Madras High Court and MK Stalin  
ಸುದ್ದಿಗಳು

ಗುಟ್ಕಾ ಪ್ರತಿಭಟನೆ: ಸ್ಟಾಲಿನ್‌ ಸೇರಿ 17 ಶಾಸಕರ ವಿರುದ್ಧದ ಹಕ್ಕು ಚ್ಯುತಿ ಪ್ರಕರಣಕ್ಕೆ ಮದ್ರಾಸ್‌ ಹೈಕೋರ್ಟ್‌ ಮರುಜೀವ

ಪ್ರಕರಣವನ್ನು ವಿಧಾನಸಭೆಯ ಈಗಿನ ಹಕ್ಕುಬಾಧ್ಯತಾ ಸಮಿತಿಗೆ ನ್ಯಾಯಮೂರ್ತಿಗಳಾದ ಎಸ್ ಎಂ ಸುಬ್ರಮಣ್ಯಂ ಮತ್ತು ಸಿ ಕುಮಾರಪ್ಪನ್ ಅವರು ಮರಳಿಸಿದರು.

Bar & Bench

ನಿಷೇಧದ ಹೊರತಾಗಿಯೂ ಗುಟ್ಕಾ ಮುಕ್ತ ಮಾರುಕಟ್ಟೆಯಲ್ಲಿ ಲಭ್ಯವಿದೆ ಎಂದು ತಿಳಿಸಲು ಪ್ರತಿಭಟನಾರ್ಥವಾಗಿ 2017ರಲ್ಲಿ ರಾಜ್ಯ ವಿಧಾನಸಭೆಯೊಳಗೆ ಗುಟ್ಕಾ ಪೊಟ್ಟಣಗಳನ್ನು ಕೊಂಡೊಯ್ದು ಪ್ರದರ್ಶಿಸಿದ ತಮಿಳುನಾಡು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಹಾಗೂ 17 ಡಿಎಂಕೆ ಶಾಸಕರ ವಿರುದ್ಧದ ಹಕ್ಕುಚ್ಯುತಿ ಉಲ್ಲಂಘನೆ ಪ್ರಕರಣಕ್ಕೆ ಮದ್ರಾಸ್ ಹೈಕೋರ್ಟ್ ಬುಧವಾರ ಮರುಜೀವ ನೀಡಿದೆ.

ಈ ಸಂಬಂಧ ಏಕಸದಸ್ಯ ಪೀಠ 2021ರಲ್ಲಿ ಹೊರಡಿಸಿದ್ದ ಆದೇಶಕ್ಕೆ ನ್ಯಾಯಮೂರ್ತಿಗಳಾದ ಎಸ್‌ ಎಂ ಸುಬ್ರಮಣ್ಯಂ ಮತ್ತು ಸಿ ಕುಮಾರಪ್ಪನ್ ಅವರಿದ್ದ ವಿಭಾಗೀಯ ಪೀಠ ತಡೆ ನೀಡಿತು.

ರಾಜ್ಯದಲ್ಲಿ ಸರ್ಕಾರ ಅಧಿಕಾರ ಬದಲಾಗಿದೆ ಎಂದ ಮಾತ್ರಕ್ಕೆ ಅದು ಹಕ್ಕುಚ್ಯುತಿ ಉಲ್ಲಂಘನೆಯ ಕಳಂಕದಿಂದ ಪರಿಶುಭ್ರವಾಗಲು ಸಾಧ್ಯವಿಲ್ಲ ಎಂದ ವಿಭಾಗೀಯ ಪೀಠ, ಈ ಸಂಬಂಧ ನಿರ್ಧಾರ ಕೈಗೊಳ್ಳಲು ಅನುವಾಗುವಂತೆ ಹಕ್ಕುಬಾಧ್ಯತಾ ಸಮಿತಿ ಮತ್ತು ಸ್ಪೀಕರ್‌ಗೆ ಪ್ರಕರಣವನ್ನು ವರ್ಗಾಯಿಸಿತು.

ಡಿಎಂಕೆ ಶಾಸಕರಿಗೆ ನೀಡಲಾದ ಶೋಕಾಸ್ ನೋಟಿಸ್‌ಗಳನ್ನು ರದ್ದುಗೊಳಿಸಿದ ಏಕ ಸದಸ್ಯ ಪೀಠದ ಆದೇಶ ಪ್ರಶ್ನಿಸಿ 2021ರ ಜನವರಿಯಲ್ಲಿ ಆಗಿನ ವಿಧಾನಸಭೆ ಕಾರ್ಯದರ್ಶಿ ಮತ್ತು ಆಗಿನ ವಿಶೇಷಾಧಿಕಾರ ಸಮಿತಿಯ ಅಧ್ಯಕ್ಷರು ಸಲ್ಲಿಸಿದ್ದ 19 ರಿಟ್ ಮೇಲ್ಮನವಿಗಳಿಗೆ ಸಂಬಂಧಿಸಿದಂತೆ ಈ ಆದೇಶ ನೀಡಲಾಗಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಹಿಂದೆ ಡಿಎಂಕೆ ಶಾಸಕರ ಪರ ವಾದ ಮಂಡಿಸಿದ್ದ ಹಿರಿಯ ವಕೀಲ ಎನ್‌ ಆರ್‌ ಇಳಾಂಗೋ ನಿಷೇಧದ ಹೊರತಾಗಿಯೂ ಗುಟ್ಕಾ ಮುಕ್ತ ಮಾರುಕಟ್ಟೆಯಲ್ಲಿ ಲಭ್ಯವಿದೆ ಎಂದು ತೋರಿಸಲಷ್ಟೇ ವಿಧಾನಸಭೆಯಲ್ಲಿ ಅದನ್ನು ಪ್ರದರ್ಶಿಸಲಾಗಿತ್ತು. ಅಲ್ಲದೆ ತಮಿಳುನಾಡು ಸರ್ಕಾರದ ಆದೇಶದ ಪ್ರಕಾರ ಗುಟ್ಕಾ ಇರಿಸಿಕೊಳ್ಳುವುದನ್ನು ನಿಷೇಧಿಸಿಲ್ಲ ಬದಲಿಗೆ ಅದರ ತಯಾರಿಕೆ, ಮಾರಾಟ ಹಾಗೂ ಸಂಗ್ರಹಣೆಯನ್ನು ಮಾತ್ರ ನಿಷೇಧಿಸಲಾಗಿದೆ. ಇದೊಂದು ರಾಜಕೀಯ ಪ್ರೇರಿತ ಪ್ರಕರಣ ಎಂದು ವಾದಿಸಿದರು.

ಆದರೂ ಇಂತಹ ಹಕ್ಕುಚ್ಯುತಿ ಪ್ರಕರಣಗಳಲ್ಲಿ ನ್ಯಾಯಾಲಯ ಮಧ್ಯಪ್ರವೇಶಿಸಬಹುದೇ ಎಂದು ನ್ಯಾಯಾಲಯ ಪ್ರಶ್ನಿಸಿತು. ಆಗ ಅಡ್ವೊಕೇಟ್‌ ಜನರಲ್‌ ವಿ ಎಸ್‌ ರಾಮನ್‌ ಅವರು ಈ ವಿಷಯವನ್ನು ಹಕ್ಕುಬಾಧ್ಯತಾ ಸಮಿತಿಗೆ ಸಮಿತಿಗೆ ನೀಡಬಹುದು ಎಂದು ಸೂಚಿಸಿದ್ದರು. ಇದೀಗ ನ್ಯಾಯಾಲಯ ಪ್ರಕರಣದ ಕುರಿತು ಮತ್ತೆ ನಿರ್ಧಾರ ಕೈಗೊಳ್ಳುವಂತೆ ಆದೇಶ ಹೊರಡಿಸಿದೆ.