

ವಿದೇಶದಲ್ಲಿ ದುರಸ್ತಿ ಮಾಡಿ ಪುನಃ ಭಾರತಕ್ಕೆ ತರಲಾದ ವಿಮಾನ ಎಂಜಿನ್‌ಗಳು ಮತ್ತು ಬಿಡಿಭಾಗಗಳ ಮೇಲೆ ಮರು ವಿಧಿಸಲಾದ ₹900 ಕೋಟಿಗೂ ಹೆಚ್ಚಿನ ಮೊತ್ತದ ಕಸ್ಟಮ್ಸ್ ಸುಂಕ ಮರುಪಾವತಿಸಲು ನಿರ್ದೇಶನ ನೀಡಬೇಕು ಎಂದು ಕೋರಿ ದೇಶದ ಅತಿದೊಡ್ಡ ಏರ್‌ಲೈನ್ಸ್ ಇಂಡಿಗೋ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ದೆಹಲಿ ಹೈಕೋರ್ಟ್ ಶುಕ್ರವಾರ ಕಸ್ಟಮ್ಸ್ ಇಲಾಖೆಯ ಪ್ರತಿಕ್ರಿಯೆ ಕೇಳಿದೆ [ಇಂಟರ್ ಗ್ಲೋಬ್ ಏವಿಯೇಷನ್ ಮತ್ತು ಕಸ್ಟಮ್ಸ್ ಇಲಾಖೆ ನಡುವಣ ಪ್ರಕರಣ].
ನ್ಯಾಯಮೂರ್ತಿಗಳಾದ ವಿ ಕಾಮೇಶ್ವರ ರಾವ್ ಮತ್ತು ವಿನೋದ್ ಕುಮಾರ್ ಅವರಿದ್ದ ಪೀಠ ಈ ಆದೇಶ ನೀಡಿದ್ದು 2026ರ ಏಪ್ರಿಲ್‌ನಲ್ಲಿ ಪ್ರಕರಣದ ವಿಚಾರಣೆ ನಡೆಯಲಿದೆ.
ಮರು-ಆಮದಿನ ಮೇಲೆ ಕಸ್ಟಮ್ಸ್ ಸುಂಕ ವಿಧಿಸುವುದು ಅಸಾಂವಿಧಾನಿಕ ಮತ್ತು ಒಂದೇ ವಹಿವಾಟಿನ ಮೇಲೆ ಎರಡು ಬಾರಿ ತೆರಿಗೆ ವಿಧಿಸುವುದಕ್ಕೆ ಅದು ಸಮ ಎಂದು ದೂರಿ ಇಂಡಿಗೋ ಅರ್ಜಿ ಸಲ್ಲಿಸಿತ್ತು. ಜೊತೆಗೆ ದುರಸ್ತಿ ಎಂಬುದು ಸೇವಾ ವರ್ಗಕ್ಕೆ ಸೇರುವುದರಿಂದ ಅದಕ್ಕೆ ಪ್ರತ್ಯೇಕವಾಗಿ ಮರು ಶುಲ್ಕದ ಮುಖಾಂತರ ಜಿಎಸ್‌ಟಿ ಕೂಡ ಪಾವತಿಸಲಾಗಿದೆ. ಆದರೆ ಕಸ್ಟಮ್ಸ್ ಇಲಾಖೆ ಅದೇ ವಹಿವಾಟನ್ನು ಸರಕುಗಳ ಆಮದು ಎಂದು ಪರಿಗಣಿಸಿ ಮತ್ತೆ ಸುಂಕ ವಿಧಿಸಿದ್ದು ಇದು ಅಸಾಂವಿಧಾನಿಕ ಹಾಗೂ ಎರಡು ಬಾರಿ ವಿಧಿಸಲಾದ ತೆರಿಗೆ ಎಂದು ಅದು ಅಳಲು ತೋಡಿಕೊಂಡಿತ್ತು.
ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಕಸ್ಟಮ್ಸ್ ನ್ಯಾಯಮಂಡಳಿ ಇಂಡಿಗೋ ಪರ ತೀರ್ಪು ನೀಡಿದ್ದರೂ, ಇಲಾಖೆ ಈಗಲೂ ಸುಂಕ ವಸೂಲಿ ಮಾಡುತ್ತಿದೆ. ಜೊತೆಗೆ ಎಲ್ಲಾ ಬಿಲ್‌ಗಳಿಗೆ ಸಂಬಂಧಿಸಿದಂತೆ ಸುಂಕ ಈಗಾಗಲೇ ಪಾವತಿ ಮಾಡಲಾಗಿದೆ. ಸಂಬಂಧಪಟ್ಟ ಆದೇಶಗಳ ವಿರುದ್ಧ ಮೇಲ್ಮನವಿ ಸಲ್ಲಿಸಲಾಗಿದೆ. ಸುಪ್ರೀಂ ಕೋರ್ಟ್ ಐಟಿಸಿ ಲಿಮಿಟೆಡ್ ಪ್ರಕರಣದಲ್ಲಿ ನೀಡಿದ ತೀರ್ಪು ಇಲ್ಲಿ ಅನ್ವಯವಾಗುವುದಿಲ್ಲ. ಅದು ಸ್ವಯಂ ಪಾವತಿಸಿದ ಸುಂಕಕ್ಕೆ ಸಂಬಂಧಿಸಿದ ತೀರ್ಪು ಎಂದು ಇಂಡಿಗೋ ವಾದಿಸಿತ್ತು.
ಮತ್ತೆ ಮತ್ತೆ ಮನವಿ ಸಲ್ಲಿಸಿದರೂ ಪ್ರಧಾನ ಆಯುಕ್ತರಿಗೆ ವಿನಂತಿಸಿದರೂ, ಮರುಮೌಲ್ಯಮಾಪನ ಆದೇಶ ಹೊರಡಿಸಿಲ್ಲ ಎಂದು ಇಂಡಿಗೋ ನ್ಯಾಯಾಲಯಕ್ಕೆ ತಿಳಿಸಿದೆ. ಸಂವಿಧಾನಬಾಹಿರ ಎಂದು ಘೋಷಿಸಲಾದ ಬಳಿಕವೂ ಮರುಮೌಲ್ಯಮಾಪನಕ್ಕೆ ಒತ್ತಾಯಿಸುವುದು, ತೀರ್ಪನ್ನು ನಿರಾಕರಿಸುವುದಕ್ಕೆ ಸಮ ಎಂದು ಏರ್‌ಲೈನ್ ವಾದಿಸಿತ್ತು.