Madras HC and Ilaiyaraaja 
ಸುದ್ದಿಗಳು

ಸಂಗೀತ ನಿರ್ದೇಶಕ ಇಳಯರಾಜ ಅವರ ವ್ಯಕ್ತಿತ್ವ ಹಕ್ಕು ರಕ್ಷಿಸಿದ ಮದ್ರಾಸ್ ಹೈಕೋರ್ಟ್

ಹಲವು ಆನ್‌ಲೈನ್‌ ವೇದಿಕೆಗಳು ತಮ್ಮ ಸಂಗೀತವನ್ನು ಬೇರೆ ಚಿತ್ರ, ವಿಡಿಯೋದೊಂದಿಗೆ ಸಂಕಲಿಸಿ ಪ್ರಸಾರ ಮಾಡುತ್ತಿದ್ದು ತಮ್ಮ ವ್ಯಕ್ತಿತ್ವವನ್ನು ವಾಣಿಜ್ಯಿಕವಾಗಿ ಬಳಸಿಕೊಂಡಿವೆ ಎಂದು ಇಳಯರಾಜ ದೂರಿದ್ದರು.

Bar & Bench

ಖ್ಯಾತ ಸಂಗೀತ ನಿರ್ದೇಶಕ ಇಳಯರಾಜ ಅವರ ವ್ಯಕ್ತಿತ್ವ ಹಕ್ಕುಗಳಿಗೆ ರಕ್ಷಣೆ ನೀಡಿ ಮದ್ರಾಸ್‌ ಹೈಕೋರ್ಟ್‌ ಶುಕ್ರವಾರ ಆದೇಶಿಸಿದ್ದು ವಿವಿಧ ಡಿಜಿಟಲ್‌ ವೇದಿಕೆಗಳು  ಅವರ ಚಿತ್ರ, ಛಾಯಾಚಿತ್ರಗಳು, ಹಾಸ್ಯಮಯ ಅಥವಾ ಅನಿಮೇಟೆಡ್‌ ಚಿತ್ರ, ಕೃತಕ ಬುದ್ಧಿಮತ್ತೆಯಿಂದ ರಚಿತವಾದ ದೃಶ್ಯಗಳು ಅಥವಾ ಇನ್ನಾವುದೇ ಚಹರೆಯನ್ನು ಅನುಮತಿಯಿಲ್ಲದೆ ಬಳಸದಂತೆ ನಿರ್ಬಂಧ ವಿಧಿಸಿದೆ [ಡಾ ಇಳಯರಾಜ ಮತ್ತು ಅಶೋಕ್‌ ಕುಮಾರ್‌ ನಡುವಣ ಪ್ರಕರಣ].

ದಾಖಲೆಯಲ್ಲಿರುವ ಸಾಕ್ಷಿಗಳು  ಇಳಯರಾಜ ಅವರ ವ್ಯಕ್ತಿತ್ವ ಹಕ್ಕುಗಳನ್ನು ಮೇಲ್ನೋಟಕ್ಕೆ ರಕ್ಷಿಸಬೇಕು ಎಂದು ಹೇಳುತ್ತಿವೆ ಎಂಬುದಾಗಿ ನ್ಯಾಯಮೂರ್ತಿ ಸೆಂಥಿಲ್‌ ಕುಮಾರ್ ಅವರು ಹೇಳಿದರು.

ಇಳಯರಾಜ ಪರ ವಾದ ಮಂಡಿಸಿದ ಹಿರಿಯ ವಕೀಲ ಎಸ್ ಪ್ರಭಾಕರನ್  ಸಾರ್ವಜನಿಕರು ತಮ್ಮ ಸಂಗೀತ ಕೇಳಲು ಇಳಯರಾಜ ಅವರು ಅಸಮ್ಮತಿ ಸೂಚಿಸುತ್ತಿಲ್ಲ ಬದಲಿಗೆ ಕೆಲ ಡಿಜಿಟಲ್‌ ವೇದಿಕೆಗಳು ಅವರ ಸಂಗೀತವನ್ನು ಅನಧಿಕೃತ ಚಿತ್ರ, ವೀಡಿಯೊಗಳೊಂದಿಗೆ ಸಂಕಲಿಸಿ ಪ್ರಸಾರ ಮಾಡುತ್ತಿವೆ. ಕೆಲ ವಿಡಿಯೋಗಳಲ್ಲಿ ಇಳಯರಾಜ ಅವರು ತಮಗೆ ಬೆಂಬಲ ನೀಡುತ್ತಿದ್ದಾರೆ ಎಂಬಂತೆ ತೋರಿಸುತ್ತಿವೆ. ಡೀಪ್‌ಫೇಕ್‌ ಇಲ್ಲವೇ ಕೃತಕಬುದ್ಧಿಮತ್ತೆ ಬಳಸಿ ತಯಾರಿಸಿದ ದೃಶ್ಯಗಳು ಜನರು ತಪ್ಪು ಹಾದಿ ಹಿಡಿಯುವಂತ ಮಾಡಿವೆ. ಇದರಿಂದ ತಮ್ಮ ವ್ಯಕ್ತಿತ್ವ ಹಕ್ಕು ಉಲ್ಲಂಘನೆಯಾಗಿದೆ ಎಂದಿದ್ದರು.

ವಾದ ಆಲಿಸಿದ ನ್ಯಾಯಾಲಯ ಡೀಪ್‌ಫೇಕ್‌ ಇಲ್ಲವೇ ಕೃತಕಬುದ್ಧಿಮತ್ತೆ ಬಳಸಿ ತಯಾರಿಸಿದ ದೃಶ್ಯಗಳು ಕಾನೂನು ಬಾಹಿರ ಎಂದು ದೆಹಲಿ ಹೈಕೋರ್ಟ್‌ ವ್ಯಕ್ತಿತ್ವ ಹಕ್ಕುಗಳ ಕುರಿತಂತೆ ನೀಡಿದ್ದ ಪ್ರಮುಖ ತೀರ್ಪುಗಳನ್ನು ಉಲ್ಲೇಖಿಸಿತು.

ಅಲ್ಲದೆ ತಮಿಳುನಾಡಿನಲ್ಲಿ ಮನೆಮಾತಾಗಿರುವ ಶಿವಾಜಿರಾವ್‌ ಗಾಯಕವಾಡ್‌ (ತಮಿಳು ನಟ ರಜನಿಕಾಂತ್‌) ಮತ್ತು ವರ್ಷಾ ಪ್ರೊಡಕ್ಷನ್ಸ್‌ ನಡುವಣ ತೀರ್ಪಿನಲ್ಲಿ ಹೆಸರು, ಚಿತ್ರ , ಶೈಲೀಕೃತ ರೂಪಗಳಗೂ ವ್ಯಕ್ತಿತ್ವ ಹಕ್ಕು ಅನ್ವಯವಾಗಲಿದೆ ಎಂದು ತಿಳಿಸಿದೆ ಎಂಬುದಾಗಿ ಅದು ತಿಳಿಸಿತು.

ಪ್ರತಿವಾದಿಗಳಿಗೆ ಪ್ರಕರಣದ ಸಂಬಂಧ ನೋಟಿಸ್‌ ನೀಡಿದ ನ್ಯಾಯಾಲಯ ಡಿಸೆಂಬರ್ 19ರೊಳಗೆ ಅವರು ಪ್ರತಿಕ್ರಿಯೆ ಸಲ್ಲಿಸಬೇಕು ಎಂದು ಸೂಚಿಸಿತು.