Madras High Court 
ಸುದ್ದಿಗಳು

ವೇಶ್ಯಾವಾಟಿಕೆ ನಡೆಸುವುದಕ್ಕೆ ರಕ್ಷಣೆ ಕೋರಿದ ವಕೀಲ: ಆಘಾತ ವ್ಯಕ್ತಪಡಿಸಿದ ಮದ್ರಾಸ್ ಹೈಕೋರ್ಟ್

Bar & Bench

ತಮಿಳುನಾಡಿನ ಕನ್ಯಾಕುಮಾರಿ ಜಿಲ್ಲೆಯ ನಾಗರಕೋಯಿಲ್‌ನಲ್ಲಿ ತಾನು ನಡೆಸುತ್ತಿರುವ ವೇಶ್ಯಾವಾಟಿಕೆ ಅಡ್ಡೆಗೆ ರಕ್ಷಣೆ ಕೋರಿ ವಕೀಲನೆಂದು ಹೇಳಿಕೊಂಡಾತ ಅರ್ಜಿ ಸಲ್ಲಿಸಿರುವುದಕ್ಕೆ ಮದ್ರಾಸ್‌ ಹೈಕೋರ್ಟ್‌ ಆಘಾತ ವ್ಯಕ್ತಪಡಿಸಿದೆ.

ಅರ್ಜಿದಾರನಿಗೆ ₹ 10,000 ದಂಡ ವಿಧಿಸಿ ಮನವಿ ವಜಾಗೊಳಿಸಿದ ಮದ್ರಾಸ್ ಹೈಕೋರ್ಟ್‌ ಮಧುರೈ ಪೀಠದ ನ್ಯಾಯಮೂರ್ತಿ ಬಿ ಪುಗಳೇಂದಿ ಅವರು ವಕೀಲನ ನೋಂದಣಿಪತ್ರದ ನೈಜತೆ ಮತ್ತು ಆತನ ಶಿಕ್ಷಣ ಪ್ರಮಾಣಪತ್ರಗಳನ್ನು ಪರಿಶೀಲಿಸುವಂತೆ ತಮಿಳುನಾಡು ಮತ್ತು ಪುದುಚೆರಿ ವಕೀಲರ ಪರಿಷತ್ತಿಗೆ ಇತ್ತೀಚೆಗೆ ಆದೇಶಿಸಿದೆ.

ಸಮಾಜದಲ್ಲಿ ವಕೀಲರ ಹೆಸರಿಗೆ ಮಸಿ ಬಳಿಯುತ್ತಿರುವುದರ ಬಗ್ಗೆ  ವಕೀಲರ ಪರಿಷತ್ತು ಚಿತ್ತ ಹರಿಸಲು ಇದು ಸಕಾಲ ಎಂದ ನ್ಯಾಯಾಲಯ ವಕೀಲರ ಪರಿಷತ್ತಿನಲ್ಲಿ ಅಧಿಕೃತ ಕಾಲೇಜುಗಳಿಂದ ಪದವಿ ಪಡೆದವರನ್ನು ಮಾತ್ರ ನೋಂದಣಿ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿತು.

ಸಮವಸ್ತ್ರ ಧರಿಸಿದ್ದ ವಕೀಲರೊಬ್ಬರು ತಾನು ವೇಶ್ಯಾವಾಟಿಕೆ ನಡೆಸುತ್ತಿದ್ದು ಅದಕ್ಕೆ ರಕ್ಷಣೆ ಕೋರುವಂತೆ ಅರ್ಜಿ ಸಲ್ಲಿಸಿರುವುದು ನ್ಯಾಯಾಲಯವನ್ನು ಆಘಾತಕ್ಕೀಡುಮಾಡಿದೆ ಎಂದು ಹೈಕೋರ್ಟ್‌ ಹೇಳಿತು.

ತಾನು ʼಫ್ರೆಂಡ್ಸ್ ಫಾರ್ ಎವರ್ʼ ಎಂಬ ಟ್ರಸ್ಟ್ ಸ್ಥಾಪಿಸಿದ್ದು ಇದರ ಮುಖ್ಯ ಉದ್ದೇಶ ತನ್ನ ಸದಸ್ಯರು ಹಾಗೂ ಗ್ರಾಹಕರಿಗೆ ತೈಲ ಅಭ್ಯಂಜನ ಮತ್ತಿತರ ಲೈಂಗಿಕ ಸೇವೆಯಂತಹ ವಯಸ್ಕರ ಮನರಂಜನೆ ಚಟುವಟಿಕೆಗಳನ್ನು ಉತ್ತೇಜಿಸುವುದಾಗಿದೆ ಎಂದು ಅರ್ಜಿದಾರ ರಾಜಾ ಮುರುಗನ್ ಹೇಳಿಕೊಂಡಿದ್ದ.

ಸ್ಥಳೀಯ ಪೊಲೀಸರು ತಮ್ಮ ಟ್ರಸ್ಟ್‌ ಮೇಲೆ ದಾಳಿ ನಡೆಸಿ ಅದರ ಚಟುವಟಿಕೆಗಳಿಗೆ ಅಡ್ಡಿಪಡಿಸುತ್ತಿದ್ದಾರೆ. ಲೈಂಗಿಕ ಚಟುವಟಿಕೆಗಳನ್ನು ತಮಿಳುನಾಡು ಅನೈತಿಕ ಮಾನವ ಕಳ್ಳಸಾಗಣೆ (ತಡೆ) ಕಾಯಿದೆ ಕಾನೂನುಬಾಹಿರ ಎಂದು ಘೋಷಿಸಿಲ್ಲ ಎಂದಿದ್ದ ಅರ್ಜಿದಾರ ಲೈಂಗಿಕ ಕಾರ್ಯಕರ್ತರನ್ನು ಘನತೆಯಿಂದ ನಡೆಸಿಕೊಳ್ಳಬೇಕು ಎಂದು ಬುದ್ಧದೇವ್‌ ಕರ್ಮಾಸ್ಕರ್‌ ಮತ್ತು ಪ. ಬಂಗಾಳ ಸರ್ಕಾರ ನಡುವಣ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ನೀಡಿದ್ದ ತೀರ್ಪನ್ನು ಉಲ್ಲೇಖಿಸಿದ್ದ.

ಅರ್ಜಿದಾರರು ತಮಿಳುನಾಡು ಕಾಯಿದೆ ಮತ್ತು ಸುಪ್ರೀಂ ಕೋರ್ಟ್‌ ತೀರ್ಪನ್ನು ತಪ್ಪಾಗಿ ಗ್ರಹಿಸಿದ್ದಾರೆ. ಈ ಕಾನೂನುಗಳು ಲೈಂಗಿಕ ಕಾರ್ಯಕರ್ತರನ್ನು ರಕ್ಷಿಸುವ ಮತ್ತು ಪುನರ್ಸವಸತಿ ಕಲ್ಪಿಸುವ ಉದ್ದೇಶ ಹೊಂದಿವೆಯೇ ವಿನಾ ವೇಶ್ಯಾಗೃಹ ನಡೆಸುವುದು ಕಾನೂನಬದ್ಧ ಎಂದು ಎಂದಿಗೂ ಹೇಳಿಲ್ಲ ಎಂಬುದಾಗಿ ಹೈಕೋರ್ಟ್‌ ನುಡಿಯಿತು.

ಹಿಂದಿನ ಆದೇಶವೊಂದರಲ್ಲಿ, ನ್ಯಾಯಾಲಯವ ಅರ್ಜಿದಾರ ನಿಜವಾಗಿಯೂ ವಕೀಲರೇ ಎಂದು ಖಚಿತಪಡಿಸಿಕೊಳ್ಳಲು ಅವರ ದಾಖಲಾತಿ ಪ್ರಮಾಣಪತ್ರ ಮತ್ತು ಕಾನೂನು ಪದವಿ ಪ್ರಮಾಣಪತ್ರಗಳನ್ನು ಹಾಜರುಪಡಿಸುವಂತೆ ಸೂಚಿಸಿತ್ತು.  ಆದರೆ ಅರ್ಜಿದಾರ ದಾಖಲೆಗಳನ್ನು ಸಲ್ಲಿಸಲು ವಿಫಲವಾಗಿದ್ದ. ಈ ಅಂಶವನ್ನು ಪ್ರಸ್ತಾಪಿಸಿದ ನ್ಯಾಯಾಲಯ “ಪ್ರಕರಣದ ಅತ್ಯಂತ ದುರದೃಷ್ಟಕರ ಸಂಗತಿಯೆಂದರೆ, ಈ ಎಲ್ಲಾ ವ್ಯವಹಾರಗಳನ್ನು ಮಾಡುತ್ತಿರುವ ವ್ಯಕ್ತಿ ತಾನು ವಕೀಲ ಎಂದು ಹೇಳಿಕೊಳ್ಳುತ್ತಿದ್ದಾನೆ. ಕನ್ಯಾಕುಮಾರಿ ಜಿಲ್ಲೆ 100% ಸಾಕ್ಷರತೆಗೆ ಹೆಸರುವಾಸಿಯಾಗಿದೆ. ಈ ಜಿಲ್ಲೆಯಲ್ಲಿ ಅದರಲ್ಲಿಯೂ ವಕೀಲರ ಹೆಸರಿನಲ್ಲಿ ಇಂತಹ ಚಟುವಟಿಕೆಗಳು ನಡೆಯುತ್ತಿವೆ. ಕೆಲ ದಿನಗಳ ಹಿಂದೆ ಮತ್ತೊಂದು ಪ್ರಕರಣದಲ್ಲಿ ಡಕಾಯಿತಿಗಾಗಿ ವಕೀಲನನ್ನು ಬಂಧಿಸಲಾಗಿತ್ತು ಎಂದು ವರದಿಯಾಗಿದೆ. ಸಮಾಜದಲ್ಲಿ ನ್ಯಾಯವಾದಿಗಳೆಡೆಗೆ ಗೌರವ ಕಡಿಮೆಯಾಗುತ್ತಿದೆ ಎಂಬುದನ್ನು ವಕೀಲರ ಪರಿಷತ್‌  ಅರಿಯುವ ಸಮಯ ಬಂದಿದೆ. ಕನಿಷ್ಠ ಇನ್ನು ಮುಂದೆಯಾದರೂ ಪ್ರತಿಷ್ಠಿತ (ಶೈಕ್ಷಣಿಕ) ಸಂಸ್ಥೆಗಳಿಂದ ಮಾತ್ರ ಸದಸ್ಯರನ್ನು ನೋಂದಾಯಿಸಿಕೊಳ್ಳಬೇಕು ಮತ್ತು ಆಂಧ್ರಪ್ರದೇಶ, ಕರ್ನಾಟಕ ಮತ್ತಿತರ ರಾಜ್ಯಗಳ ಪ್ರತಿಷ್ಠಿತವಲ್ಲದ ಸಂಸ್ಥೆಗಳ ಸದಸ್ಯರನ್ನು ವಕೀಲರಾಗಿ ನೋಂದಾಯಿಸಕೊಳ್ಳಬಾರದು” ಎಂದು ನ್ಯಾಯಾಲಯ ವಿವರಿಸಿತು.

ಅರ್ಜಿದಾರ ರಾಜಾ ಮುರುಗನ್ ತಮ್ಮ ಪ್ರಕರಣವನ್ನು ತಾವೇ ಮುನ್ನಡೆಸಿದರು. ಪೊಲೀಸರ ಪರ ಹೆಚ್ಚುವರಿ ಪಬ್ಲಿಕ್ ಪ್ರಾಸಿಕ್ಯೂಟರ್ ಇ ಆಂಟನಿ ಸಹಾಯ ಪ್ರಭಾಕರ್ ವಾದ ಮಂಡಿಸಿದರು.