Indigo 
ಸುದ್ದಿಗಳು

'ಇಂಡಿಗೋಗೆ ನೀಡಿದ್ದ ವಿಶ್ರಾಂತಿ ನಿಯಮ ಸಡಿಲಿಕೆ ವಿಸ್ತರಿಸುವಿರಾ?' ಡಿಜಿಸಿಎಗೆ ಮದ್ರಾಸ್ ಹೈಕೋರ್ಟ್ ಪ್ರಶ್ನೆ

ನಾಗರಿಕ ವಿಮಾನಯಾನ ಅಗತ್ಯತೆಗಳ (ಸಿಎಆರ್) ಕೆಲ ನಿಯಮಗಳನ್ನು ಪಾಲಿಸದಂತೆ ಇಂಡಿಗೋಗೆ ಡಿಜಿಸಿಎ ನೀಡಿದ್ದ ವಿನಾಯಿತಿಯನ್ನು ಚೆನ್ನೈ ನಿವಾಸಿ ವೈ ಆರ್ ರಾಜವೇಣಿ ಅವರು ಡಿಸೆಂಬರ್ 5, 2025 ರಂದು ಪ್ರಶ್ನಿಸಿ ಅರ್ಜಿ ಸಲ್ಲಿಸಿದ್ದರು.

Bar & Bench

ಭಾರತದ ವಾಯುಯಾನ ಸುರಕ್ಷತೆಗೆ ಸಂಬಂಧಿಸಿದ ಕೆಲ ನಿಯಮಗಳನ್ನು ಪಾಲಿಸದಂತೆ ಇಂಡಿಗೋ ಏರ್‌ಲೈನ್ಸ್‌ಗೆ ನೀಡಲಾಗಿದ್ದ ವಿನಾಯಿತಿಯನ್ನು ಇನ್ನಷ್ಟು ಕಾಲ ವಿಸ್ತರಿಸಲು ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ಯೋಚಿಸಿದೆಯೇ ಎಂದು ಮದ್ರಾಸ್ ಹೈಕೋರ್ಟ್ ಡಿಸೆಂಬರ್ 26ರಂದು ಪ್ರಶ್ನಿಸಿದೆ [ರಾಜವೇಣಿ ಮತ್ತು ನಾಗರಿಕ ವಿಮಾನಯಾನ ಮಹಾನಿರ್ದೇಶಕರ ನಡುವಣ ಪ್ರಕರಣ]

ವಿನಾಯಿತಿಯನ್ನು ಪ್ರಶ್ನಿಸಿ ಚೆನ್ನೈ ನಿವಾಸಿ ವೈ ಆರ್ ರಾಜವೇಣಿ ಅವರು ಡಿಸೆಂಬರ್ 5, 2025 ರಂದು ಸಲ್ಲಿಸಿದ್ದ ರಿಟ್ ಅರ್ಜಿಯನ್ನು ನ್ಯಾಯಮೂರ್ತಿ ವಿ ಲಕ್ಷ್ಮಿನಾರಾಯಣನ್ ಆಲಿಸಿದರು.

ನಿರ್ದಿಷ್ಟ ವರ್ಗದ ವಿಮಾನಗಳಿಗೆ ಸಂಬಂಧಿಸಿ ನಾಗರಿಕ ವಿಮಾನಯಾನ ಅಗತ್ಯತೆಗಳ (ಸಿಎಆರ್) ಪ್ಯಾರಾ 3.11 ಮತ್ತು 6.14 ಪಾಲಿಸದಂತೆ ಇಂಡಿಗೋಗೆ ಡಿಜಿಸಿಎ ವಿನಾಯಿತಿ ನೀಡಿತ್ತು. ರಾತ್ರಿ ಕಾರ್ಯಾಚರಣೆ, ವಿಮಾನ ಇಳಿಯುವಿಕೆ ಮತ್ತು ವಿಮಾನ ಸಿಬ್ಬಂದಿಗೆ ಕಡ್ಡಾಯ ಸಾಪ್ತಾಹಿಕ ವಿಶ್ರಾಂತಿಯ ಮೇಲೆ ವಿಧಿಸಲಾಗಿದ್ದ ಕಠಿಣ ಮಿತಿಗಳಿಗೆ ಸಂಬಂಧಿಸಿದಂತೆ ವಿನಾಯಿತಿ ದೊರೆತಿತ್ತು.

ಆದರೆ ಅರ್ಜಿದಾರರು ವಿನಾಯಿತಿ ರದ್ದುಗೊಳಿಸುವಂತೆ ಹಾಗೂ ಈ ಸಂಬಂಧ ತಾತ್ಕಾಲಿಕ ತಡೆಯಾಜ್ಞೆ ನೀಡುವಂತೆ ಕೋರಿದ್ದರು. ಕಾರ್ಯಕಾರಿ ಆದೇಶವೊಂದರ ಮೂಲಕ ಕಡ್ಡಾಯ ಸುರಕ್ಷತಾ ಮಾನದಂಡಗಳನ್ನು ದುರ್ಬಲಗೊಳಿಸುವ ಶಾಸನಬದ್ಧ ಅಧಿಕಾರ ಡಿಜಿಸಿಎಗೆ ಇಲ್ಲ ಎಂದು ವಾದಿಸಿದ್ದರು.

ಆದರೆ ಮಧ್ಯಂತರ ಪರಿಹಾರ ಸಂಬಂಧ ತೀರ್ಪು ನೀಡುವ ಮುನ್ನ ಇಂಡಿಗೋ ವಾದ ಆಲಿಸುವ ಅಗತ್ಯವಿದೆ ಎಂದು ನ್ಯಾಯಾಲಯ ಹೇಳಿತು. ಇಂಡಿಗೋ ವಿಚಾರಣೆ ವೇಳೆ ಹಾಜರಿರಲಿಲ್ಲ.

ಡಿಜಿಸಿಎ ಪರವಾಗಿ ಹಾಜರಾದ ಹೆಚ್ಚುವರಿ ಸಾಲಿಸಿಟರ್ ಜನರಲ್ ಎ ಆರ್ ಎಲ್ ಸುಂದರೇಶನ್ ಅವರು, ಸುರಕ್ಷತಾ ಮಾನದಂಡಗಳನ್ನು ಶಾಶ್ವತವಾಗಿ ಸಡಿಲಿಸುವ ಉದ್ದೇಶ ಈ ವಿನಾಯಿತಿಗೆ ಇಲ್ಲ ಎಂದು ಸ್ಪಷ್ಟಪಡಿಸಿದರು. ಪರಿಷ್ಕೃತ ವಿಶ್ರಾಂತಿ ನಿಯಮಗಳನ್ನು ಇಂಡಿಗೋ ಬಿಕ್ಕಟ್ಟಿನ ವೇಳೆ ಪಾಲಿಸಲು ಆಗದೆ ಇದ್ದುದನ್ನು ಗಣನೆಗೆ ತೆಗೆದುಕೊಂಡು ವಿಮಾನ ರದ್ದುಪಡಿಕೆಗಳಿಂದ ಉಂಟಾದ ಕಾರ್ಯಾಚರಣಾ ಅಸ್ಥಿರತೆಯನ್ನು ತಡೆಯಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದರು.

ಡಿಜಿಸಿಎ ತನ್ನ ವಾದಗಳನ್ನು ಕೌಂಟರ್ ಅಫಿಡವಿಟ್ ರೂಪದಲ್ಲಿ 2026ರ ಜನವರಿ 5ರೊಳಗೆ ಸಲ್ಲಿಸಬೇಕೆಂದು ನ್ಯಾಯಾಲಯ ನಿರ್ದೇಶನ ನೀಡಿದೆ. ಮುಖ್ಯವಾಗಿ, ಡಿಸೆಂಬರ್ 5, 2025ರಂದು ನೀಡಿದ ಈ ವಿನಾಯಿತಿಯನ್ನು ನಿಗದಿತ ಅವಧಿಯನ್ನು ಮೀರಿಸಿ ವಿಸ್ತರಿಸುವ ಉದ್ದೇಶವಿದೆಯೇ ಎಂಬುದನ್ನು ಸ್ಪಷ್ಟಪಡಿಸುವಂತೆ ಮದ್ರಾಸ್ ಹೈಕೋರ್ಟ್ ಡಿಜಿಸಿಎಗೆ ಸೂಚಿಸಿದೆ. ಪ್ರಕರಣದ ಮುಂದಿನ ವಿಚಾರಣೆ 2026ರ ಜನವರಿ 6ರಂದು ನಡೆಯಲಿದೆ.

ಭಾರತದ ವಿಮಾನಯಾನ ಸುರಕ್ಷತಾ ಮಾನದಂಡಗಳನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಹೊಂದಿಸುವ ಉದ್ದೇಶ ಹೊಂದಿರುವ ಸಿಎಆರ್ ನಿಯಮಾವಳಿ ಪೈಲಟ್ ಸಂಘಗಳ ಸುದೀರ್ಘ ಕಾನೂನು ಹೋರಾಟದ ಬಳಿಕ 2024ರಲ್ಲಿ ಜಾರಿಗೆ ಬಂದಿತ್ತು.

ಡಿಜಿಸಿಎ ನೀಡಿರುವ ವಿನಾಯಿತಿ ಪ್ರಶ್ನಿಸಿ ಅದರ ವಿರುದ್ಧ ಸಲ್ಲಿಸಲಾದ ನ್ಯಾಯಾಂಗ ನಿಂದನೆ ಅರ್ಜಿ ದೆಹಲಿ ಹೈಕೋರ್ಟ್‌ನಲ್ಲಿ ಪ್ರಸ್ತುತ ಬಾಕಿ ಉಳಿದಿದೆ.