NCLAT 
ಸುದ್ದಿಗಳು

ಇ- ಫೈಲ್ ದಾಖಲಾದ ದಿನದಿಂದಲೇ ಕಾಲಮಿತಿ ಗಣನೆಗೆ ತೆಗೆದುಕೊಳ್ಳಬೇಕೆ ವಿನಾ ರಿ- ಫೈಲಿಂಗ್‌ ದಿನದಿಂದಲ್ಲ: ಎನ್‌ಸಿಎಲ್‌ಎಟಿ

ಆದೇಶದ ಪ್ರಮಾಣೀಕೃತ ಪ್ರತಿಗೆ ಅರ್ಜಿದಾರರು ಅರ್ಜಿ ಸಲ್ಲಿಸಿಲ್ಲ ಎಂಬ ಕಾರಣಕ್ಕೆ ಮೇಲ್ಮನವಿಯನ್ನು ವಜಾಗೊಳಿಸಲಾಗುವುದಿಲ್ಲ. ದಾವೆದಾರರು ಸಾಮಾನ್ಯವಾಗಿ ಆದೇಶಗಳ ಜಾಲತಾಣದ ಪ್ರತಿಗಳನ್ನು ಅವಲಂಬಿಸಿರುತ್ತಾರೆ ಎಂದ ಎನ್‌ಸಿಎಲ್‌ಎಟಿ.

Bar & Bench

ಮೇಲ್ಮನವಿಯನ್ನು ಕಾಲಮಿತಿಯೊಳಗೆ ಸಲ್ಲಿಸಲಾಗಿದೆಯೇ ಎಂದು ನಿರ್ಧರಿಸುವ ಸಲುವಾಗಿ ಒಂದೊಮ್ಮೆ ಮೇಲ್ಮನವಿಯಲ್ಲಿ ದೋಷಗಳಿದ್ದರೂ ಕೂಡ ಆ ಮೇಲ್ಮನವಿಯನ್ನು ಸಲ್ಲಿಸಿದ ದಿನಾಂಕವೇ ಅದರ ಇ- ಫೈಲಿಂಗ್‌ ದಿನವಾಗಿರುತ್ತದೆ ಎಂದು ದೆಹಲಿಯಲ್ಲಿರುವ ರಾಷ್ಟ್ರೀಯ ಕಂಪನಿ ಕಾನೂನು ಮೇಲ್ಮನವಿ ನ್ಯಾಯಮಂಡಳಿ (ಎನ್‌ಸಿಎಲ್‌ಎಟಿ) ಇತ್ತೀಚೆಗೆ ತೀರ್ಪು ನೀಡಿದೆ [ಇನ್ನೋವೇಟರ್ಸ್ ಕ್ಲೀನ್‌ಟೆಕ್ ಪ್ರೈ. ಲಿಮಿಟೆಡ್ ಮತ್ತು ಪಸಾರಿ ಮಲ್ಟಿ ಪ್ರಾಜೆಕ್ಟ್ಸ್ ಪ್ರೈ. ಲಿಮಿಟೆಡ್ ನಡುವಣ ಪ್ರಕರಣ].

ದೋಷಗಳನ್ನು ಸರಿಪಡಿಸಿ ಮತ್ತೆ ಇ- ಫೈಲಿಂಗ್‌ ಮಾಡಿದಾಗ ಅದು ತಾಜಾ ಇ- ಫೈಲಿಂಗ್‌ ಎನಿಸಿಕೊಳ್ಳುವುದಿಲ್ಲ‌ ಎಂದು ನ್ಯಾಯಮಂಡಳಿಯ ಅಧ್ಯಕ್ಷ ನ್ಯಾ. ಅಶೋಕ್‌ ಭೂಷಣ್‌ ಮತ್ತು ತಾಂತ್ರಿಕ ಸದಸ್ಯ ಬರುನ್‌ ಮಿತ್ರ ತಿಳಿಸಿದರು. ಮೇಲ್ಮನವಿಯ ನ್ಯಾಯಮಂಡಳಿಯ ವಿಸ್ತೃತ ಪೀಠ ಈ ಹಿಂದೆ ಈ ವಿಚಾರವನ್ನು ಎತ್ತಿ ಹಿಡಿದಿರುವುದಾಗಿ ತಿಳಿಸಿದರು. ಮರುಫೈಲಿಂಗ್ ದಿನ (ರಿ-ಫೈಲಿಂಗ್) ಮತ್ತು ಫೈಲಿಂಗ್ ದಿನಗಳೆರಡೂ ವಿಭಿನ್ನ ಪರಿಕಲ್ಪನೆಗಳಾಗಿದ್ದು ಇದು ಶಾಸನಬದ್ಧ ಯೋಜನೆಯಿಂದ ಸ್ಪಷ್ಟವಾಗಿದೆ ಎಂದು ನ್ಯಾಯಮಂಡಳಿ ತಿಳಿಸಿದೆ.

ಕಾಲಮಿತಿಯನ್ನು ಇ- ಫೈಲಿಂಗ್‌  ದಿನದಿಂದಲೇ ಲೆಕ್ಕಹಾಕಬೇಕು ಎಂದು ತಾನು 2022ರಲ್ಲಿ ಹೊರಡಿಸಿದ್ದ ಆದೇಶ ಮತ್ತು ಸಂಕೇತ್‌ ಕುಮಾರ್‌ ಅಗರ್‌ವಾಲ್‌ ಇನ್ನಿತರರ ನಡುವಣ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ನೀಡಿದ್ದ ತೀರ್ಪನ್ನು ಆಧರಿಸಿ ಅದು ಈ ತೀರ್ಪು ನೀಡಿದೆ.

ಆದೇಶದ ಪ್ರಮಾಣೀಕೃತ ಪ್ರತಿಗೆ ಅರ್ಜಿದಾರರು ಅರ್ಜಿ ಸಲ್ಲಿಸಿಲ್ಲ ಎಂಬ ಕಾರಣಕ್ಕೆ ಮೇಲ್ಮನವಿಯನ್ನು ವಜಾಗೊಳಿಸಲಾಗುವುದಿಲ್ಲ ಎಂದು ಕೂಡ ನ್ಯಾಯಮಂಡಳಿ ಸ್ಪಷ್ಟಪಡಿಸಿದೆ. ದಾವೆದಾರರು ಸಾಮಾನ್ಯವಾಗಿ ಆದೇಶದ ಜಾಲತಾಣದ ಪ್ರತಿಗಳನ್ನು ಅವಲಂಬಿಸಿರುತ್ತಾರೆ ಎಂದು ಅದು ಹೇಳಿದೆ.

ಎನ್‌ಸಿಎಲ್‌ಎಟಿ ಎದುರು ಸಲ್ಲಿಸಲಾದ ಮೇಲ್ಮನವಿಯ ನಿರ್ವಹಣೆಯ ಪ್ರಶ್ನಿಸಿ ಸಲ್ಲಿಸಲಾಗಿದ್ದ  ಎರಡು ಮಧ್ಯಂತರ ಅರ್ಜಿಗಳನ್ನುವಜಾಗೊಳಿಸುವಾಗ ಈ ತೀರ್ಪು ನೀಡಲಾಗಿದೆ.