Lionel Messi , Calcutta HC  Facebook
ಸುದ್ದಿಗಳು

ಮೆಸ್ಸಿ ಕಾರ್ಯಕ್ರಮ ವಿವಾದ: ತನಿಖೆಯಲ್ಲಿ ಮಧ್ಯಪ್ರವೇಶಿಸಲು ಕಲ್ಕತ್ತಾ ಹೈಕೋರ್ಟ್ ನಕಾರ

“ತನಿಖೆ ಇಲ್ಲವೇ ವಿಚಾರಣೆ ತಡೆಹಿಡಿಯಲು ಅಥವಾ ಅದರಲ್ಲಿ ಹಸ್ತಕ್ಷೇಪ ಮಾಡಲು ಈ ಹಂತದಲ್ಲಿ ನಾವು ಸಿದ್ಧರಿಲ್ಲ,” ಎಂದು ನ್ಯಾಯಮೂರ್ತಿಗಳು ತಿಳಿಸಿದ್ದಾರೆ.

Bar & Bench

ಫುಟ್ಬಾಲ್ ದಿಗ್ಗಜ ಲಿಯೋನೆಲ್ ಮೆಸ್ಸಿ ಭೇಟಿ ಸಂದರ್ಭ ಸಾಲ್ಟ್ ಲೇಕ್ ಸ್ಟೇಡಿಯಂನಲ್ಲಿ ಇತ್ತೀಚೆಗೆ ಅವ್ಯವಸ್ಥೆಗೆ ಸಂಬಂಧಿಸಿದಂತೆ ಸಿಬಿಐ ತನಿಖೆಗೆ ಮಧ್ಯಂತರ ಆದೇಶ ನೀಡುವುದಿಲ್ಲ ಎಂದು ಕಲ್ಕತ್ತಾ ಹೈಕೋರ್ಟ್‌ ಸೋಮವಾರ ತಿಳಿಸಿದೆ.

ಪೊಲೀಸರು ನಡೆಸುತ್ತಿರುವ ತನಿಖೆ ಹಾಗೂ ಹೈಕೋರ್ಟ್‌ನ ಮಾಜಿ ನ್ಯಾಯಮೂರ್ತಿಯವರ ನೇತೃತ್ವದ ವಿಚಾರಣೆ ಇನ್ನೂ ಪ್ರಾರಂಭಿಕ ಹಂತದಲ್ಲಿವೆ ಎಂಬುದನ್ನು ಗಮನಿಸಿದ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಸುಜಯ್ ಪಾಲ್ ಹಾಗೂ ನ್ಯಾಯಮೂರ್ತಿ ಪಾರ್ಥ ಸಾರಥಿ ಸೇನ್ ಅವರನ್ನೊಳಗೊಂಡ ವಿಭಾಗೀಯ ಪೀಠ, ತನಿಖೆ ಅಥವಾ ವಿಚಾರಣೆ ದೋಷಪೂರಿತವಾಗಿದೆ ಎಂಬುದನ್ನು ಸಾಬೀತುಪಡಿಸುವಂತಹ ದಾಖಲೆಗಳನ್ನು ಅರ್ಜಿದಾರರು ಸಲ್ಲಿಸಿಲ್ಲ ಎಂದು ಹೇಳಿತು.

“ತನಿಖೆ ಇಲ್ಲವೇ ವಿಚಾರ\ ತಡೆಹಿಡಿಯಲು ಅಥವಾ ಅದರಲ್ಲಿ ಹಸ್ತಕ್ಷೇಪ ಮಾಡಲು ಈ ಹಂತದಲ್ಲಿ ನಾವು ಸಿದ್ಧರಿಲ್ಲ,” ಎಂದು ನ್ಯಾಯಮೂರ್ತಿಗಳು ತಿಳಿಸಿದರು.

ರಾಜ್ಯ ಸರ್ಕಾರ ರಚಿಸಿದ ವಿಶೇಷ ತನಿಖಾ ತಂಡ (ಎಸ್‌ಐಟಿ) ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಕೊಲ್ಕತ್ತಾ ಹೈಕೋರ್ಟ್, ತನಿಖೆ ನಡೆಸುವುದು ಪೊಲೀಸರ ಕಾನೂನುಬದ್ಧ ಹಕ್ಕು ಎಂಬುದು ಸ್ಥಾಪಿತ ಕಾನೂನು ತತ್ವ ಎಂದಿತು. ಕೇವಲ ಯಾರೋ ಕಕ್ಷಿದಾರರ ಬೇಡಿಕೆ ಇದ್ದ ಮಾತ್ರಕ್ಕೆ ಸಿಬಿಐಗೆ ತನಿಖೆ ವಹಿಸಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ತಿಳಿಸಿತು.

ಇದಲ್ಲದೆ, 1952ರ ವಿಚಾರಣಾ ಆಯೋಗಗಳ ಕಾಯಿದೆಯ ಸೆಕ್ಷನ್ 11 ವಿಸ್ತಾರವಾಗಿದ್ದು, ತನಿಖಾ ಸಮಿತಿಯನ್ನು ನೇಮಕ ಮಾಡುವ ಅಧಿಕಾರವನ್ನು ರಾಜ್ಯ ಸರ್ಕಾರಕ್ಕೆ ನೀಡುತ್ತದೆ ಎಂದು ನ್ಯಾಯಾಲಯ ಹೇಳಿತು.

 ಡಿಸೆಂಬರ್ 13ರಂದು ನಡೆದ ಘಟನೆಯ ಕುರಿತು ನಿಷ್ಪಕ್ಷಪಾತ ಹಾಗೂ ನ್ಯಾಯಾಂಗ ತನಿಖೆ ಕೋರಿ ಸಲ್ಲಿಸಲಾದ ಅರ್ಜಿಗಳ ವಿಚಾರಣೆ ವೇಳೆ, ನ್ಯಾಯಾಲಯ ಈ ಮಧ್ಯಂತರ ಆದೇಶ ನೀಡಿದೆ.

ಮಾಧ್ಯಮ ವರದಿಗಳ ಪ್ರಕಾರ, ಲಿಯೋನೆಲ್ ಮೆಸ್ಸಿಯ ಕೋಲ್ಕತ್ತಾ ಕಾರ್ಯಕ್ರಮಕ್ಕೆ ಹಾಜರಾದ ಅಭಿಮಾನಿಗಳು, ಹೆಚ್ಚಿನ ಪ್ರವೇಶ ಶುಲ್ಕ ಪಾವತಿಸಿದ್ದರೂ ಕೂಡ ತಾರಾ ಆಟಗಾರನನ್ನು ಸರಿಯಾಗಿ ನೋಡಲು ಸಾಧ್ಯವಾಗದೆ ಕೋಪಗೊಂಡು, ಕುರ್ಚಿಗಳನ್ನು ಮುರಿದು, ಮೈದಾನದತ್ತ ವಸ್ತುಗಳನ್ನು ಎಸೆದು ಗದ್ದಲ ಸೃಷ್ಟಿಸಿದ್ದರು.

ಘಟನೆ ಸಂಬಂಧ ರಾಜ್ಯ ಸರ್ಕಾರ ನಿವೃತ್ತ ನ್ಯಾಯಮೂರ್ತಿ ಆಶೀಮ್ ಕುಮಾರ್ ರೇ ಅವರ ನೇತೃತ್ವದ ವಿಚಾರಣಾ ಸಮಿತಿ ರಚಿಸಿತ್ತು. ಜೊತೆಗೆ, ಈ ಸಂಬಂಧ ದಾಖಲಾಗಿರುವ ಅಪರಾಧ ಪ್ರಕರಣವನ್ನು ನಾಲ್ವರು ಐಪಿಎಸ್ ಅಧಿಕಾರಿಗಳನ್ನು ಒಳಗೊಂಡ ಎಸ್‌ಐಟಿ ತನಿಖೆ ನಡೆಸುತ್ತಿದೆ.

ಸೋಮವಾರ ಅರ್ಜಿದಾರರ ಮಧ್ಯಂತರ ಪರಿಹಾರ ಬೇಡಿಕೆ ತಿರಸ್ಕರಿಸಿದ ನ್ಯಾಯಾಲಯ, ಪ್ರಕರಣವನ್ನು 2026ರ ಫೆಬ್ರವರಿ 16ರಂದು ವಿಚಾರಣೆಗೆ ನಡೆಸುವುದಾಗಿ ಹೇಳಿತು. ಇದೇ ವೇಳೆ ಅರ್ಜಿಗಳಿಗೆ ಪ್ರತಿಕ್ರಿಯೆ ನೀಡುವಂತೆ ರಾಜ್ಯ ಸರ್ಕಾರ ಹಾಗೂ ಕಾರ್ಯಕ್ರಮ ಆಯೋಜಕರಿಗೆ ಅದು ನೋಟಿಸ್ ಜಾರಿ ಮಾಡಿದೆ.