದರು. ಆಕ್ಷೇಪಾರ್ಹ ವೀಡಿಯೊಗಳನ್ನು ಅಳಿಸಿಹಾಕುವಂತೆ ಯೂಟ್ಯೂಬ್‌ಗೆ ಮನವಿ ಮಾಡಲಾಗಿತ್ತು. ಆ ಬಳಿಕವೂ ಮತ್ತೆ ವೀಡಿಯೊ ಅಪ್‌ಲೋಡ್ ಆಯಿತು,” ಇತ್ಯಾದಿ ಅಂಶಗಳನ್ನು ಉಲ್ಲೇಖಿಸಿದ್ದಾರೆ. ತನಿಖೆ ಮುಂದುವರೆಸುವುದಾಗಿ ಪೊಲೀಸರು ತಿಳಿಸಿದ್ದು ವಿಚಾರಣೆಯನ್ನು ಡಿ. 7ಕ್ಕೆ ಮುಂದೂಡಲಾಗಿದೆ.
“ಏಳು ಜನರಲ್ಲಿ ಒಬ್ಬರು ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿರುವ ಸಂದರ್ಭದಲ್ಲಿ ಮಾನಸಿಕ ಆರೋಗ್ಯ ರಕ್ಷಣೆಗೆ ಸಾಕಷ್ಟು ಬಜೆಟ್ ಹಂಚಿಕೆಯಾಗಿಲ್ಲ” ಎಂದು ಮದ್ರಾಸ್ ಹೈಕೋರ್ಟ್ ಆತಂಕ ವ್ಯಕ್ತಪಡಿಸಿದೆ. ತಿರುಚ್ಚಿ ಅಥವಾ ಮಧುರೈ ಕೇಂದ್ರ ಕಾರಾಗ್ರಹದಲ್ಲಿ ಮಾನಸಿಕ ಆರೋಗ್ಯ ರಕ್ಷಣೆಗಾಗಿ ಮೀಸಲಿಟ್ಟ ವೈದ್ಯಕೀಯ ವಿಭಾಗ ಸ್ಥಾಪಿಸುವ ಸಂಬಂಧ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ ಈ ಅಭಿಪ್ರಾಯ ವ್ಯಕ್ತಪಡಿಸಿದೆ.
ಮಾನಸಿಕ ಆರೋಗ್ಯಕ್ಕೆ ಸಾಕಷ್ಟು ಹಣ ಮೀಸಲಿಡದೇ ಇರುವುದು, ಮನೋವವೈದ್ಯರು ಕಡಿಮೆ ಸಂಖ್ಯೆಯಲ್ಲಿರುವುದು ಹಾಗೂ ಭಾರತದಲ್ಲಿ ಪ್ರತಿ ಏಳು ಜನರಲ್ಲಿ ಒಬ್ಬರು ಮಾನಸಿಕ ಅನಾರೋಗ್ಯದಿಂದ ಬಳಲುತ್ತಿದ್ದಾರೆ ಎಂದು ಸೂಚಿಸುವ ಅಂಕಿಅಂಶಗಳನ್ನು ಗಮನಿಸಿದ ನ್ಯಾಯಮೂರ್ತಿಗಳಾದ ಎನ್ ಕಿರುಬಾಕರನ್ ಮತ್ತು ಬಿ ಪುಗಳೇಂದಿ ಅವರಿದ್ದ ಪೀಠ ಪ್ರಕರಣದಲ್ಲಿ ಸರ್ಕಾರದ ವಿವಿಧ ಅಂಗಸಂಸ್ಥೆಗಳನ್ನು, ಇಲಾಖೆಗಳನ್ನು ಪಕ್ಷಕಾರರನ್ನಾಗಿಸಿದೆ. ಕೇಂದ್ರ ಹಣಕಾಸು ಮತ್ತು ಆರೋಗ್ಯ ಸಚಿವಾಲಯಗಳು, ಭಾರತೀಯ ವೈದ್ಯಕೀಯ ಮಂಡಳಿ, ಯುಜಿಸಿ, ನಿಮ್ಹಾನ್ಸ್ ಹಾಗೂ ಭಾರತೀಯ ಮನೋವೈದ್ಯರ ಸೊಸೈಟಿಯನ್ನು ಪ್ರತಿವಾದಿಗಳನ್ನಾಗಿ ಮಾಡಲಾಗಿದೆ. “ಪ್ರತಿ ಜಿಲ್ಲಾ ಮುಖ್ಯ ಆಸ್ಪತ್ರೆಯಲ್ಲಿ ಮನೋವೈದ್ಯಶಾಸ್ತ್ರ ವಿಭಾಗ ಇರುವುದು ಮತ್ತು ತಾಲ್ಲೂಕು ಮಟ್ಟದ ಆಸ್ಪತ್ರೆಯಲ್ಲಿ ಮನೋವೈದ್ಯರಿರುವುದು ತಕ್ಷಣದ ಅವಶ್ಯಕತೆ” ಎಂದಿರುವ ನ್ಯಾಯಾಲಯ ಮನೋರೋಗ ಮತ್ತು ನರವಿಜ್ಞಾನಕ್ಕೆ ಸಂಬಂಧಿಸಿದಂತೆ ಇಡೀ ದೇಶಕ್ಕೆ ನಿಮ್ಹಾನ್ಸ್ ಎಂಬ ಏಕೈಕ ಸಂಸ್ಥೆ ಮಾತ್ರ ಇದೆ ಎಂದು ಅಸಮಾಧಾನ ವ್ಯಕ್ತಪಡಿಸಿದೆ. ಬೆಂಗಳೂರಿನಲ್ಲಿರುವ ನಿಮ್ಹಾನ್ಸ್ ರೀತಿಯ ಸಂಸ್ಥೆಯನ್ನು ದೇಶದ ಉತ್ತರ, ಪೂರ್ವ ಪಶ್ಚಿಮ ಹಾಗೂ ಕೇಂದ್ರ ವಲಯಗಳಿಗೆ ಕೂಡ ಏಕೆ ವಿಸ್ತರಿಸಬಾರದು ಎಂದು ಅದು ಪ್ರಶ್ನಿಸಿದೆ. ಪ್ರಕರಣವನ್ನು ಡಿ 12ಕ್ಕೆ ಮುಂದೂಡಲಾಗಿದೆ.
ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ನೀಡಿದ್ದ ಮಹಿಳೆಯೊಬ್ಬರನ್ನು ಮದುವೆಯಾದ ಆರೋಪಿಗೆ ದೆಹಲಿ ಹೈಕೋರ್ಟ್ ನಿರೀಕ್ಷಣಾ ಜಾಮೀನು ನೀಡಿದೆ. ನ್ಯಾಯಮೂರ್ತಿ ಮನೋಜ್ ಕುಮಾರ್ ಓಹ್ರಿ ಅವರಿದ್ದ ಪೀಠ ಈ ಆದೇಶ ಜಾರಿಗೊಳಿಸಿದ್ದು ಸಂತ್ರಸ್ತೆಯ ತಾಯಿ ಇದಕ್ಕೆ ಯಾವುದೇ ಆಕ್ಷೇಪಣೆ ಎತ್ತಲಿಲ್ಲ ಎಂಬುದನ್ನು ಗಣನೆಗೆ ತೆಗೆದುಕೊಂಡಿತು.
ಅರ್ಜಿದಾರರೂ ಆದ ಆರೋಪಿತ ವ್ಯಕ್ತಿ ವಿರುದ್ಧ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 376/313 ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿತ್ತು. ಎರಡೂ ಕಡೆಯವರ ತಪ್ಪು ತಿಳಿವಳಿಕೆಯಿಂದಾಗಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಅರ್ಜಿದಾರ ತಿಳಿಸಿದ್ದಾರೆ. ಅಲ್ಲದೆ ಮಹಿಳೆ ತಮ್ಮ ಹೇಳಿಕೆಯನ್ನು ಹೊಸದಾಗಿ ದಾಖಲಿಸಿಕೊಳ್ಳುವಂತೆ ಕ್ರಿಮಿನಲ್ ಪ್ರೊಸೀಜರ್ (ಸಿಆರ್‌ಪಿಸಿ) ಯ ಸೆಕ್ಷನ್ 164ರ ಅಡಿಯಲ್ಲಿ ಈಗಾಗಲೇ ಮನವಿ ಮಾಡಿದ್ದರು. ಪಕ್ಷಕಾರರ ನಡುವಿನ ತಪ್ಪು ತಿಳುವಳಿಕೆಯಿಂದಾಗಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಸರ್ಕಾರಿ ನೌಕರನೂ ಆಗಿರುವ ಅರ್ಜಿದಾರ ತಿಳಿಸಿದ್ದಾರೆ. 2020 ರ ಜನವರಿಯಿಂದ ಜೂನ್ ವರೆಗೆ ಘಟನೆ ನಡೆದಿದ್ದರೂ ಜುಲೈನಲ್ಲಷ್ಟೇ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಅರ್ಜಿಯಲ್ಲಿ ವಿವರಿಸಲಾಗಿತ್ತು.