ಇಂಧನ ಬಂಕ್‌ಗಳಲ್ಲಿ ಸ್ಥಾಪಿಸಲಾದ ಬೆಲೆ ಪ್ರದರ್ಶನ ಫಲಕಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬಿಲ್‌ಗಳಲ್ಲಿ ತೆರಿಗೆ ವಿಭಜನೆ ಹೇಗಿದೆ ಎಂಬುದನ್ನು ಬಹಿರಂಗಪಡಿಸಲು ನಿರ್ದೇಶಿಸಬೇಕೆಂದು ಕೋರಿ ಮದ್ರಾಸ್ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ (ಪಿಐಎಲ್) ಅರ್ಜಿ ಸಲ್ಲಿಸಲಾಗಿದೆ [ಬಿ ರಾಮ್‌ಕುಮಾರ್ ಆದಿತ್ಯನ್ ಮತ್ತು, ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಕಾರ್ಯದರ್ಶಿ ಇನ್ನಿತರರ ನಡುವಣ ಪ್ರಕರಣ].
ಪೆಟ್ರೋಲ್ ಮತ್ತು ಡೀಸೆಲ್ ಬಿಲ್‌ಗಳ ತೆರಿಗೆ ಅಂಶವನ್ನು ತಿಳಿದುಕೊಳ್ಳುವುದು ಗ್ರಾಹಕರ ಮಾಹಿತಿ ಹಕ್ಕಿನ ಭಾಗ ಎಂದು ವಾದಿಸಿ ವಕೀಲ ಬಿ ರಾಮ್‌ಕುಮಾರ್ ಆದಿತ್ಯನ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ಕುರಿತು ನ್ಯಾಯಮೂರ್ತಿಗಳಾದ ಅನಿತಾ ಸುಮಂತ್ ಮತ್ತು ಸಿ ಕುಮಾರಪ್ಪನ್ ಅವರಿದ್ದ ಪೀಠ ನೋಟಿಸ್ ಜಾರಿ ಮಾಡಿದೆ.
ಪ್ರಕರಣದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ತೆರಿಗೆ ಅಧಿಕಾರಿಗಳನ್ನೂ ಪ್ರತಿವಾದಿಗಳನ್ನಾಗಿ ಮಾಡುವಂತೆ ನ್ಯಾಯಾಲಯ ಇಂದು ಆದೇಶಿಸಿದೆ. ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ಮತ್ತು ತಮಿಳುನಾಡು ಹಣಕಾಸು ಇಲಾಖೆಯನ್ನು ಈಗಾಗಲೇ ಪ್ರತಿವಾದಿಗಳನ್ನಾಗಿ ಮಾಡಲಾಗಿದೆ.
ಇಂಡಿಯನ್ ಆಯಿಲ್ ಕಾರ್ಪೊರೇಷನ್, ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್, ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್, ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್, ಶೆಲ್ ಇಂಡಿಯಾ, ರಿಲಯನ್ಸ್ ಬಿಪಿ ಮೊಬಿಲಿಟಿ ಲಿಮಿಟೆಡ್, ನಯಾರಾ ಎನರ್ಜಿ ಲಿಮಿಟೆಡ್ ಸೇರಿದಂತೆ ವಿವಿಧ ಪೆಟ್ರೋಲ್ ಮತ್ತು ಡೀಸೆಲ್ ಕಂಪನಿಗಳನ್ನು ಪಿಐಲ್‌ನಲ್ಲಿ ಪ್ರತಿವಾದಿಗಳನ್ನಾಗಿ ಹೆಸರಿಸಲಾಗಿದೆ.
ಅರ್ಜಿದಾರರ ಪ್ರಕಾರ, ಇಂಧನ ಬೆಲೆ ಏರಿಕೆ ಪ್ರತಿಯೊಬ್ಬ ಭಾರತೀಯ ನಾಗರಿಕನ ಕಳವಳಕ್ಕೆ ಕಾರಣವಾಗಿದ್ದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪೆಟ್ರೋಲ್ ಮತ್ತು ಡೀಸೆಲ್ ಚಿಲ್ಲರೆ ಬೆಲೆಗಳ ಮೇಲೆ ವಿಧಿಸುವ ತೆರಿಗೆಗಳಿಂದಾಗಿ ಇಂಧನ ಬೆಲೆಗಳು ರಾಜ್ಯಗಳಲ್ಲಿ ಬದಲಾಗುತ್ತವೆ.
ಈ ಚಿಲ್ಲರೆ ಬೆಲೆ ಮೂಲ ಕಚ್ಚಾ ತೈಲ ಬೆಲೆ, ಅಬಕಾರಿ ಸುಂಕ, ಡೀಲರ್ ಕಮಿಷನ್ ಮತ್ತು ತೆರಿಗೆಗಳು, ಸುಂಕಗಳು ಮತ್ತು ಸೆಸ್‌ಗಳಂತಹ ಅಂಶಗಳನ್ನು ಒಳಗೊಂಡಿದೆ.
ಇಂಧನ ಬಂಕ್‌ಗಳು ವಿಧಿಸಲಾದ ತೆರಿಗೆಗಳ ವಿವರಗಳನ್ನು ಬಹಿರಂಗಪಡಿಸದಿರುವುದು ಗ್ರಾಹಕರ ಹಕ್ಕುಗಳನ್ನು ಉಲ್ಲಂಘಿಸುವಂತಹ ಅನ್ಯಾಯದ ವ್ಯಾಪಾರ ಪದ್ಧತಿಯಾಗಿದೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.
“ಗ್ರಾಹಕ ಸಂರಕ್ಷಣಾ ಕಾಯಿದೆ- 2019 ಹೇಳುವಂತೆ ಒಂದು ಉತ್ಪನ್ನದ ಮೇಲೆ ವಿಧಿಸಲಾದ ತೆರಿಗೆ ಬಗ್ಗೆ ತಿಳಿಯುವುದು ಗ್ರಾಹಕರ ಮಾಹಿತಿ ಪಡೆಯುವ ಹಕ್ಕು ಮತ್ತು ಅನ್ಯಾಯ ವ್ಯಾಪಾರದ ವಿರುದ್ಧ ರಕ್ಷಣಾ ಹಕ್ಕಿನ ಭಾಗವಾಗಿದೆ. ಈ ಹಕ್ಕಿನಿಂದಾಗಿ ಗ್ರಾಹಕರಿಗೆ ಉತ್ಪನ್ನದ ಬೆಲೆ ಸೇರಿದಂತೆ ಎಲ್ಲಾ ಅಗತ್ಯ ಮಾಹಿತಿ ದೊರೆಯಲಿದ್ದು ಅವರು ಸಮಗ್ರ ಮಾಹಿತಿ ಆಧರಿಸಿ ನಿರ್ಧಾರ ತೆಗೆದುಕೊಳ್ಳುವಂತೆ ಮಾಡಬಹುದು ಮತ್ತು ಮಾರಾಟಗಾರರ ವಂಚನೆ ಅಥವಾ ಶೋಷಣೆಗೆ ಅವರು ತುತ್ತಾಗುವುದಿಲ್ಲ” ಎಂದು ಅರ್ಜಿ ವಿವರಿಸಿದೆ. ಪ್ರಕರಣದ ಮುಂದಿನ ವಿಚಾರಣೆ ನವೆಂಬರ್ 7 ರಂದು ನಡೆಯಲಿದೆ.