ಗ್ರಾಹಕರ ವೈದ್ಯಕೀಯ ಪರಿಸ್ಥಿತಿಗಳ ಸಂಪೂರ್ಣ ಬಹಿರಂಗಪಡಿಸುವಿಕೆ ಮತ್ತು ಬಹಿರಂಗಪಡಿಸದೇ ಇರುವ ಪರಿಣಾಮಗಳಿಗೆ ಸಂಬಂಧಿಸಿದಂತೆ ವಿಮಾ ಏಜೆಂಟರ ನಡಾವಳಿ ಮತ್ತು ಜವಾಬ್ದಾರಿ ಕುರಿತು ಹೊಸ ಮಾರ್ಗಸೂಚಿಗಳನ್ನು ಹೊರಡಿಸಲು ರಾಷ್ಟ್ರೀಯ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ (ಎನ್‌ಸಿಡಿಆರ್‌ಸಿ) ಇತ್ತೀಚೆಗೆ ಭಾರತೀಯ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರಕ್ಕೆ (ಐಆರ್‌ಡಿಎ) ಸಲಹೆ ನೀಡಿದೆ. [ಎಚ್‌ಡಿಎಫ್‌ಸಿ ಸ್ಟ್ಯಾಂಡರ್ಡ್ ಲೈಫ್ ಇನ್ಶುರೆನ್ಸ್ ಕಂ ಲಿಮಿಟೆಡ್ ವಿರುದ್ಧ ವಿಷನ್ ರಾಥೋಡ್].
ಇಂತಹ ಸ್ಪಷ್ಟನೆಯಿಂದ ವಿಮಾದಾರರಿಗೆ ಅನಗತ್ಯವಾದ ಮಾನಸಿಕ ವೇದನೆ ಮತ್ತು ಖರ್ಚು ತಪ್ಪಿಸಬಹುದು ಎಂದು ಎನ್‌ಸಿಡಿಆರ್‌ಸಿ ಕಲಾಪದ ಅಧ್ಯಕ್ಷತೆ ವಹಿಸಿದ್ದ ಸದಸ್ಯ ಡಾ. ಎಸ್ ಎಂ ಕಾಂತಿಕರ್ ಹಾಗೂ ಸದಸ್ಯ ಬಿನೋಯ್ ಕುಮಾರ್ ತಿಳಿಸಿದರು.
"ಅಗತ್ಯವಿದ್ದರೆ ಪ್ರಸ್ತಾವನೆ ನಮೂನೆ ಬದಲಿಸಿ ವೈದ್ಯಕೀಯ ಪರಿಸ್ಥಿತಿಗಳನ್ನು ಬಹಿರಂಗಪಡಿಸದಿರುವುದು ಪರಿಹಾರ ನಿರಾಕರಣೆಗೆ ಕಾರಣವಾಗುತ್ತದೆ ಎಂದು ಗ್ರಾಹಕರ ಗಮನಕ್ಕೆ ಸ್ಪಷ್ಟವಾಗಿ ತಿಳಿಸಬೇಕು" ಎಂದು ಆಯೋಗ ಹೇಳಿದೆ.
ಪ್ರಸ್ತಾವನೆ ನಮೂನೆಯಲ್ಲಿ ವಾಸ್ತವಾಂಶಗಳನ್ನು ನೀಡದೆ ಇದ್ದರೆ ವಿಮಾದಾರರಿಂದ, ವಿಮಾ ಪಾಲಿಸಿ ಅನೂರ್ಜಿತಗೊಳ್ಳುತ್ತದೆ ಎಂದು ಆಯೋಗ ಪುನರುಚ್ಚರಿಸಿತು.
ವಸ್ತುಸ್ಥಿತಿಯನ್ನು ಮರೆಮಾಚುವ ಆಧಾರದ ಮೇಲೆ ವಿಮಾ ಕಂಪನಿಯು ತನ್ನ ಹಕ್ಕನ್ನು ನಿರಾಕರಿಸಿದೆ ಎಂದು ನೀಡಿದ್ದ ದೂರಿನ ಪರವಾಗಿ ರಾಜ್ಯ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ ಆದೇಶ ನೀಡಿತ್ತು ಇದನ್ನು ಪ್ರಶ್ನಿಸಿ ವಿಮಾ ಕಂಪೆನಿ ಮೇಲ್ಮನವಿ ಸಲ್ಲಿಸಿತ್ತು.
ಆದೇಶ ನೀಡುವಾಗ ರಾಜ್ಯ ಆಯೋಗ “ಅಧಿಕ ರಕ್ತದೊತ್ತಡ ಮತ್ತು ಮಧುಮೇಹ ಮಾರಣಾಂತಿಕ ಕಾಯಿಲೆಯಲ್ಲ, ಪ್ರಸ್ತುತ ಅವು ಜೀವನಶೈಲಿ ರೋಗ” ಎಂದು ಹೇಳಿತ್ತು.
ಆದರೆ ವಿಮಾ ಕಂಪೆನಿ ತನ್ನ ವಾದದಲ್ಲಿ “ವಿಮಾದಾರರು ಬಹಿರಂಗಪಡಿಸದೇ ಇದ್ದ ಪ್ಯಾಂಕ್ರಿಯಾಟೈಟಿಸ್ ಮತ್ತು ಮಧುಮೇಹಕ್ಕೂ ಹೃದಯಾಘಾತ ಮತ್ತು ಉಸಿರಾಟದ ಸಮಸ್ಯೆಗೂ ಸಂಬಂಧ ಇದ್ದು ಇದರಿಂದ ರೋಗಿ ಮೃತಪಟ್ಟ ವಾಸ್ತವಾಂಶವನ್ನು ತಿಳಿಸದ ಕಾರಣ ವಿಮಾದಾರರ ಹಕ್ಕನ್ನು ಸೂಕ್ತ ರೀತಿಯಲ್ಲೇ ತಿರಸ್ಕರಿಸಲಾಗಿದೆ” ಎಂದು ತಿಳಿಸಿತ್ತು.
ಇದಕ್ಕೆ ವ್ಯತಿರಿಕ್ತವಾಗಿ ಪ್ರತಿವಾದಿಯು “ವಿಮಾದಾರರ ಸಾವಿಗೆ ಅನಾರೋಗ್ಯ ಪಾತ್ರ ವಹಿಸಿದೆ ಎಂಬುದನ್ನು ಸಾಬೀತುಪಡಿಸಲು ಮೇಲ್ಮನವಿದಾರರು ವಿಫಲವಾಗಿದ್ದು ಪರಿಹಾರ ನಿರಾಕರಿಸಲು ಯಾವುದೇ ಕಾರಣ ಇಲ್ಲ” ಎಂದು ಪ್ರತಿಪಾದಿಸಿದ್ದರು.
ರಾಜ್ಯ ಆಯೋಗದ ಆದೇಶ ರದ್ದುಗೊಳಿಸಿದ ಎನ್‌ಸಿಡಿಆರ್‌ಸಿ ಇದು ಕಾನೂನುಬದ್ಧವಾಗಿ ಸಮರ್ಥನೀಯವಲ್ಲ ಎಂದಿತು. "ಎಲ್ಲಾ ಅನುಮಾನಗಳನ್ನು ಪರಿಹರಿಸಲು, ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (ಐಆರ್‌ಡಿಎ) ಗ್ರಾಹಕರ ಹಿತಾಸಕ್ತಿಯಿಂದ ವಿಷಯವನ್ನು ಪರಿಗಣಿಸಬೇಕು…" ಎಂದು ಆದೇಶ ವಿವರಿಸಿತು.