ದಾವೆ

ಭೂಷಣ್ ನಡತೆಯು ಹಟಮಾರಿತನ ಮತ್ತು ಅಹಮಿಕೆಯ ಪ್ರತಿಫಲನ; ಉದಾರತೆಯಿಂದ ದೋಷಿಗೆ ಸಾಂಕೇತಿಕ ದಂಡ ವಿಧಿಸಲಾಗಿದೆ ಎಂದ ಪೀಠ

“..ನ್ಯಾಯಾಂಗ ನಿಂದನೆ ಪ್ರಕರಣದ ದೋಷಿಯು ನ್ಯಾಯಾಲಯದಿಂದ ಉದಾರತೆ ಅಥವಾ ದಯೆ ಬಯಸುವುದಿಲ್ಲ ಎಂದ ಮಾತ್ರಕ್ಕೆ ಅವರ ವಿರುದ್ಧ ನಾವು ಪ್ರತಿದಾಳಿ ನಡೆಸುವುದಿಲ್ಲ” ಎಂದ ಸುಪ್ರೀಂ ಕೋರ್ಟ್‌

Bar & Bench

ನ್ಯಾಯಾಂಗವನ್ನು ವಿಮರ್ಶೆ ಮಾಡಿದ್ದ ಎರಡು ಟ್ವೀಟ್‌ ಗಳಿಂದ ನ್ಯಾಯಾಂಗ ನಿಂದನೆಗೆ ಗುರಿಯಾಗಿದ್ದ ಹಿರಿಯ ವಕೀಲ ಪ್ರಶಾಂತ್ ಭೂಷಣ್ ಅವರಿಗೆ ಸಾಂಕೇತಿಕವಾಗಿ ಒಂದು ರೂಪಾಯಿ ದಂಡ ವಿಧಿಸಿ ಅವರನ್ನು ಬಿಡುಗಡೆ ಮಾಡುವ ಮೂಲಕ ಸುಪ್ರೀಂ ಕೋರ್ಟ್ "ಉದಾರತೆ" ಮೆರೆದಿದೆ.

ನ್ಯಾಯಾಂಗ ನಿಂದನೆ ದೋಷಿಯಾದ ಭೂಷಣ್ ಅವರಿಗೆ ಜೈಲು ವಾಸ ಅಥವಾ ವಕೀಲಿಕೆಗೆ ನಿಷೇಧ ಹೇರುವ ಶಿಕ್ಷೆ ವಿಧಿಸಲು ನ್ಯಾಯಪೀಠ ಹೆದರುವುದಿಲ್ಲ. ಆದರೆ, ಪ್ರತಿದಾಳಿ ಮಾಡುವುದರಿಂದ ನ್ಯಾಯಾಲಯ ಅಂತರ ಕಾಯ್ದುಕೊಂಡಿದೆ” ಎಂದು ನ್ಯಾಯಪೀಠವು ತನ್ನ 82 ಪುಟಗಳ ತೀರ್ಪಿನಲ್ಲಿ ಒತ್ತಿ ಹೇಳಿದೆ.

ಭೂಷಣ್ ಅವರು ಸೆಪ್ಟೆಂಬರ್ 15ರೊಳಗೆ ಸಾಂಕೇತಿಕ ದಂಡವಾದ ಒಂದು ರೂಪಾಯಿ ಪಾವತಿಸಲು ವಿಫಲವಾದಲ್ಲಿ ಮೂರು ತಿಂಗಳ ಜೈಲುವಾಸ ಅಥವಾ ಮೂರು ವರ್ಷಗಳ ವಕೀಲಿಕೆ ನಿಷೇಧ ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂದು ನ್ಯಾಯಪೀಠ ತೀರ್ಪನ್ನು ನೀಡಿದೆ.

“ನ್ಯಾಯಾಂಗ ನಿಂದನೆಯ ದೋಷಿಗೆ ಜೈಲು ಶಿಕ್ಷೆ ಅಥವಾ ವಕೀಲಿಕೆಗೆ ನಿಷೇಧ ಹೇರುವುದಕ್ಕೆ ನಮಗೆ ಹೆದರಿಕೆ ಇಲ್ಲ. ದೋಷಿಯ ನಡವಳಿಕೆಯಲ್ಲಿ ಹಟಮಾರಿತನ ಮತ್ತು ಅಹಮಿಕೆ ಎದ್ದು ಕಾಣುತ್ತಿದೆ. ಆದರೆ ಆದಕ್ಕೆ ನ್ಯಾಯಾಂಗದ ಆಡಳಿತ ಮತ್ತು ಪವಿತ್ರವಾದ ವೃತ್ತಿಯಲ್ಲಿ ಯಾವುದೇ ಅವಕಾಶವಿಲ್ಲ. ನ್ಯಾಯಿಕ ವ್ಯವಸ್ಥೆಯ ಭಾಗವಾಗಿರುವ ದೋಷಿಯು ಸಂಸ್ಥೆಗೆ ಆಗಿರುವ ಧಕ್ಕೆಗೆ ಯಾವುದೇ ತೆರನಾದ ಪಶ್ಚಾತಾಪ ವ್ಯಕ್ತಪಡಿಸಿಲ್ಲ”.
ಸುಪ್ರೀಂ ಕೋರ್ಟ್

ಅದಾಗ್ಯೂ, ಪ್ರಕರಣದಲ್ಲಿ ಉದಾರತೆ ಮೆರೆಯಲು ನಿಶ್ಚಯಿಸಿರುವುದಾಗಿ ನ್ಯಾಯಪೀಠ ಹೇಳಿದ್ದು, ಹೀಗೆ ವಿವರಿಸಿದೆ.

“ಇದೇ ಸಂದರ್ಭದಲ್ಲಿ ನ್ಯಾಯಾಂಗ ನಿಂದನೆ ಪ್ರಕರಣದ ದೋಷಿಯು ನ್ಯಾಯಾಲಯದಿಂದ ಉದಾರತೆ ಅಥವಾ ಕನಿಕರ ಬಯಸುವುದಿಲ್ಲ ಎಂದಿರುವ ಮಾತ್ರಕ್ಕೆ ಅವರ ವಿರುದ್ಧ ನಾವು ಪ್ರತಿದಾಳಿ ನಡೆಸುವುದಿಲ್ಲ. ನ್ಯಾಯಾಲಯವು ಅಪರಾಧ ಎಂದು ನಿರ್ಧರಿಸಿರುವುದರಿಂದ ಕಾನೂನಿನಲ್ಲಿ ಉಲ್ಲೇಖಿಸಿರುವಂತೆ ದಂಡ ಪಾವತಿಸಲು ಸಿದ್ಧವಾಗಿರುವುದಾಗಿ ಅವರು ಹೇಳಿದ್ದಾರೆ” ಎಂದಿದೆ.

ಆಗಸ್ಟ್‌ 14ರಂದು ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ಪ್ರಶಾಂತ್ ಭೂಷಣ್ ಅವರನ್ನು ದೋಷಿ ಎಂದು ಘೋಷಿಸಿದ್ದ ನ್ಯಾಯಾಲಯವು ಇದಕ್ಕೆ ಸಂಬಂಧಿಸಿದಂತೆ ಸೋಮವಾರ ಬೆಳಿಗ್ಗೆ ನ್ಯಾಯಮೂರ್ತಿಗಳಾದ ಅರುಣ್ ಮಿಶ್ರಾ, ಬಿ ಆರ್ ಗವಾಯಿ ಮತ್ತು ಅನಿರುದ್ಧ ಬೋಸ್ ನೇತೃತ್ವದ ತ್ರಿಸದಸ್ಯ ಪೀಠವು ಶಿಕ್ಷೆ ಪ್ರಕಟಿಸಿತು. ಶಿಕ್ಷೆ ಪ್ರಮಾಣದ ತೀರ್ಪಿನಲ್ಲಿ ಅದನ್ನು ಬರೆದ ಯಾರೊಬ್ಬರ ಬಗ್ಗೆಯೂ ಉಲ್ಲೇಖಿಸಲಾಗಿಲ್ಲ.

ಭೂಷಣ್ ನ್ಯಾಯಾಂಗ ನಿಂದನೆಯ ದೋಷಿ ಎಂಬುದನ್ನು ಪುನರುಚ್ಚರಿಸುವುದಕ್ಕೆ ಮತ್ತು ಅವರಿಗೆ ಒಂದು ರೂಪಾಯಿ ಸಾಂಕೇತಿಕ ದಂಡ ವಿಧಿಸುತ್ತಿರುವುದೇಕೆ ಎಂಬುದಕ್ಕೆ ನ್ಯಾಯಾಲಯವು ಕಾರಣಗಳನ್ನು ಹೀಗೆ ಪಟ್ಟಿ ಮಾಡಿದೆ.

ರಕ್ಷಣೆಯಲ್ಲಿ ಪ್ರಾಮಾಣಿಕತೆಯೂ ಇಲ್ಲ, ಅದರಲ್ಲಿ ಸಾರ್ವಜನಿಕ ಹಿತಾಸಕ್ತಿಯೂ ಕಾಣುತ್ತಿಲ್ಲ

ತಾನು ಮಾಡಿರುವ ಟ್ವೀಟ್‌ ಗಳು ನೈಜವಾಗಿದ್ದು ಸತ್ಯವನ್ನು ಬಿಂಬಿಸುವುದರಿಂದ ಅವುಗಳಿಗೆ ತಾನು ಬದ್ಧವಾಗಿರುವುದರಾಗಿ ಭೂಷಣ್ ಅವರು ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ತಿಳಿಸಿದ್ದಾರೆ. ನ್ಯಾಯಾಂಗ ನಿಂದನೆ ಕಾಯ್ದೆ ಅನ್ವಯ ಸತ್ಯವು ಸಮಂಜಸವಾದ ರಕ್ಷಣೆಯಾಗಿದೆ ಎಂಬುದು ಗಮನಾರ್ಹ.

ಸತ್ಯದ ರಕ್ಷಣೆಯನ್ನು ಭೂಷಣ್ ಎತ್ತುತ್ತಿದ್ದಾರೆ. ಆದರೆ, ಅವರ ಎರಡೂ ಟ್ವೀಟ್ ಗಳು ಸಾರ್ವಜನಿಕ ಹಿತಾಸಕ್ತಿ ಅಥವಾ ಪ್ರಾಮಾಣಿಕತೆ ಎಂಬ ಎರಡೂ ಪರೀಕ್ಷೆಗಲ್ಲಿ ಸೋಲನುಭವಿಸಿವೆ ಎಂದು ನ್ಯಾಯಾಲಯವು ಪುನರುಚ್ಚರಿಸಿದೆ.

“...ಸಾರ್ವಜನಿಕ ಹಿತಾಸಕ್ತಿ ಅಥವಾ ಪ್ರಾಮಾಣಿಕತೆಯ ಕಾರಣಗಳನ್ನಿಟ್ಟು ರಕ್ಷಣೆ ಬಯಸುತ್ತಿರುವುದಾಗಿ ಹೇಳುತ್ತಿರುವುದು ಸರಿಯಲ್ಲ. ಇದಕ್ಕೆ ವಿರುದ್ಧವಾಗಿ ದೇಶದ ಸಾಮಾನ್ಯ ಜನರ ನ್ಯಾಯ ನಿರೀಕ್ಷೆಯ ಕೊನೆಯ ಹಾಗೂ ಏಕೈಕ ತಾಣವಾಗಿರುವ ಸಂಸ್ಥೆಯ ಘನತೆಯನ್ನು ಅವಹೇಳನ ಮಾಡುವುದರಿಂದ ಅದನ್ನು ಮತ್ತಷ್ಟು ವಿವಾದಾತ್ಮಕಗೊಳಿಸಿ ಮತ್ತು ನ್ಯಾಯಿಕ ವ್ಯವಸ್ಥೆಗೆ ಕುಂದುಂಟು ಮಾಡಲಾಗಿದೆ”.

ಭೂಷಣ್ ಅವರು ತಮ್ಮ ಪ್ರತಿಕ್ರಿಯೆ ಪ್ರಮಾಣ ಪತ್ರದಲ್ಲಿ ನೀಡಿರುವ ಹೇಳಿಕೆಗಳಿಗೆ ವಿರೋಧ ವ್ಯಕ್ತಪಡಿಸಿರುವ ನ್ಯಾಯಾಪೀಠವು, ಭೂಷಣ್ ಅವರ ರಕ್ಷಣಾ ವಾದವನ್ನು ದಾಖಲೆಯಿಂದ ತೆಗೆದುಹಾಕುವಂತೆ ಕೋರಿದ್ದ ಅಟಾರ್ನಿ ಜನರಲ್ ಕೆ ಕೆ ವೇಣುಗೋಪಾಲ್ ಅವರ ಸಲಹೆಯನ್ನು ಒಪ್ಪಿಕೊಂಡಿದೆ.

“ಸತ್ಯವನ್ನು ರಕ್ಷಣೆಯನ್ನಾಗಿಸುವ ವಾದವನ್ನು ಪರಿಗಣಿಸುವುದಾದರೆ ಅವು ನಿಂದನೆಯನ್ನು ಮತ್ತಷ್ಟು ಉಲ್ಬಣಗೊಳಿಸುತ್ತವೆ… ನಮ್ಮ ದೃಷ್ಟಿಯಯಲ್ಲಿ ರಕ್ಷಣೆಯನ್ನು ಸಾರ್ವಜನಿಕ ಹಿತಾಸಕ್ತಿಯಿಂದಾಗಲಿ ಅಥವಾ ಪ್ರಾಮಾಣಿಕತೆಯಿಂದಾಗಲೀ ತೆಗೆದುಕೊಂಡಿಲ್ಲ. ಬದಲಿಗೆ ನ್ಯಾಯಾಂಗ ನಿಂದನೆ ದೋಷಿಯು ನ್ಯಾಯ ವ್ಯವಸ್ಥೆಯ ವಿರುದ್ಧ ಅಜಾಗರೂಕ ದಾಳಿ ನಡೆಸಿದ್ದಾರೆ”.
ಸುಪ್ರೀಂ ಕೋರ್ಟ್

ಈ ಹಿನ್ನೆಲೆಯಲ್ಲಿ ಆಗಸ್ಟ್ 14ರ ನ್ಯಾಯಾಂಗ ನಿಂದನೆ ತೀರ್ಪನ್ನು ಮರುಪರಿಶೀಲಿಸುವುದರಲ್ಲಿ ಯಾವುದೇ ಸಕಾರಣವಿಲ್ಲ ಎಂದಿರುವ ನ್ಯಾಯಪೀಠವು ಜಾಗರೂಕತೆ, ಎಚ್ಚರಿಕೆ ಮತ್ತು ಮುಂಜಾಗ್ರತೆಯಿಂದ ಸ್ವಯಂ ಪ್ರೇರಿತವಾಗಿ ನಿಂದನಾ ವ್ಯಾಪ್ತಿಗೆ ಕೈಹಾಕಿರುವುದಾಗಿ ಹೇಳಿದೆ.

ನ್ಯಾಯಮೂರ್ತಿಗಳ ಮೂಕವೇದನೆ

"ನ್ಯಾಯಮೂರ್ತಿಗಳು ತಮ್ಮ ಅಭಿಪ್ರಾಯವನ್ನು ತೀರ್ಪಿನ ಮೂಲಕ ವ್ಯಕ್ತಪಡಿಸಬೇಕು. ಅವರು ಸಾರ್ವಜನಿಕ ಚರ್ಚೆಯಲ್ಲಿ ಭಾಗವಹಿಸಲಾಗದು, ಮಾಧ್ಯಮಗಳಿಗೆ ಹೋಗಲಾಗದು. ನ್ಯಾಯಮೂರ್ತಿಗಳ ವಿರುದ್ಧ ಪತ್ರಿಕೆಗಳಲ್ಲಿ, ಮಾಧ್ಯಮಗಳಲ್ಲಿ ಯಾವುದೇ ಆರೋಪವನ್ನು ಸುಲಭವಾಗಿ ಮಾಡಬಹುದು. ಅಂತಹ ಆರೋಪಗಳಿಂದಾಗಿ ನ್ಯಾಯಮೂರ್ತಿಗಳು ಮೌನವಾಗಿ ನೋವುಣ್ಣುತ್ತಾರೆ. ಅಂತಹ ಆರೋಪಗಳಿಗೆ ಪ್ರತಿರೋಧ ವ್ಯಕ್ತಪಡಿಸಲು ಅವರು ಸಾರ್ವಜನಿಕ ವೇದಿಕೆಗಳಿಗಾಗಲಿ, ಪತ್ರಿಕೆಗಳಿಗಾಗಲಿ ಅಥವಾ ಮಾಧ್ಯಮಗಳಿಗಾಗಲಿ ಹೋಗುವಂತಿಲ್ಲ. ಅಥವಾ, ಒಂದೊಮ್ಮೆ ಅವರು ಆ ಪ್ರಕರಣವನ್ನು ನಿರ್ವಹಿಸುತ್ತಿಲ್ಲ ಎಂದಾದಲ್ಲಿ ಆ ಗಂಭೀರ ಆರೋಪಗಳ ಸಾಚಾತನದ ಬಗ್ಗೆ ಬರೆಯುವಂತೆಯೂ ಇಲ್ಲ,” ಎಂದು ತೀರ್ಪಿನಲ್ಲಿ ದಾಖಲಿಸಲಾಗಿದೆ.

“ನ್ಯಾಯಮೂರ್ತಿಗಳು ಮಾಧ್ಯಮಗಳ ಮುಂದೆ ಹೋದದ್ದು ಇದುವೇ ಮೊದಲು ಮತ್ತು ಕೊನೆಯದಾಗಲಿ ಎಂದು ನಾವು ಆಶಿಸುತ್ತೇವೆ. ಆಂತರಿಕ ವ್ಯವಸ್ಥೆಯ ಮೂಲಕ ಘನತೆಯನ್ನು ಕಾಪಾಡಿಕೊಳ್ಳುವ ವಿವೇಕವನ್ನು ಭಗವಂತ ನೀಡಲಿ ಎಂದು ಆಶಿಸುತ್ತೇವೆ. ಅದರಲ್ಲಿಯೂ, ಸಾರ್ವಜನಿಕವಾಗಿ ಆರೋಪಗಳನ್ನು ಮಾಡಿದರೆ ಅದನ್ನು ನೋವುಣ್ಣುವ ನ್ಯಾಯಮೂರ್ತಿಗಳು ಭರಿಸಲಾಗದು. ಕೊನೆಯವರೆಗೆ ಆ ನೋವು ಅವರನ್ನು ಕಾಡುತ್ತದೆ. ಸತ್ಯವು ನ್ಯಾಯಮೂರ್ತಿಗಳ ರಕ್ಷಣೆಗೂ ಅನ್ವಯವಾಗುತ್ತದೆ, ಆದರೆ, ಅವರು ತಮ್ಮ ನ್ಯಾಯಿಕ ಕಟ್ಟುಪಾಡುಗಳು, ನೈತಿಕತೆ ಮತ್ತು ನಡಾವಳಿ ಸಂಹಿತೆಗಳ ಬಂಧಿಗಳಾಗಿರುತ್ತಾರೆ. ಅದೇ ರೀತಿ, ಇದೇ ವ್ಯವಸ್ಥೆಯ ಭಾಗವಾಗಿರುವುದರಿಂದ ನ್ಯಾಯವಾದಿಗಳ ನಡಾವಳಿ ಸಂಹಿತೆಯು ವಕೀಲರಿಗೂ ಸಮನಾಗಿಯೇ ಅನ್ವಯಿಸುತ್ತದೆ”
“ಮಾಧ್ಯಮಗಳಲ್ಲಿ ಪ್ರಕಟವಾಗುವ ಲೇಖನಗಳಲ್ಲಿನ ಹೇಳಿಕೆಗಳು, ವ್ಯಕ್ತವಾಗುವ ಅಭಿಪ್ರಾಯಗಳು ಇದಾವುದರ ಪ್ರಭಾವಕ್ಕೆ ನ್ಯಾಯಾಲಯವು ಒಳಗಾಗಬಾರದು ಹಾಗೂ ತನ್ನ ಕರ್ತವ್ಯವನ್ನು ತೊರೆಯಬಾರದು. ಅಂತಹ ಯಾವುದೇ ಅಭಿಪ್ರಾಯಗಳ ಪ್ರಭಾವಗಳಿಗೆ ಈಡಾಗದೆ ಅದು ಪ್ರಕರಣವನ್ನು ನಿರ್ಧರಿಸಬೇಕು... ನಮ್ಮ ನ್ಯಾಯಿಕ ಕರ್ತವ್ಯವನ್ನು ನಿರ್ವಹಿಸುವಾಗ, ನಾವು ನೀಡುವ ತೀರ್ಪಿನಿಂದ ನಮ್ಮನ್ನು ಹೊಗಳಲಾಗುತ್ತದೆಯೇ ಅಥವಾ ಟೀಕಿಸಲಾಗುತ್ತದೆಯೇ ಎನ್ನುವುದನ್ನು ಪರಿಗಣಿಸಲಾಗದು. ತೀರ್ಪಿನ ಮೇಲೆ ವಿಮರ್ಶೆ ಇರುತ್ತದೆಯೋ, ಇಲ್ಲವೋ ಎನ್ನುವುದರ ಆಧಾರದಲ್ಲಿ ನಾವು ಪ್ರಕರಣವನ್ನು ತೀರ್ಮಾನಿಸಬೇಕು ಎಂದು ನಿರೀಕ್ಷಿಸಲಾಗದು.”
“ನಾವು ಅಂತಹ ವರ್ತನೆಯನ್ನು ಪರಿಗಣಿಸದೆ ಹೋದಲ್ಲಿ ಅದು ದೇಶಾದ್ಯಂತ ಇರುವ ವಕೀಲರು, ಅರ್ಜಿದಾರರಿಗೆ ತಪ್ಪು ಸಂದೇಶವನ್ನು ನೀಡುತ್ತದೆ. ಅದರೆ, ಉದಾರತೆಯನ್ನು ತೋರಿಸುವ ಮೂಲಕ, ಯಾವುದೇ ತೀವ್ರತರ ಶಿಕ್ಷೆಯನ್ನು ವಿಧಿಸದೆ ನಾವು ನ್ಯಾಯಾಂಗ ನಿಂದನೆ ದೋಷಿಗೆ ಸಾಂಕೇತಿಕವಾಗಿ ರೂ.1 (ಒಂದು ರೂಪಾಯಿ) ದಂಡ ವಿಧಿಸಿದ್ದೇವೆ.”

"ನ್ಯಾಯಾಲಯವು ಆರಂಭದಿಂದಲೂ ಈ ಪ್ರಕರಣಕ್ಕೆ ಅಂತ್ಯ ಹಾಡಲು ಇಚ್ಛಿಸಿತ್ತು. ಸಂಸ್ಥೆಯ ಮರ್ಯಾದೆ ಮತ್ತು ನ್ಯಾಯಾಲಯದ ಅಧಿಕಾರಿಯೂ ಆಗಿರುವ ವ್ಯಕ್ತಿಯ ಮರ್ಯಾದೆಯನ್ನು ಕಾಪಾಡುವ ಉದ್ದೇಶದಿಂದ ಪ್ರತ್ಯಕವಾಗಿ ಅಥವಾ ಪರೋಕ್ಷವಾಗಿ ನಿಂದನಾ ದೋಷಿಯನ್ನು ಕ್ಷಮೆ ಕೋರುವಂತೆ ಮನವೊಲಿಸಲು ಪ್ರಯತ್ನಿಸಲಾಯಿತು. ಅದರೆ, ನಮ್ಮ ಮನವೊಲಿಕೆ ಅಥವಾ ತಿಳಿದ ಅಟಾರ್ನಿ ಜನರಲ್‌ ಅವರ ಸಲಹೆಯ ನಂತರವೂ ದೋಷಿಯು ಪಶ್ಚಾತ್ತಾಪ ವ್ಯಕ್ತಪಡಿಸಿಲ್ಲ. ಇದಕ್ಕೆ ಕಾರಣವನ್ನು ಅವರೇ ಬಲ್ಲರು. ಹಾಗಾಗಿ ನಾವು ಅವರಿಗೆ ಸೂಕ್ತ ಶಿಕ್ಷೆಯನ್ನು ವಿಧಿಸುವ ಬಗ್ಗೆ ನಿರ್ಧರಿಸಬೇಕಾಗುತ್ತದೆ,” ಎಂದು ನ್ಯಾಯಾಲಯ ತಿಳಿಸಿತು.