Criminal laws  
ಸುದ್ದಿಗಳು

ಹೊಸ ಕ್ರಿಮಿನಲ್ ಕಾನೂನು ತಡೆಗೆ ಮದ್ರಾಸ್ ಹೈಕೋರ್ಟ್ ನಕಾರ: ಹಿಂದಿ ಹೆಸರಿಟ್ಟಿರುವ ಬಗ್ಗೆ ಕೇಂದ್ರಕ್ಕೆ ನೋಟಿಸ್

Bar & Bench

ಭಾರತೀಯ ದಂಡ ಸಂಹಿತೆ, ಕ್ರಿಮಿನಲ್ ಪ್ರಕ್ರಿಯಾ ಸಂಹಿತೆ ಮತ್ತು ಭಾರತೀಯ ಸಾಕ್ಷ್ಯ ಕಾಯಿದೆ ಬದಲಿಗೆ ಜುಲೈ 1 ರಿಂದ ಜಾರಿಗೆ ಬಂದ ಮೂರು ಹೊಸ ಕ್ರಿಮಿನಲ್ ಕಾನೂನುಗಳು ಜಾರಿಯಾಗದಂತೆ ತಡೆ ನೀಡಲು ಮದ್ರಾಸ್ ಹೈಕೋರ್ಟ್ ಬುಧವಾರ ನಿರಾಕರಿಸಿದೆ.

ಭಾರತೀಯ ನ್ಯಾಯ ಸಂಹಿತೆ, ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ ಮತ್ತು ಭಾರತೀಯ ಸಾಕ್ಷ್ಯ ಅಧಿನಿಯಮ್ ಎಂದು ಈ ಮೂರು ಕಾನೂನುಗಳಿಗೆ ನೀಡಿರುವ ಸಂಸ್ಕೃತ/ಹಿಂದಿ ಹೆಸರುಗಳನ್ನು ಪ್ರಶ್ನಿಸಿರುವ ಕುರಿತಂತೆ ಅದು ಕೇಂದ್ರ ಸರ್ಕಾರದ ಪ್ರತಿಕ್ರಿಯೆ ಕೇಳಿದೆ.

ಮೂರು ಹೊಸ ಕ್ರಿಮಿನಲ್ ಕಾನೂನುಗಳಿಗೆ ನೀಡಲಾಗಿರುವ ಹಿಂದಿ ಮತ್ತು ಸಂಸ್ಕೃತ ಹೆಸರುಗಳನ್ನು ಅಸಾಂವಿಧಾನಿಕ ಎಂದು ಪರಿಗಣಿಸಿ ರದ್ದುಗೊಳಿಸುವಂತೆ ಕೋರಿದ್ದ ಮನವಿಗೆ ಸಂಬಂಧಿಸಿದಂತೆ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಆರ್ ಮಹದೇವನ್ ಮತ್ತು ನ್ಯಾಯಮೂರ್ತಿ ಮೊಹಮ್ಮದ್ ಶಫೀಕ್ ಅವರಿದ್ದ ಪೀಠ ಕೇಂದ್ರ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ.

ತೂತುಕುಡಿ ಮೂಲದ ವಕೀಲ ಬಿ ರಾಮ್‌ಕುಮಾರ್ ಆದಿತ್ಯನ್ ಅವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ಹಿಂದಿ ಮತ್ತು ಸಂಸ್ಕೃತ ಹೆಸರುಗಳನ್ನಿಡುವುದು ಸಂವಿಧಾನದ 348 (1) (ಎ) ವಿಧಿಯ ಉಲ್ಲಂಘನೆ ಎಂದಿದ್ದರು.

ಅರ್ಜಿದಾರರು, "ದೇಶದಲ್ಲಿರುವ 28 ರಾಜ್ಯಗಳು ಮತ್ತು ಎಂಟು ಕೇಂದ್ರಾಡಳಿತ ಪ್ರದೇಶಗಳಲ್ಲಿ, ಕೇವಲ ಒಂಬತ್ತು ರಾಜ್ಯಗಳು ಮತ್ತು ಎರಡು ಕೇಂದ್ರಾಡಳಿತ ಪ್ರದೇಶಗಳು ಮಾತ್ರ ಹಿಂದಿಯನ್ನು ತಮ್ಮ ಅಧಿಕೃತ ಭಾಷೆಯಾಗಿ ಹೊಂದಿವೆ. ಹಿಂದಿ ಶೇ 56.37ರಷ್ಟು ಭಾರತೀಯರ ಮಾತೃಭಾಷೆಯಲ್ಲ. ಸಂವಿಧಾನದ ಪರಿಚ್ಛೇದ 348(1)(ಎ) ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್‌ಗಳಲ್ಲಿ ಎಲ್ಲಾ ಪ್ರಕ್ರಿಯೆಗಳನ್ನು ಇಂಗ್ಲಿಷ್‌ನಲ್ಲಿ ನಡೆಸಬೇಕು ಎಂದು ಆದೇಶಿಸಿದ್ದರೂ ಹೀಗೆ ಹೆಸರಿಸಲಾಗಿದೆ" ಎಂದು ಆಕ್ಷೇಪಿಸಿದ್ದಾರೆ.

ಮೂರು ಹೊಸ ಕಾನೂನುಗಳಿಗೆ ನೀಡಲಾದ ಹಿಂದಿ ಹೆಸರಿಡಲಾಗಿದ್ದರೂ ಸಂವಿಧಾನಕ್ಕೆ ಅನುಗುಣವಾಗಿ ಇಂಗ್ಲಿಷ್ ವರ್ಣಮಾಲೆಯನ್ನು ಬಳಸಲಾಗಿದೆ. ಈ ಹೆಸರುಗಳು ಸಾಂವಿಧಾನಿಕ ಹಕ್ಕು, ಜನರ ಮೂಲಭೂತ ಹಕ್ಕು ಇಲ್ಲವೇ  348ನೇ ವಿಧಿಯನ್ನು ಉಲ್ಲಂಘಿಸುವುದಿಲ್ಲ ಎಂದು ಕೇಂದ್ರ ಸರ್ಕಾರದ ಪರವಾಗಿ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಆರ್‌ಎಲ್‌ ಸುಂದರೇಶನ್ ನ್ಯಾಯಾಲಯಕ್ಕೆ ತಿಳಿಸಿದರು.